ಪ್ರಧಾನಮಂತ್ರಿ ಕಾಳಜಿಯೂ…ಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರೂ..! – ಹೀಗೊಂದು ವಿಶ್ಲೇಷಣೆ – ಸಂಪೂರ್ಣ ಓದಿ

ಮುಂದಿನ ವಿಚಾರಗಳನ್ನು ಹೇಳುವುದಕ್ಕೆ ಮೊದಲು ನಾವು ಇಲ್ಲಿ ಹಾಕಿರುವ ವೀಡಿಯೋಗಳನ್ನು ಗಮನಿಸಿ. ಇದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನ ವಾಣಿಜ್ಯ ನಗರಿ ಆಗಿರುವ ಸೂರತ್‌ನಲ್ಲಿ ಇವತ್ತು ನಡೆದ ಘಟನಾವಳಿಗಳ ದೃಶ್ಯ ಸಾಕ್ಷ್ಯ. 41 ದಿನಗಳಿಂದ ಭಾರತ ಲಾಕ್‌ಡೌನ್‌ ಪರಿಣಾಮವಾಗಿ ಸೂರತ್‌ನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ತಮ್ಮನ್ನು ತಮ್ಮತಮ್ಮ ರಾಜ್ಯಗಳಿಗೆ ಕಳುಹಿಸಿಕೊಡುವಂತೆ ನಡೆಸಿದ ಪ್ರತಿಭಟನೆ, ಪೊಲೀಸರ ಜೊತೆಗಿನ ಸಂಘರ್ಷ. ಅಂದಹಾಗೆ ಹಲವು ದಿನಗಳಿಂದ ಸೂರತ್‌ನಲ್ಲಿ ಪೊಲೀಸರು ಮತ್ತು ವಲಸೆ ಕಾರ್ಮಿಕರ ನಡುವೆ ಜಟಾಪಟಿ ನಡೆಯುತ್ತಲೇ ಇದೆ, ತವರು ರಾಜ್ಯಗಳಿಗೆ ಹೋಗುವ ವಿಷಯದಲ್ಲಿ.

ಮಾರ್ಚ್‌ 23ರಂದು ರಾತ್ರಿ 8 ಗಂಟೆಗೆ ರಾಷ್ಟ್ರೀಯ ವಾಹಿನಿ ದೂರದರ್ಶನದಲ್ಲಿ ಕಾಣಿಸಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ತಾವು ಮಾಡಿದ ಮಹತ್ವದ ರಾಷ್ಟ್ರೀಯ ಭಾಷಣದಲ್ಲಿ 21 ದಿನಗಳ ಅಂದರೆ ಏಪ್ರಿಲ್‌ 14ರವರೆಗೆ ಸುದೀರ್ಘ ಲಾಕ್‌ಡೌನ್‌ನ ಘೋಷಣೆ ಮಾಡಿದರು. ಪ್ರಧಾನಿ ಭಾಷಣದ ಕೇವಲ ನಾಲ್ಕು ಗಂಟೆಗಳೊಳಗೆ ಅಂದರೆ ಮಾರ್ಚ್‌ 24ರ ಮಧ್ಯರಾತ್ರಿಯಿಂದಲೇ ದೇಶವೇ ಬಂದ್‌ ಆಯಿತು.

ಯಾವುದೇ ಪೂರ್ವ ಮುನ್ಸೂಚನೆಯೇ ಇಲ್ಲದೆ ಏಕಾಏಕಿ ರಸ್ತೆ ಮತ್ತು ರೈಲು ಮಾರ್ಗದಲ್ಲಿ ಓಡಾಟವನ್ನು ನಿಲ್ಲಿಸಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗಲೂ ಜೀವಂತವಾಗಿಯೇ ಇದೆ.

ಪ್ರಧಾನಮಂತ್ರಿಯವರ ದಿಢೀರ್‌ ಮತ್ತು ತುರ್ತು ಲಾಕ್‌ಡೌನ್‌ ಘೋಷಣೆಯ ತತ್‌ಕ್ಷಣದ ನೇರ ಪರಿಣಾಮ ಆಗಿದ್ದು ವಲಸೆ ಕಾರ್ಮಿಕರ ಮೇಲೆ. ಹುಟ್ಟಿದ ಊರನ್ನು ಬಿಟ್ಟು ದೂರ ದೂರದ ರಾಜ್ಯಗಳಿಗೆ ಹೋದವರು ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡಿದ್ದು ಮಾತ್ರವಲ್ಲ ಸಾವಿರಾರು ಕಿಲೋ ಮೀಟರ್‌ ದೂರದಲ್ಲಿರುವ ಸ್ವಂತ ಊರನ್ನು ಮತ್ತೆ ಸೇರಿಕೊಳ್ಳುವುದು ಹೇಗೆ ಎನ್ನುವ ಆತಂಕಕ್ಕೊಳಗಾದರು. ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪ್ರಧಾನಮಂತ್ರಿಗಳ ತವರು ರಾಜ್ಯ ಗುಜರಾತ್‌ನಲ್ಲಿ ವಲಸೆ ಕಾರ್ಮಿಕರು ಪಟ್ಟ ಪಾಡೇ ಇದಕ್ಕೆ ಜೀವಂತ ಸಾಕ್ಷಿ.

ಕೊರೋನಾ ತಡೆಗೆ ಮನೆಗಳಲ್ಲೇ ಉಳಿಯುವುದು ಅನಿವಾರ್ಯವಾಗಿರುವಾಗ ದುಡಿಮೆಯೂ ಇಲ್ಲದೆ ಅತ್ತ ಊರಿಗೂ ಹೋಗಲಾಗದೇ ಕಾರ್ಮಿಕರು ದಿಕ್ಕು ತೋಚಾದರು. ಸರ್ಕಾರಗಳು ಕಾರ್ಮಿಕರಿಗಾಗಿ ನಿರಾಶ್ರಿತ ಕೇಂದ್ರಗಳನ್ನು ತೆರೆದಿರುವುದಾಗಿಯೂ ಅನ್ನಾಹಾರವನ್ನೂ ನೀಡುತ್ತಿರುವುದಾಗಿಯೂ ಹೇಳಿಕೊಂಡವು. ಆದರೆ ದಿನದ ಉತ್ಪತ್ತಿಯೇ ಆಗದ ಊರಲ್ಲಿ ಉಳಿದು ಕಾರ್ಮಿಕರು ಹೇಗೆ ದಿನದೂಡಬೇಕು, ಮುಂದಿನ ಹಾದಿಯೇನು ಎನ್ನುವುದನ್ನು ಸರ್ಕಾರಗಳು ಸ್ಪಷ್ಟವಾಗಿ ಹೇಳಲೇ ಇಲ್ಲ. ಬದುಕು ಎಂದರೆ ಬರೀ ಹೊಟ್ಟೆ ತುಂಬಿಸಿಕೊಳ್ಳುವುದಲ್ಲ.

ಅದೆಷ್ಟೋ ಕಾರ್ಮಿಕರು ನಡೆದುಕೊಂಡೇ ಊರಿನತ್ತ ಹೊರಟರು. ಆ ದೀರ್ಘಪ್ರಯಾಣದಲ್ಲಿ ಅವರಿಗೆ ಅನ್ನಾಹಾರವಿರಲಿಲ್ಲ. ಸುಡು ಬಿಸಿಲಲ್ಲಿ ಏದುಸಿರುವ ಬಿಡುತ್ತಾ ತಮ್ಮ ತಮ್ಮ ಹಳ್ಳಿಗಳಿಗೆ ಸಾಗಿದರು. ಹೀಗೆ ಹೊರಟವರಲ್ಲಿ ಕೆಲವರು ಪ್ರಾಣವನ್ನೂ ಬಿಟ್ಟರು.

ಮೊದಲ ಹಂತದ ಲಾಕ್‌ಡೌನ್‌ ಮುಗಿದು ಎರಡನೇ ಹಂತದ ಲಾಕ್‌ಡೌನ್‌ ಮುಗಿಯಲು ನಾಲ್ಕು ದಿನ ಬಾಕಿ ಇರುವಂತೆ ಕೇಂದ್ರ ಗೃಹ ಸಚಿವಾಲಯ ಏಪ್ರಿಲ್‌ 29ರಂದು ಸುತ್ತೋಲೆಯೊಂದನ್ನು ಹೊರಡಿಸಿತು. ಆ ಸುತ್ತೋಲೆಯ ಪ್ರಕಾರ ಹೊರ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ಇತರರಿಗೆ ಅವರ ತವರು ರಾಜ್ಯಗಳಿಗೆ ಹೋಗಲು ಅನುಮತಿಯನ್ನು ನೀಡಲಾಯ್ತು. ಈ ಅದೇಶದ ಮತ್ತೊಂದು ಪ್ರಮುಖ ಅಂಶವೆಂದರೆ ಇವರನ್ನೆಲ್ಲ ಕಡ್ಡಾಯವಾಗಿ ಬಸ್‌ನಲ್ಲಷ್ಟೇ ಕರೆದೊಯ್ಯಬೇಕು ಎನ್ನುವುದು.

ಗಮನಿಸಬೇಕಾದ ಅಂಶವೆಂದರೆ ಈ ಆದೇಶ ಹೊರಬೀಳುವುದಕ್ಕೂ ಎರಡು ದಿನ ಮೊದಲು ಅಂದರೆ ಏಪ್ರಿಲ್‌ 27ರಂದು ಸೋಮವಾರ ಪ್ರಧಾನಮಂತ್ರಿಯವರು ಮೂರನೇ ಹಂತದ ಲಾಕ್‌ಡೌನ್‌ ವಿಸ್ತರಣೆ ಸಂಬಂಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ರಾಜ್ಯಗಳು ಇಟ್ಟ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು ಹೊರರಾಜ್ಯಗಳಿಂದ ತವರು ರಾಜ್ಯಗಳಿಗೆ ವಲಸೆ ಕಾರ್ಮಿಕರ ವಾಪಸ್‌ ಪ್ರಯಾಣಕ್ಕೆ ರೈಲುಗಳ ವ್ಯವಸ್ಥೆ ಮಾಡಬೇಕು ಎನ್ನುವುದು. ಅದರೆ ಕೇಂದ್ರ ಸರ್ಕಾರ ಆ ಮನವಿಯನ್ನು ಪುರಸ್ಕರಿಸಲಿಲ್ಲ.

ಹೊರರಾಜ್ಯಗಳಿಂದ ವಲಸೆ ಕಾರ್ಮಿಕರನ್ನು ಬಸ್‌ಗಳಲ್ಲಿ ಕರೆತರುವುದು ಕಾರ್ಯಸಾಧುವಲ್ಲ ಎನ್ನುವುದು ರಾಜ್ಯಗಳ ವಾದವಾಗಿತ್ತು. ದೂರ ಪ್ರಯಾಣ, ಬಸ್‌ಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಹೋಗಬಹುದು ಮತ್ತು ಖರ್ಚು ವೆಚ್ಚ ದುಬಾರಿ ಆಗಿರಲಿದೆ ಎನ್ನುವುದು ರಾಜ್ಯಗಳ ಅಭಿಪ್ರಾಯದ ಹಿಂದಿನ ಕಾರಣವಾಗಿತ್ತು.

ಇವೆಲ್ಲದರ ನಡುವೆ ವಲಸೆ ಕಾರ್ಮಿಕರ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆ ಆಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರು ಅವರ ರಾಜ್ಯಗಳಿಗೆ ವಾಪಸ್‌ ಹೋಗುವ ಅಗತ್ಯವೇ ಇಲ್ಲವೆಂದು ವಾದಿಸಿತ್ತು. ವಲಸೆ ಕಾರ್ಮಿಕರು ಅವರ ಕೆಲಸದ ಸ್ಥಳದಿಂದ ಅವರವರ ಹಳ್ಳಿಗಳಿಗೆ ಹೋಗುವ ಅಗತ್ಯವಿಲ್ಲವೆಂದು ವಾದಿಸಿತ್ತು, ಕೇಂದ್ರ ಗೃಹ ಸಚಿವಾಲಯ ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ ಅನುಮತಿ ಆದೇಶ ಕೊಡುವ ಎರಡು ದಿನ ಮೊದಲು ಅಂದರೆ ಏಪ್ರಿಲ್‌ 27ರಂದು.

ಮೇ 2ರಿಂದ ವಲಸೆ ಕಾರ್ಮಿಕರ ಸಂಚಾರಕ್ಕಾಗಿ ವಿಶೇಷ ರೈಲು ಬಿಟ್ಟ ರೈಲ್ವೆ ಸಚಿವಾಲಯ ಆಘಾತವೊಂದನ್ನು ನೀಡಿತ್ತು. ಅದೇ ಟಿಕೆಟ್‌ ದುಡ್ಡು. ಟಿಕೆಟ್‌ ಮಾರಾಟದ ಬಗ್ಗೆ ರೈಲ್ವೆ ಮಂಡಳಿ ನೀಡಿದ್ದ ಆದೇಶ ಹೀಗಿದೆ:

ʻವಿಶೇಷ ಶ್ರಮಿಕ್‌ ರೈಲಿನಲ್ಲಿ ಪ್ರಯಾಣಿಸುವ ಸ್ಥಳಕ್ಕೆ ರೈಲ್ವೆ ಟಿಕೆಟ್‌ಗಳನ್ನು ಮುದ್ರಿಸಿ ಸ್ಥಳೀಯ ರಾಜ್ಯ ಸರ್ಕಾರಕ್ಕೆ ನೀಡಬೇಕು. ಆ ಟಿಕೆಟ್‌ನ್ನು ರಾಜ್ಯ ಸರ್ಕಾರಗಳು ಪ್ರಯಾಣಿಕರ ಕೈಗೆ ನೀಡಿ ಅವರಿಂದ ಟಿಕೆಟ್‌ ಮೊತ್ತವನ್ನು ವಸೂಲಿ ಮಾಡಿ ಆ ದುಡ್ಡನ್ನು ರಾಜ್ಯ ಸರ್ಕಾರಗಳು ರೈಲ್ವೆಗೆ ನೀಡಬೇಕುʼ

ವಿಶೇಷ ರೈಲಿನಲ್ಲಿ ಹೋಗುವವರಿಗೆ ಸ್ಲೀಪರ್‌ ಕ್ಲಾಸ್‌ನ ಟಿಕೆಟ್‌ ದರದ ಜೊತೆಗೆ 30 ರೂಪಾಯಿ ಸೂಪರ್‌ ಫಾಸ್ಟ್‌ ದರ ಮತ್ತು ಹೆಚ್ಚುವರಿ 20 ರೂಪಾಯಿ ಶುಲ್ಕ ವಸೂಲಿ ಮಾಡುವಂತೆ ಮೇ 1ರಂದು ರೈಲ್ವೆ ಮಂಡಳಿ ಆದೇಶ ನೀಡಿತ್ತು.

ಇತ್ತ, ಇವತ್ತು ಸ್ಪಷ್ಟನೆ ಕೊಟ್ಟಿರುವ ರೈಲ್ವೆ ಇಲಾಖೆ ಕಾರ್ಮಿಕರನ್ನು ಕಳುಹಿಸಿಕೊಡುವ ರಾಜ್ಯಗಳೇ ಅವರ ಪ್ರಯಾಣದ ವೆಚ್ಚವನ್ನು ಭರಿಸಬೇಕೆಂದು ಸ್ಪಷ್ಟಪಡಿಸಿವೆ. ಕಾರ್ಮಿಕರನ್ನು ಕಳುಹಿಸಿಕೊಡುವ ರಾಜ್ಯ ಸರ್ಕಾರ ಒಂದೋ ತಾನು ಕಳುಹಿಸಿಕೊಡುವ ಪ್ರಯಾಣಿಕರಿಂದ ಅಥವಾ ಯಾವ ರಾಜ್ಯಕ್ಕೆ ಕಳುಹಿಸಿಕೊಡುತ್ತಿದ್ದಾರೋ ಆ ರಾಜ್ಯದಿಂದ ಸಂಗ್ರಹಿಸಬಹುದು. ಅದು ಅವರ ನಿರ್ಧಾರಕ್ಕೆ ಬಿಟ್ಟಿದ್ದು. ವಿಶೇಷ ರೈಲಿನ ಓಡಾಟದ ಶೇಕಡಾ ೮೫ರಷ್ಟನ್ನು ನಾವೇ ಭರಿಸುತ್ತಿದ್ದೇವೆ ಎಂದೂ ರೈಲ್ವೆ ಹೇಳಿದೆ.

ಆದರೆ ವಲಸೆ ಕಾರ್ಮಿಕರು ಹೇಳುವ ಪ್ರಕಾರ ರೈಲ್ವೆ ಸ್ಲೀಪರ್‌ ಕೋಚ್‌ಗಳಿಗೆ ಹಳೆಯ ದರದಲ್ಲೇ ಟಿಕೆಟ್ ದುಡ್ಡನ್ನು‌ ಸಂಗ್ರಹಿಸಿದೆ. ಜೊತೆಗೆ 50 ರೂಪಾಯಿ ಹೆಚ್ಚುವರಿ ಶುಲ್ಕ ಬೇರೆ. ಉದಾಹರಣೆಗೆ ಬೆಂಗಳೂರಿನಿಂದ ಪಾಟ್ನಾಗೆ ಸ್ಲೀಪರ್‌ ಕೋಚ್‌ನಲ್ಲಿ 910 ರೂಪಾಯಿ ಇತ್ತು. ಆದರೆ ಈಗ 1,050 ರೂಪಾಯಿ ಸಂಗ್ರಹಿಸಲಾಗ್ತಿದೆ. ಗುಜರಾತ್‌ನ ನಡಿಯಾ ಜಂಕ್ಷನ್‌ನಿಂದ ಬಲಿಯಾಕ್ಕೆ 620 ರೂಪಾಯಿ ಈ ಹಿಂದೆಯೂ ಇತ್ತು.

ಅಂದರೆ ರೈಲ್ವೆ ಇಲಾಖೆ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರ ಸಲುವಾಗಿ ಟಿಕೆಟ್‌ನಲ್ಲಿ ರಿಯಾಯಿತಿ ಏನೂ ನೀಡಿಲ್ಲ. ಹಳೆಯ ದರವನ್ನೇ ವಿಧಿಸಿದೆ. 50 ರೂಪಾಯಿ ಹೆಚ್ಚುವರಿ ಶುಲ್ಕ ಬೇರೆ.

ಈ ಮೂಲಕ ವಲಸೆ ಕಾರ್ಮಿಕರ ಸ್ಥಳಾಂತರ ವಿಷಯದಲ್ಲಿ ಖರ್ಚು ಯಾರು ಮಾಡಬೇಕೆಂಬುದು ರಾಜ್ಯಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟರೂ ಅಚ್ಚರಿಯಿಲ್ಲ.

ರೈಲ್ವೆ ಟಿಕೆಟ್‌ ವಿಷಯದಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣ ಆಗಿದ್ದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರದೇಶ ಕಾಂಗ್ರೆಸ್‌ ಸಮಿತಿಗಳಿಗೆ ಕೊಟ್ಟ ಆದೇಶ. ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ಟಿಕೆಟ್‌ ವೆಚ್ಚವನ್ನು ಭರಿಸುವಂತೆ ಸೋನಿಯಾ ಎಲ್ಲ ಪಿಸಿಸಿ ಅಧ್ಯಕ್ಷರಿಗೆ ಸೂಚಿಸಿದ್ದಾರೆ.

ನಮ್ಮ ಕೂಲಿಕಾರ್ಮಿಕರು ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಅವರ ಪರಿಶ್ರಮ ಮತ್ತು ತ್ಯಾಗವೇ ನಮ್ಮ ದೇಶದ ಆಧಾರ ಸ್ಥಂಭ ಎಂದು ಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಸೋನಿಯಾ ಕೊರೋನಾ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಹೊಸದಾಗಿ ಶುರು ಮಾಡಿರುವ ಪ್ರಧಾನಿ ಕೇರ್ಸ್‌ ಫಂಡ್‌ಗೆ ರೈಲ್ವೆ ಇಲಾಖೆ 150 ಕೋಟಿ ರೂಪಾಯಿ ಕೊಟ್ಟಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ವಿದೇಶದಲ್ಲಿರುವವರನ್ನು ವಿಮಾನದಲ್ಲಿ ಉಚಿತವಾಗಿ ಕರೆದುಕೊಂಡು ಬಂದಿರುವಾಗ, ಗುಜರಾತ್‌ನಲ್ಲಿ ಕೇವಲ ಒಂದು ಕಾರ್ಯಕ್ರಮಕ್ಕೆ ( ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಭೇಟಿ) 100 ಕೋಟಿ ರೂಪಾಯಿ ಖರ್ಚು ಮಾಡಿರುವಾಗ, ಪ್ರಧಾನಿ ಕೇರ್ಸ್‌ ಫಂಡ್‌ಗೆ ರೈಲ್ವೆ ಇಲಾಖೆ 150 ಕೋಟಿ ದೇಣಿಗೆ ಕೊಟ್ಟಿರುವಾಗ ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವ ವಲಸೆ ಕಾರ್ಮಿಕರಿಗೆ ಕನಿಷ್ಠ ಸೌಜನ್ಯವನ್ನು ಯಾಕೆ ತೋರಿಸುತ್ತಿಲ್ಲ. ಅದೂ ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಎಂದು ಸೋನಿಯಾ ಖಾರವಾಗಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ವಲಸೆ ಕಾರ್ಮಿಕರ ಟಿಕೆಟ್‌ ವೆಚ್ಚವನ್ನು ಕಾಂಗ್ರೆಸ್‌ ಭರಿಸುತ್ತದೆ ಎಂದು ಸೋನಿಯಾ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿಯು ಗೃಹ ಸಚಿವಾಲಯದ ಅದೇಶವನ್ನು ಉಲ್ಲೇಖಿಸಿ (ಅರ್ಧಂಬರ್ಧ ಮಾತ್ರ) ತಿರುಗೇಟು ನೀಡಿದೆ. ಇತ್ತ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಮಾಡಿದ್ದ ಟ್ವೀಟನ್ನೇ ಮುಂದಿಟ್ಟುಕೊಂಡು ರಾಷ್ಟ್ರೀಯ ಮಾಧ್ಯಮಗಳು ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಸರ್ಕಾರವನ್ನು ಟಾರ್ಗೆಟ್‌ ಮಾಡಿವೆ. ಅಂದಹಾಗೆ ಸಂತೋಷ್‌ ಟ್ವೀಟ್‌ನ್ನೇ ಮಾಧ್ಯಮಗಳು ಮೂಲಗಳು ಎಂದು ತಮ್ಮ ವೀಕ್ಷಕರಿಗೆ ಹೇಳಿವೆ..!

ಕರ್ನಾಟಕದಲ್ಲೂ ವಲಸೆ ಕಾರ್ಮಿಕರ ಪರಿಸ್ಥಿತಿ ಭಿನ್ನವೇನಲ್ಲ. ಸಾರ್ವಜನಿಕ ಟೀಕೆ, ಆಕ್ರೋಶ ಸ್ಫೋಟಗೊಂಡ ಬಳಿಕ ನಿನ್ನೆಯಿಂದ ಉಚಿತ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಿರುವ ಸಿಎಂ ಯಡಿಯೂರಪ್ಪ ಸರ್ಕಾರ ಅದಕ್ಕಿಂತಲೂ ಮೊದಲು ಪ್ರಯಾಣಿಸಿದ್ದವರಿಂದ ದುಪ್ಪಟ್ಟು ಟಿಕೆಟ್‌ ದರ ವಸೂಲಿ ಮಾಡಿತ್ತು. ಈ ವೇಳೆ ಕೆಎಸ್‌ಆರ್‌ಟಿಸಿಗೆ ಕಾಂಗ್ರೆಸ್‌ 1 ಕೋಟಿ ರೂಪಾಯಿ ದೇಣಿಗೆ ಘೋಷಿಸಿತ್ತು. ಆದರೆ ಕೆಎಸ್‌ಆರ್‌ಟಿಸಿ ಅದನ್ನು ಸ್ವೀಕರಿಸಲಿಲ್ಲ. ಹೀಗಾಗಿ ಕೆಪಿಸಿಸಿ ಆ 1 ಕೋಟಿ ರೂಪಾಯಿ ಮೊತ್ತದ ಚೆಕ್‌ನ್ನು ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಕೈಗೆ ನೀಡಿದೆ. ಆ ಮೂಲಕ ಪರಿಹಾರ ನಿಧಿಗೆ ದುಡ್ಡು ಜಮೆ ಆಗಲಿದೆ.

ಪ್ರಧಾನಮಂತ್ರಿ ಕಾಳಜಿ ನಿಧಿಗೆ 150 ಕೋಟಿ ರೂಪಾಯಿ ಮೊತ್ತವನ್ನು ಕೊಟ್ಟು ಪ್ರಧಾನಿ ನರೇಂದ್ರ ಮೋದಿ ಕೈಯಿಂದ ಹೊಗಳಿಸಿಕೊಂಡ ರೈಲ್ವೆ ಸಚಿವಾಲಯ ಆ ಕಾಳಜಿಯನ್ನು ವಲಸೆ ಕಾರ್ಮಿಕರ ಮೇಲೆ ತೋರಿಸಬೇಕಿತ್ತು. ಲಾಕ್‌ಡೌನ್‌ಗೂ ಮೊದಲೇ ಹೋಗಲು ಬಿಟ್ಟಿದ್ದರೆ ಯಾರ ಹಂಗಿಗೂ ಒಳಗಾಗದೇ ತಮ್ಮ ಪಾಡಿಗೆ ಊರಿಗೆ ಹೋಗ್ತಿದ್ದ ವಲಸೆ ಕಾರ್ಮಿಕರನ್ನು ದಿಢೀರ್‌ ಲಾಕ್‌ಡೌನ್‌ ಘೋಷಿಸಿ ಹೊರರಾಜ್ಯದಲ್ಲಿ ಸಿಲುಕಿಸಿ ಇದಾದ ಒಂದೂವರೆ ತಿಂಗಳ ಗೋಗೆರೆತ, ಮೊರೆತದ ಬಳಿಕ ಬಸ್‌ನಲ್ಲಿ ಹೋಗುವಂತೆ ಹೇಳಿ, ಬಸ್‌ನಲ್ಲಿ ಅಸಾಧ್ಯವೆಂದು ತಿಳಿದು ಆ ಬಳಿಕ ವಿಶೇಷ ರೈಲುಗಳನ್ನು ಬಿಟ್ಟು, ಆ ರೈಲುಗಳಿಗೆ ಶ್ರಮಿಕ್‌ ಅಂದರೆ ಕಾರ್ಮಿಕರ ರೈಲು ಎಂದು ವಿಶೇಷ ನಾಮಕರಣವನ್ನು ಮಾಡಿದ ರೈಲ್ವೆಗೆ 41 ದಿನಗಳಿಂದ ದುಡಿಮೆ ಇಲ್ಲದೆಯೇ ಕಾರ್ಮಿಕರ ಸ್ಥಿತಿ ಏನಾಗಿರಬಹುದು..? ಅವರಲ್ಲಿ ದುಡ್ಡೆಲ್ಲಿಂದ ಬರುತ್ತೆ ಎನ್ನುವ ತಿಳುವಳಿಕೆಯಾದರೂ ಇರಬೇಕಿತ್ತು.

ಪ್ರಧಾನಿ ಕಾಳಜಿ ನಿಧಿಗೆ ಕೊಟ್ಟ 150 ಕೋಟಿ ರೂಪಾಯಿಯಲ್ಲಿ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ಮುಟ್ಟಿಸಿದ್ದರೆ ಅದೆಷ್ಟೋ ಕೋಟಿ ಕಾರ್ಮಿಕರು ಜೀವನಪರ್ಯಂತ ರೈಲ್ವೆ ಇಲಾಖೆಗೆ ಕೃತಜ್ಞರಾಗಿರುತ್ತಿದ್ದರು. ಗಾಯದ ಮೇಲೆ ಬರೆ ಎಳೆಯುವುದು ಬೇಕಿರಲಿಲ್ಲ.

LEAVE A REPLY

Please enter your comment!
Please enter your name here