ನಿಮಗೆ ನೀವೇ ಗತಿ- ಸಣ್ಣ ಕೈಗಾರಿಕೆಗಳಿಗೆ ಸಿಕ್ಕಿದ್ದು ಸಾಲವಷ್ಟೇ..! ಗಿಮಿಕ್‌ ಎನಿಸಿಕೊಂಡ ವಿಶೇಷ ಪ್ಯಾಕೇಜ್‌ನ ‌ಮೊದಲ ದಿನ

20 ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್‌ನ ಮೊದಲ ಅಧ್ಯಾಯ, ಕಂತು, ನಿರೀಕ್ಷೆ ಮುಗಿದಿದೆ. ಸ್ವಾವಲಂಬಿ ಭಾರತಕ್ಕಾಗಿ ದೇಶದ ವಾರ್ಷಿಕ ನಿವ್ವಳ ಉತ್ಪನ್ನದ (ಜಿಡಿಪಿ) ಶೇಕಡಾ 10ರಷ್ಟನ್ನು ವಿಶೇಷ ಆರ್ಥಿಕ ಸಹಾಯವನ್ನಾಗಿ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅದನ್ನು ಈಗ ದಿನಕ್ಕೊಂದರಂತೆ ಹಂಚಿಕೆ ಮಾಡುತ್ತಿದೆ. ಮೊದಲ ದಿನವಾದ ಇವತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 6 ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್‌ ಘೋಷಣೆ ಆಗಿದೆ.

ಆದರೆ ಕೈಗಾರಿಕೆಗಳಿಗೆ ಘೋಷಣೆ ಆಗಿರುವ ಈ ವಿಶೇಷ ಹಣಕಾಸು ನೆರವಿನ ಎಲ್ಲವೂ ಮೂರ್ತ ರೂಪದಲ್ಲಿ ಇರುವುದು ಸಾಲದ ರೂಪದಲ್ಲೇ ಎನ್ನುವುದು ಅಚ್ಚರಿಯ ಸಂಗತಿ. ಸಾಲ ಮಾಡಿಯಾದರೂ ತುಪ್ಪ ತಿನ್ನುವ ಎನ್ನುವ ಗಾದೆಯಂತೆ ಸಾಲ ತೆಗೆದುಕೊಂಡು ನಿಮ್ಮ ಗತಿ-ಸ್ಥಿತಿಯನ್ನು ನೀವೇ ನಿರ್ಧರಿಸಿಕೊಳ್ಳಿ, ಸಾಲ ಕೊಡಿಸುವುದಷ್ಟೇ ನಮ್ಮ ನಮ್ಮ ಪಾಲಿನ ಕೆಲಸ ಎಂಬಂತಿದೆ ಸರ್ಕಾರದ ಇವತ್ತಿನ ಘೋಷಣೆಯ ಸಾರಾಂಶ. ಬ್ಯಾಂಕುಗಳು ಕೊಡುವ ಸಾಲಕ್ಕೆ ನೂರಕ್ಕೆ ನೂರರಷ್ಟು ಅಡಮಾನ ಭದ್ರತೆಯ ಭರವಸೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಜವಾಬ್ದಾರಿಯನ್ನೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರ ಮೇಲೆ ಹಾಕಿ ಕೈ ತೊಳೆದುಕೊಂಡಿದೆ ಕೇಂದ್ರ ಸರ್ಕಾರ.

3 ಲಕ್ಷ ಕೋಟಿ ರೂಪಾಯಿ ಸಾಲ ಪಾವತಿಗೆ ನಾಲ್ಕು ವರ್ಷಗಳ ಅವಧಿ (2024ರವರೆಗೆ) ಮಿತಿಯನ್ನು ಕೇಂದ್ರ ಸರ್ಕಾರವೇ ವಿಧಿಸಿದೆ. 12 ತಿಂಗಳ ಕಾಲ ಸಾಲದ ಕಂತು ಕಟ್ಟುವುದರಿಂದ ವಿನಾಯಿತಿಯನ್ನು ನೀಡಿದೆ. (ಗಮನಿಸಬೇಕಾದ ಅಂಶವೆಂದರೆ ಆರ್‌ಬಿಐ ಕೂಡಾ ಇತ್ತೀಚೆಗೆ 3 ತಿಂಗಳ ಸಾಲ ಮುಂದೂಡಿಕೆಯ ಘೋಷಣೆ ಮಾಡಿತ್ತು. ಆದರೆ ಬಡ್ಡಿ ವಿನಾಯ್ತಿ ನೀಡದೇ ಇರುವುದರಿಂದ ಸಾಲದ ಕಂತು ಕಟ್ಟದೇ ಹೋದರೆ ಸಾಲದ ಮೇಲೆ ಬಡ್ಡಿ ಸುಸ್ತಿ, ಚಕ್ರ ಬಡ್ಡಿಯಿಂದ ಹೊರೆ ಹೆಚ್ಚಾಗಬಹುದು ಎಂದು ಬ್ಯಾಂಕುಗಳೇ ಗ್ರಾಹಕರಿಗೆ ಎಚ್ಚರಿಕೆ ನೀಡಿ ಪ್ರತಿ ತಿಂಗಳು ಸಾಲದ ಕಂತನ್ನು ವಸೂಲಿ ಮಾಡುತ್ತಿವೆ).

ಒಟ್ಟು 4 ಲಕ್ಷದ 15 ಸಾವಿರ ಕೋಟಿ ರೂಪಾಯಿಯೂ ಸಾಲದ ರೂಪದಲ್ಲೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸರ್ಕಾರ ಘೋಷಿಸಿದೆ. (ಇವತ್ತಿ ಘೋಷಣೆಯಲ್ಲಿ 6 ಲಕ್ಷ ಕೋಟಿಯಲ್ಲಿ 90 ಸಾವಿರ ಕೋಟಿ ಎಸ್ಕಾಂಗಳಿಗೆ ಮೀಸಲಾಗಿದೆ – ಉಳಿದಿದ್ದು 5 ಲಕ್ಷದ 10 ಸಾವಿರ ಕೋಟಿ ರೂಪಾಯಿ)

ಟಿಡಿಎಸ್‌ನಲ್ಲಿ ಶೇಕಡಾ 25ರಷ್ಟು ಇಳಿಕೆ ಮಾಡಿದ್ದು ಬಿಟ್ಟರೆ (ಕೈಗಾರಿಕೆಗಳು ಕೊಡುವ ಸಂಬಳಕ್ಕೆ ಅನ್ವಯ ಆಗಲ್ಲ) ಉಳಿದಿದೆಲ್ಲವೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬಂದಿದ್ದು ಸಾಲದ ರೂಪದಲ್ಲೇ. ಟಿಡಿಎಸ್‌ ಇಳಿಕೆಯಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 50 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಲಿದ್ದು ಆ ದುಡ್ಡನ್ನು ಮಾಲೀಕರು ತಮ್ಮ ಕಾರ್ಖಾನೆಗಳನ್ನು ನಡೆಸುವುದಕ್ಕೆ ಬಳಸುತ್ತಾರೆ ಎನ್ನುವುದು ಕೇಂದ್ರ ಸರ್ಕಾರದ ಲೆಕ್ಕಾಚಾರ.

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿಯಲ್ಲಿ ಮಾಲೀಕರ ಪಾಲಿನ ಶೇಕಡಾ 12ರಷ್ಟು ಮತ್ತು ಉದ್ಯೋಗಿಗಳ ಪಾಲಿನ ಶೇಕಡಾ 12ರಷ್ಟು ಇಪಿಎಫ್‌ ಮೊತ್ತವನ್ನು ಮತ್ತೆ ಹೆಚ್ಚುವರಿ ಆಗಿ ಮೂರು ತಿಂಗಳವರೆಗೆ ಅಂದರೆ ಜೂನ್‌ನಿಂದ ಹಿಡಿದು ಆಗಸ್ಟ್‌ವರೆಗೆ ಭರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ಹಿಂದೆ ಮಾರ್ಚ್‌ನಿಂದ ಮೇವರೆಗೆ ಭರಿಸುವುದಾಗಿ ಸರ್ಕಾರ ಘೋಷಿಸಿತ್ತು. ಈ ಘೋಷಣೆಯ ಒಟ್ಟು ಮೊತ್ತ 2,500 ಕೋಟಿ ರೂಪಾಯಿ. ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಣೆ ಆದ ಕೂಡಲೇ ಕೇಂದ್ರ ಸರ್ಕಾರ ಘೋಷಿಸಿದ್ದ ಈ ಇಪಿಎಫ್‌ ನೆರವಿಗೆ ಷರತ್ತೊಂದನ್ನು ವಿಧಿಸಿತ್ತು. ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ 100ಕ್ಕಿಂತ ಮೀರಿರಬಾರದು ಮತ್ತು ಇವರಲ್ಲಿ 90ರಷ್ಟು ಮಂದಿಯ ಸಂಬಳ ಮಾಸಿಕ 15 ಸಾವಿರ ರೂಪಾಯಿಗಿಂತ ಕಡಿಮೆ ಇರಬೇಕು. ಆಗ ಮಾತ್ರ ಸರ್ಕಾರದಿಂದ ಸೌಲಭ್ಯ ಸಿಗುತ್ತೆ, ಇಲ್ಲವಾದರೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಪಿಎಫ್‌ಗೆ ಸಂಬಂಧಿಸಿದಂತೆಯೂ ಮತ್ತೊಂದು ಘೋಷಣೆಯನ್ನು ಮಾಡಿದೆ ಪ್ರಧಾನಿ ಮೋದಿ ಸರ್ಕಾರ. ಪಿಎಫ್‌ ನಿಧಿಗಾಗಿ ಮಾಲೀಕರು ಮತ್ತು ನೌಕರರು ಮಾಸಿಕವಾಗಿ ಕೊಡಬೇಕಿದ್ದ ಸಂಬಳದ ಶೇಕಡಾ 12ರಷ್ಟು ಮೊತ್ತವನ್ನು ಶೇಕಡಾ 10ಕ್ಕೆ ಇಳಿಸಿದೆ. ಇಲ್ಲಿ ಕೇಂದ್ರ ಸರ್ಕಾರ 2 ಲೆಕ್ಕಾಚಾರಗಳನ್ನು ಹಾಕಿದೆ. ಒಂದು ಕಂಪನಿಗಳ ಮಾಲೀಕರ ಕೈಯಲ್ಲಿ ಹಣ ಉಳಿಕೆ ಹೆಚ್ಚಾಗಲಿದೆ ಎನ್ನುವುದು, ಮತ್ತೊಂದು ನೌಕರರಿಗೆ ತಿಂಗಳಿಗೆ ಕೈಗೆ ಸಿಗುವ ಸಂಬಳದ ಮೊತ್ತ ಹೆಚ್ಚಾಗಲಿದೆ ಎನ್ನುವುದು (ಶೇಕಡಾ 2ರಷ್ಟು ಪಿಎಫ್‌ ಇಳಿಕೆಯಿಂದ ಆ ಮೊತ್ತ ಸಂಬಳದಿಂದ ಕಡಿತಗೊಳ್ಳದೇ ಕೈಗೆ ಸಿಗುತ್ತದೆ).

ಮೂರು ತಿಂಗಳವರೆಗೆ ಪಿಎಫ್‌ ಕಾಣಿಕೆಯ ಇಳಿಕೆಯಿಂದಾಗಿ ಕೈಗೆ ಚಲಾವಣೆಗೆ 6,750 ಕೋಟಿ ರೂಪಾಯಿ ಸಿಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ಆದರೆ ಈ ಇಳಿಕೆಯ ಲಾಭ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಒಟ್ಟು 6 ತಿಂಗಳ ಇಪಿಎಫ್‌ ಲಾಭ ಪಡೆದಿರುವ ಕೈಗಾರಿಕೆಗಳಿಗೆ ಅನ್ವಯ ಆಗಲ್ಲ.

ವಿಚಿತ್ರ ಅಂದರೆ ಪಿಎಫ್‌ ಎನ್ನುವುದು ಅಪತ್ಕಾಲದ ನಿಧಿ ಇದ್ದ ಹಾಗೆ. ನೌಕರರು ತಮಗೆ ಅರಿವೇ ಇಲ್ಲದಂತೆ ಮಾಡುವ ಉಳಿತಾಯ. ಜೊತೆಗೆ ಮಾಲೀಕರು ತಮ್ಮ ನೌಕರನ ಸಾಮಾಜಿಕ ಭದ್ರತೆಗಾಗಿ ಕೊಡಬೇಕಿರುವ ಪಾಲು. ಹಣದ ಹರಿವಿನ ಹೆಚ್ಚಳಕ್ಕಾಗಿ ಈಗ ನೌಕರರ ಪಿಎಫ್‌ ಮೊತ್ತಕ್ಕೆ ಮಾಲೀಕರ ಕಡೆಯಿಂದಲೂ ಸರ್ಕಾರ ಕತ್ತರಿ ಹಾಕಿಸಿದ್ದು ನಿಜಕ್ಕೂ ವಿಚಿತ್ರ.

ಇನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹ ಹಣಕಾಸು ಸಂಸ್ಥೆಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳಿಗೆ ಸರ್ಕಾರ 30 ಸಾವಿರ ಕೋಟಿ ರೂಪಾಯಿ ದುಡ್ಡು ಹಾಕಲು ನಿರ್ಧರಿಸಿದೆ. ಆರ್‌ಬಿಐ ಮೂಲಕ ಈ ಕಾರ್ಯ ನಡೆಯಲಿದೆ. ಈ ಸಾಲಕ್ಕೆ ತಾನೇ ಗ್ಯಾರಂಟಿ ಕೊಡುವುದಾಗಿ ಸರ್ಕಾರ ಹೇಳಿಕೊಂಡಿದೆ. ಈ ದುಡ್ಡೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಿಗುವುದು ಸಾಲದ ರೂಪದಲ್ಲೇ.

ಇನ್ನು ಕಡಿಮೆ ರೇಟಿಂಗ್‌ ಹೊಂದಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳಿಗೆ 45 ಸಾವಿರ ಕೋಟಿ ರೂಪಾಯಿ ಸಾಲ ಗ್ಯಾರಂಟಿ ನೀಡಲಿದೆ ಕೇಂದ್ರ ಸರ್ಕಾರ. ಇದರಿಂದ ಸಾಲ ಕೊಡಲು ಹಣದ ಕೊರತೆ ಅನುಭವಿಸುತ್ತಿರುವ ಈ ಹಣಕಾಸು ಸಂಸ್ಥೆಗಳು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಇನ್ನಷ್ಟು ಸಾಲ ಕೊಡಲು ಸಮರ್ಥರಾಗಲಿವೆ ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ.

ಹೀಗೆ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಖಜಾನೆಯನ್ನು ಸರ್ಕಾರ ತುಂಬಿಸುವ ಉದ್ದೇಶ ಒಂದೇ. ಸಾಲ ಕೇಳಿದರೆ ಸಾಲ ಕೊಡುವಾಗ ಖಜಾನೆಯಲ್ಲಿ ಕಾಸಿರಲಿ ಎನ್ನುವುದು. ಸಾಲ ಕೊಡದೇ ಹೋದರೆ ಆ ಕಾಸು ಬ್ಯಾಂಕ್‌ಗಳ ಖಜಾನೆಯಲ್ಲೇ ಉಳಿಯಲಿದೆ.

ಇನ್ನು ಗುತ್ತಿಗೆದಾರರ ಸರದಿ. ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಅವಧಿಯನ್ನು 6 ತಿಂಗಳವರೆಗೆ ಸರ್ಕಾರ ವಿಸ್ತರಿಸಿದೆ. ಗುತ್ತಿಗೆದಾರರು ಟೆಂಡರ್‌ ಅವಧಿಯಲ್ಲಿ ಇಡುವ ಠೇವಣಿಯಲ್ಲಿ ಭಾಗಶಃ ಮೊತ್ತವನ್ನು ಡ್ರಾ ಮಾಡಿಕೊಳ್ಳಲು ಅನುಮತಿಯನ್ನು ನೀಡಿದೆ. ಇದರಿಂದ ಗುತ್ತಿಗೆದಾರರ ಕೈಗೆ ವ್ಯವಹಾರಕ್ಕೆ ಇನ್ನಷ್ಟು ದುಡ್ಡು ಸಿಗಲಿದೆ ಎನ್ನುವ ಲೆಕ್ಕಾಚಾರ.

ಅಸಂಘಟಿತ ವಲಯದಲ್ಲಿ ಅತೀ ಹೆಚ್ಚು ಉದ್ಯೋಗವನ್ನು ಸೃಷ್ಟಿಸುವ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಅಂಥದ್ದೇನೂ ಸಿಕ್ಕಿಲ್ಲ. ರಿಯಲ್‌ ಎಸ್ಟೇಟ್‌ ಯೋಜನೆಗಳ ನೋಂದಣಿ ಮತ್ತು ಕಾಮಗಾರಿ ಮುಗಿಸುವ ಅವಧಿಯನ್ನು 6 ತಿಂಗಳವರೆಗೆ ಮತ್ತು ಅಗತ್ಯಬಿದ್ದರೆ ಮತ್ತೆ ಮೂರು ತಿಂಗಳು ಒಟ್ಟು 9 ತಿಂಗಳವರೆ ವಿಸ್ತರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಈಗಾಗಲೇ ಸಂಕಷ್ಟದಲ್ಲಿರುವ ರಿಯಲ್‌ ಎಸ್ಟೇಟ್‌ ವಲಯಕ್ಕೆ ಇದರಿಂದ ದೊಡ್ಡ ಪ್ರಮಾಣದ ರಿಲೀಫ್‌ ಸಿಗುವುದು ಅನುಮಾನ. ಇದರ ಜೊತೆಗೆ ಈಗಾಗಲೇ ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ ಖರೀದಿಗಾಗಿ ಸಾಲ ಪಡೆದು ಮುಂಗಡ ಬುಕ್ಕಿಂಗ್‌ ಮಾಡಿರುವ ಗ್ರಾಹಕರು ಇನ್ನೂ 1 ವರ್ಷದ ಮಟ್ಟಿಗೆ ಬಾಡಿಗೆ ಮನೆಯಲ್ಲಿ ಕಾಲ ಕಳೆಯಬೇಕಾಗಹುದು. ಅಂದರೆ ಆ ಗ್ರಾಹಕರು ಪ್ರಾಜೆಕ್ಟ್‌ ಮುಗಿದು ಕೈಗೆ ಸಿಗುವವರೆಗೂ ಬಾಡಿಗೆ ಕಟ್ಟುತ್ತಲೇ ಇರಬೇಕಾಗುತ್ತದೆ. ಲಾಕ್‌ಡೌನ್‌ ಸ್ಥಿತಿಯಲ್ಲಿ ಒಂದು ಸಲ ಅಪಾರ್ಟ್‌ಮೆಂಟ್ ಕಾಮಗಾರಿ‌ ಮುಗಿದು ಗೃಹ ಪ್ರವೇಶ ಮಾಡಿದರೆ ಬಾಡಿಗೆ ದುಡ್ಡನ್ನು ಉಳಿಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿ ಕೂತವರಿಗೆ ಕೇಂದ್ರ ಸರ್ಕಾರದ ಈ ನಿರ್ಧಾರ ನಿಜಕ್ಕೂ ಆಘಾತಕಾರಿಯೇ.

2ರ ಪಕ್ಕದಲ್ಲಿ 13 ಸೊನ್ನೆಗಳಿರುವ 20 ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್‌ ಮಾಧ್ಯಮಗಳ ಮುಖ್ಯಾಂಶವೇ ಸರಿ. ಈ 20 ಲಕ್ಷ ಕೋಟಿಯ ಹಂಚಿಕೆ ಇನ್ನೂ ಕೆಲವು ದಿನ ಸಾಗುವ ಕಾರಣ ಇನ್ನಷ್ಟು ದಿನ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಲಿದೆ. ಬೆಳಗ್ಗೆ ಪತ್ರಿಕೆಗಳ ಮುಖಪುಟದಲ್ಲಿ ಇನ್ನಷ್ಟು ದಿನ ದಪ್ಪ ಅಕ್ಷರಗಳಲ್ಲಿ ರಾರಾಜಿಸುವುದು ಖಚಿತ. ಜನಕ್ಕೂ ಕುತೂಹಲ. ಸರ್ಕಾರಕ್ಕೂ 20 ಲಕ್ಷ ಕೋಟಿಯ ಖರ್ಚಿಲ್ಲದ ಪ್ರಚಾರ.

ಆದರೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ವಲಯ ಕೇಂದ್ರ ಸರ್ಕಾರದ ನಿರ್ಧಾರದಿಂದ ಅಸಂತುಷ್ಟಗೊಂಡಿದೆ. ನಿರೀಕ್ಷಿಸಿದ್ದು, ಬಯಸಿದ್ದೇ ಬೇರೆ, ಆದರೆ ಸಿಕ್ಕಿದ್ದೇ ಬೇರೆ ಎನ್ನುವ ಸಿಟ್ಟು ವ್ಯಕ್ತವಾಗಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘಟನೆಗಳಂತೂ ಇವತ್ತಿನ ವಿಶೇಷ ಪ್ಯಾಕೇಜ್‌ ಮೊದಲ ಕಂತನ್ನು ಗಿಮಿಕ್‌ ಎಂದು ಕರೆದಿವೆ.

ನಮಗೆ ಬೇಕಿರುವುದು ಆಮ್ಲಜನಕ ಮತ್ತು ತತ್‌ಕ್ಷಣದ ವೆಂಟಿಲೇಟರ್‌. ಬಹುತೇಕ ಎಂಎಸ್‌ಎಂಇಗಳಿಗೆ ವೆಂಟಿಲೇಟರ್‌ ಬೇಕಿದೆ. ಎಂಎಸ್‌ಎಂಇಗಳಿಗೆ ಅನುಕೂಲ ಮಾಡದೇ ಇದ್ದರೆ ಮತ್ತು ತತ್‌ಕ್ಷಣವೇ ಬೆಂಬಲ ನೀಡದೇ ಹೋದರೆ ಮೂರ್ನಾಲ್ಕು ತಿಂಗಳು ಅವು ಉಳಿಯಲು ಸಾಧ್ಯವಿಲ್ಲ

ಎಂದು ಒಕ್ಕೂಟದ ಅಧ್ಯಕ್ಷ  ಅನಿಮೇಶ್‌ ಸಕ್ಸೇನಾ ಹೇಳಿದ್ದಾರೆ.

ನಮಗೆ ನಿಜಕ್ಕೂ ನಿರಾಶೆ ಆಗಿದೆ. ಕೊನೆಯಲ್ಲಿ (ನಿರ್ಮಲಾ ಸೀತಾರಾಮನ್‌ ಸುದ್ದಿಗೋಷ್ಠಿಯಲ್ಲಿ) ನಮಗೆ ಕಂಡಿದ್ದು ಗ್ಯಾರಂಟಿ ಇಲ್ಲದ ಸಾಲವಷ್ಟೇ. ಉಳಿದದಕ್ಕೆಲ್ಲ (ಘೋಷಣೆಗಳಿಗೆ) ಅರ್ಥವೇ ಇಲ್ಲ. ಇಂತಹ ಸಂಕಷ್ಟದಲ್ಲಿ ಮತ್ತು ಬ್ಯುಸಿನೆಸ್‌ ಇಲ್ಲದ ಹೊತ್ತಲ್ಲಿ ನಾವು  ಸರ್ಕಾರದಿಂದ ನೇರವಾಗಿ ನೆರವನ್ನು ಬಯಿಸಿದ್ವಿ.

ಪಿಎಫ್‌ ಬಗ್ಗೆ ಕೇಂದ್ರ ಸರ್ಕಾರದ ಘೋಷಣೆಯಿಂದ ಕೇವಲ 100 ನೌಕರರನ್ನು ಹೊಂದಿರುವ ಮತ್ತು 15 ಸಾವಿರ ರೂಪಾಯಿಗಿಂತ ಕಡಿಮೆ ಸಂಬಳ ಪಡೆಯುವ ಶೇಕಡಾ 90ರಷ್ಟು ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕೆಗಳಿಗಷ್ಟೇ ಅನುಕೂಲವಾಗಲಿದೆ

ಎಂದು ಸಕ್ಸೇನಾ ಹೇಳಿದ್ದಾರೆ.

ಕೇವಲ ಆರ್ಥಿಕವಾಗಿ ಸದೃಢವಾಗಿರುವ ಎಂಎಸ್‌ಎಂಇಗಳು ಮಾತ್ರ ಗ್ಯಾರಂಟಿ ಇಲ್ಲದ ಸಾಲ ಪಡೆದು ಬಚಾವ್‌ ಆಗಲಿವೆ. ಸಂಕಷ್ಟದಲ್ಲಿರುವ ಎಂಎಸ್‌ಎಂಇಗಳು ಮುಚ್ಚಿಹೋಗಲಿವೆ

ಎಂದು ಎಸ್‌ಎಂಇ ಚೇಂಬರ್‌ ಆಫ್‌ ಇಂಡಿಯಾದ ಅಧ್ಯಕ್ಷ ಚಂದ್ರಕಾಂತ್‌ ಸಲೂಕ್ಖೆ ಹೇಳಿದ್ದಾರೆ.

ಮಾರ್ಚ್‌ 25ರಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಬಳಿಕ ಮುಚ್ಚಿಹೋಗಿದ್ದ ಕೈಗಾರಿಕೆಗಳು ತಮ್ಮ ಉದ್ಯೋಗಿಗಳಿಗೆ ಸಂಬಳ ಕೊಡುವುದಕ್ಕೂ ಒದ್ದಾಡುತ್ತಿವೆ. ಅವರಿಗೆ ಮತ್ತೆ ಸಾಲ ಬೇಕಿಲ್ಲ. ಮತ್ತೆ ಸಾಲ ಮಾಡಿ ಕಂಪನಿಗಳನ್ನು ನಡೆಸುವ ಸ್ಥಿತಿಯಲ್ಲಿ ಬಹುತೇಕ ಮಾಲೀಕರೂ ಇಲ್ಲ.

ಅವರೆಲ್ಲ ಬಯಸಿದ್ದು ತಮ್ಮ ನೌಕರರಿಗೆ ಸಂಬಳ ಕೊಡಲು ನೇರ ಆರ್ಥಿಕ ನೆರವು. ಮೂರು ತಿಂಗಳಿಂದ ಬೀಗ ಹಾಕಿರುವ ಕಾರಣ ವ್ಯವಹಾರ ಬಂದ್‌ ಆಗಿದ್ದು ಶೇಕಡಾ 70ರಷ್ಟು ಮಂದಿ ಉದ್ಯೋಗಿಗಳಿಗೆ ಸಂಬಳ ಕೊಡುವ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಳ್ಳಬೇಕಿತ್ತು ಎನ್ನುವುದು ಅವರ ಬೇಡಿಕೆ.

ಸಾಲ ವಿನಾಯ್ತಿಯ ಜೊತೆಗೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ ಎನ್ನುವುದು ಬೇಡಿಕೆ. ಯಾಕೆಂದರೆ ಬಡ್ಡಿ ಮನ್ನಾ ಮಾಡದೇ ಹೋದರೆ ಸಾಲ ಕಟ್ಟುವ ಮುಂದೂಡಿಕೆ ವಿನಾಯ್ತಿಯ ಲಾಭಕ್ಕೆ ಅರ್ಥವೇ ಇರಲ್ಲ ಎನ್ನುವುದು.

ಆದರೆ ಬಡ್ಡಿ ಮನ್ನಾವನ್ನೂ ನೀಡದೇ, ಹೊರೆಯನ್ನೂ ಇಳಿಸದೇ ಹೊಸದಾಗಿ ಸಾಲ ಪಡೆದು ಮತ್ತೆ ಕೈಗಾರಿಕೆಗಳನ್ನು ಆರಂಭಿಸಿ ಎನ್ನುತ್ತಿದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಆತ್ಮನಿರ್ಭರ ಅಂದರೆ ಸ್ವಯಂ ಅವಲಂಬಿತ ಅರ್ಥ ಕೇವಲ ಸಾಲ ಕೊಡುವುದಷ್ಟೇನಾ..?

LEAVE A REPLY

Please enter your comment!
Please enter your name here