ಬಿಗ್ ನ್ಯೂಸ್.. ಮತ್ತೆ ಆಪರೇಷನ್ ಕಮಲ.. ರೆಸಾರ್ಟ್‍ಗೆ 8-12 ಕಾಂಗ್ರೆಸ್ ಶಾಸಕರು..!

ಮತ್ತೆ ಆಪರೇಷನ್ ಕಮಲ ಆಸುರುವಾಗಿದೆ. ರಾತ್ರೋರಾತ್ರಿ ಸರಿಸುಮಾರು 12 ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಲಾಗಿದೆ. ಬಿಗಿ ಭದ್ರತೆ ನಡುವೆ ಹೋಟೆಲ್, ರೆಸಾರ್ಟ್‍ಗಳಲ್ಲಿ ಇರಿಸಲಾಗಿದೆ. ಒಂದ್ನಿಮಿಷ ನಿಲ್ಲಿ.. ಈ ಬಾರಿ ಆಪರೇಷನ್ ಕಮಲ ನಡೆಯುತ್ತಿರುವುದು ಕರ್ನಾಟಕದಲ್ಲಿ ಅಲ್ಲ… ಮಧ್ಯಪ್ರದೇಶದಲ್ಲಿ.

ಕಳೆದ ವರ್ಷ ಕರ್ನಾಟಕದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪತನ ಮಾಡಿದ ರೀತಿಯಲ್ಲೇ ಮಧ್ಯಪ್ರದೇಶದಲ್ಲಿ ಕಮಲ್‍ನಾಥ್ ಸರ್ಕಾರ ಕೆಡವಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ಗಾಳಕ್ಕೆ ಸಿಲುಕಿದ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಆಡಳಿತವಿರುವ ಕರ್ನಾಟಕ ಮತ್ತು ಹರಿಯಾನದ ಹೋಟೆಲ್, ರೆಸಾರ್ಟ್‍ಗಳಲ್ಲಿ ಇರಿಸಲಾಗಿದೆ. ಕಾಂಗ್ರೆಸ್ ಶಾಸಕರು ಇರುವ ಹೋಟೆಲ್, ರೆಸಾರ್ಟ್‍ಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಮುಖಂಡರಿಗೆ ಹೊಟೆಲ್‍ಗೆ ತೆರಳಲು ಅವಕಾಶ ನೀಡುತ್ತಿಲ್ಲ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಮುಖ್ಯಮಂತ್ರಿ ಕಮಲ್‍ನಾಥ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿದೆ. ಇದರ ಭಾಗವಾಗಿಯೇ ಮಾಜಿ ಮಂತ್ರಿ ಸೇರಿದಂತೆ 8 ಶಾಸಕರನ್ನು ಹರಿಯಾಣದ ಮನೆಸರ್‍ನಲ್ಲಿರುವ ಐಟಿಸಿ ಹೋಟೆಲ್‍ನಲ್ಲಿ ಇರಿಸಿದೆ. ನಾಲ್ವರು ಕಾಂಗ್ರೆಸ್ ಶಾಸಕರನ್ನು ಮಧ್ಯರಾತ್ರಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆತಂದು, ಅವರನ್ನು ಚಿಕ್ಕಮಗಳೂರಿನ ರೆಸಾರ್ಟ್‍ಗೆ ಕರೆದೊಯ್ಯಲಾಗಿದೆ. ಇದರ ಉಸ್ತುವಾರಿಯನ್ನು ಆಪರೇಷನ್ ಕಮಲದಲ್ಲಿ ಪರಿಣಿತರಾದ ಉಪಮುಖ್ಯಮಂತ್ರಿ ಒಬ್ಬರು ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮನೇಸರ್‍ನ ಐಟಿಸಿ ಹೋಟೆಲ್‍ನಲ್ಲಿ ಬಿಎಸ್‍ಪಿಯಿಂದ ಅಮಾನತುಗೊಂಡಿದ್ದ ಶಾಸಕ ರಾಮಭಾಯ್ ಕೂಡ ಇದ್ದರು. ಕೂಡಲೇ ಕಾರ್ಯಾಚರಣೆಗೆ ಇಳಿದ ಮಧ್ಯಪ್ರದೇಶದ ಸಚಿವರಾದ ಕಾಂಗ್ರೆಸ್‍ನ ಜಿತು ಪಟ್ವಾರಿ ಮತ್ತು ಜಯವರ್ಧನ್ ಸಿಂಗ್, ಹೋಟೆಲ್‍ನಲ್ಲಿದ್ದ ರಾಮ್‍ಭಾಯ್‍ರನ್ನು ಹೊರಗೆ ಕರೆ ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ. ಹೋಟೆಲ್‍ನಲ್ಲಿರುವ ಉಳಿದ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದು, ಯಾವುದೇ ಕ್ಷಣದಲ್ಲಿ ನಮ್ಮನ್ನು ಬಂದು ಸೇರಿಕೊಳ್ಳಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

ಬಿಜೆಪಿಯ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ್ ಬದೌರಿಯಾ ನಮ್ಮ ಶಾಸಕರಿಗೆ ಹಣ ನೀಡಲು ಮುಂದಾಗಿದ್ದಾರು. ನಾವು ನಡೆಸಿದ ದಾಳಿ ವೇಳೆ ಅವರು ಸಿಕ್ಕಿಬಿದ್ದರು ಎಂದು ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯವರು 10-11 ಶಾಸಕರಿಗೆ ಗಳ ಹಾಕಿದ್ದರು. ಸದ್ಯ ಬಿಜೆಪಿಯವರ ಬಳಿ ನಾಲ್ವರು ಶಾಸಕರಿದ್ದಾರೆ. ಅವರು ಸಹ ನಮ್ಮನ್ನು ಬಂದು ಸೇರಿಕೊಳ್ಳಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆ ಬಲಾಬಲ
> ಒಟ್ಟು ಶಾಸಕರ ಸಂಖ್ಯೆ – 230
> ಸರಳ ಬಹುಮತದ ಸಂಖ್ಯೆ – 116
> ಕಾಂಗ್ರೆಸ್ ಸರ್ಕಾರದ ಸಂಖ್ಯಾಬಲ -120
(ಕಾಂಗ್ರೆಸ್-113, ಬಿಎಸ್‍ಪಿ-2, ಎಸ್‍ಪಿ-1, ಪಕ್ಷೇತರರು- 4)
> ಬಿಜೆಪಿ ಸಂಖ್ಯಾಬಲ – 107
> ಎರಡು ಸ್ಥಾನಗಳು ಖಾಲಿ ಇವೆ

ಮೂರು ದಿನಗಳ ಹಿಂದಷ್ಟೇ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮಾತನಾಡಿ, ನಮ್ಮ ಶಾಸಕರಿಗೆ ಬಿಜೆಪಿಯವರು 25ರಿಂದ 35 ಕೋಟಿ ರೂ. ಆಮಿಷ ಒಡ್ಡುತ್ತಿದ್ದಾರೆ. ಶಾಸಕರನ್ನು ಖರೀದಿ ಮಾಡಲು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನರೋತ್ತಮ್ ಮಿಶ್ರಾ ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಪೂರಕವಾಗಿಯೇ ಇದೀಗ ಬೆಳವಣಿಗೆಗಳು ನಡೆಯುತ್ತಿವೆ.

ಕಳೆದ ಜುಲೈನಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್, ಉನ್ನತ ನಾಯಕರಿಂದ ಒಂದು ಆದೇಶ ಹೊರಬಿದ್ದರೇ ನಿಮ್ಮ ಸರ್ಕಾರ 24 ಗಂಟೆ ಸಹ ಉಳಿಯಲು ಸಾಧ್ಯವಿಲ್ಲ ಎಂದು ಗುಡುಗಿದ್ದರು.

LEAVE A REPLY

Please enter your comment!
Please enter your name here