ಪ್ರಧಾನಿ ಮೋದಿ 2.0ನ ಮೊದಲ ವರ್ಷದ ಪತ್ರ – ನೆಲಕಚ್ಚಿದ ಆರ್ಥಿಕತೆ ಬಗ್ಗೆ ಮಹಾ ಮೌನ..! – ವಿಶ್ಲೇಷಣೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಆವೃತ್ತಿಗೆ ಮೊದಲ ವರ್ಷಾಚರಣೆ ಸಂಭ್ರಮ. 2014ರಿಂದ ದೇಶದ ಚುಕ್ಕಾಣಿ ಹಿಡಿದಿರುವ ನಮೋ  ಪ್ರಧಾನ ಸೇವಕನ (ಅವರೇ ಹೇಳಿಕೊಂಡಂತೆ) ಪೀಠದಲ್ಲಿ 6 ವರ್ಷಗಳನ್ನು ಕ್ರಮಿಸಿದ್ದಾರೆ. ಭಾರತದ ರಾಜಕಾರಣದ ಪಾಲಿಗೆ ಇದೊಂದು ಸುದೀರ್ಘ ಪಯಣವೆಂದರೆ ತಪ್ಪಲ್ಲ. ಅಟಲ್‌ ಬಿಹಾರಿ ವಾಜಪೇಯಿ ಬಳಿಕ ಪ್ರಧಾನಮಂತ್ರಿ ಹುದ್ದೆಯಲ್ಲಿ 6 ವರ್ಷಗಳನ್ನು ಪೊರೈಸಿ ಏಳನೇ ವರ್ಷಕ್ಕೆ ಕಾಲಿಡುತ್ತಿರುವ ಮೊದಲ ಬಿಜೆಪಿ ಪ್ರಧಾನಮಂತ್ರಿ.

ಮೊದಲ ವರ್ಷದ ಖುಷಿಯಲ್ಲಿ, ಕೊರೋನಾ ಸಂಕಷ್ಟದ ಹೊತ್ತಲ್ಲಿ ಪ್ರಧಾನಿ ಮೋದಿ 130 ಕೋಟಿ ಭಾರತೀಯರಿಗೆ ಪತ್ರದ ಮೂಲಕ, ಆಡಿಯೋ ಸಂದೇಶದ ಮೂಲಕ ತಮ್ಮ ಸಂದೇಶವನ್ನು ರವಾನಿಸಿದ್ದಾರೆ. ಕೊರೋನಾ ವಿರುದ್ಧ ಭಾರತೀಯರ ಸಂಘಟಿತ ಹೋರಾಟದಿಂದ ಹಿಡಿದು ಪಾಕಿಸ್ತಾನ ವಿರುದ್ಧದ ಸರ್ಜಿಕಲ್‌ ದಾಳಿ, ವಾಯುಸೇನಾ ವಿಮಾನಗಳ ಮೂಲಕ ನಡೆಸಲಾದ ಎರಡನೇ ಸರ್ಜಿಕಲ್‌ ದಾಳಿ, ಅನಾಗರಿಕ ಎನ್ನಿಸಿದ್ದ ಮುಸ್ಲಿಂ ಸ್ತ್ರೀ ಪೀಡಣೆಯ ತ್ರಿವಳಿ ತಲಾಖ್‌ ರದ್ದತಿ, ರಾಮಮಂದಿರ ಸಂಬಂಧ ಸುಪ್ರೀಂಕೋರ್ಟ್‌ನಿಂದ ಸರ್ವಸಮ್ಮತ ತೀರ್ಪು ಮತ್ತು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ದೇಶದ ಐಕ್ಯತೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾಗಿ ಹೇಳಿ ಪ್ರಧಾನಿ ತಮ್ಮ ಸಾಧನೆಗಳ ಪಟ್ಟಿಯನ್ನು ಒಪ್ಪಿಸಿದ್ದಾರೆ.

ಜಿಎಸ್‌ಟಿ ಸುಧಾರಣೆ ಬಗ್ಗೆ ಪತ್ರದಲ್ಲಿ ಪ್ರಸ್ತಾಪಿಸಿರುವ ಪ್ರಧಾನಿ 2014ರಲ್ಲಿ ತಮ್ಮ ಸರ್ಕಾರ ಬಂದ ಕೂಡಲೇ ಆರಂಭಿಸಿದ್ದ ಮೇಕ್‌ ಇನ್‌ ಇಂಡಿಯಾ ಅರ್ಥಾತ್‌ ಭಾರತದಲ್ಲೇ ಉತ್ಪಾದಿಸಿ ಬಗ್ಗೆ ಉಲ್ಲೇಖಿಸಿಲ್ಲ. ಆದರೆ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‌ ಮೂಲಕ ಆತ್ಮನಿರ್ಭರ  ಭಾರತದ ಕ್ರಮಕೈಗೊಂಡಿದ್ದೇವೆ ಎಂದಿದ್ದಾರೆ.

ಕಪ್ಪು ಹಣ ದಮನಕ್ಕಾಗಿ ನೋಟು ನಿಷೇಧ ಮಾಡಿದ್ದ ಪ್ರಧಾನಿ ಮೋದಿ ಭಾರತದ ರಾಜಕೀಯ ಮತ್ತು ಆರ್ಥಿಕ ಇತಿಹಾಸದ ಅಂಥದ್ದೊಂದು ಐತಿಹಾಸಿಕ ನಿರ್ಧಾರದ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.

ಅಂದಹಾಗೆ ಪ್ರಧಾನಿ ಮೋದಿ ಸರ್ಕಾರದ 2ನೇ ಆವೃತ್ತಿಯ ಮೊದಲ ವರ್ಷದ ಅವಧಿಯನ್ನು ಪೊರೈಸಿದ ಖುಷಿಯನ್ನಷ್ಟೇ ಸರ್ಕಾರಕ್ಕೆ ನೀಡಬಹುದೇ ಹೊರತು ದೇಶದ ಆರ್ಥಿಕ ಸ್ಥಿತಿ ಹೇಳಲಾಗದಷ್ಟು ಮಟ್ಟಿಗೆ ಹದಗೆಟ್ಟಿದೆ. ನಿನ್ನೆಯಷ್ಟೇ ಹೊರಬಿದ್ದ ವಾರ್ಷಿಕ ಜಿಡಿಪಿ ಮತ್ತು ತ್ರೈಮಾಸಿಕ ಜಿಡಿಪಿಯ ಲೆಕ್ಕಾಚಾರ 2014ರಿಂದ ದೇಶದ ಗತಿ ದುಸ್ಥಿತಿಯತ್ತ ಸಾಗುತ್ತಿದೆ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.

ತ್ರೈಮಾಸಿಕ ಅವಧಿಯ ಲೆಕ್ಕಾಚಾರದಲ್ಲಿ ಹೇಳುವುದಾದರೆ ಪ್ರಧಾನಿ ಮೋದಿ ಸರ್ಕಾರದ ಸಾಧನೆ 17 ವರ್ಷಗಳಲ್ಲೇ ಅತ್ಯಂತ ಕಳಪೆ. ವಾರ್ಷಿಕ ಜಿಡಿಪಿ ಲೆಕ್ಕಾಚಾರದಲ್ಲಿ ಹೇಳುವುದಾದರೆ 11 ವರ್ಷಗಳಲ್ಲೇ ಅತ್ಯಂತ ಕಳಪೆ.

2019-20ರ ಆರ್ಥಿಕ ವರ್ಷದಲ್ಲಿ (ಪ್ರತಿ ಆರ್ಥಿಕ ವರ್ಷ ಏಪ್ರಿಲ್‌-ಮಾರ್ಚ್‌ವರೆಗೆ) ಜಿಡಿಪಿ ಬೆಳವಣಿಗೆ ಕೇವಲ ಶೇಕಡಾ 4.2 ಅಷ್ಟೇ. ವಿಚಿತ್ರ ಎಂದರೆ 2012-13 ರಲ್ಲಿ ನೀತಿ ನಿರ್ಧಾರಗಳ ಗೊಂದಲದ ನಡುವೆಯೂ ಭಾರತದ ಅಭಿವೃದ್ಧಿ ದರ ಶೇಕಡಾ 5.5ರಷ್ಟಿತ್ತು. ಈಗಿನ ಹೋಲಿಕೆಯಲ್ಲಿ ಶೇಕಡಾ 1.3 ರಷ್ಟು ಹೆಚ್ಚು.

ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕ ಅಭಿವೃದ್ಧಿ ಋಣಾತ್ಮಕವಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾದರೆ ಲಾಕ್‌ಡೌನ್‌ಗಿಂತ ಪ್ರಧಾನಿ ಮೋದಿಯ 6 ವರ್ಷಗಳ ಆಡಳಿತದಲ್ಲಿ ದೇಶದ ಸುಭಿಕ್ಷವಾಗಿತ್ತೇ ಎಂದು ಕೇಳಿದರೆ ಉತ್ತರ, ಇಲ್ಲ. 2014ರಲ್ಲಿ ಅಧಿಕಾರ ಬಂದ ಎನ್‌ಡಿಎ ಸರ್ಕಾರ 2015ರಿಂದ ಜಿಡಿಪಿ ಲೆಕ್ಕಾಚಾರದ ಸೂತ್ರವನ್ನೇ ಬದಲಿಸಿತ್ತು.

2014ರಲ್ಲಿ (2015ರ ಮಾರ್ಚ್‌ಗೆ ಕೊನೆಗೊಂಡಂತೆ) ಜಿಡಿಪಿ ಶೇಕಡಾ 7.14ಕ್ಕೆ ಏರಿಕೆಯಾದ್ರೆ, 2015ರಲ್ಲಿ ಶೇಕಡಾ 8ರಷ್ಟು, 2016ರಲ್ಲಿ ಶೇಕಡಾ 8.17ರಷ್ಟು ಜಿಡಿಪಿ ಪ್ರಗತಿ ಆಗಿತ್ತು. ಹಾಗೇ ನೋಡಿದರೆ 2010ರಲ್ಲಿ ಶೇಕಡಾ 8.5ಯಷ್ಟು, 2006ರಲ್ಲಿ ಶೇಕಡಾ 8.06ರಷ್ಟು ಜಿಡಿಪಿ ಬೆಳವಣಿಗೆ ಕಂಡಿತ್ತು ( ಈ ಅವಧಿಯಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು).

2018ಮತ್ತು 2019ರ ತ್ರೈಮಾಸಿಕ ಅವಧಿಯ ಜಿಡಿಪಿ ದರವನ್ನು ಗಮನಿಸಿದರೆ 8 ತ್ರೈಮಾಸಿಕ ಅವಧಿಗಳಲ್ಲಿ ಭಾರತದ ಆರ್ಥಿಕತೆಯ ಬಂಡಿ ಜಾರುತ್ತಲೇ ಇದೆ.

2018-19ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 7.1ರಷ್ಟಿದ್ದ ಜಿಡಿಪಿ ದರ 2ನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 6.2ಕ್ಕೆ, 3ನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 5.8ಕ್ಕೂ 4ನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 5.6ಕ್ಕೆ ಕುಸಿಯಿತು. ಈ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇಕಡಾ 6.1ರಷ್ಟಿತ್ತು.

2019-20ರಲ್ಲಿ ಮೊದಲ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಶೇಕಡಾ 5.6ರಷ್ಟಿತ್ತು. ಬಳಿಕ 2ನೇ ತ್ರೈಮಾಸಿಕ ಅವಧಿಗೆ ಶೇಕಡಾ 5.1, ಮೂರನೇ ತ್ರೈಮಾಸಿಕ ಅವಧಿಗೆ ಶೇಕಡಾ 4.7, 4ನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 3.1ಕ್ಕೆ ಇಳಿಯಿತು. 2019-20ರ ಅವಧಿಯಲ್ಲಿ ಒಟ್ಟು ಜಿಡಿಪಿ ದರದ ಬೆಳವಣಿಗೆ ಶೇಕಡಾ 4.2ಕ್ಕೆ ಇಳಿದಿದೆ.

ಸರ್ಕಾರಗಳು ಸಾಮಾನ್ಯವಾಗಿ ವೈಫಲ್ಯಗಳನ್ನು ಒಪ್ಪಿಕೊಳ್ಳುವುದಿಲ್ಲ. ಬೀಳುತ್ತಿದ್ದೇವೆ ಎಂಬ ಪರಿಜ್ಞಾನವಿದ್ದರೂ ಅದನ್ನು ಸ್ವೀಕರಿಸುವ ಜಾಯಮಾನ ಅಧಿಕಾರಶಾಹಿಗೆ ಇರುವುದಿಲ್ಲ. ಪ್ರಧಾನಿ ಮೋದಿ ಸರ್ಕಾರದಲ್ಲೂ ಆಗುತ್ತಿರುವುದು ಅದೇ.

LEAVE A REPLY

Please enter your comment!
Please enter your name here