ಪಶ್ಚಿಮಘಟ್ಟಗಳಿಗೆ ಹಿಂಸೆ ಕೊಡುವುದನ್ನು ನಿಲ್ಲಿಸಿ..! ವಿಶ್ವ ಪರಿಸರ ದಿನದಂದು ಪರಿಸರ ತಜ್ಞ ದಿನೇಶ್‌ ಹೊಳ್ಳ ಬರೆಯುತ್ತಾರೆ

ಈವರೆಗೆ ಗಿಡಗಳನ್ನು ಮುಟ್ಟಿರದ, ಕಾಡು ಹೊಕ್ಕಿರದ, ಪರಿಸರ, ಪ್ರಕೃತಿ ಎಂದರೆ ಏನೂ ಕಾಳಜಿ ಅಭಿಮಾನ ಇರದ ನಗರದ ಫ್ಯಾಷನ್ ಪರಿಸರ ಪ್ರೇಮಿಗಳಿಗೆ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ನೆನಪಾಗಿ ಬಿಡುತ್ತದೆ. ಕ್ಯಾಮರಾಕ್ಕೆ ಪೋಸ್ ಕೊಟ್ಟು ಒಂದಿಷ್ಟೂ ಕೆಸರು, ಮಣ್ಣು ಬಟ್ಟೆಗೆ ತಾಗದಂತೆ ಒಂದಷ್ಟು ಗಿಡಗಳನ್ನು ನೆಡುವ ಪ್ರಕ್ರಿಯೆ ನಡೆಯುತ್ತದೆ. ಒಂದು ವಾರದ ಒಳಗೆ ಗಿಡ ಸಾಯುತ್ತವೆ, ಅಲ್ಲಿಗೆ ಪರಿಸರ ದಿನಾಚರಣೆ ಸಮಾಪ್ತಿ.

ಇನ್ನು ರಾಜಕಾರಣಿಗಳ ದ್ದು ಇನ್ನೂ ಜೋರಿದೆ. ಕೋಟಿ ವೃಕ್ಷ ಆಂದೋಲನ ವಂತೆ. ಇವರು ಪ್ರತೀ ವರುಷ ಕೋಟಿ ಗಿಡಗಳನ್ನು ನೆಟ್ಟರೆ ನಮ್ಮ ಕರ್ನಾಟಕ ಇಡೀ ದಟ್ಟ ಅರಣ್ಯ ಆಗಬೇಕಿತ್ತು.

ಜೂನ್ 5 ಮಾತ್ರ ಪರಿಸರ ದಿನಾಚರಣೆ ಅಲ್ಲ. ನಿತ್ಯವೂ ಪರಿಸರ ದಿನಾಚರಣೆ.

ಪಶ್ಚಿಮಘಟ್ಟದ ಕಾಡು ಪರಿಸರ ದಿನಾಚರಣೆ ಮಾಡಿ ಗಿಡ ನೆಡಿ ಅಂತ ಹೇಳುತ್ತಾ ಇಲ್ಲಾ, ನನಗೆ ನೀಡುವ ಹಿಂಸೆ ಕಡಿಮೆ ಮಾಡಿ ಅಂತ ಬೇಡಿಕೊಳ್ಳುತ್ತಿದೆ. ಇಲ್ಲಿ ಗಿಡ ನೆಡುವುದು ಅಲ್ಲಿ ಕಾಡು ಕಡಿಯುವುದು…! ಯಾವ ಪುರುಷಾರ್ಥಕ್ಕೆ ಪರಿಸರ ದಿನಾಚರಣೆ..?

ಇಂದು ನಗರ ಬೆಳೆದಂತೆ ಮನುಜರ ಅವಶ್ಯಕತೆಗಳು ಹೆಚ್ಚಾದಂತೆ ಪಶ್ಚಿಮ ಘಟ್ಟಕ್ಕೆ ಮಾರಣಾಂತಿಕ ಏಟು ಬೀಳುತ್ತಾ ಇವೆ. ಅಡವಿಯ ಕಣ್ಣೀರು, ವೇದನೆ ಯಾರಿಗೂ ಕಾಣಿಸುತ್ತಿಲ್ಲ, ಸರಕಾರದ ‘ ಅಭಿವೃದ್ದಿ ‘ ಎಂಬ ನೆಪದ ಯೋಜನೆಗಳು ಪಶ್ಚಿಮ ಘಟ್ಟವನ್ನು, ನದಿ, ಸಾಗರಗಳನ್ನು ಹಂತ ಹಂತವಾಗಿ ನಾಶ ಮಾಡುತ್ತಲೇ ಬಂದದ್ದು ವಿನಹ ಯಾವುದೇ ಸಂರಕ್ಷಣಾ ಕೆಲಸಗಳು ಶೂನ್ಯ.

ಪ್ರಕೃತಿಗೆ ಸಹಿಸಲಾಗದ ಗೀರು ಗಾಯಗಳು ಆಗುತ್ತಲೇ ಇದ್ದು ಅದರ ಪರಿಣಾಮವಾಗಿ ಪ್ರಕೃತಿಯ ವಿಕೋಪದ ಫಲಿತಾಂಶವಾಗಿ ಪ್ರಾಕೃತಿಕ ದುರಂತಗಳು ಆಗುತ್ತಲೇ ಇವೆ. ಬರಗಾಲ, ಜಲ ಪ್ರವಾಹ, ಭೂಕುಸಿತ, ಜಲ ಸ್ಫೋಟ, ಚಂಡ ಮಾರುತ, ಸುನಾಮಿ, ಕಾಡ್ಗಿಚ್ಚು. ದುರಂತಗಳು ಕ್ಯೂನಲ್ಲಿ ಇದ್ದು ಈಗ ಕೊರೋನದ ವರೆಗೆ ತಲುಪಿತು. ಈ ಎಲ್ಲಾ ದುರಂತಗಳಿಗೆ ಮಾನವನೇ ಕಾರಣ ಹೊರತು ಪ್ರಕೃತಿ ಅಲ್ಲ. 20 ವರ್ಷಗಳ ಹಿಂದೆ ಇಂತಹ ದುರಂತಗಳು ಯಾವುವೂ ಇರಲಿಲ್ಲ..ಈಗ ಯಾಕೆ ಆಗುತ್ತಿವೆ ? ಇದಕ್ಕೆ ಪರಿಹಾರ ಏನು ? ಹೀಗೆ ಮುಂದುವರಿದರೆ ಭವಿಷ್ಯದ ಭದ್ರತೆ ಏನು ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ , ಚಿಂತಿಸುವ ಮನಸುಗಳು ವಿರಳವಾಗುತ್ತಾ ಇವೆ.

ಯಾವಾಗ ಮನುಜರು ಪ್ರಕೃತಿಯನ್ನು ವ್ಯಾವಹಾರಿಕ ದೃಷ್ಟಿ ಕೋನದಿಂದ ನೋಡಲು ಆರಂಭಿಸಿತು ಆಗ ಈ ಎಲ್ಲಾ ನೈಸರ್ಗಿಕ ದುರಂತಗಳ ಒಡ್ಡೋಲಗ ಆಯಿತು. ಪಶ್ಚಿಮಘಟ್ಟದ ಗಿರಿ, ಕಣಿವೆ, ಝರಿ, ಕಾನನ, ನದೀ ಮೂಲ, ಮಳೆಕಾಡು, ವನ್ಯ ಜೀವಿಗಳ ಸಂರಕ್ಷಣೆ ಆಗದೇ ಇದ್ದಲ್ಲಿ ಮುಂದಕ್ಕೆ ಇನ್ನೂ ಭಯಾನಕ ದುರಂತಗಳನ್ನು ಅನುಭವಿಸಲೇ ಬೇಕು.

ಇನ್ನಾದರೂ ನಾವು ಎಚ್ಚರ ಆಗದೇ ಇದ್ದಲ್ಲಿ ನೈಸರ್ಗಿಕ ದುರಂತಗಳನ್ನು ನಾವೇ ಆಮಂತ್ರಣ ನೀಡಿ ಆಹ್ವಾನಿಸಿದಂತೆ ಆಗಬಹುದು. ಮನೆ, ಮನೆಗಳಲ್ಲಿ ಮಳೆ ಕೊಯ್ಲು, ಇಂಗು ಗುಂಡಿ ಒಂದಷ್ಟು ಗಿಡಗಳನ್ನು ನೆಡುವ ಪ್ರಕ್ರಿಯೆ ಈಗ ಅನಿವಾರ್ಯವಾಗಿ ಆಗಲೇ ಬೇಕಾದದ್ದು. ನಾವೆಲ್ಲರೂ ಈ ಪ್ರಕೃತಿಯ ಫಲಾನುಭವಿಗಳು, ನಾವೆಲ್ಲರೂ ಪ್ರಕೃತಿ ಮಾತೆಯ ಮಕ್ಕಳು. ಹಾಗಿರುವಾಗ ಪ್ರಕೃತಿ ತಾಯಿ ಅಳುತ್ತಾ ಇರುವಾಗ ನಾವು ಸುಮ್ಮನಿರುವುದು ಸರಿ ಅಲ್ಲ. ಒಂದು ಮನೆಯಲ್ಲಿ ತಾಯಿ ಎಲ್ಲರನ್ನೂ ನೆಮ್ಮದಿಯಿಂದ ಇರಲು ಪ್ರಯತ್ನಿಸುವವಳು ಆದರೆ ತಾಯಿಯೇ ಕಣ್ಣೀರು ಹಾಕಿದರೆ ಆ ಮನೆಯ ಸರ್ವವೂ ಸರಿ ಇಲ್ಲ ಎಂದು ಅರ್ಥ. ಅದೇ ರೀತಿ ಪ್ರಕೃತಿ ತಾಯಿಯ ಕಣ್ಣೀರಿನಿಂದ ಆಗಿ ಇಂದು ನಾವು ಬೇರೆಬೇರೆ ರೀತಿಯಲ್ಲಿ ನೈಸರ್ಗಿಕ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದೇವೆ. ಪ್ರತೀ ಮನೆಯಲ್ಲಿ ಪೋಷಕರಿಂದ, ಪ್ರತೀ ಶಾಲೆಗಳಲ್ಲಿ ಶಿಕ್ಷಕರಿಂದ ಮಕ್ಕಳಿಗೆ ಪ್ರಕೃತಿಯ ಮಹತ್ವ ಮತ್ತು ಅಗತ್ಯವನ್ನು ಮನದಟ್ಟಾಗಿ ತಿಳಿಸಿ ಅವರಿಗೆ ಪ್ರಕೃತಿಯ ಮೇಲೆ ಗೌರವ, ಅಭಿಮಾನ ಬೆಳೆಯುವಂತೆ ಮಾಡಬೇಕು.

ಪ್ರಕೃತಿಯಿಂದ ನಾವೆಷ್ಟು ಸದುಪಯೋಗ ಪಡೆದು ಕೊಂಡಿದ್ದೇವೆ, ಆದು ನಾಶ ಆದರೆ ನಾ ಎಷ್ಟು ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ಪ್ರತಿಯೊಬ್ಬರೂ ಅರಿತು ಕೊಳ್ಳಬೇಕು. ಪರಿಸರ ಪ್ರೀತಿ, ಅಭಿಮಾನ ಏನೂ ಇಲ್ಲದೆ ಇದ್ದರೆ ಪರಿಸರ ದಿನಾಚರಣೆಯಂದು ಗಿಡ ನೆಟ್ಟು ಏನು ಪ್ರಯೋಜನ ? ಪರಿಸರ ದಿನಾಚರಣೆಗೆ ಒಂದು ಅರ್ಥ, ಮೌಲ್ಯ ಬರಬೇಕಾದರೆ ನಾವು , ನೀವು ಎಲ್ಲರೂ ನೆಟ್ಟ ಗಿಡಗಳು ನಮ್ಮೊಂದಿಗೆ ಸ್ನೇಹದಿಂದ ಇದ್ದು ನಮ್ಮ ಬೆಳವಣಿಗೆ ಜೊತೆ ಅವುಗಳ ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸಿದರೆ ಇದು ನಿಜವಾಗಿ ಪ್ರಕೃತಿಗೆ ಕೊಡುವ ಶ್ರೇಷ್ಠ ಕೊಡುಗೆ ಆಗಬಹುದು. ಈ ಬಗ್ಗೆ ಯೋಚಿಸಬೇಕಾದಾವರು ನಾವು, ನೀವು, ಎಲ್ಲರೂ.

ದಿನೇಶ್ ಹೊಳ್ಳ – ಇವರು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದ, ಖ್ಯಾತ ಪರಿಸರ ತಜ್ಞರು, ಸಹ್ಯಾದ್ರಿ ಸಂಚಯದ ವಕ್ತಾರರು.

ಇದನ್ನೂ ಓದಿ:

ನಶಿಸಿ ಹೋಗುತ್ತಿರುವ ಪಶ್ಚಿಮ ಘಟ್ಟದ ಈ “ಮಹಾರಾಜ”ನ ಸಂತತಿ

LEAVE A REPLY

Please enter your comment!
Please enter your name here