ಪೌರತ್ವ ತಿದ್ದುಪಡಿ ಕಾಯಿದೆಯಿಂದ ಯಾರ ಪೌರತ್ವವನ್ನು ಕಸಿದುಕೊಳ್ಳಲ್ಲ, ಬದಲಿಗೆ ಇದು ಪೌರತ್ವವನ್ನು ನೀಡುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತ ದಲ್ಲಿರುವ ಬೇಲೂರು ಮಠದಲ್ಲಿ ಆಡಿದ ಮಾತು.
ರಾಮಕೃಷ್ಣ ಆಶ್ರಮದ ಮುಖ್ಯ ಕಚೇರಿ ಇರುವ ಬೇಲೂರು ಮಠದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಿಮಗೆ ಅರ್ಥವಾಗುವಂಥದ್ದು ವಿರೋಧ ಪಕ್ಷಗಳಿಗೆ ಅರ್ಥವಾಗುತ್ತಿಲ್ಲ. ಸಾಕಷ್ಟು ಸ್ಪಷ್ಟನೆಯ ಹೊರತಾಗಿಯೂ ಪಟ್ಟಭದ್ರ ಹಿತಾಸಕ್ತಿಗಳು ಜನರ ದಿಕ್ಕು ತಪ್ಪಿಸುತ್ತಿವೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ದೌರ್ಜನ್ಯ ಜಗತ್ತಿಗೆ ಗೊತ್ತಿದೆ. ಅಲ್ಪಸಂಖ್ಯಾತರ ಮೇಲೆ 70 ವರ್ಷಗಳಿಂದ ಪಾಕಿಸ್ತಾನ ಯಾಕೆ ದೌರ್ಜನ್ಯ ಎಸಗುತ್ತಿದೆ ಎಂಬುವುದಕ್ಕೆ ಅದು ಉತ್ತರಿಸಬೇಕಿದೆ ಎಂದು ಪ್ರಧಾನಿ ಹೇಳಿದರು.
ಈಶಾನ್ಯ ರಾಜ್ಯಗಳ ಸಂಸ್ಕೃತಿ ಅಲ್ಲಿನ ಜನರ ಬಗ್ಗೆ ನನಗೆ ಹೆಮ್ಮೆ ಇದೆ. ಪೌರತ್ವ ಕಾಯ್ದೆಯಿಂದ ಈಶಾನ್ಯ ಭಾರತದ ಜನರ ಹಿತಾಸಕ್ತಿಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಇವತ್ತು ಸ್ವಾಮಿ ವಿವೇಕಾನಂದ ಅವರ ಜಯಂತಿ. ಈ ಹಿನ್ನಲೆಯಲ್ಲಿ ಬೇಲೂರು ಮಠಕ್ಕೆ ತೆರಳಿ ಪ್ರಧಾನಿ ಪೂಜೆ ಸಲ್ಲಿಸಿದರು. ಬೇಲೂರು ಮಠ ಪುಣ್ಯಕ್ಷೇತ್ರ ಆದರೆ ನನಗೆ ಮನೆಗೆ ಬಂದಂತೆ ಭಾಸವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.