ಬರೀ ಘೋಷಣೆ ಅಷ್ಟೆನಾ..? ಆಟೋ ಚಾಲಕರಿಗೆ ಸಿಗಲ್ವಾ 5000 ರೂ. ನೆರವು..?

ಆತ್ಮ ನಿರ್ಭರ ಭಾರತ ಎಂಬ ಘೋಷಣೆ ಮೊಳಗಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಕಷ್ಟದಲ್ಲಿರುವ ಜನತೆಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದಾಗ ಇಡೀ ದೇಶ ಹಿರಿ ಹಿರಿ ಹಿಗ್ಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಿನಕ್ಕೊಂದು ಮಿನಿ ಬಜೆಟ್ ಘೋಷಿಸುತ್ತಿದ್ದಾರೆ. ಅಂಕಿಗಳಲ್ಲಿ ಮಾಯೆ ಮಾಡುತ್ತಿದ್ದಾರೆ. ಆದರೆ, ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ, ರೈತರಿಗೆ ಬಿಡಿಗಾಸು ಕೂಡ ನೆರವು ನೀಡಿಲ್ಲ. ಎಲ್ಲವೂ ದೂರಗಾಮಿ ಯೋಜನೆಗಳೇ ಆಗಿವೆ. ಇದು ಮಿನಿ ಬಜೆಟ್‌ನಂತಿದೆ. ಜನ ಭ್ರಮನಿರಸಗೊಳ್ಳುತ್ತಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಎನ್ನುವ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪ, ಅಸಂಘಟಿತ ವಲಯದ ಒಂದಿಷ್ಟು ವರ್ಗಗಳಿಗೆ 1610 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದರು. ಆಟೋ, ಟ್ಯಾಕ್ಸಿ ಚಾಲಕರಿಗೆ 5000 ರೂಪಾಯಿಗಳ ಆರ್ಥಿಕ ನೆರವನ್ನು ನೀಡುವುದಾಗಿ ಮೇ 9ರಂದು ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಅಸಂಘಟಿತ ವಲಯದಲ್ಲಿರುವ ಆಟೋ ಚಾಲಕರಿಗೆ ಹೇಗೆ ಈ ಆರ್ಥಿಕ ನೆರವನ್ನು ತಲುಪಿಸಲಾಗುತ್ತದೆ ಎಂಬ ಅನುಮಾನವನ್ನು ಆಗಲೇ ಹಲವರು ವ್ಯಕ್ತಪಡಿಸಿದ್ದರು. ಆ ಅನುಮಾನ ಈಗ ನಿಜವಾಗುತ್ತಿದೆ. ಬಹುಶಃ ಈ ಸಂಬಂಧ ಹೇಗೆ ಯೋಜನೆ ರೂಪಿಸಬೇಕು ಎನ್ನುವುದು ರಾಜ್ಯ ಸರ್ಕಾರಕ್ಕೆ ಗೊತ್ತಾಗಿಲ್ಲ ಎನಿಸುತ್ತಿದೆ. ಹೀಗಾಗಿಯೇ ಇದುವರೆಗೂ ಕನಿಷ್ಠ ಪಕ್ಷ ಒಂದು ಅರ್ಜಿಯನ್ನು ಕೂಡ ಸರ್ಕಾರ ಸಿದ್ದಪಡಿಸಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪನವರು ಯೋಜನೆ ಘೋಷಿಸಿ 8 ದಿನ ಕಳೆದರೂ, ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿಯ ನಮೂನೆಯನ್ನೇ ಸರ್ಕಾರ ಅಪ್‌ಲೋಡ್ ಮಾಡಿಲ್ಲ. ವಿಪರ್ಯಾಸ ಅಂದರೆ, ಮುಖ್ಯಮಂತ್ರಿಗಳ ಘೋಷಣೆ ಇನ್ನೂ ಘೋಷಣೆಯಾಗಿಯೇ ಉಳಿದಿದೆ. ಈ ಸಂಬಂಧ ಇನ್ನೂ ಯಾವುದೇ ಆದೇಶ ಹೊರಬಿದ್ದಿಲ್ಲ. ಇದು ತಿಳಿಯದ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಲು ಸೈಬರ್ ಕೆಫೆಗಳ ಮುಂದೆ ದಿನ ಬೆಳಗಾದರೇ ಜಮಾಯಿಸುತ್ತಿದ್ದಾರೆ. ಅರ್ಜಿಯ ನಮೂನೆ ಸಿಗದೇ, ಯಾರಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯಲಾಗದೇ ಬೇಸರದ ಮೊಗದೊಂದಿಗೆ ಹಿಂತಿರುಗುತ್ತಿದ್ದಾರೆ.

ಈ ಬಗ್ಗೆ ಆಟೋ ಚಾಲಕರ ಸಂಘಟನೆಗಳು ಅಸಮಾಧಾನವನ್ನು ಹೊರಹಾಕುತ್ತಿವೆ. ರಾಜ್ಯದಲ್ಲಿ 7.5 ಲಕ್ಷ ಚಾಲಕರಿದ್ದಾರೆ. ಅವರ ನೆರವಾಗುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಆದ್ರೆ ಇದುವರೆಗೂ ಪ್ರಕ್ರಿಯೆಯೇ ಆರಂಭವಾಗಿಲ್ಲ. ಹಸಿದಾಗ ಊಟ ನೀಡಬೇಕು. ಅದು ಬಿಟ್ಟು ಯಾವಾಗಲೋ ನೀಡಿದರೆ ಆಗುತ್ತಾ ಎಂದು ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷರು ಪ್ರಶ್ನೆ ಮಾಡುತ್ತಾರೆ. ಕೂಡಲೇ ಆರ್ಥಿಕ ನೆರವು ನೀಡಿ ಎಂದು ಆಗ್ರಹಿಸಿದ್ದಾರೆ.

ಸಾರಿಗೆ ಇಲಾಖೆ ತಕ್ಷಣಕ್ಕೆ ಆರ್ಥಿಕ ನೆರವು ನೀಡುವ ಸಂಬಂಧ ನಿಯಮಗಳನ್ನು ರೂಪಿಸಿದೆ. ಆದರೆ, ಇದಕ್ಕೆ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ. ಸರ್ಕಾರದ ನಿಯಮದ ಪ್ರಕಾರ 5000 ರೂ ಆರ್ಥಿಕ ನೆರವು ಪಡೆಯಲು ಈ ಷರತ್ತುಗಳನ್ನು ಆಟೋ ಚಾಲಕರು ಪೂರೈಸಬೇಕಾಗುತ್ತದೆ.

ಸರ್ಕಾರದ ಷರತ್ತುಗಳೇನು..?

1. ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲನೆ ಮಾಡಲು ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

2. ಫಲಾನುಭವಿಗಳು ಆಟೋರಿಕ್ಷಾ/ಟ್ಯಾಕ್ಸಿ ಚಾಲಕರಾಗಿದ್ದು ದಿನಾಂಕ: 01-03-2020 ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಪೋರ್ಟಲ್ ನಲ್ಲಿ ನಮೂದಿಸಬೇಕಾಗಿರುತ್ತದೆ.

3. ಚಾಲಕರ ಆಧಾರ್ ಕಾರ್ಡ್ ವಿವರಗಳನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕಾಗಿರುತ್ತದೆ.

4. ಚಾಲಕರ ಬ್ಯಾಂಕ್ ಅಕೌಂಟ್ ವಿವರ, ಸಂಬಂಧಪಟ್ಟ ಬ್ಯಾಂಕ್ ನ IFSC ವಿವರಗಳನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕಾಗಿರುತ್ತದೆ.

5. ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕಾಗಿರುತ್ತದೆ. ವಾಹನ -4 ತಂತ್ರಾಂಶದಿಂದ ವಿವರಗಳನ್ನು ನೇರವಾಗಿ ಪಡೆಯುವುದು.

6. ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸಾರಿಗೆ ಇಲಾಖೆಯ ಸಾರಥಿ-4 ತಂತ್ರಾಂಶದಿಂದ ನೇರವಾಗಿ ಪಡೆದುಕೊಳ್ಳಬೇಕು.

7. ಆಟೋರಿಕ್ಷಾ/ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗದ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.

8. ಈ ಯೋಜನೆಯನ್ನು ಜಾರಿಗೊಳಿಸಲು ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು “ಸೇವಾಸಿಂಧು” ವಿನ ಮುಖಾಂತರ ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಈ ಬಗ್ಗೆ “ಸೇವಾಸಿಂಧು” ವಿನಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಇ-ಆಡಳಿತ ಇಲಾಖೆಯನ್ನು ಕೋರಬಹುದಾಗಿದೆ.

9. ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯ ಮೂಲಕ DBT ಮಾಡಬೇಕು ಅಥವಾ ಆನ್‌ಲೈನ್ ಮೂಲಕ ಬ್ಯಾಂಕಿಗೆ ಜಮಾ ಮಾಡಬೇಕು.

10. ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಅನುವಾಗುವಂತೆ ಅರ್ಹ/ಅನರ್ಹ ಅರ್ಜಿದಾರರ ಪಟ್ಟಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು.

LEAVE A REPLY

Please enter your comment!
Please enter your name here