ನಿತ್ಯಾನಂದನ ವಿರುದ್ಧ ನೀಲಿ ನೋಟಿಸ್‌ – ನೀಲಿ ನೋಟಿಸ್‌ ಯಾಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದಿಂದ ಓಡಿಹೋಗಿರುವ ಬಿಡದಿ ಸ್ವಾಮೀಜಿ ನಿತ್ಯಾನಂದನ ಪತ್ತೆಗಾಗಿ ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ. ನಿತ್ಯಾನಂದನನ್ನು ಹುಡುಕಿಕೊಡಲು ಸಹಕರಿಸುವಂತೆ ಇಂಟರ್‌ಪೋಲಿಸ್‌ ತನ್ನ ಸದಸ್ಯರ ರಾಷ್ಟ್ರಗಳಲ್ಲಿ ಮನವಿ ಮಾಡಿದೆ. ಗುಜರಾತ್‌ ಪೊಲೀಸರ ಮನವಿ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ.

ಗುಜರಾತ್‌ನಲ್ಲಿರುವ ನಿತ್ಯಾನಂದನ ಆಶ್ರಮದಲ್ಲಿದ್ದ ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಅಕ್ರಮದ ಆರೋಪಗಳು ಕೇಳಿಬಂದಿತ್ತು. ಕಳೆದ ವರ್ಷವೇ ದೇಶದ ಬಿಟ್ಟು ಓಡಿಹೋಗಿದ್ದ ನಿತ್ಯಾನಂದ ಅಜ್ಞಾತ ಸ್ಥಳಗಳಿಂದ ವೀಡಿಯೋಗಳನ್ನು ಮಾಡಿ ಯೂಟ್ಯೂಬ್‌ ಮತ್ತು ತನ್ನ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಿಗೆ ಅಪ್‌ಲೋಡ್‌ ಮಾಡುತ್ತಿದ್ದಾರೆ.

ಈತ ಕೆರೆಬಿಯನ್‌ ರಾಷ್ಟ್ರವಾಗಿರುವ ಈಕ್ವೇಡಾರ್‌ನಲ್ಲಿದ್ದಾನೆ ಎಂಬ ಮಾಹಿತಿಯೂ ಬಂದಿತ್ತು. ಆದರೆ ಭಾರತದಲ್ಲಿರುವ ಈಕ್ವೇಡಾರ್‌ ರಾಷ್ಟ್ರದ ರಾಯಭಾರಿ ಆ ಸುದ್ದಿಯನ್ನು ನಿರಾಕರಿಸಿದ್ದರು. ಜೊತೆಗೆ ಈಕ್ವೇಡಾರ್‌ನಲ್ಲಿ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ರಾಷ್ಟ್ರ ಎಂದು ಹೆಸರು ಇಟ್ಟಿದ್ದನ್ನೂ ತಳ್ಳಿಹಾಕಿತ್ತು. ಆತ ಆಫ್ರಿಕಾದ ಹೈಟಿಗೆ ಓಡಿಹೋಗಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸಿತ್ತು.

ರಾಮನಗರದಲ್ಲೂ ನಿತ್ಯಾನಂದನ ವಿರುದ್ಧ ಹಲವು ಪ್ರಕರಣಗಳಿದ್ದು, ಆತನ ಕೋರ್ಟ್‌ ಸಮನ್ಸ್‌ ಕೊಟ್ಟರೂ ವಿಚಾರಣೆಗೆ ಹಾಜರಾಗಿಲ್ಲ.

ಏನಿದು ಕಾರ್ನರ್‌ ನೋಟಿಸ್‌..?

ಇಂಟರ್‌ಪೋಲ್‌ ತನ್ನ ಸದಸ್ಯ ರಾಷ್ಟ್ರಗಳಿಗೆ ಬೇಕಾಗಿರುವ ಕ್ರಿಮಿನಲ್‌ಗಳ ಪತ್ತೆಗಾಗಿ ಹೊರಡಿಸುವ ನೋಟಿಸ್‌ಗಳಿವೆ. ಇವುಗಳಲ್ಲಿ ರೆಡ್‌ಕಾರ್ನರ್‌, ಬ್ಲೂ ಕಾರ್ನರ್‌, ಯೆಲ್ಲೋ ಕಾರ್ನರ್‌, ಬ್ಲ್ಯಾಕ್‌ ನೋಟಿಸ್‌, ಹಸಿರು ನೋಟಿಸ್‌, ಗುಲಾಬಿ ನೋಟಿಸ್‌, ನೇರಳೆ ನೋಟಿಸ್‌ ಎಂಬ ವಿಧಗಳಿವೆ.

ರೆಡ್‌ಕಾರ್ನರ್‌ ನೋಟಿಸ್‌:

ಯಾರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಆಗಿದೆಯೋ ಅವರು ಸಿಕ್ಕಿಬಿದ್ದಲ್ಲಿ ಅವರನ್ನು ಬಂಧಿಸಿ ಅಗತ್ಯ ರಾಷ್ಟ್ರಕ್ಕೆ ಗಡೀಪಾರು ಮಾಡುವುದು.

ಯೆಲ್ಲೋ ನೋಟಿಸ್‌:

ನಾಪತ್ತೆಯಾದವರ ಅದರಲ್ಲೂ ವಿಶೇಷವಾಗಿ ಅಪ್ರಾಪ್ತರು ತಮ್ಮ ಬಗ್ಗೆ ವಿವರ ಕೊಡಲು ಸಾಧ್ಯವಾಗದವರ ಪತ್ತೆ ಕೋರಿ ನೀಡುವ ನೋಟಿಸ್‌. ಈ ನೋಟಿಸ್‌ನಲ್ಲಿ ಅಗತ್ಯ ವ್ಯಕ್ತಿಯ ದೇಹದ ಚಹರೆಗಳನ್ನೂ ಕೊಟ್ಟು ಅಂಥವರನ್ನು ಪತ್ತೆ ಹಚ್ಚುವಂತೆ ಮನವಿ ಮಾಡಲಾಗುತ್ತದೆ.

ಬ್ಲ್ಯಾಕ್‌ ನೋಟಿಸ್‌:

ಗುರುತಿಸಲಾಗದ ಮೃತದೇಹಗಳ ಬಗ್ಗೆ ಮಾಹಿತಿಯನ್ನು ಕೋರಿ ನೀಡಲಾಗುವ ನೋಟಿಸ್‌. ಪ್ರತಿ ವರ್ಷವೂ ಇಂತಹ ೧೫೦ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗುತ್ತದೆ.

ಗ್ರೀನ್‌ ನೋಟಿಸ್‌:

ಗಂಭೀರ ಅಪರಾಧಗಳನ್ನು ಎಸಗಿರುವವರು ಇತರೆ ದೇಶಗಳಲ್ಲೂ ಮತ್ತೆ ಇಂತಹ ಅಪರಾಧಗಳನ್ನು ಮಾಡಬಹುದು ಎಂದು ಎಚ್ಚರಿಸಿ ನೀಡಲಾಗುವ ಗುಪ್ತಚರ ನೋಟಿಸ್‌. ಲೈಂಗಿಕ ಅಪರಾಧಿಗಳ ಬಗ್ಗೆ ಬಹುತೇಕ ಇಂತಹ ನೋಟಿಸ್‌ನ್ನು ನೀಡಲಾಗುತ್ತದೆ.

ಆರೆಂಜ್‌ ನೋಟಿಸ್‌:

ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿ ಆಗಿರುವ ಘಟನೆ, ವ್ಯಕ್ತಿ ಅಥವಾ ವಸ್ತುವಿನ ಬಗ್ಗೆ ನೀಡಲಾಗುವ ನೋಟಿಸ್‌. ಇತ್ತೀಚೆಗೆ ಫ್ರೆಂಚ್‌ ಅಧಿಕಾರಿಗಳ ಮನವಿ ಮೇರೆಗೆ ಮಿರಾಕಲ್‌ ಡಯಟ್‌ ಮಾತ್ರೆ ವಿರುದ್ಧ ಆರೆಂಜ್‌ ನೋಟಿಸ್‌ ನೀಡಲಾಗಿತ್ತು.

ನೇರಳೆ ನೋಟಿಸ್‌:

ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಮಿನಲ್‌ಗಳು ತಮ್ಮ ಕೃತ್ಯಕ್ಕಾಗಿ ಅನುಸರಿಸುವ ಸಂಚಿನ ಸ್ವರೂಪದ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಸಲ್ಲಿಸಲಾಗುವ ನೋಟಿಸ್‌.

LEAVE A REPLY

Please enter your comment!
Please enter your name here