ಪಂಪ್‌ವೆಲ್‌ ಫ್ಲೈಓವರ್‌ – ನವಯುಗ ಕಂಪನಿ ವಿರುದ್ಧ ಬಿತ್ತು ಕೇಸ್‌..!

ಜಗತ್ತಿನ ಅದ್ಭುತಗಳಲ್ಲಿ ಒಂದೆಂದು ಟೀಕೆಗೆ ಒಳಗಾಗಿರುವ ಮಂಗಳೂರಿನ ಪಂಪ್‌ವೆಲ್‌ ಹೊಸ ವರ್ಷದ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯೇ ಇಲ್ಲ. ಈ ನಡುವೆ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ನವಯುಗ ಕಂಪನಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಮಂಗಳೂರು ಸಂಸದ ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ನವಯುಗ ಕಂಪನಿ ಕಾಮಗಾರಿ ವಿಳಂಬದಿಂದ ನಮ್ಮ ಹೆಸರು, ಸರ್ಕಾರದ ಹೆಸರು ಹಾಳಾಗಿದೆ. ಕಂಪನಿಯ ನಿರ್ದೇಶಕರು ಮತ್ತು ಮ್ಯಾನೇಜನರ್‌ ವಿರುದ್ಧ ಕೇಸ್‌ ದಾಖಲಿಸಿದ್ದೇವೆ. ಡಿಸೆಂಬರ್‌ 31 ಕ್ಕೆ ಕಾಮಗಾರಿ ಮುಗಿಯದೇ ಹೋದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕಂಪನಿಯವರೇ ಹೇಳಿದ್ದರು. ಅವರೇ ಲಿಖಿತ ರೂಪದಲ್ಲಿ ಕಾಮಗಾರಿ ಮುಕ್ತಾಯದ ದಿನಾಂಕ ಬರೆದುಕೊಟ್ಟ ಮೇಲೆ ನಂಬದೇ ಇರಲು ಹೇಗೆ ಸಾಧ್ಯ ಎಂದು ನಳೀನ್‌ ಹೇಳಿದ್ದಾರೆ.

ಮಂಗಳೂರಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾತಾಡಿದ ಅವರು, ಪಂಪ್‌ವೆಲ್‌ ಕಾಮಗಾರಿ ವಿಳಂಬಕ್ಕೆ ಐತಿಹಾಸಿಕ ಕಾರಣಗಳನ್ನು ಕೊಟ್ಟರು.

ಕಾಮಗಾರಿ ಪ್ರಾರಂಭವಾಗಿ 12 ವರ್ಷಗಳಾಗಿದೆ. ಫ್ಲೈಓವರ್‌ನ ತೊಕ್ಕೊಟ್ಟು ಮತ್ತು ಪಂಪ್‌ವೆಲ್‌ ಭಾಗದಲ್ಲಿ ಕಾಮಗಾರಿ ಕುಂಠಿತ ಆಗಿದೆ. ಎರಡು ಮೂರು ಕಾರಣಗಳಿಗೆ ಪಂಪ್‌ವೆಲ್‌ ಕಾಮಗಾರಿ ವಿಳಂಬವಾಗಿದೆ.

ಮಹಾವೀರ ವೃತ್ತದ ಸ್ಥಳಾಂತರ ಸಂಬಂಧ ಕಾಮಗಾರಿ ನಿಂತುಹೋಗಿತ್ತು. 2016 ರಲ್ಲಿ ಪಾಲಿಕೆ ಅನುಮತಿ ಕೊಟ್ಟ ಬಳಿಕ ಮತ್ತೆ ಕಾಮಗಾರಿ ಆರಂಭವಾಯ್ತು.

ಇದಾದ ಬಳಿಕ ಬಸ್‌ಸ್ಟ್ಯಾಂಡ್‌ ಹಿನ್ನೆಲೆಯಲ್ಲಿ  ಫ್ಲೈಓವರ್‌ನ ವಿನ್ಯಾಸ ಬದಲಾವಣೆ ಮಾಡುವಂತೆ ಪಾಲಿಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿತ್ತು. ಆದ್ರೆ ಪ್ರಾಧಿಕಾರ ಒಪ್ಪಲಿಲ್ಲ.

ತೊಕ್ಕೊಟ್ಟಿನಲ್ಲಿ ಭೂಸ್ವಾಧೀನ ಸಂಬಂಧ ಕೋರ್ಟ್‌ಗೆ ವ್ಯಾಜ್ಯ ಹೋಯಿತು. ಕೋರ್ಟ್‌ ತೀರ್ಪು ಬರುವಾಗ ತಡವಾಯಿತು.

ಈ ನಡುವೆ ನವಯುಗ ಕಂಪನಿಗೆ ಹಣಕಾಸಿನ ಸಮಸ್ಯೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ನಾನು ಕೇಂದ್ರ ರಸ್ತೆ ಸಾರಿಗೆ ಸಚಿವರಾಗಿರುವ ನಿತಿನ್‌ ಗಡ್ಕರಿ ಜೊತೆಗೆ ಮಾತುಕತೆ ನಡೆಸಿದೆ. ಅವರೂ ಕಾಮಗಾರಿ ಶೀಘ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಣಕಾಸು ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರ ಜಾಮೀನು ನಿಂತು ಆಕ್ಸಿಸ್‌ ಬ್ಯಾಂಕ್‌ ಮೂಲಕ ಕಾಮಗಾರಿಗಾಗಿ 56 ಕೋಟಿ ರೂಪಾಯಿಯನ್ನು ಸಾಲವಾಗಿ ನೀಡಿತು. ವಿನ್ಯಾಸ ಬದಲಾವಣೆ ಹಿನ್ನೆಲೆಯಲ್ಲಿ 500 ಕೋಟಿ ರೂಪಾಯಿ ಯೋಜನೆ 1,500 ರೂಪಾಯಿಗೆ ಏರಿದೆ ಎಂದು ಕಂಪನಿ ಹೇಳಿದ್ದರಿಂದ ಹೆಚ್ಚುವರಿಯಾಗಿ 6 ಕೋಟಿ ರೂಪಾಯಿ ಕೋಟಿ ರೂಪಾಯಿಗಳನ್ನು ನೀಡಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬ ಆಯಿತು. ಇದರ ನಡುವೆ ಮೂಲ ನಕಾಶೆಯಲ್ಲಿ ಇಲ್ಲದೇ ಇದ್ದರೂ ಫಾದರ್‌ ಮುಲ್ಲರ್‌ ಆಸ್ಪತ್ರೆಯ ಬೇಡಿಕೆಯ ಮೇರೆಗೆ ಅಂಡರ್‌ಪಾಸ್‌ ನಿರ್ಮಾಣಕ್ಕೆ ಒಪ್ಪಿಕೊಳ್ಳಲಾಯಿತು. ಇವೆಲ್ಲದರ ಬಳಿಕ ಡಿಸೆಂಬರ್‌ 31 ಕ್ಕೆ ಪಂಪ್‌ವೆಲ್‌ ಕಾಮಗಾರಿ ಮುಗಿಸಿಕೊಡುತ್ತೇವೆ ಎಂದು ನವಯುಗ ಕಂಪನಿ ಒಪ್ಪಿಕೊಂಡಿತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here