ಪರಿಷ್ಕೃತ ಪಠ್ಯದಲ್ಲಿ ಆದಿವಾಸಿ ಸಮುದಾಯದ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಗೆ ಶನಿವಾರ ದೂರು ಸಲ್ಲಿಕೆ ಆಗಿದೆ. ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ನಮ್ಮ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಪಠ್ಯ ಮುದ್ರಿಸಿರುವ ರೋಹಿತ್ ಚಕ್ರತೀರ್ಥ ಮತ್ತು ಇತರ ಸದಸ್ಯರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ದೂರು ಸಲ್ಲಿಸಿದ್ದಾರೆ.
ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಶೀರ್ಷಿಕೆಯಲ್ಲಿ ‘ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಅದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ’ ಎಂಬುದಾಗಿ ಅವಹೇಳನಕಾರಿಯಾಗಿ ಮುದ್ರಿಸಿ ಆದಿವಾಸಿಗಳನ್ನು (ಕಾಡುವಾಸಿ) ಉದ್ದೇಶಪೂರ್ವಕವಾಗಿ ಅನಾಗರಿಕರೆಂದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.