ಪರಿಹಾರ ವಾಪಸ್ ಪಡೆದ ಬಿಎಸ್‍ವೈ ಸರ್ಕಾರ ಕ್ರೂರಿ – ಸಿದ್ದರಾಮಯ್ಯ

ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಚಲನಾತ್ಮಕ ನಿರ್ಣಯ ಕೈಗೊಂಡಿದ್ದಾರೆ. ಮಂಗಳೂರು ಗಲಭೆಯ ಸಿಸಿಟಿವಿ ದೃಶ್ಯಾವಳಿ ರಿಲೀಸ್ ಆಗುತ್ತಿದ್ದಂತೆ ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರದ ವಿಚಾರದಲ್ಲಿ ಯೂಟರ್ನ್ ತೆಗೆದುಕೊಂಡಿದ್ದಾರೆ.

ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಂಗಳೂರು ಗಲಭೆ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಮುಗಿಯುವವರೆಗೆ ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ. ಮೃತರು ಗಲಭೆಯಲ್ಲಿ ಪಾಲ್ಗೊಂಡಿದ್ದು ಸಾಬೀತಾದಲ್ಲಿ ಒಂದು ರೂ. ಕೂಡ ಪರಿಹಾರ ಕೊಡುವುದಿಲ್ಲ. ಒಂದು ವೇಳೆ, ಜಲೀಲ್ ಮತ್ತು ನೌಶೀನ್ ಅಪರಾಧಿಗಳಾಗಿರದೇ ಇದ್ದಲ್ಲಿ ಅವರ ಕುಟುಂಬ ಸದಸ್ಯರಿಗೆ ಖಂಡಿತ ಪರಿಹಾರ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ವಿರೋಧಿಸಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಚುನಾಯಿತ ಸರ್ಕಾರವೊಂದು ಇಷ್ಟು ಅಮಾನವೀಯ, ಕ್ರೂರಿ, ಕೋಮುವಾದಿ ಆಗಬಾರದು. ಮಂಗಳೂರು ಗಲಭೆಯಲ್ಲಿ ಸತ್ತವರಿಗೆ ಪರಿಹಾರ ಇಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಿರೀಕ್ಷೆಯಂತೆಯೇ ತನಿಖೆಯ ಮೊದಲೇ ತೀರ್ಪು ನೀಡಿದ್ದಾರೆ.

ಮಂಗಳೂರು ಗಲಭೆಗೆ ಗುಂಡೇಟಿನಿಂದ ಸತ್ತವರೇ ಕಾರಣ ಎಂದು ತೀರ್ಪು ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಸಿಐಡಿ ತನಿಖೆಯ ನಾಟಕ ಏಕೆ ಬೇಕು..? ಅದನ್ನು ನಿಲ್ಲಿಸಿಬಿಡಿ. ಈಗ ಖಾತ್ರಿಯಾಗಿದೆ, ಹೆಣ ಬೀಳಿಸಲು ಪೊಲೀಸರಿಗೆ ಆದೇಶ ನೀಡಿದವರು ನೀವೆ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಎಷ್ಟೇ ಅದರೂ ಇದು ಅನರ್ಹ ಸರ್ಕಾರ – ಹೆಚ್‍ಡಿಕೆ ಕಿಡಿ
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರು ಸಹ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಟ್ವಿಟ್ಟರ್‍ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳೂರು ಆರಕ್ಷಕರಿಂದಲೇ ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸಿದ ಸರ್ಕಾರ ಇಬ್ಬರು ಅಮಾಯಕರನ್ನು ಕೊಂದಿದ್ದು ಅಲ್ಲದೇ ಪರಿಹಾರವನ್ನೂ ವಂಚಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿ ಈಗ ಇಲ್ಲ ಎನ್ನುತ್ತಿರುವ ಬಿಎಸ್‍ವೈ ವಚನಭ್ರಷ್ಟ, ಸುಳ್ಳುಗಾರ.

ಸತ್ತವರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ ಎಂದು ಪರಿಹಾರ ವಂಚನೆಗೆ ಬಿಎಸ್‍ವೈ ನೀಡಿರುವ ಸಬೂಬು ಎಂತಹ ಕ್ಷುಲ್ಲಕ..? ಹೋರಾಟ ಅಪರಾಧವೇ..? ಹೋರಾಟ ಸಂವಿಧಾನಬದ್ಧ ಹಕ್ಕು. ಹೋರಾಟ ಹತ್ತಿಕ್ಕುವವರು ಸಂವಿಧಾನ ವಿರೋಧಿಗಳು.

ಅಭಿಪ್ರಾಯ ಬೇಧವನ್ನು ಬಿಜೆಪಿ ಸಹಿಸುವುದಿಲ್ಲ. ಹೋರಾಟಗಳನ್ನು, ಹೋರಾಟಗಾರರನ್ನು ಸೋ ಕಾಲ್ಡ್ ಹೋರಾಟಗಾರ ಯಡಿಯೂರಪ್ಪ ಸಹಿಸುವುದಿಲ್ಲ.ಬಿಎಸ್‍ವೈ ನಿಜವಾಗಿಯೂ ಹೋರಾಟಗಾರರಾಗಿದ್ದರೇ ಪರಿಹಾರ ಮಂಜೂರು ಮಾಡಲಿ. ಇಲ್ಲವೇ ತಮ್ಮದು ಕೊಲೆಗಡುಕ ಸರ್ಕಾರ ಎಂದು ಒಪ್ಪಲಿ.

ಯಡಿಯೂರಪ್ಪನವರು ಮಂಗಳೂರಿಗೆ ಭೇಟಿ ನೀಡಿದ ದಿನದಂದೇ ಗೋಲಿಬಾರಿಗೆ ಬಲಿಯಾದವರು ಗಲಭೆಯಲ್ಲಿ ಭಾಗಿಯಾದವರು ಎಂದು ಪೊಲೀಸರು, ಮುಖ್ಯಮಂತ್ರಿಗೆ ಮಾಹಿತಿ ನೀಡಿರಲಿಲ್ಲವೇ..? ಅಂದು ಯಡಿಯೂರಪ್ಪನವರಿಗೆ ಆ ಎಡಿಟೆಡ್ ವೀಡಿಯೋ ತೋರಿಸಿರಲಿಲ್ಲವೇ..?

ನಾಲ್ಕು ದಿನ ಕಳೆದ ನಂತರ ಗೋಲಿಬಾರಿಗೆ ಬಲಿಯಾದವರಿಬ್ಬರೂ ಗಲಭೆಕೋರರು ಎಂದು ಬಿಂಬಿಸಿರುವ ಉದ್ದೇಶವಾದರೂ ಏನು..? ಇದನ್ನು ನೀವು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಜನತೆಗೆ ಉತ್ತರ ನೀಡಬೇಕಾಗುತ್ತದೆ.ಅಮಾಯಕರ ಮೇಲೆ ನಿಮ್ಮ ನೀಚ ಕೆಲಸದ ತಪ್ಪನ್ನು ಹೊರಿಸಿದರೆ ಮುಂದಿನ ದಿನಗಳಲ್ಲಿ ಪ್ರಾಯಶ್ಚಿತಕ್ಕೆ ತಯಾರಾಗಬೇಕಾಗುತ್ತದೆ.

ಬಿಎಸ್‍ವೈ ಆಡಳಿತದಲ್ಲಿ ಜನರಿಗೆ, ಹೋರಾಟಗಾರರಿಗೆ ರಕ್ಷಣೆ ಇಲ್ಲ. ಎಷ್ಟೇ ಆದರೂ ಇದು ಅನರ್ಹ ಸರ್ಕಾರ ಅಲ್ಲವೇ..?

LEAVE A REPLY

Please enter your comment!
Please enter your name here