ನೆಟ್ಟಗೆ ನೆಟ್‌ವರ್ಕ್‌ ಸಿಗ್ದಿರೋ ಈ ಊರು- ಪರಿಹಾರದ ನಿರೀಕ್ಷೆಯಲ್ಲಿ ಬೇಲಾಡಿ ಗ್ರಾಮಸ್ಥರು

ಗ್ರಾಮ-ಗ್ರಾಮ ಪ್ರಗತಿ ಹೊಂದುತ್ತಿರುವ ಈ ದೇಶದಲ್ಲಿ ಇನ್ನೂ ಕೂಡ ಇಲ್ಲೊಂದು ಊರಿನ ಬಗೆಹರಿಸಲಾಗದ ಒಂದು ಕೆಲಸ ಇನ್ನೂ ಬಾಕಿ ಉಳಿದಿದೆ,ಅದೇನೆಂದರೆ ವೈಜ್ಞಾನಿಕ ತಂತ್ರಜ್ಞಾನ, ಕಂಪ್ಯೂಟರ್ ಯುಗದ ಈ ಕಾಲದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದ ಬೇಲಾಡಿ ಊರು ಎದುರಿಸುತ್ತಿರುವ ಸಮಸ್ಯೆ.

ಖಾಸಗಿ ಕಂಪೆನಿಗಳ ನೆಟ್​ವರ್ಕ್ ದೂರದ ಮಾತು, ಇಲ್ಲಿ ಸರಕಾರಿ ಟೆಲಿಕಾಂ ಬಿಎಸ್‌ಎನ್‌ಎಲ್ ನೆಟ್​ವರ್ಕ್ ಕೂಡ ಸೌಲಭ್ಯವಿಲ್ಲದ ಪರಿಸ್ಥಿತಿ ಈ ಕಾಂತಾವರ ಗ್ರಾಮದ ಬೇಲಾಡಿ ಸ್ಥಿತಿ.

2G,3G,4G, ಬಂದರೂ ಕೂಡ ಇಲ್ಲಿನ ಜನತೆ ಒಂದು ಕರೆ ಮಾಡಲು ಗುಡ್ಡ,ಬೆಟ್ಟ,ಎತ್ತರ ಪ್ರದೇಶಗಳಿಗೆ ಹೋಗಿ ಮೊಬೈಲ್ ಅನ್ನು ಸೆಲ್ಫಿ ತರಹ ಹಿಡಿದು ಲೌಡ್ ಸ್ಪೀಕರ್ ಇಟ್ಟು ಮಾತನಾಡುವ ಪರಿಸ್ಥಿತಿ. ಕರೆ ಮಾಡಿದವನಿಗೆ ಮಾತು ತಲುಪುವುದೋ ಇಲ್ಲವೋ ಗೊತ್ತಿಲ್ಲ,ಆದರೆ ಪಕ್ಕದ ಮನೆಯವರಿಗೆ ಕೇಳಿಸುವುದಂತೂ ಗ್ಯಾರಂಟಿ.

ಆನ್‍ಲೈನ್ ಮಾದರಿಯಲ್ಲಿ ನಡೆಯುತ್ತಿರುವ ಈಗಿನ ಚಟುವಟಿಕೆಗಳನ್ನು ನೆಟ್​ವರ್ಕ್ ಇದ್ದ ಊರಿಗೋ,ಅಥವಾ ಪಟ್ಟಣಕ್ಕೆ ತೆರಳಿ ಅಲ್ಲಿ ಕೂತು ಬಗೆಹರಿಸಿ ಬರಬೇಕಾಗುತ್ತದೆ. ಹೆಚ್ಚಾಗಿ ರಾತ್ರಿ ಸಮಯ, ಒಬ್ಬರೋ,ಇಬ್ಬರೋ ಇರುವ ಮನೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಜನ ಸಹಾಯ ಬೇಕಾದರೆ, ಅವರ ಮನೆಗೆ ಹೋಗಿ ತಿಳಿಸಬೇಕಾದ ಪರಿಸ್ಥಿತಿ.

ಇದೀಗ ಲಾಕ್ ಡೌನ್‌ ಸಂದರ್ಭದಲ್ಲಿ ಆನ್‍ಲೈನ್ ಮಾದರಿಯಲ್ಲಿ ನಡೆಯುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಅಡ್ಡಿ ಉಂಟು ಮಾಡಿದೆ.
ಅನಾರೋಗ್ಯದ ಅಗತ್ಯ ಸಂದರ್ಭದಲ್ಲಿ ಮೋಟಾರು ವಾಹನದ ಅಗತ್ಯ ಬಿದ್ದಲ್ಲಿ, ಅವರ ಮನೆ ತೆರಳಿ ಕರೆದು ತರುವ ಪರಿಸ್ಥಿತಿ.

ಇಲ್ಲಿಯವರೆಗೆ ಈ ಊರಿನ ಜನತೆ ಎಲ್ಲಾ ಟೆಲಿಕಾಂ ನೆಟ್​ವರ್ಕ್ ಕಂಪೆನಿಗಳಿಗೆ ಅರ್ಜಿ ಸಲ್ಲಿಸಿಯಾಗಿದೆ. ಆದರೆ ಈ ಸಮಸ್ಯೆ ಇನ್ನೂ ಕೂಡ ಯಾವ ನೆಟ್​ವರ್ಕ್ ಕಂಪೆನಿ /ಯಾವ ರಾಜಕೀಯ ಮುಖಂಡರಿಂದಲೂ ಅಸಾಧ್ಯದ ಕಾರ್ಯವಾಗಿದೆ ಎಂದು ಗ್ರಾಮದ ಜನರ ಮನದಲ್ಲಿ ಮನದಟ್ಟಾಗಿದೆ.

ರಾಜಕೀಯ ಪಕ್ಷಗಳು ಗ್ರಾಮವನ್ನು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಪಕ್ಷದಲ್ಲಿಯೆ ಒಳ ಜಗಳದ ಕಾರ್ಯ ಪ್ರವೃತ್ತಿಯನ್ನು ತೋರಿಸುತ್ತಿದೆ. ಮುಂದೊಂದು ದಿನ ಈ ಗ್ರಾಮದಲ್ಲಿ ಮತಯಾಚನೆಗೆ ಬಂದರೆ ಮತ ಗಟ್ಟೆಯಲ್ಲಿ ಮತ ಹಾಕದಂತೆ ಬಹಿಷ್ಕಾರ ಕೂಗುವ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಬೇಲಾಡಿ ಊರಿನಲ್ಲಿ ಯಾವುದೇ ರೀತಿಯಲ್ಲಿ ನೆಟ್‍ವರ್ಕ್ ಸಮಸ್ಯೆ ತಲೆದೂರದಂತೆ ಟವರ್ ಗಳನ್ನು ಅಳವಡಿಸಬೇಕು ಎಂದು ಗ್ರಾಮಸ್ಥರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯವರಿಗೆ‌ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here