ಬಲಪಂಥೀಯ ಚಿಂತಕ, ಕನ್ನಡ ಸಂಶೋಧಕ ಚಿಮೂ ಇನ್ನಿಲ್ಲ

ಕನ್ನಡದ ಖ್ಯಾತ ಸಂಶೋಧಕ, ಬಲಪಂಥೀಯ ಚಿಂತಕ, ಚಿಮೂ ಎಂದೇ ಖ್ಯಾತರಾಗಿದ್ದ ಚಿದಾನಂದ ಮೂರ್ತಿ ಇನ್ನಿಲ್ಲ. ಅವರು ಇಂದು ಮುಂಜಾನೆ ಬೆಂಗಳೂರಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಚಿಮೂಗೆ ೮೯ ವರ್ಷ ವಯಸ್ಸಾಗಿತ್ತು. ಪತ್ನಿ ವಿಶಾಲಾಕ್ಷಿ ಮತ್ತು ಪುತ್ರನನ್ನ ಅಗಲಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಮೂ ಅವರ ಅಂತಿಮ ದರ್ಶನ ಪಡೆದರು. ನಾನು ಈ ಹಿಂದೆ ಸಿಎಂ ಆಗಿದ್ದಾಗ ವಿಧಾನಪರಿಷತ್‌ ಸದಸ್ಯ ಮಾಡುತ್ತೇನೆ ಎಂದಿದ್ದೆ. ಆದರೆ ಅವರು ನನಗೆ ವಯಸ್ಸಾಗಿದೆ, ಬೇರೆಯವರನ್ನು ಯಾರಾನ್ನಾದರೂ ಮಾಡಿ ಎಂದಿದ್ದರು ಎಂದು ಯಡಿಯೂರಪ್ಪ ಸ್ಮರಿಸಿಕೊಂಡರು.

ಕನ್ನಡಕ್ಕೆ ಮಿಡಿಯುತ್ತಿದ್ದ, ಲೇಖಕ, ಸಂಶೋಧಕ, ಚಿಂತಕ, ಇತಿಹಾಸಕಾರರಾಗಿದ್ದ ಚಿ.ಮೂ ಇನ್ನಿಲ್ಲದ ವಿಷಯ ನೋವಿನದ್ದು ಮತ್ತು ಅವರ ಸ್ಥಾನ ಅನನ್ಯ, ಯಾರೂ ತುಂಬಲಾಗದು. ಹಂಪಿಯ ಸ್ಮಾರಕಗಳನ್ನು ಉಳಿಸುವಲ್ಲಿ ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ ಇವರ ಪ್ರಯತ್ನ ಸ್ಮರಣೀಯ. ಅವರಾತ್ಮಕ್ಕೆ ಶಾಂತಿ ದೊರಕಲಿ

ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಹಿರಿಯ ಸಂಶೋಧಕ,ಕನ್ನಡ ಗರುಡ ಡಾ. ಚಿದಾನಂದ ಮೂರ್ತಿ ಅವರ ನಿಧನದಿಂದ ನಾಡು ಅಪರೂಪದ ವಿದ್ವಾಂಸರನ್ನು ಕಳೆದುಕೊಂಡಿದೆ.ಕನ್ನಡ ಶಕ್ತಿ ಕೇಂದ್ರ ಸ್ಥಾಪಿಸಿದ್ದ ‘ಚಿಮೂ’ಎಂದೇ ಖ್ಯಾತರಾಗಿದ್ದ ಹಿರಿಯ ಜೀವ ನಾಡುನುಡಿಜಲಕ್ಕಾಗಿ ಅಹರ್ನಿಶಿ ಶ್ರಮಿಸಿದ್ದರು. ಮೃತರ ಕುಟುಂಬ ಸದಸ್ಯರಿಗೆ,ಅವರ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ

ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

ಹಿರಿಯ ಸಾಹಿತಿ,ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ನಿಧನದ ಸುದ್ದಿ ತಿಳಿದು ದು:ಖವಾಯಿತು. ಅವರ ಸಂಶೋಧನೆ ಮತ್ತು ಸಾಹಿತ್ಯದ‌ ಜೊತೆಯಲ್ಲಿ ಅವರ ನೇರ ನಡೆ-ನುಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು‌ ಮೀರಿದ ಸ್ನೇಹ ಶೀಲ ಗುಣವನ್ನೂ
ನಾಡು ಸದಾ ಸ್ಮರಿಸುತ್ತದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು.

ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಮತ್ತು ಹಂಪಿ ರಕ್ಷಣೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ೧೯೩೧ರ ಮೇ ೧೦ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಕೊಗಳೂರಲ್ಲಿ ಜನಿಸಿದ ಚಿಮೂ ಕನ್ನಡದ ಇತಿಹಾಸ ಸಂಶೋಧನೆಯಲ್ಲಿ ಮೇರು ವ್ಯಕ್ತಿ.

ಪ್ರಬಲ ಬಲಪಂಥೀಯವಾದಿ ಆಗಿದ್ದ ಚಿಮೂ ಮೈಸೂರು ಹುಲಿ ಟಿಪ್ಪೂ ಸುಲ್ತಾನ್ ಜಯಂತಿ ಆಚರಣೆಯನ್ನು ವಿರೋಧಿಸಿದ್ದರು. ಗೋಹತ್ಯೆ ನಿಷೇಧ, ದೇಶಾದ್ಯಂತ ಏಕರೂಪದ ನಾಗರಿಕ ಸಂಹಿತೆ ಮತ್ತು ಮತಾಂತರ ತಡೆ ಕಾಯ್ದೆ ಜಾರಿ ಆಗಬೇಕೆಂಬ ಹಕ್ಕೊತ್ತಾಯಗಳನ್ನೂ ಮಾಡಿದ್ದರು,

LEAVE A REPLY

Please enter your comment!
Please enter your name here