ಶ್ರೀಕೃಷ್ಣ ಪರಮಾತ್ಮನಲ್ಲಿ ವಿಶ್ವಶ್ರೇಷ್ಠ ಯತಿ ಐಕ್ಯ

ಯತಿವರೇಣ್ಯ, ದೇಶ ಕಂಡು ಶ್ರೇಷ್ಠ ಸಂತ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಮ್ಮ ಇಷ್ಟ ದೈವ ಶ್ರೀ ಕೃಷ್ಣ ಪರಮಾತ್ಮನಲ್ಲಿ ಐಕ್ಯವಾಗಿದ್ದಾರೆ. ಕಳೆದ 9 ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಪೇಜಾವರ ಶ್ರೀಗಳು ಇಂದು ಬೆಳಗ್ಗೆ 9.20ಕ್ಕೆ ತಮ್ಮ ಕರ್ಮಸ್ಥಳ ಶ್ರೀಮಠದಲ್ಲೇ ಇಹಲೋಕ ತ್ಯಜಿಸಿದರು. ಶ್ರೀಗಳು ಕೃಷ್ಣನ ಪಾದ ಸೇರಿದ ಕೂಡಲೇ ಮಠದೊಳಗಿನ ಭಕ್ತರು ವಿಶ್ವೇಶತೀರ್ಥ ಸ್ವಾಮೀಜಿಗೆ ಗೋವಿಂದ ಎಂದು ಗೋವಿಂದ ನಾಮ ಮೊಳಗಿಸಿದರು.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯ ಪಾರ್ಥಿವ ಶರೀರವನ್ನು ಮಾಧ್ವ ಸಂಪ್ರದಾಯದಂತೆ ಬುಟ್ಟಿಯಲ್ಲಿ ಕೂರಿಸಿ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಕೃಷ್ಣಮಠದ ಬಳಿಕ ಕನಕನಕಿಡಿ ಮೂಲಕ ಕೊನೆಯ ಬಾರಿ ಪ್ರಾಣದೈವ ಶ್ರೀಕೃಷ್ಣನನ್ನು ಶ್ರೀಗಳಿಗೆ ತೋರಿಸಲಾಯಿತು. ನಂತರ ಮಾಧ್ವ ಸರೋವರದಲ್ಲಿ ಅಭ್ಯಂಜನ ಸ್ನಾನ ಮಾಡಿಸಲಾಯಿತು. ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಭಕ್ತರು ಅಂತಿಮ ದರ್ಶನ ಪಡೆದು ಕಂಬನಿಮಿಡಿದರು.

ಆ 9 ದಿನ..!
ಡಿಸೆಂಬರ್ 20ರ ಮುಂಜಾನೆ ಉಸಿರಾಟ ತೊಂದರೆ ಕಾರಣ ವಿಶ್ವೇಶತೀರ್ಥ ಸ್ವಾಮೀಜಿಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲ ಆರು ದಿನ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ವಿಶ್ವೇಶತೀರ್ಥರ ಆರೋಗ್ಯ ಸ್ಥಿತಿ ಶುಕ್ರವಾರದ ನಂತರ ಚಿಂತಾಜನಕವಾಯಿತು. ಮೆದುಳು ನಿಷ್ಕ್ರೀಯಗೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಶನಿವಾರ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಯಿತು. ವಿಶ್ವೇಶತೀರ್ಥರ ಮನದಿಚ್ಚೆಯಂತೆ ಶ್ರೀಗಳನ್ನು ಇಂದು ನಸುಕಿನ ಜಾವ ಆಸ್ಪತ್ರೆಯಿಂದ ಶ್ರೀಮಠಕ್ಕೆ ವೆಂಟಿಲೇಟರ್ ಸಹಿತ ಆ್ಯಂಬ್ಯುಲೆನ್ಸ್‍ನಲ್ಲಿ ಕರೆತರಲಾಯಿತು. ಮಠದಲ್ಲಿಯೇ ಶ್ರೀಗಳು ಕೊನೆಯ ಶ್ವಾಸ ಬಿಟ್ಟು ಶ್ರೀಕೃಷ್ಣ ಪರಮಾತ್ಮನಲ್ಲಿ ಐಕ್ಯವಾದರು.

ತಿರುಪತಿಗೆ ಹೋಗಿ ಬಂದಿದ್ದೇ ಕೊನೆ
ಡಿಸೆಂಬರ್ 17ರಂದು ಪೇಜಾವರ ಶ್ರೀಗಳು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಈ ಸಂದರ್ಭದಲ್ಲಿಯೇ ತಿರುಪತಿಯ ಶೀತ ಹವೆ ಸ್ವಾಮೀಜಿಗಳ ಆರೋಗ್ಯವನ್ನು ಕೆಡಿಸಿತ್ತು. ಆದರೂ ತಮಗೇನು ಆಗಿಲ್ಲ ಎಂಬಂತೆ ಬೆಂಗಳೂರು-ಮಂಗಳೂರಿನಲ್ಲಿ ನಾಲ್ಕು ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಿದ್ದರು. ಡಿಸೆಂಬರ್ 19ರಮದು ಉಡುಪಿಯ ಖಾಸಗಿ ಆಸ್ಪತ್ರೆಗೆ ಶ್ರೀಗಳು ದಾಖಲಾಬಗೇಕಿತ್ತು. ಆದರೆ, ನಾಳೆ ದಾಖಲಾಗುವೆ ಎಂದು ಹೇಳಿ ಮಠಕ್ಕೆ ಹೋದವರಿಗೆ ಮರು ದಿನ ಮುಂಜಾನೆಯೇ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಜೊತೆಗೆ ನ್ಯೂಮೋನಿಯಾ ಕೂಡ ಇನ್ನಿಲ್ಲದಂತೆ ಕಾಡಿತ್ತು.

ಇಷ್ಟದ ವಿದ್ಯಾಪೀಠದಲ್ಲಿ ಬೃಂದಾವನ
ಈ ಹಿಂದೆ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ತಾವು ಕೃಷ್ಣೈಕ್ಯರಾದಲ್ಲಿ ಬೆಂಗಳೂರಿನ ವಿದ್ಯಾಪೀಠದ ವೃತ್ತದ ಬಳಿಯಿರುವ ಶ್ರೀಮಠದಲ್ಲೆ ತಮ್ಮ ಅಂತ್ಯಕ್ರಿಯೆ ನಡೆಸಬೇಕು. ಇಂಥಾದ್ದೇ ಸ್ಥಳದಲ್ಲಿ ಬೃಂದಾವನ ನಿರ್ಮಿಸಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದರು.ಅದರಂತೆ ವಿದ್ಯಾಪೀಠದ ಮಠದಲ್ಲಿ ಬೃಂದಾವನ ಕೂಡ ನಿರ್ಮಿಸಲಾಗಿತ್ತು. ಇಂದು ಅಲ್ಲಿಯೇ ಶ್ರೀಗಳನ್ನು ಬೃಂದಾವನಸ್ಥೆಯಲ್ಲಿ ಇರಿಸಲಾಗುತ್ತದೆ.

ಪ್ರಧಾನಿ ಮೋದಿ ಕಂಬನಿ
ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದ, ಹಿಂದೂ ಧರ್ಮದ ಏಳ್ಗೆಗಾಗಿ ಶ್ರಮಿಸಿದ ಶ್ರೀಗಳ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್‍ಡಿ ಕುಮಾರಸ್ವಾಮಿ, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ.

LEAVE A REPLY

Please enter your comment!
Please enter your name here