ಬಾಬ್ರಿ ಮಸೀದಿ ಧ್ವಂಸ ಸಂಬಂಧ ಪ್ರಕರಣದ ವಿಚಾರಣೆಯನ್ನು ಮುಗಿಸಿ ಆಗಸ್ಟ್ 31ರೊಳಗೆ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್ ಸಿಬಿಐ ಕೋರ್ಟ್ಗೆ ಸೂಚಿಸಿದೆ. ಈ ಮೂಲಕ ಇನ್ನು ನಾಲ್ಕು ತಿಂಗಳಲ್ಲಿ ಮಸೀದಿ ಧ್ವಂಸ ಪ್ರಕರಣದಲ್ಲಿ ದೋಷಿಗಳಾಗಿರುವ ಬಿಜೆಪಿ ದಿಗ್ಗಜರ ಭವಿಷ್ಯ ನಿರ್ಧಾರವಾಗಲಿದೆ.
1992ರಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸದ ಪ್ರಕರಣ ಲಕ್ನೋದಲ್ಲಿರುವ ಸಿಬಿಐ ಕೋರ್ಟ್ನಲ್ಲಿ ನಡೆಯುತ್ತಿದೆ.
ಇದೇ ವರ್ಷದ ಏಪ್ರಿಲ್ ಅಂತ್ಯಕ್ಕೆ ಪ್ರಕರಣದ ವಿಚಾರಣೆಯನ್ನು ನಡೆಸಿ ತೀರ್ಪು ನೀಡುವಂತೆ ಕಳೆದ ವರ್ಷದ ಜುಲೈನಲ್ಲಿ ಸುಪ್ರೀಂಕೋರ್ಟ್ ಸಿಬಿಐ ಕೋರ್ಟ್ಗೆ ಸೂಚಿಸಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಹೇರಿಕೆ ಆಗಿರುವ ಲಾಕ್ಡೌನ್ ಕಾರಣ ಕೊಟ್ಟು ಸಿಬಿಐ ಕೋರ್ಟ್ ಇನ್ನಷ್ಟು ಸಮಯಾವಕಾಶವನ್ನು ಕೇಳಿತ್ತು.
ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸುವಂತೆಯೂ ಆಗಸ್ಟ್ 31ರ ಗಡುವು ಮೀರದಂತೆಯೂ ಸುಪ್ರೀಂಕೋರ್ಟ್ ಸೂಚಿಸಿದೆ.
ಬಿಜೆಪಿ ಭೀಷ್ಮ ಲಾಲ್ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಮತ್ತು ಇತರರ ವಿರುದ್ಧದ ವಿಚಾರಣೆ ನಡೆಯುತ್ತಿದೆ. 2017ರ ಏಪ್ರಿಲ್ನಲ್ಲಿ ಸಿಬಿಐ ಕೋರ್ಟ್ಗೆ ೨ ವರ್ಷಗಳ ಗುಡುವು ನೀಡಿತ್ತು. ಆದರೆ ಜುಲೈ 2019ರಲ್ಲಿ ಆ ಗುಡುವನ್ನು ಮತ್ತೆ ೯ ತಿಂಗಳ ವಿಸ್ತರಿಸಲಾಗಿತ್ತು. ಅಲ್ಲದೇ ಸಿಬಿಐ ಕೋರ್ಟ್ನ ಜಡ್ಜ್ ಎಸ್ಕೆ ಯಾದವ್ ಸೇವಾವಧಿಯನ್ನು ಸೆಪ್ಟೆಂಬರ್ 2019ರ ಬಳಿಕವೂ ವಿಸ್ತರಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು.