ಪಂಚರಾಜ್ಯ ಚುನಾವಣೆ ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರುತ್ತಾ..? ಇಲ್ಲಿದೆ ‘ಪೊಲಿ’ನಾಮಿಕ್ಸ್..!

ಭಾರತ ದೇಶದ ಜನಸಂಖ್ಯೆಯಲ್ಲಿ ಐದನೇ ಒಂದು ಭಾಗದಷ್ಟು ಜನತೆ ಇದೀಗ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುವ ವಿಧಾನಸಭೆ ಸಭೆ ಚುನಾವಣೆಗೆ ಸಾಕ್ಷಿ ಆಗುತ್ತಿದ್ದಾರೆ. ಹೊಸ ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದಾರೆ.ಆಯಾ ರಾಜ್ಯಗಳಲ್ಲಿ ಸರ್ಕಾರ ರಚನೆ ಜೊತೆಗೆ ರಾಷ್ಟ್ರೀಯ ರಾಜಕೀಯದ ಮೇಲೆ, ಮುಖ್ಯವಾಗಿ ಆಡಳಿತ ಮತ್ತು ಪ್ರಧಾನ ಪ್ರತಿಪಕ್ಷದ ಭವಿಷ್ಯದ ಮೇಲೆ ಈ ಪಂಚರಾಜ್ಯ ಚುನಾವಣೆ ಪ್ರಭಾವ ಬೀರಲಿದೆ.

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚ್ಚೆರಿಯಲ್ಲಿ ಇದೇ27 ರಿಂದ ಅಂದರೇ, ಇದೇ ಶನಿವಾರದಿಂದ ಚುನಾವಣೆಗಳು ಆರಂಭವಾಗಲಿವೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ.

ಈ ಐದು ರಾಜ್ಯಗಳಿಂದ 116 ಸಂಸದರು ಸಂಸತ್ತಿನಲ್ಲಿ ಇದ್ದಾರೆ. ಅಂದರೇ,ಒಟ್ಟು ಸಂಸದರ ಪೈಕಿ ಐದನೇ ಒಂದರಷ್ಟು ಸಂಸದರು ಈ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ರಾಜ್ಯಗಳಿಂದ ರಾಜ್ಯಸಭೆಗೆ 51 ಮಂದಿ (ಶೇ.21) ಆರಿಸಿ ಹೋಗಿದ್ದಾರೆ.

ನೆಲೆ ವಿಸ್ತರಿಸಿಕೊಳ್ಳಲು ಬಿಜೆಪಿ ಯತ್ನ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಳೆದ ಏಳು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಇರುವ ಸಂಖ್ಯಾಬಲ ಮತ್ತು ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆಯನ್ನು ಪರಿಗಣಿಸಿದರೇ ಬಿಜೆಪಿ ನಿಜಕ್ಕೂ ದೊಡ್ಡ ಪಕ್ಷವಾಗಿ ಅವತರಿಸಿದೆ.

೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಲೋಕಸಭೆಯ ಶೇಕಡಾ 56 ರಷ್ಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಳೆದ 25 ವರ್ಷಗಳಲ್ಲಿ ಒಂದು ಪಕ್ಷಕ್ಕೆ ಲಭಿಸಿದ ಅತೀ ದೊಡ್ಡ ಗೆಲುವಿದು.

ಆದರೆ, ಬಿಜೆಪಿಗೆ ಇಡೀ ದೇಶದಲ್ಲಿ ತನ್ನ ಪ್ರಭಾವ ತೋರಿಸಲು ಆಗಲಿಲ್ಲ. 2019 ರ ಚುನಾವಣೆಯಲ್ಲಿ 11 ದೊಡ್ಡ ರಾಜ್ಯಗಳಲ್ಲಿ ಶೇ.75 ರಷ್ಟು ಸ್ಥಾನಗಳನ್ನು ಗೆದ್ದುಕೊಂಡರೂ, ತಮಿಳುನಾಡು, ಕೇರಳದಂತಹ ಕೆಲವು ರಾಜ್ಯಗಳಲ್ಲಿ ಒಂದೇ ಒಂದು ಸೀಟು ಕೂಡ ದಕ್ಕಿಸಿಕೊಳ್ಳಲು ಬಿಜೆಪಿಗೆ ಆಗಲಿಲ್ಲ. ಈಗ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಅದೇ ರಾಜ್ಯಗಳಲ್ಲಿ. ಬಿಜೆಪಿ ಹಿಂದೆಂದೂ ತಮಿಳುನಾಡು ಮತ್ತು ಕೇರಳದಲ್ಲಿ ನೇರವಾಗಿ ಆಡಳಿತ ನಡೆಸಿಲ್ಲ. ಈಗ ಈ ರಾಜ್ಯಗಳಲ್ಲಿ ಪಕ್ಷದ ನೆಲೆ ವಿಸ್ತರಿಸಲು ಕೇಸರಿ ಪಕ್ಷ ಪ್ರಯತ್ನಿಸುತ್ತಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮಬಂಗಾಳದಲ್ಲಿ ಶೇಕಡಾ 43 ರಷ್ಟು ಸ್ಥಾನಗಳನ್ನು ಸಂಪಾದಿಸಿತು. ಅದಕ್ಕೂ ಮೊದಲು ಆ ರಾಜ್ಯದಲ್ಲಿ ಶೇಕಡಾ ಐದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರಲಿಲ್ಲ. ಈಗ ಮೊದಲ ಬಾರಿಗೆ ಬಿಜೆಪಿ ಬಂಗಳದಲ್ಲಿ ಸರ್ಕಾರ ರಚಿಸಲು ಗಟ್ಟಿ ಪ್ರಯತ್ನ ಮಾಡುತ್ತಿದೆ.

ಈಶಾನ್ಯ ಭಾರತದ ಅತೀ ದೊಡ್ಡ ರಾಜ್ಯ ಅಸ್ಸಾಂ ಕೂಡ ಬಿಜೆಪಿಗೆ ಅಷ್ಟೇ ಪ್ರಮುಖ. ಸದ್ಯ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನಿಧಾನಕ್ಕೆ ಪಕ್ಷವನ್ನು ಬಲಪಡಿಸುತ್ತಾ ಸಾಗಿದೆ. ಆದರೆ, ಕಳೆದ ವರ್ಷ ಅಸ್ಸಾಂನಲ್ಲಿ ಬಿಜೆಪಿ ವಿರೋಧಿ ಗಾಳಿಯೂ ಬೀಸಿತ್ತು. ಸಿಎಎ ವಿರೋಧಿ ಪ್ರತಿಭಟನೆಗಳು ನಡೆದಿದ್ದವು.ಪುದುಚ್ಚೆರಿಯಲ್ಲಿ ಕಳೆದ ನಾಲ್ಕು ವರ್ಷದಿಂದ ಕಾಂಗ್ರೆಸ್ ಸರ್ಕಾರ ಇತ್ತು. ಆದರೆ,ಕಳೆದ ತಿಂಗಳು ಸಾಕಷ್ಟು ಶಾಸಕರು ಕಾಂಗ್ರೆಸ್ ಮತ್ತು ಡಿಎಂಕೆ ತೊರೆದ ಕಾರಣ ಸರ್ಕಾರ ಪತನವಾಯಿತು.

ಈ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸಿಗುವ ಜಯ ಬಿಜೆಪಿಗೆ ಮುಂದಿನ ಚುನಾವಣೆಗಳಲ್ಲಿ ಹೋರಾಡಲು ಹುಮ್ಮಸ್ಸು ತುಂಬಲಿದೆ. ಜೊತೆಗೆ ರಾಜ್ಯಸಭೆಯಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿಗೆ ಇದು ನೆರವಾಗಲಿದೆ. ಸದ್ಯ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾ ಬಲ ಶೇಕಡಾ 40 ರಷ್ಟು ಮಾತ್ರ ಇದೆ.

ವಿಪಕ್ಷಗಳಿಗೆ ಕಠಿಣ ಸವಾಲು
ಪಂಚ ರಾಜ್ಯ ಚುನಾವಣೆ ವಿಪಕ್ಷಗಳಿಗೂ ಅಷ್ಟೇ ಮುಖ್ಯ. ಈ ಪಕ್ಷಗಳಲ್ಲಿ ದೇಶವನ್ನು 50 ವರ್ಷಕ್ಕಿಂತ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಪಕ್ಷ ಕೂಡ ಇದೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೆ ಸಂಸತ್ತಿನ ಕೆಳಮನೆಯಲ್ಲಿ ಶೇಕಡಾ 21 ರಷ್ಟು ಸೀಟು ಶೇರಿಂಗ್ ಇದೆ. 2019 ರ ಚುನಾವಣೆಯಲ್ಲಿ 421  ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ೫೨ ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು. ಅದರಲ್ಲಿ ಅರ್ಧಕ್ಕೂ ಹೆಚ್ಚು ಸ್ಥಾನಗಳು ಈಗ ಚುನಾವಣೆ ನಡೆಯುತ್ತಿರುವ ರಾಜ್ಯಗಳಿಂದ ಬಂದಿರುವುದೇ ಆಗಿದೆ.

ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಗೆದ್ದ ಸ್ಥಾನಗಳ ಪೈಕಿ ಶೇಕಡಾ 65 ರಷ್ಟು ಸ್ಥಾನಗಳು ಈ ಐದು ರಾಜ್ಯಗಳಿಗೆ ಸಂಬಂಧಿಸಿದ್ದಾಗಿವೆ. ಮತ್ತೊಂದ್ಕಡೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಇಲ್ಲಿ ಗಳಿಸಿದ್ದು ಕೇವಲ ಶೇ.8 ರಷ್ಟು ಸ್ಥಾನಗಳನ್ನು.

ಸಂಸತ್ತಿನ ಕೆಳಮನೆಯಲ್ಲಿ ಹೆಚ್ಚು ಸದಸ್ಯರು ಇರುವ ಎರಡು ಪಕ್ಷಗಳ ಪೈಕಿ (ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿದರೇ) ತಮಿಳುನಾಡಿನ ಪ್ರಾದೇಶಿಕ ಪಕ್ಷ ಡಿಎಂಕೆ ಕೂಡ ಒಂದು. ಇದು ಕಾಂಗ್ರೆಸ್‌ನ ಮಿತ್ರಪಕ್ಷ. ಮತ್ತೊಂದು ಪಕ್ಷ ಎಂದರೇ ಅದು ಟಿಎಂಸಿ. ಇದು ಕಳೆದ 10 ವರ್ಷಗಳಿಂದ ಬಂಗಾಳವನ್ನು ಆಳುತ್ತಿದೆ.

ಈ ಎರಡು ಪಕ್ಷಗಳಿಗೂ ಸಂಸತ್ತಿನ ಉಭಯ ಸದನಗಳಲ್ಲಿ ಶೇಕಡಾ 8 ರಷ್ಟು ಸ್ಥಾನಗಳಿವೆ. ಒಂದು ವೇಳೆ ಫಲಿತಾಂಶ ಆಚೆ ಈಚೆ ಆದಲ್ಲಿ ಸಂಸತ್ತಿನ ಈ ಪಕ್ಷಗಳ ಬಲ ಕಡಿಮೆ ಆಗಲಿದೆ.

LEAVE A REPLY

Please enter your comment!
Please enter your name here