ಪ್ರಧಾನಮಂತ್ರಿಗಳೇ ಇನ್ನೂ ಬಂದಿಲ್ಲ ನೆರೆ ಪರಿಹಾರ – ಬಿಎಸ್‍ವೈ

ಕಂಡು ಕೇಳರಿಯದ ಬೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ಸಿಲುಕಿ ಆರು ತಿಂಗಳು ಕಳೆಯುತ್ತಾ ಬಂದಿದೆ. ಪ್ರವಾಹದಿಂದ ಆಗಿರುವ 38,000 ಕೋಟಿ ನಷ್ಟದ ಪೈಕಿ ಕೇಂದ್ರ ಸರ್ಕಾರ ಶೇಕಡಾ 10ರಷ್ಟನ್ನು ನೀಡಬೇಕಿತ್ತು. ಆದರೆ, 3,800 ಕೋಟಿ ರೂಪಾಯಿ ಪೈಕಿ ಬಿಡುಗಡೆ ಮಾಡಿದ್ದು ಕೇವಲ 1,200 ಕೋಟಿ ರೂ.ಗಳನ್ನು. ಅದು ತಡವಾಗಿ. ಉಳಿದ ಹಣವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿಲ್ಲ. ಯಾವಾಗ ಬಿಡುಗಡೆ ಮಾಡುತ್ತದೆ ಅನ್ನುವುದು ಗೊತ್ತಿಲ್ಲ.

ರಾಜ್ಯದ ಆರ್ಥಿಕ ಪರಿಸ್ಥಿತಿ ಕೂಡ ಸರಿಯಿಲ್ಲ. ಜಿಎಸ್‍ಟಿ ಪಾಲು ಕೊಡುವುದು ಇರಲಿ, ನೆರೆ ಪರಿಹಾರವನ್ನೂ ಸಂಪೂರ್ಣವಾಗಿ ಬಿಡುಗಡೆ ಮಾಡಿಲ್ಲ. ವಿರೋಧ ಪಕ್ಷಗಳು ಟೀಕೆಗಳನ್ನು ಮಾಡುತ್ತಿವೆ.

ತುಮಕೂರಿನಲ್ಲಿ ನಡೆದ ಕಿಸಾನ್ ಸಮ್ಮಾನ್ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಧಾನಮಂತ್ರಿಗಳ ಮುಂದೆಯೇ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ 30 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಇದಕ್ಕೆ ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಹೆಚ್ಚಿನ ನೆರವು ಬಂದಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು, ರೈತ ಸಮಾವೇಶದಲ್ಲಿ ಬಹಿರಂಗವಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮುಂದೆಯೇ ಅಸಮಾಧಾನ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಭಾಷಣದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ಆದರೆ, ಉಳಿಕೆ ನೆರೆ ಪರಿಹಾರ ಹಣ ಬಿಡುಗಡೆ ಬಗ್ಗೆ ಮಾತನಾಡಲೇ ಇಲ್ಲ.

ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಕುಮಾರಸ್ವಾಮಿ ಪ್ರಶ್ನೆ

ತುಮಕೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವ ಮುನ್ನವೇ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು.

ತೆರಿಗೆಯಲ್ಲಿ ರಾಜ್ಯಕ್ಕೆ ನೀಡಬೇಕಾದ ಪಾಲನ್ನು ಕೇಂದ್ರ ಸರ್ಕಾರ ವಂಚಿಸಿದೆ. ರಾಜ್ಯಕ್ಕೆ ಬರಬೇಕಿದ್ದ ಪಾಲಿನಲ್ಲಿ 5.44ರಷ್ಟು ಇನ್ನೂ ಬಂದಿಲ್ಲ. ಇದು ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ. ಲೋಕಸಭೆ ಸ್ಥಾನಗಳ ಮೇಲೆ ಮಾತ್ರ ಕಣ್ಣಿಡುವ ಕೇಂದ್ರ ಇಲ್ಲಿನ ಬೇಕು ಬೇಡಗಳನ್ನು ನಿರ್ಲಕ್ಷಿಸುತ್ತದೆ. ಮೋದಿ ಈ ಬಗ್ಗೆ ಇಂದು ಮಾತನಾಡಲಿ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೀಗ ಪರಿಸ್ಥಿತಿ ವಿಷಮವಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ, ಅನುದಾನ, ತೆರಿಗೆ ಹಂಚಿಕೆಗಳನ್ನು ದಿಟ್ಟತನದಿಂದ ಕೇಳುವ ಶಕ್ತಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಇಲ್ಲ. ನ್ಯಾಯವಾಗಿ ಬರಬೇಕಿದ್ದನ್ನು ಪಡೆಯಲಾಗದ ಬಿಎಸ್‍ವೈ ಅವರು ದುರ್ಬಲ ಸಿಎಂ.

ರಾಜ್ಯ ಖಜಾನೆ ಖಾಲಿಯಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ಕ್ಷೇತ್ರ, ವಾಣಿಜ್ಯ ತೆರಿಗೆ ಬಹುದೊಡ್ಡ ಆದಾಯದ ಮೂಲವಾದರೂ ಅವುಗಳಿಂದ ಸಂಪನ್ಮೂಲ ಬಂದಿಲ್ಲ ಏಕೆ.? ಕೇಂದ್ರದ ಕೆಟ್ಟ ಆರ್ಥಿಕ ನೀತಿ, ದೇಶದ ಅಭಿವೃದ್ಧಿ ನುಂಗಿದ ಕೇಂದ್ರದ ನೀತಿಗಳು ಈಗ ರಾಜ್ಯದ ಮೇಲೆಯೂ ಪರಿಣಾಮ ಬೀರಿದೆ.

ರಾಜ್ಯದಿಂದ 25 ಸಂಸದರನ್ನು ಪಡೆದಿರುವ ಮೋದಿಯವರು, ಕೇಂದ್ರದ ಚಂದಮಾಮನನ್ನು ತೋರಿಸಿ ಅನರ್ಹ ಸರ್ಕಾರ ರಚಿಸಿಕೊಂಡ ಯಡಿಯೂರಪ್ಪ ಅವರು ಶಿವಕುಮಾರ ಸ್ವಾಮೀಜಿಗಳು ಐಕ್ಯವಾಗಿರುವ ತುಮಕೂರಿನ ನೆಲದಲ್ಲಿ ನಿಂತು ಇವಕ್ಕೆಲ್ಲಾ ಉತ್ತರ ಕೊಡುವರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದರು.

LEAVE A REPLY

Please enter your comment!
Please enter your name here