ನಿತ್ಯೋತ್ಸವ ಕವಿ ಕೆಎಸ್ ನಿಸಾರ್ ಅಹ್ಮದ್ ಇನ್ನಿಲ್ಲ

ಕನ್ನಡ ಸಾರಸ್ವತ ಲೋಕದ ಮತ್ತೊಂದು ಕಳಚಿದೆ. ಕನ್ನಡದ ಸಾಕ್ಷಿ ಪ್ರಜ್ಞೆಯಂತಿದ್ದ ಹಿರಿಯ ಸಾಹಿತಿ ನಿತ್ಯೋತ್ಸವ ಕವಿ ಪ್ರೊ.ಕೆ ಎಸ್ ನಿಸಾರ್ ಅಹ್ಮದ್ ಇನ್ನಿಲ್ಲ.

84 ವರ್ಷದ ನಿಸಾರ್ ಅಹ್ಮದ್ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ನಿಸಾರ್ ಅಹ್ಮದ್ ಅವರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

ಪ್ರೊ. ನಿಸಾರ್ ಅಹ್ಮದ್ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್‍ಡಿ ಕುಮಾರಸ್ವಾಮಿ ಸೇರಿ ಹಲವರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

ಕೆಎಸ್ ನಿಸಾರ್ ಅಹ್ಮದ್ ಅವರು ನವ್ಯ ಕಾವ್ಯ ಪರಂಪರೆಯಲ್ಲಿ ತಮ್ನನ್ನು ಗುರುತಿಸಿಕೊಂಡಿದ್ದರು. 1974ರಲ್ಲಿ ಪ್ರಕಟವಾದ ನಿತ್ಯೋತ್ಸವ ಕವನ ಸಂಕಲನ ನಿಸಾರ್ ಅಹ್ಮದ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ನಿಸಾರ್ ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, ಐದು ಮಕ್ಕಳ ಸಾಹಿತ್ಯ ಕೃತಿಗಳು, ಐದು ಅನುವಾದ ಕೃತಿಗಳು, ಮತ್ತು 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದ ಅವರು ತಮ್ಮ ನಿತ್ಯೋತ್ಸವ ಮತ್ತು ಬೆಣ್ಣೆ ಕದ್ದ ನಮ್ಮ ಕೃಷ್ಣ ಕವಿತೆಗಳಿಂದ ಜಗತ್ತಿನಾದ್ಯಂತ ಇರುವ ಎಲ್ಲ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದರು.

ಹೀಗೆ ನಿಸಾರ್ ಅಹ್ಮದ್ ಅವರ ಅದೆಷ್ಟೋ ಕವನಗಳು ಭಾವಗೀತೆಗಳ ರೂಪದಲ್ಲಿ ನಾಡಿನಲ್ಲಿ ಮನೆ ಮಾತಾಗಿವೆ.

LEAVE A REPLY

Please enter your comment!
Please enter your name here