ಪ್ರಧಾನಮಂತ್ರಿ ಕಚೇರಿಗೆ ಸೀಮಿತಗೊಳಿಸಿದರೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಸೋಲಾಗಬಹುದು – ರಾಹುಲ್‌ ಗಾಂಧಿ ಎಚ್ಚರಿಕೆ

ಕೊರೋನಾ ವಿರುದ್ಧದ ಹೋರಾಟವನ್ನು ನಾವು ಪ್ರಧಾನಮಂತ್ರಿ ಕಚೇರಿಗಷ್ಟೇ ಸೀಮಿತಗೊಳಿಸಿದರೆ ನಾವು ಆ ಹೋರಾಟದಲ್ಲಿ ಸೋಲಬೇಕಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎಚ್ಚರಿಸಿದ್ದಾರೆ.

ವೀಡಿಯೋ ಕಾನ್ಫೆರೆನ್ಸ್‌ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ರಾಹುಲ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದೇ ಕಾರ್ಯಶೈಲಿಯನ್ನು ಹೊಂದಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅದು ಪರಿಣಾಮಕಾರಿಯಾಗಿರಬಹುದು. ಅದು ಅವರಿಗೆ ಸೂಕ್ತ ಆಗಿರಬಹುದು. ಆದ್ರೆ ದೇಶ ಕಂಡುಕೇಳರಿಯದ ಸಂಕಷ್ಟವನ್ನು ಎದುರಿಸುತ್ತಿರುವಾಗ ನಮಗೆ ಕೇವಲ ಓರ್ವ ಬಲಿಷ್ಟ ಪ್ರಧಾನಿ ಮಂತ್ರಿ ಸಾಕಾಗಲ್ಲ, ನಮಗೆ ಹಲವು ಬಲಿಷ್ಢ ನಾಯಕರು, ಬಲಿಷ್ಟ ಮುಖ್ಯಮಂತ್ರಿಗಳು ಮತ್ತು ಬಲಿಷ್ಟ ಜಿಲ್ಲಾಧಿಕಾರಿಗಳ ಅಗತ್ಯವಿದೆ ಎಂದು ರಾಹುಲ್‌ ಹೇಳಿದ್ದಾರೆ.

ನಮಗೆ ಪಂಚಾಯತ್‌ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಬಲಿಷ್ಢ ದೇಶಭಕ್ತ ಭಾರತೀಯ ನಾಯಕನ ಅಗತ್ಯವಿದೆ. ನಾವು ಸಮಸ್ಯೆಯನ್ನು ನಿಭಾಯಿಸಬೇಕಿದೆ ಮತ್ತು ಸ್ಥಳೀಯ ಮಟ್ಟದಲ್ಲೇ ಪರಿಹರಿಸಬೇಕಿದೆ, ರಾಷ್ಟ್ರೀಯ ಮಟ್ಟದಲ್ಲಿ ಅಲ್ಲ ಎಂದು ರಾಹುಲ್‌ ಹೇಳಿದ್ದಾರೆ.

ಜಿಲ್ಲೆಗಳನ್ನು ರೆಡ್‌, ಆರೆಂಜ್‌ ಮತ್ತು ಗ್ರೀನ್‌ಝೋನ್‌ ಎಂದು ರಾಷ್ಟ್ರೀಯ ಮಟ್ಟದಲ್ಲಿ ವಿಂಗಡಿಸಲಾಗ್ತಿದೆ, ಆದರೆ ಇದನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮಾಡಬೇಕಿದೆ. ಯಾಕೆಂದರೆ ಅವರಿಗೆ ವಾಸ್ತವ ಸ್ಥಿತಿ ಚೆನ್ನಾಗಿ ಅರಿವಿರುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜೊತೆಗೆ ಪದೇ ಪದೇ ಮಾತಾಡುತ್ತಿರಬೇಕು, ಸಹೋದ್ಯೋಗಿ ಆಗಿ, ಬಾಸ್‌ ಆಗಿ ಅಲ್ಲ ಎಂದು ರಾಹುಲ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here