ಶಿವಮೊಗ್ಗದಲ್ಲಿ ‘ಮುಸ್ಲಿಂ ಗೂಂಡಾಗಳು’ ಬಾಲ ಬಿಚ್ಚುತ್ತಿದ್ದಾರೆ ಎಂದು ಗ್ರಾಮೀಣಾಭುವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪನವರು ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಶಿವಮೊಗ್ಗದಲ್ಲಿ ಭಾನುವಾರ ಭಜರಂಗದಳದ ಕಾರ್ಯಕರ್ತ ಹರ್ಷನ ಎನ್ನುವವರ ಕಗ್ಗೊಲೆಯಾಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಎಂದಿನಂತೆ ತಮ್ಮ ಮಾತಿನ ವರೆಸೆಯಲ್ಲಿಯೇ ಮಾತನಾಡಿದ ಸಚಿವರು , ಮುಸ್ಲಿಂ ಗೂಂಡಾಗಳೇ ಕೊಲೆಗೆ ಕಾರಣ. ಈವರೆಗೆ ಮುಸ್ಲಿಮರು ಬಾಲ ಬಿಚ್ಚಿರಲಿಲ್ಲ. ಇತ್ತೀಚೆಗೆ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜ ಹಾರಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರಿಂದಲೇ ಮುಸ್ಲಿಮರಿಗೆ ಕುಮ್ಮಕ್ಕು ಸಿಕ್ಕಿದೆ ಎಂದು ಸಚಿವ ಈಶ್ವರಪ್ಪ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ನಮ್ಮ ಸಜ್ಜನ ಕಾರ್ಯಕರ್ತನ ಕೊಲೆ ಆಗಿದೆ. ನಿನ್ನೆ ಮುಸಲ್ಮಾನ ಗೂಂಡಾಗಳು ಕೊಲೆ ಮಾಡಿದ್ದಾರೆ. ಹತ್ಯೆಗೀಡಾದ ವ್ಯಕ್ತಿ ಬಹಳ ಪ್ರಾಮಾಣಿಕ, ತುಂಬಾ ಒಳ್ಳೆಯ ಯುವಕ. ಇನ್ನೂ ಮದುವೆಯನ್ನೂ ಆಗಿರಲಿಲ್ಲ. ಮುಸಲ್ಮಾನ ಗೂಂಡಾಗಳ ಬಗ್ಗೆ ಸರ್ಕಾರ ತನಿಖೆ ಮಾಡುತ್ತದೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡುತ್ತೇನೆ. ಡಿ ಕೆ ಶಿವಕುಮಾರ್ ಅವರು, ಸೂರತ್ನಿಂದ ಕೇಸರಿ ಶಾಲು ತರಿಸಿದ್ದಾಗಿ ಹೇಳಿಕೆ ನೀಡಿದ್ದರು. ಡಿಕೆ ಶಿವಕುಮಾರ್ ಆ ಹೇಳಿಕೆಯಿಂದ ಪ್ರೇರಣೆ ಪಡೆದು ಮುಸ್ಲಿಂ ಗೂಂಡಾಗಳು ನಿನ್ನೆ ರಾತ್ರಿ ನಮ್ಮ ಪ್ರಾಮಾಣಿಕ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ್ದಾರೆ. ಯುವಕನ ಕಾರ್ಯವನ್ನು ನಾವೇ ಮುಂದೆ ನಿಂತು ಮಾಡುತ್ತೇವೆ ಎಂದರು.