ಪೌರತ್ವ ಪ್ರೊಟೆಸ್ಟ್.. ಸ್ಕ್ರಿಪ್ಟ್ ಮಾಡಿದ್ದು ಯಾರು..?

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಳು, ಬಂಧನ ಪ್ರಕರಣಗಳನ್ನು ನಾವು ನೋಡ್ತಾನೆ ಇದ್ದೀವಿ. ಆದರೆ, ಬೀದರ್‍ನಲ್ಲಿ ನಡೆದ ಘಟನೆಯೊಂದು ಮಾತ್ರ ಪೊಲೀಸರ ಅತ್ಯುತ್ಸಾಹಕ್ಕೆ ನಿದರ್ಶನವಾಗಿ ನಿಲ್ಲುತ್ತಿದೆ. ನಾಟಕ ಪ್ರದರ್ಶನದ ಹೆಸರಲ್ಲಿ ವಿದ್ಯಾರ್ಥಿಗಳಿಂದ ಸಿಎಎ ವಿರುದ್ಧ ಆಕ್ಷೇಪಾರ್ಹ ಡೈಲಾಗ್ ಹೊಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. ಬಂಧಿತರ ಪೈಕಿ ಒಬ್ಬರು ವಿದ್ಯಾರ್ಥಿ ತಾಯಿಯಾದರೆ, ಮತ್ತೊಬ್ಬರು ಶಾಲೆಯ ಪ್ರಿನ್ಸಿಪಾಲ್. ವಿವಿಧ ಸಮುದಾಯಗಳ ನಡುವೆ ಶತ್ರುತ್ವವನ್ನು ಪ್ರೋತ್ಸಾಹಿಸಲಾಗುತಿದೆ ಎಂಬ ಆರೋಪದ ಮೇಲೆ ಶಾಹೀನ್ ಶಾಲೆಯ ಆಡಳಿತ ಮಂಡಳಿ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸುತ್ತಾರೆ.

ಬೂಟಲ್ಲಿ ಹೊಡಿತೀನಿ..
ಬೀದರ್‍ನ ಶಾಹೀನ್ ಪಾಠಶಾಲೆಯಲ್ಲಿ ಜನವರಿ 21ರಂದು ಮಕ್ಕಳಿಗಾಗಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ, ನಾಟಕ ಪ್ರದರ್ಶನದ ವೇಳೆ 9ನೇ ತರಗತಿ ವಿದ್ಯಾರ್ಥಿಯೊಬ್ಬರು, ಸಿಎಎ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಜೂತೆ ಮಾರೆಂಗೇ (ಬೂಟಲ್ಲಿ ಹೊಡೀತಿನಿ) ಎಂದು ಡೈಲಾಗ್ ಹೊಡೆದಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ, ಅದನ್ನು ಗಮನಿಸಿದ್ದ ಸಾಮಾಜಿಕ ಕಾರ್ಯಕರ್ತ ನಿಲೇಶ್ ರಕ್ಷಾಲ್ ಜನವರಿ 26ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ, ಶಾಲೆಯ ಆಡಳಿತ ಮಂಡಳಿ, ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿ ತಾಯಿಯನ್ನು ಬಂಧಿಸಿ ಕೇಸ್ ದಾಖಲಿಸಿದ್ದರು.

ಪ್ರತಿದಿನ 4 ಗಂಟೆ ವಿಚಾರಣೆ..!
ಡಿವೈಎಸ್‍ಪಿ ಪ್ರತಿದಿನ ಮಧ್ಯಾಹ್ಮ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವಿದ್ಯಾರ್ಥಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ಕೂಲ್ ಸಿಇಓ ತೌಸೀಫ್ ನೊಂದು ನುಡಿಯುತ್ತಾರೆ. ಆಕಸ್ಮಾತ್ ಆಗಿ ತನಗೆ ಗೊತ್ತಿಲ್ಲದೇ ವಿದ್ಯಾರ್ಥಿ ಹೊಡೆದ ಡೈಲಾಗ್ ವಿರುದ್ಧ ದೇಶದ್ರೋಹದ ಕೇಸ್ ಏಕೆ ಇಟ್ಟರೋ ಈ ಕ್ಷಣದವರೆಗೂ ಅರ್ಥವಾಗುತ್ತಿಲ್ಲ ಎನ್ನುತ್ತಾರೆ. ಈ ಡೈಲಾಗ್ ಹೇಳಿಕೊಟ್ಟವರು ಯಾರು..? ಸ್ಕ್ರಿಪ್ಟ್ ಮಾಡಿದ್ದು ಯಾರು..? ಅಂತಾ ಪದೇ ಪದೇ ಪ್ರಶ್ನಿಸಿ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ. ಈಗಾಗಲೇ ವಿದ್ಯಾರ್ಥಿ ಪರವಾಗಿ ಕ್ಷಮೆ ಕೇಳಿದ್ದರೂ ಪೊಲೀಸರು ಬಿಡುತ್ತಿಲ್ಲ ಎನ್ನುತ್ತಾರೆ ತೌಸೀಫ್.

ಅಲ್ಲೊಂದು ನ್ಯಾಯ.. ಇಲ್ಲೊಂದು ನ್ಯಾಯನಾ..?
ಬೀದರ್‍ನಲ್ಲಿ ಮಕ್ಕಳಿಗೆ ಪೊಲೀಸರು ನೀಡುತ್ತಿರುವ ಕಿರಕುಳದ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ನೆಟ್ಟಿಗರು, ಪೋಷಕರ ಸಂಘಟನೆಗಳು ಆರೋಪಿಸುತ್ತಿದ್ದಾರೆ. ಬೀದರ್ ಪೊಲೀಸರು ಕಾನೂನಿಗೆ ವಿರುದ್ಧವಾಗಿ ಅಮಾನವೀಯವಾಗಿ ವರ್ತಿಸಲಾಗುತ್ತಿದೆ ಅಂತಾ ಪೇರೆಂಟ್ಸ್ ಫಾರ್ ಪೀಸ್, ಜಸ್ಟೀಸ್ ಅಂಡ್ ಪ್ಲುರಾಲಿಟಿ ಗ್ರೂಪ್ ವಿಮರ್ಶಿಸಿದೆ. ಪ್ರಿನ್ಸಿಪಾಲ್, ವಿದ್ಯಾರ್ಥಿ ತಾಯಿಯನ್ನು ಬಿಡುಗಡೆ ಮಾಡಬೇಕು, ಅವರ ವಿರುದ್ಧದ ಕೇಸ್ ವಾಪಸ್ ಪಡೆಯಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಇನ್ನೂ ಕೆಲವರು ಕಲ್ಲಡ್ಕದ ಶ್ರೀರಾಮವಿದ್ಯಾಕೇಂದ್ರದಲ್ಲಿ ಅಯೋಧ್ಯೆ ಪ್ರಕರಣದ ಮಕ್ಕಳು ಪ್ರದರ್ಶಿಸಿದ ನಾಟಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದರೂ, ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಆದರೆ, ಬೀದರ್ ಶಾಲೆ ಪ್ರಕರಣದಲ್ಲಿ ಮಾತ್ರ ಪೊಲೀಸರು ಅತ್ಯುತ್ಸಾಹ ಪ್ರದರ್ಶಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಆದರೆ, ಬೀದರ್ ಪೊಲೀಸರ ಕ್ರಮವನ್ನು ಬೀದರ್ ಸಂಸದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸಮರ್ಥಿಸುತ್ತಿದ್ದಾರೆ. ಅಷ್ಟೇ ಅಲ್ಲ, ಶಾಹೀನ್ ಪಾಠ ಶಾಲೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ನಿಯೋಗ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಶಾಲಾ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿ ತಾಯಿಯನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

LEAVE A REPLY

Please enter your comment!
Please enter your name here