ಪ್ರಧಾನಿ ನರೇಂದ್ರ ಮೋದಿಯ ಆ ಮಾತಿನ ಸುಳಿವು ಏನಿರಬಹುದು..? – ಯಾರಿಗೆಲ್ಲ ಲಾಕ್‌ಡೌನ್‌ ರಿಲೀಫ್‌..?

ಏಪ್ರಿಲ್‌ ೩೦ರವರೆಗೆ ಅಂದರೆ ಮತ್ತೆ ಎರಡು ವಾರಗಳ ಕಾಲ ಲಾಕ್‌ಡೌನ್‌ ವಿಸ್ತರಣೆ ಆಗುವುದು ಪಕ್ಕಾ ಆಗಿದೆ. ಇವತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಲಾಕ್‌ಡೌನ್‌ ವಿಸ್ತರಣೆಗೆ ನಿರ್ಧಾರಕ್ಕೆ ಬರಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಲಾಕ್‌ಡೌನ್‌ ವಿಸ್ತರಣೆಯ ನಿರ್ಧಾರವನ್ನು ದೃಢಪಡಿಸಿದ್ದಾರೆ.

ಏಪ್ರಿಲ್‌ ೧೪ರಂದು ದೇಶಾದ್ಯಂತ ಮೊದಲ ಹಂತದ ಲಾಕ್‌ಡೌನ್‌ ಕೊನೆ ಆಗಿ, ಏಪ್ರಿಲ್‌ ೧೫ರಿಂದ ಎರಡನೇ ಹಂತದ ಲಾಕ್‌ಡೌನ್‌ ಆರಂಭವಾಗಲಿದೆ. ಎರಡನೇ ಹಂತದ ಲಾಕ್‌ಡೌನ್‌ ಮೊದಲನೇ ಹಂತದ ಲಾಕ್‌ಡೌನ್‌ಗಿಂತ ವಿಭಿನ್ನವಾಗಿರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಲಾಕ್‌ಡೌನ್‌ ವಿಸ್ತರಣೆಗೆ ಸಂಬಂಧಿಸಿದಂತೆ ದೇಶಾದ್ಯಂತ ಏಕಸ್ವರೂಪದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರವೇ ಹೊರಡಿಸಲಿದೆ. ಈ ಅನ್ವಯದಂತೆಯೇ ಇಡೀ ದೇಶದಲ್ಲಿ ಲಾಕ್‌ಡೌನ್‌ ಸ್ವರೂಪ ನಿರ್ಧಾರವಾಗಲಿದೆ.

ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಿರುವ ಮಾತುಗಳು ಸಾಕಷ್ಟು ಮಹತ್ವ ಪಡೆದಿವೆ.

ನನ್ನ ಮೊದಲ ರಾಷ್ಟ್ರೀಯ ಭಾಷಣದಲ್ಲಿ ನಾನು ಜೀವ ಉಳಿದರೆ ಜಗತ್ತು ಉಳಿಯುತ್ತೆ ಎಂದು ಹೇಳಿದ್ದೆ. ಆದರೆ ನಾವು ಈಗ ಜೀವದ ಬಗ್ಗೆಯೂ ಯೋಚಿಸಬೇಕು, ಜಗತ್ತಿನ ಬಗ್ಗೆಯೂ ಯೋಚಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ಅಂದರೆ ಕೊರೋನಾದಿಂದ ಜೀವಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಜಗತ್ತನ್ನೂ ಉಳಿಸಿಕೊಳ್ಳಬೇಕಿದೆ ಎನ್ನುವುದರ ಮಾತಿನ ಸುಳಿವು ಕೆಲವೊಂದಿಷ್ಟು ಆರ್ಥಿಕ ಚಟುವಟಿಕೆಗಳಿಗೆ ಷರತ್ತುಗಳನ್ನು ಹಾಕಿ ಅನುಮತಿ ನೀಡುವ ನಿರೀಕ್ಷೆ ಇದೆ.

ಕೃಷಿ, ಮೀನುಗಾರಿಕೆಗೆ ಈಗಾಗಲೇ ನೀಡಲಾಗಿರುವ ವಿನಾಯಿತಿಯನ್ನು ಮುಂದುವರೆಸಬಹುದು. ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ವ್ಯವಸ್ಥೆ, ಕೃಷಿ ಮತ್ತು ಅಗತ್ಯ ಸಾಮಗ್ರಿಗಳ ಪೊರೈಕೆಗೆ ಅವಕಾಶ ಕಲ್ಪಿಸಬಹುದು. ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ರೈತರಿಗೆ ಪ್ರಧಾನಿ ಮೋದಿ ವಿಶೇಷ ಪರಿಹಾರವನ್ನು ಘೋಷಿಸುವ ಸಾಧ್ಯತೆ ಇದೆ.

ರೋಟೆಷನ್‌ ಪದ್ಧತಿಯಲ್ಲಿ ಸರ್ಕಾರಿ ಕಚೇರಿಗಳ ನಿರ್ವಹಣೆ, ಕಡಿಮೆ ಪ್ರಮಾಣದ ಕಾರ್ಮಿಕರಿರುವ ಕಾರ್ಖಾನೆಗಳಿಗೆ ತೆರೆಯಲು ಅವಕಾಶ ನೀಡುವ ಸಾಧ್ಯತೆಗಳಿವೆ.

ಕಟ್ಟಡ ನಿರ್ಮಾಣ ವಲಯದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಕಾರಣ ಕಟ್ಟಡ ನಿರ್ಮಾಣ ಕಾಮಗಾರಿಗೆ ವಿನಾಯಿತಿ ನೀಡಬಹುದು.

ಜಿಎಸ್‌ಟಿ ಜಾರಿಯ ಬಳಿಕ ಅಬಕಾರಿ ಆದಾಯವೇ ರಾಜ್ಯಗಳ ಪಾಲಿಗೆ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಹೊತ್ತಲ್ಲೂ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆಗಳಲ್ಲಿ ನಿಗದಿತ ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಹುದು.

LEAVE A REPLY

Please enter your comment!
Please enter your name here