ಫೇಸ್‌ಬುಕ್‌ನಲ್ಲಿ ಯಾವ ಕಂಟೆಂಟ್‌ ಇರಬೇಕು..? ಏನಿರಬಾರದು..? – ನಿಗಾ ಮಂಡಳಿಯಲ್ಲಿ ಏಕೈಕ ಭಾರತೀಯ ಬೆಂಗಳೂರು ಮೂಲದವರು

ಫೇಸ್‌ಬುಕ್‌ ಕಂಟೆಟ್‌ಗಳ ಮೇಲೆ ನಿಗಾ ಇಡುವ ಸಲುವಾಗಿ ಫೇಸ್‌ಬುಕ್‌ನಿಂದಲೇ ನಿಗಾ ಮಂಡಳಿ ರಚನೆ ಆಗಿದ್ದು, ಬೆಂಗಳೂರು ಮೂಲದ ಸುಧೀರ್‌ ಕೃಷ್ಣಸ್ವಾಮಿ ಅವರನ್ನು ಫೇಸ್‌ಬುಕ್‌ ಸ್ವತಂತ್ರ ಮಂಡಳಿಗೆ ಆಯ್ಕೆ ಮಾಡಿದೆ.

ಇಪ್ಪತ್ತು ರಾಷ್ಟ್ರಗಳ ವಿವಿಧ ವಲಯಗಳ ಪರಿಣತರನ್ನು ಮಂಡಳಿಗೆ ಆಯ್ಕೆ ಮಾಡಲಾಗಿದೆ. ಈ ಮಂಡಳಿಯಲ್ಲಿರುವ ಏಕೈಕ ಭಾರತೀಯ ಎಂದರೆ ಅದು ಸುಧೀರ್‌ ಕೃಷ್ಣಸ್ವಾಮಿ.

ಸುಧೀರ್‌ ಕೃಷ್ಣಸ್ವಾಮಿ ಅವರು ಬೆಂಗಳೂರಲ್ಲಿ ರಾಷ್ಟ್ರೀಯ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಆಗಿದ್ದು, ಕಾನೂನು ಮತ್ತು ನೀತಿ ಸಂಶೋಧನೆಗಾಗಿನ ಸಮಿತಿಯ ಸಹ ಸಂಸ್ಥಾಪಕರೂ ಆಗಿದ್ದಾರೆ. ಈ ಸಮಿತಿ ಸಲಿಂಗಕಾಮ ಮತ್ತು ತೃತೀಯ ಲಿಂಗಿಯರ ಹೋರಾಟದಲ್ಲಿ ತೊಡಗಿಸಿಕೊಂಡಿದೆ.

ಫೇಸ್ಬುಕ್‌ನಲ್ಲಿ ಏನನ್ನು ಪೋಸ್ಟ್‌ ಮಾಡಬೇಕು, ಏನನ್ನು ಪೋಸ್ಟ್‌ ಮಾಡಬಾರದು, ಯಾವುದಕ್ಕೆಲ್ಲ ತಡೆ ಹಾಕಬೇಕು ಎನ್ನುವುದನ್ನು ನಿಗಾ ಮಂಡಳಿ ನಿರ್ಧರಿಸಲಿದೆ.

ಕೊರೋನಾ ಸಾಂಕ್ರಾಮಿಕ ರೋಗದ ಹೊತ್ತಲ್ಲಿ ಸೋಷಿಯಲ್‌ ಮೀಡಿಯಾ ಜನರಿಗೆ ಸಹಾಯ ಮಾಡುವುದಕ್ಕೆ ಮತ್ತು ಸಮುದಾಯದ ಜೊತೆಗೆ ಸಂಪರ್ಕದಲ್ಲಿರುವುದಕ್ಕೆ ಲೈಫ್‌ಲೈನ್‌ ಆಗಿದೆ.‌

ಇದೇ ಹೊತ್ತಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ದ್ವೇಷದ, ಅಪಾಯಕಾರಿ ಮಾತುಗಳನ್ನೂ ಹರಡಬಹುದಾಗಿದೆ. ಯಾವ ಕಂಟೆಂಟ್‌ ಇರಬೇಕು, ಯಾವುದನ್ನು ತೆಗೆಯಬೇಕು ಮತ್ತು ಅದನ್ನು ಯಾರು ನಿರ್ಧರಿಸಬೇಕು ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಪ್ರಶ್ನಾದಾಯಕವಾಗಿತ್ತು. ಫೇಸ್‌ಬುಕ್‌ ತೆಗೆದುಕೊಂಡ ಕಂಟೆಂಟ್‌ ಕುರಿತ ಪ್ರತಿಯೊಂದು ನಿರ್ಧಾರಗಳು ಜನರು ಮತ್ತು ಸಮುದಾಯದ ಮೇಲೆ ಪರಿಣಾಮ ಬೀರಿದೆ. ಅವರು ಏನು ಶೇರ್‌ ಮಾಡುತ್ತಾರೋ ಅದನ್ನು ನಿರ್ಧರಿಸುವುದು ಯಾರು, ಹೇಗೆ ನಿಯಮಗಳು ಅನ್ವಯ ಆಗುತ್ತದೆ, ಆ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಹೇಗೆ ಎನ್ನುವುದು ಅವರೆಲ್ಲರಿಗೂ ತಿಳಿಯಬೇಕಿದೆ.

ನಿಗಾ ಮಂಡಳಿ ಫೇಸ್‌ಬುಕ್‌ ಮತ್ತು ಇನ್ಸಾಸ್ಟಾಗ್ರಾಂಗೆ ಹೊಸ ಕಂಟೆಂಟ್‌ ಮಾದರಿಯನ್ನು ತರಲಿದೆ.

ಎಂದು ಫೇಸ್‌ಬುಕ್‌ ತನ್ನ ಹೇಳಿಕೆಯಲ್ಲಿ ಹೇಳಿಕೊಂಡಿದೆ.

ಅಂದಹಾಗೆ ಈ ನಿಗಾ ಮಂಡಳಿ ಫೇಸ್‌ಬುಕ್‌ನಿಂದ ಸ್ವತಂತ್ರವಾಗಿರಲಿದ್ದು, ಅದಕ್ಕಾಗಿ ಫೇಸ್‌ಬುಕ್‌ ಟ್ರಸ್ಟ್‌ ರೂಪದಲ್ಲಿ ೧೩೦ ಮಿಲಿಯನ್‌ ಡಾಲರ್‌ನ್ನ ಇಡಲಾಗಿದೆ. ೨೩ ಭಾಷೆಗಳಲ್ಲಿ ಮಂಡಳಿಯ ವಿವಿಧ ಸದಸ್ಯರು ಪರಿಣತಿ ಹೊಂದಿದ್ದು, ವಿವಿಧ ಸಂಸ್ಕೃತಿಯ ಹಿನ್ನೆಲೆಯನ್ನೂ ಹೊಂದಿದ್ದಾರೆ.

LEAVE A REPLY

Please enter your comment!
Please enter your name here