ದೆಹಲಿ ನಿರ್ಭಯ ಹತ್ಯಾಕಾಂಡದ ಪಾತಕಿಗಳಿಗೆ ಕೊನೆಗೂ ಗಲ್ಲು ಶಿಕ್ಷೆಗೆ ಮುಹೂರ್ತ ನಿಗದಿಯಾಗಿದೆ. ಜನವರಿ 22 ರಂದು ಬುಧವಾರ ಬೆಳಿಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆ ವಿಧಿಸುವಂತೆ ದೆಹಲಿಯ ಪಟಿಯಾಲ ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ಸತೀಶ್ ಅರೋರಾ ಮರಣ ದಂಡನೆ ಜಾರಿ ಸಂಬಂಧ ವಾರೆಂಟ್ ಹೊರಡಿಸಿದ್ದಾರೆ.
7 ವರ್ಷಗಳ ಹಿಂದೆ 2012 ರ ಡಿಸೆಂಬರ್ 16 ರಂದು ರಾತ್ರಿ 6 ಮಂದಿ ಕಾಮುಕರು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ನಿರ್ಭಯಾಳ ಅತ್ಯಾಚಾರ ಎಸಗಿ ಬಳಿಕ ಘನಘೋರವಾಗಿ ಹತ್ಯೆ ಮಾಡಿದ್ದರು.
6 ಮಂದಿ ತಪ್ಪಿತಸ್ಥರಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದು ಆತ ರಿಮ್ಯಾಂಡ್ ಹೋಮ್ ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ತಿಹಾರ್ ಜೈಲಿನಲ್ಲಿದ್ದ ರಾಜಸ್ಥಾನದ ಮೂಲದ ಪಾತಕಿ ರಾಮ್ ಸಿಂಗ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಈತನ ಸಹೋದರ ಮುಖೇಶ್ ಸಿಂಗ್, ಉತ್ತರ ಪ್ರದೇಶ ಮೂಲದ ಪವನ್ ಗುಪ್ತಾ, ಬಿಹಾರ ಮೂಲದ ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್‌ಗೆ ಗಲ್ಲು ವಿಧಿಸಲಾಗುತ್ತದೆ.
2013 ರ ಸೆಪ್ಟೆಂಬರ್ 13 ರಂದು ದೆಹಲಿಯ ಶೀಘ್ರಗತಿಯ ನ್ಯಾಯಾಲಯ ಐವರಿಗೂ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತು. 2014 ರ ಮಾರ್ಚ್ 13 ರಂದು ದೆಹಲಿ ಹೈಕೋರ್ಟ್ ಕೂಡಾ ಪಾತಕಿಗಳ ಮರಣದಂಡನೆಯನ್ನು ಎತ್ತಿಹಿಡಿಯಿತು. ಮಾರ್ಚ್ 5, 2017ರಂದು ಸುಪ್ರೀಂಕೋರ್ಟಿನಿಂದಲೂ ಮರಣದಂಡನೆ ಖಾಯಂ ಆಯಿತು. ಜುಲೈ 9, 2018 ರಂದು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ತಪ್ಪಿತಸ್ಥರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯೂ ವಜಾಗೊಳ್ತು. ಬಳಿಕ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿಯನ್ನೂ ಸಲ್ಲಿಸಿದ್ದರು. ಆದ್ರೆ ಕ್ಷಮಾದಾನ ನೀಡದಂತೆ ದೆಹಲಿ ಸರ್ಕಾರ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್‌ಗೆ ಕೇಂದ್ರ ಗೃಹ ಸಚಿವಾಲಯದ ಮೂಲಕ ಶಿಫಾರಸ್ಸು ಮಾಡಿತು.
ಹಾಗಾದರೆ ಮರಣದಂಡನೆ ಜಾರಿ ಪ್ರಕ್ರಿಯೆ ಹೇಗಿರುತ್ತೆ ಎಂಬುದನ್ನು ವಿವರವಾಗಿ ಹೇಳ್ತೀವಿ.
ಮರಣದಂಡನೆ ವಾರೆಂಟ್:
ಮರಣದಂಡನೆ ಜಾರಿ ಆಗುವುದಕ್ಕೂ ಮೊದಲು ಜೈಲಿನ ಅಧಿಕಾರಿಗಳು ಮರಣದಂಡನೆ ವಾರೆಂಟ್‌ನ್ನು ಜಾರಿ ಮಾಡಲಾಗುತ್ತದೆ. ದೆಹಲಿಯ ಪಟಿಯಾಲಾ ಕೋರ್ಟ್‌ನ ಮೂಲಕ ಈ ಡೆತ್ ವಾರೆಂಟ್‌ನ್ನು ಪಡೆಯಬೇಕಾಗುತ್ತದೆ. ಈ ಮೂಲಕ ಇಂಥದ್ದೇ ದಿನ ಗಲ್ಲಿಗೇರಿಸಲಾಗುತ್ತದೆ ಎಂಬ ಪೂರ್ವ ಮಾಹಿತಿಯನ್ನು ಕೈದಿ ಮತ್ತವರ ಕುಟುಂಬಸ್ಥರಿಗೆ ನೀಡಲಾಗುತ್ತದೆ. ಮರಣದಂಡನೆ ಜಾರಿಗೂ ಮೊದಲು ಕೈದಿಗಳ ಕೊನೆಯ ಆಸೆಯನ್ನು ಕೇಳಲಾಗುತ್ತದೆ. ಅವರು ಪ್ರಾರ್ಥನೆ ಸಲ್ಲಿಸಲು ಕೇಳಿಕೊಂಡಲ್ಲಿ ಅದಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ.
ನೇಣು ಹಾಕುವವರು ಯಾರು..?
ತಿಹಾರ್ ಜೈಲಿನಲ್ಲಿ ವಧಾಕಾರರು ಇಲ್ಲ. ಹೀಗಾಗಿ ಅನ್ಯ ಜೈಲುಗಳಲ್ಲಿರುವ ವಧಾಕಾರರ ಸೇವೆಯನ್ನು ಎರವಲು ಪಡೆಯಲಾಗುತ್ತದೆ. ಈ ಬಾರಿ ಇಬ್ಬರು ವಧಾಕಾರನ್ನು ಕಳಹಿಸಿಕೊಂಡುವಂತೆ ಉತ್ತರ ಪ್ರದೇಶ ರಾಜ್ಯದ ಲಕ್ನೋ ಮತ್ತು ಮೀರತ್‌ನ ಜೈಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇವರಲ್ಲಿ ಒಬ್ಬರು ಮೀರತ್ ಜೈಲಿನಲ್ಲಿ ಸೇವೆಯಲ್ಲಿರುವ ವಧಾಕಾರ ಪವನ್ ಜಲ್ಲಾದ್.
ಇದು ಎರಡನೇ ಗಲ್ಲು ಶಿಕ್ಷೆಯಷ್ಟೇ:
ಸ್ವತಂತ್ರ ಭಾರತದಲ್ಲಿ ಅತ್ಯಾಚಾರ ಕೇಸ್ ನಲ್ಲಿ ನೇಣು ಹಾಕುತ್ತಿರುವ 2 ನೇ ಉದಾಹರಣೆ ಇದು. ೧೫ ವರ್ಷಗಳ ಹಿಂದೆ 2004ರ ಆಗಸ್ಟ್ 14 ರಂದು ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಕೇಸಿನ ಪಾತಕಿ ಪಶ್ಚಿಮ ಬಂಗಾಳ ಮೂಲದ 41 ವಯಸ್ಸಿನ ಧನಂಜೋಯ್ ಚಟರ್ಜಿಯನ್ನು ಕೋಲ್ಕತ್ತದ ಜೈಲಿನಲ್ಲಿ ನೇಣಿಗೇರಿಸಲಾಗಿತ್ತು. ಈತನ ದೇಹವನ್ನು ತಗೆದುಕೊಳ್ಳಲು ಕುಟುಂಬಸ್ಥರು ಒಪ್ಪದಿದ್ದ ಕಾರಣ ಜೈಲಿನಲ್ಲೇ ಅಂತ್ಯಕ್ರಿಯೆ ನಡೆಸಲಾಯ್ತು.
ಮರಣದಂಡನೆ ಪ್ರಕ್ರಿಯೆ ಹೇಗಿರುತ್ತದೆ..?
ಭಾರತದಲ್ಲಿ ೨ ರೀತಿಯಲ್ಲಿ ಮರಣದಂಡನೆ ಶಿಕ್ಷೆಗೆ ಅವಕಾಶಗಳಿದೆ. ಭಾರತೀಯ ಅಪರಾದ ದಂಡ ಸಂಹಿತೆಯ ಸೆಕ್ಷನ್ 354 (5) ರ ಪ್ರಕಾರ ಕುತ್ತಿಗೆಗೆ ನೇಣು ಬಿಗಿಯುವುದು. ಭಾರತಿಯ ವಾಯುಸೇನೆ ಕಾಯ್ದೆ, ಭಾರತೀಯ ಭೂ ಸೇನಾ ಕಾಯ್ದೆ , ನೌಕಾ ಸೇನೆಯ ಕಾಯ್ದೆಯ ಪ್ರಕಾರ ಶೂಟ್ ಮಾಡಿ ಸಾಯಿಸುವುದು.
ಮರಣದಂಡನೆಗೂ ಟೈಮ್ ಫಿಕ್ಸ್:
ಕಾನೂನಿನ ಪ್ರಕಾರ ಮುಂಜಾನೆಯೇ ಮರಣದಂಡನೆ ವಿಧಿಸಬೇಕು. ಆದರೆ ಸಮಯ ಮಾತ್ರ ಬೇರೆ ಬೇರೆ ಇರುತ್ತದೆ.
ನವೆಂಬರ್ ನಿಂದ ಫೆಬ್ರವರಿ ನಡುವೆ ಮರಣದಂಡನೆ- ಬೆಳಿಗ್ಗೆ 8 ಗಂಟೆಯ ಒಳಗೆ
ಮಾರ್ಚ್, ಏಪ್ರಿಲ್, ಸೆಪ್ಟಂಬರ್, ಅಕ್ಟೋಬರ್ ನಲ್ಲಾದರೆ – ಬೆಳಿಗ್ಗೆ 7 ಗಂಟೆಯ ಒಳಗೆ
ಮೇ ನಿಂದ ಆಗಸ್ಟ್ ನಲ್ಲಾದರೆ ಬೆಳಿಗ್ಗೆ 6 ಗಂಟೆಯ ಒಳಗೆ
ಮರಣದಂಡನೆಯ ವೇಳೆ ಯಾರೆಲ್ಲ ಹಾಜರಿರುತ್ತಾರೆ:
ಮರಣದಂಡನೆ ಜಾರಿಯ ವೇಳೆ ಮೂವರು ಅಧಿಕಾರಿಗಳು ಹಾಜರಿರಲೇಬೇಕು.
1. ಜೈಲಿನ ವೈದ್ಯಕೀಯ ಅಧಿಕಾರಿ
2. ಸೂಪರಿಟೆಂಡೆಂಟ್ ಆಫ್ ಪೋಲೀಸ್
3. ಜಿಲ್ಲಾ ದಂಡಾಧಿಕಾರಿ
ನೇಣಿನ ಕುಣಿಕೆ ಎಷ್ಟು ಉದ್ದ ಇರಬೇಕು..?
ಖೈದಿ 45 ಕೆ.ಜಿ ಗಿಂತ ಕಮ್ಮಿ ತೂಕ ಇದ್ದಲ್ಲಿ 7 ಅಡಿ
ಖೈದಿ 54 ಕೆ.ಜಿ ಗಿಂತ ಕಮ್ಮಿ ತೂಕ ಇದ್ದಲ್ಲಿ 6 ಅಡಿ
ಖೈದಿ 63 ಕೆ.ಜಿ ಗಿಂತ ಕಮ್ಮಿ ತೂಕ ಇದ್ದಲ್ಲಿ 5.5 ಅಡಿ
ಖೈದಿ 75 ಕೆ.ಜಿ ಗಿಂತ ಕಮ್ಮಿ ತೂಕ ಇದ್ದಲ್ಲಿ 5 ಅಡಿ
ಮರಣದಂಡನೆ ವಿಧಿಸುವ ದಿನ ಪ್ರಕ್ರಿಯೆ ಹೇಗಿರುತ್ತೆ..?
1. ಮರಣದಂಡನೆ ವಿಧಿಸುವ ದಿನ ಜೈಲಿನ ಎಸ್ಪಿ, ಡಿಎಸ್ಪಿ ಖೈದಿ ಇರುವ ಸೆಲ್‌ಗೆ ಹೋಗಿ ಈತನೇ ಮರಣದಂಡನೆಗೆ ಗುರಿಯಾಗಿರುವ ಖೈದಿ ಎಂದು ಖಚಿತಪಡಿಸಿಕೊಳ್ಳಬೇಕು
2. ಬಳಿಕ ಅತನ ಎದುರು ಮರಣದಂಡನೆ ಜಾರಿ ಆದೇಶದ ಪ್ರತಿಯನ್ನು ಓದಬೇಕು
3. ಇದಾದ ತರುವಾಯ ಖೈದಿಯಿಂದ ದಾಖಲೆಗಳಿಗೆ ಸಹಿ ಪಡೆದುಕೊಳ್ಳಬೇಕು.
4. ನಂತರ ಖೈದಿಯ 2 ಕಾಲುಗಳನ್ನು ಕಬ್ಬಿಣದ ಸಂಕೋಲೆಯಿಂದ ಬಂಧಿಸಿದ್ದಲ್ಲಿ ಅದನ್ನು ತೆಗೆದು ಗಲ್ಲು ಪೀಠದ ಬಳಿಗೆ ಕರೆದೊಯ್ಯಬೇಕು
5. ಗಲ್ಲು ಪೀಠದ ಕಡೆಗೆ ಕರೆದೊಯ್ಯುವ ಹೊಣೆ ಡಿಎಸ್ಪಿಯದ್ದು. ಖೈದಿಗೆ ಜೈಲಿನ ಹೆಡ್ ವಾರ್ಡರ್ ಮತ್ತು ಆರು ಮಂದಿ ವಾರ್ಡರ್ ಸೇರಿದಂತೆ 7 ಮಂದಿ ಕಾವಲಿರುತ್ತಾರೆ. ಅವರಲ್ಲಿ ಇಬ್ಬರು ಖೈದಿಯ ಹಿಂಭಾಗದಲ್ಲೂ, ಇಬ್ಬರು ಮುಂಭಾಗದಲ್ಲೂ ಉಳಿದಿಬ್ಬರು ಕೈದಿಯ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ವಧಾಪೀಠದ ಬಳಿಗೆ ಕರೆದುಕೊಂಡು ಬರುತ್ತಾರೆ.
6. ಗಲ್ಲು ಪೀಠದ ಬಳಿ ಬಂದ ಬಳಿಕ ಖೈದಿಯನ್ನು ಹಿಡಿದುಕೊಂಡಿರುವ ವಾರ್ಡರ್‌ಗಳು ಗಲ್ಲು ಪೀಠದ ಮೇಲೆ ಕರೆದೊಯ್ದು ನಿಖರವಾಗಿ ನೇಣಿನ ಕೆಳಗೆ ಖೈದಿಯನ್ನು ನಿಲ್ಲಿಸುತ್ತಾರೆ.
7. ನೇಣು ಹಾಕುವುದಕ್ಕೂ ಮೊದಲು ಕೊನೆಯದಾಗಿ ಗಲ್ಲು ಪೀಠದಲ್ಲಿ ನಿಂತಿರುವ ಖೈದಿಗೆ ಎಸ್ಪಿ, ಜಿಲ್ಲಾ ದಂಡಾಧಿಕಾರಿ, ಜೈಲಿನ ವೈದ್ಯಾಧಿಕಾರಿ ಸಮ್ಮುಖದಲ್ಲಿ ಮರಣದಂಡನೆ ಜಾರಿ ಆದೇಶವನ್ನು ಓದಿ ಹೇಳಲಾಗುತ್ತದೆ.
8. ನಂತರ ಖೈದಿಯ ಎರಡೂ ಕಾಲುಗಳನ್ನು ಬಿಗಿಯಾಗಿ ಕಟ್ಟಿ ಅತನ ತಲೆಗೆ ಕಪ್ಪು ಬಣ್ಣದ ಕವರ್ ಹಾಕಲಾಗುತ್ತದೆ. ಬಳಿಕ ಆತನ ಕುತ್ತಿಗೆಗೆ ನೇಣನ್ನು ಇಳಿಸಲಾಗುತ್ತದೆ
9. ಈ ನೇಣು ಕುತ್ತಿಗೆಯ ಮಧ್ಯ ಭಾಗದ 1.5 ಇಂಚು ಎಡ ಅಥವಾ ಬಲ ಭಾಗಕ್ಕೆ ವಾಲಿರಬೇಕು.
10. ಈ ಪ್ರಕ್ರಿಯೆ ಮುಗಿದ ಬಳಿಕ ಇಬ್ಬರೂ ವಾರ್ಡರ್‌ಗಳೂ ಖೈದಿಯನ್ನು ವಧಾ ಸ್ಥಳದಲ್ಲಿ ಬಿಟ್ಟು ತೆರಳುತ್ತಾರೆ.
12 ಬಳಿಕ ಎಸ್ಪಿ ಸಿಗ್ನಲ್ ಕೊಟ್ಟ ನಂತರ ವಧಾಕಾರ (ಹ್ಯಾಂಗ್ ಮ್ಯಾನ್) ಗಲ್ಲು ಬಿಗಿಗೊಳಿಸುತ್ತಾರೆ.
13 ಗಲ್ಲು ಶಿಕ್ಷೆ ವಿಧಿಸಿದ 30 ನಿಮಿ಼ಷದವರೆಗೂ ದೇಹವನ್ನು ಮೇಲೆತ್ತುವಂತಿಲ್ಲ
14. ಜೈಲಿನ ವೈದ್ಯಾಧಿಕಾರಿ ಪ್ರಾಣ ಹೋಗಿದೆಯೆಂದು ಧೃಡಪಡಿಸಿದ ನಂತರ ದೇಹವನ್ನು ಮೇಲಕ್ಕೆತ್ತಲಾಗುತ್ತದೆ
15. ಬಳಿಕ ಖೈದಿಯ ದೇಹವನ್ನು ಅತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
16. ಒಂದು ವೇಳೆ ಕೈದಿಯ ಕುಟುಂಬಸ್ಥರು ಶವವನ್ನು ತೆಗೆದುಕೊಳ್ಳದೇ ಇದ್ದಲ್ಲಿ ಆಗ ಜೈಲಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ನೇಣಿನ ಹಗ್ಗ ತಯಾರಾಗುವುದು ಎಲ್ಲಿ..?
ಮರಣದಂಡನೆಗೆ ಅಗತ್ಯವಾದ ನೇಣಿನ ಹಗ್ಗ ತಯಾರಾಗುವುದು ಬಿಹಾರ ರಾಜ್ಯದ ಬಕ್ಸರ್ ಜೈಲಿನಲ್ಲಿ. ಇಡೀ ದೇಶದಲ್ಲೇ ಇದೊಂದು ಜೈಲಿನಲ್ಲಷ್ಟೇ ನೇಣಿನ ಕುಣಿಕೆ ಸಿದ್ಧವಾಗುತ್ತದೆ.
ಇದೇ ಡಿಸೆಂಬರ್ 14 ರೊಳಗೆ 10 ನೇಣಿನ ಹಗ್ಗಗಳನ್ನು ತಯಾರಿಸಿ ತಿಹಾರ್ ಜೈಲಿಗೆ ಕಳುಹಿಸಿಕೊಡುವಂತೆ ತಿಹಾರ್ ಜೈಲಿನ ಅಧಿಕಾರಿಗಳು ಬಕ್ಸರ್ ಜೈಲಿನ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
ಒಂದು ನೇಣಿನ ಹಗ್ಗ ತಯಾರಿಕೆಗೆ 3 ದಿನ ಬೇಕಾಗುತ್ತದೆ. ಐದರಿಂದ- ಆರು ಮಂದಿ ಕೈದಿಗಳು ಪರಿಶ್ರಮ ಒಂದು ನೇಣಿನ ಹಗ್ಗ ತಯಾರಾಗಲು ಬೇಕು.
ಒಂದು ಗಲ್ಲು ಕುಣಿಕೆಯ ಬೆಲೆ 1725 ರೂಪಾಯಿ ( ಸಂಸತ್ ಭವನದ ಧಾಳಿಕೋರ ಅಫ್ಜಲ್ ಗುರುವಿಗೆ ನೇಣು ವಿಧಿಸಿದ್ದಾಗ ನೇಣಿನ ಬೆಲೆ. ಪೂರೈಕೆ ಆಗಿದ್ದು ಬಕ್ಸರ್ ಜೈಲಿನಿಂದಲೇ)
ಒಂದು ನೇಣಿನಲ್ಲಿ 7,000 ನೂಲಿನ ಎಳೆಗಳಿರುತ್ತವೆ. ತುಪ್ಪ, ಹಿತ್ತಾಳೆಯ ಅಂಶಗಳನ್ನು ಬೆರೆಸಿ ನೇಣನ್ನು ತಯಾರಿಸಲಾಗುತ್ತದೆ. ನೇಣಿನ ಎರಡೂ ತುದಿಗಳಿಗೂ ಕಬ್ಬಿಣದ ಮುಚ್ಚಳವಿರುತ್ತದೆ.