ನಿಮ್ಮ ಬೆಳೆ ನಿಮ್ಮ ಹಕ್ಕು ಎನ್ನುತ್ತಿದೆ ಕೇಂದ್ರ..  ದುರುದ್ದೇಶ ಎನ್ನುತ್ತಿದೆ ವಿಪಕ್ಷ..

ರೈತರೇ ನಿಮ್ಮ ಬೆಳೆ ನಿಮ್ಮ ಹಕ್ಕು.. ಎಲ್ಲಿ ಹೆಚ್ಚು ರೇಟ್ ಸಿಗುತ್ತೋ ಅಲ್ಲಿ ಮಾರಾಟ ಮಾಡಿ.. ಇದು ಎಪಿಎಂಸಿ ಕಾಯ್ದೆಗೆ ಎಲ್ಲಾ ರಾಜ್ಯಗಳಲ್ಲಿ ತಿದ್ದುಪಡಿ ಮಾಡಿಸುತ್ತಿರುವ ಕೇಂದ್ರದ ನಿನಾದ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಂತರ್ ರಾಜ್ಯಗಳ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇದ್ದ ನಿಯಮಗಳನ್ನು ತೊಲಗಿಸುವುದಾಗಿ, ಇದಕ್ಕೆ ಕಾಯ್ದೆಯೊಂದನ್ನು ಜಾರಿಗೆ ತರುತ್ತಿರುವುದಾಗಿ ತಿಳಿಸಿದ್ದಾರೆ.

ಕೃಷಿ ಉತ್ಪನ್ನಗಳ ಮಾರಾಟ ಸಂಬoಧ ಈಗಿರುವ ಲೈಸೆನ್ಸ್ ರಾಜ್ ವ್ಯವಸ್ಥೆಗೆ ಬ್ರೇಕ್ ಹಾಕಲಾಗುತ್ತದೆ. ಲೈಸೆನ್ಸ್ ಹೊಂದಿದ ವ್ಯಾಪಾರಿಗಳಿಗೆ ರೈತರು ಕೃಷಿ ಉತ್ಪನ್ನ ಮಾರಾಟ ಮಾಡುವ ಅಗತ್ಯ ಇರುವುದಿಲ್ಲ. ದೇಶಾದ್ಯಂತ ಎಲ್ಲಿ ಹೆಚ್ಚು ಬೆಲೆ ಸಿಗುತ್ತದೆಯೋ ಅಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿ ಎಂದು ಹಣಕಾಸು ಸಚಿವೆ ಸ್ಪಷ್ಟಪಡಿಸಿದ್ದಾರೆ. ಇ-ಟ್ರೇಡ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿವೆ. ನಾನು ರೈತಪರ ಬಜೆಟ್ ಮಂಡಿಸಿದವನು. ಹಸಿರು ಶಾಲು ಹಾಕಿ ಪ್ರಮಾಣವಚನ ಸ್ವೀಕರಿಸಿದವನು ನಾನು. ನನ್ನಿಂದ ರೈತರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ. ರೈತರ ಉತ್ಪನ್ನಗಳನ್ನು ದುಪ್ಪಟ್ಟು ಮಾಡಲು ಪ್ರಧಾನಿ ನರೇಂದ್ರ ಮೋದಿ ಯೋಜನೆಗಳನ್ನು ಮಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.

ಶಿಕಾರಿಪುರದಲ್ಲಿ ೪೫ ವರ್ಷಗಳ ಹಿಂದೆ ಎಪಿಎಂಸಿ ಮುಂದೆ ರೈತರ ಬೆಳೆದ ಬೆಳೆಗೆ ಉತ್ತಮ ಬೆಲೆ ಬೇಕೆಂದು ಹೋರಾಟ ಮಾಡಿದ್ದೆ. ಈಗ ರೈತ ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಈ ಕಾಯ್ದೆಯಿಂದ ಎಪಿಎಂಸಿ ಸಮಿತಿಗಳಿಗೆ ಯಾವುದೇ ದಕ್ಕೆ ಆಗಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.

ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ನಿರ್ಧಾರವನ್ನು ರೈತ ವಿರೋಧಿ ಎಂದು ಟೀಕಿಸಿರುವ ವಿಪಕ್ಷಗಳು ಹೋರಾಟಕ್ಕೆ ಸಜ್ಜಾಗುತ್ತಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸುಗ್ರಿವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ತರಾತುರಿಯಲ್ಲಿ ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಸ್ವಾರ್ಥಕ್ಕಾಗಿ ರೈತರ ಹಿತವನ್ನು ಬಲಿಕೊಡಲು ಹೊರಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿಯನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಎಪಿಎಂಸಿ ಕಾಯ್ದೆಯ ತಿದ್ದುಪಡಿಗೆ ೧೦೦ಕ್ಕೆ ೯೦ರಷ್ಟು ರೈತರ ಬೆಂಬಲ ಇದೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ನಿಮಗೆ ಅಷ್ಟೊಂದು ವಿಶ್ವಾಸ ಇದ್ದರೆ ಮೊದಲು ರೈತ ಪ್ರತಿನಿಧಿಗಳನ್ನು ಕರೆದು ತಿದ್ದುಪಡಿ ಬಗ್ಗೆ ಚರ್ಚಿಸಿ ಎಂದು ಆಗ್ರಹಿಸಿದ್ದಾರೆ. ರೈತರನ್ನು ಬಹುರಾಷ್ಟ್ರೀಯ ಕಂಪೆನಿಗಳ ಜೀತದಾಳುಗಳನ್ನಾಗಿ ಮಾಡುವ ದುರುದ್ದೇಶದಿಂದಲೇ ಎಪಿಎಂಸಿ ಕಾಯ್ದೆ ತಿದ್ದಲು ಹೊರಟಂತಿದೆ. ಇದು ರೈತರ ಉದ್ಧಾರಕ್ಕಲ್ಲ ಎನ್ನುವುದು ರೈತರಿಗೂ ಗೊತ್ತಾಗಿದೆ. ಪ್ರತಿಭಟನೆ ಎದುರಿಸಲು ಸಿದ್ಧರಾಗಿ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬೆಂಬಲ ಬೆಲೆಯ ಮೂಲಕ ರೈತನ ಬೆಳೆಗೆ ಬೆಲೆ ನಿರ್ಧಾರ ನಿರ್ಣಾಯಕ ಅಧಿಕಾರ ಹೊಂದಿರುವ ಎಪಿಎಂಸಿ ಮುಚ್ಚಿ ರೈತರ ಕೊರಳನ್ನು ಬಹುರಾಷ್ಟ್ರೀಯ ಕಂಪೆನಿಗಳ ಕೈಗೆ ಕೊಡುವುದು ದುರುದ್ದೇಶ ಎಂದುಜನತೆಗೆ ಅರ್ಥವಾಗಿದೆ. ಆದರೆ, ಮುಖ್ಯಮಂತ್ರಿಗಳೇ ಈಗಲೂ ಕಾಲ ಮಿಂಚಿಲ್ಲ. ಮೊದಲು ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೈಬಿಟ್ಟು, ರೈತರು, ವರ್ತಕರು ಮತ್ತು ಎಪಿಎಂಸಿ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸಿ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಮದು ಒತ್ತಾಯ ಮಾಡಿದ್ದಾರೆ.

LEAVE A REPLY

Please enter your comment!
Please enter your name here