ನಾಳೆಯಿಂದ ಕರ್ನಾಟಕದಲ್ಲಿ ಏನಿರುತ್ತೆ..? – ಮೂರು ಝೋನ್‌ಗಳ ಕಂಪ್ಲೀಟ್‌ ವರದಿ ಒಂದೇ ಕ್ಲಿಕ್‌ನಲ್ಲಿ

ಇವತ್ತು ಮಧ್ಯರಾತ್ರಿ ೧೨ ಗಂಟೆಗೆ ಎರಡನೇ ಹಂತದ ಲಾಕ್‌ಡೌನ್‌ ಕೊನೆ ಆಗಿ ಮೂರನೇ ಹಂತದ ಲಾಕ್‌ಡೌನ್‌ ಶುರುವಾಗಲಿದೆ. ಸೋಮವಾರದಿಂದ ರೆಡ್‌ಝೋನ್‌, ಆರೆಂಜ್‌ಝೋನ್‌ ಮತ್ತು ಗ್ರೀನ್‌ಝೋನ್‌ ಜಿಲ್ಲೆಗಳಲ್ಲಿ ಬಹುತೇಕ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ೪೧ ದಿನಗಳ ಬಿಗಿ ಲಾಕ್‌ಡೌನ್‌ ಬಳಿಕ ಕರ್ನಾಟಕ ಬಹುತೇಕ ಸಹಜ ಸ್ಥಿತಿಗೆ ಬರಲಿದೆ.

ರಾಜ್ಯದ ೩೦ ಜಿಲ್ಲೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರಷ್ಟೇ ರೆಡ್‌ಝೋನ್‌ನಲ್ಲಿದೆ. ಕರ್ನಾಟಕದ ಹದಿನಾಲ್ಕು ಜಿಲ್ಲೆಗಳು ಆರೆಂಜ್‌ಝೋನ್‌ನಲ್ಲೂ ೧೩ ಜಿಲ್ಲೆಗಳು ಗ್ರೀನ್‌ಝೋನ್‌ನಲ್ಲೂ ಇವೆ.

ಇಡೀ ಕರ್ನಾಟಕದಲ್ಲಿ ಅಂದರೆ ಎಲ್ಲಾ ಮೂರು ಝೋನ್‌ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ ೯ ಗಂಟೆಯಿಂದ ಸಂಜೆ ೭ ಗಂಟೆವರೆಗೆ ಮದ್ಯ ಮಾರಾಟ ಮಾಡಬಹುದು. ಕೇವಲ ಕೊರೋನಾ ಕೇಸ್‌ ಇರುವ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಮಾತ್ರ ಮದ್ಯ ಮಾರಾಟ ಇರಲ್ಲ. (ಕಂಟೈನ್‌ಮೆಂಟ್‌ ಝೋನ್‌ ಎಂದರೆ ಕೊರೋನಾ ರೋಗಿಯ ವಾಸದ ೧೦೦ ಮೀಟರ್‌ ಸುತ್ತದ ಏರಿಯಾ)

ಆದರೆ ಕೆಲವು ಜಿಲ್ಲೆಗಳು ಮದ್ಯ ಮಾರಾಟಕ್ಕೆ ತಮ್ಮದೇ ಸಮಯವನ್ನು ನಿಗದಿಪಡಿಸಿವೆ. ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಮಾತ್ರ, ಹಾಸನ ಜಿಲ್ಲೆಯಲ್ಲಿ ವಾರದ ಮೂರು ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಬೆಂಗಳೂರಲ್ಲಿ ಸಂಜೆ ೬ ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ನಾಳೆಯಿಂದ ಇಡೀ ಕರ್ನಾಟಕದಲ್ಲಿ ಸಂಜೆ ಏಳು ಗಂಟೆಯಿಂದ ಮರು ದಿನ ಬೆಳಗ್ಗೆ ೭ ಗಂಟೆವರೆಗೆ ಯಾರೂ ಕೂಡಾ ಅನಗತ್ಯವಾಗಿ ಓಡಾಟ ಮಾಡುವಂತಿಲ್ಲ. ಹೀಗಾಗಿ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಸಂಜೆ ಆರು ಗಂಟೆ ವೇಳೆಗೆ ಮುಗಿಸಿಕೊಂಡು ಮನೆ ಸೇರಿಕೊಳ್ಳುವುದು ಒಳ್ಳೆಯದು.

ರೆಡ್‌, ಆರೆಂಜ್‌ ಮತ್ತು ಗ್ರೀನ್‌ಝೋನ್‌ಗಳಲ್ಲಿ ಇವೆಲ್ಲದ್ದಕ್ಕೂ ಅವಕಾಶ:

೧) ಅನುಮತಿ ನೀಡಲಾದ ಚಟುವಟಿಕೆಗೆ ಕಾರು ಮತ್ತು ಬೈಕ್‌ನಲ್ಲಿ ಪ್ರಯಾಣಿಸಲು ಅವಕಾಶ. ಕಾರಲ್ಲಿ ಡ್ರೈವರ್‌ ಜೊತೆಗೆ ಇಬ್ಬರು ಹಾಗೂ ಬೈಕ್‌ನಲ್ಲಿ ಒಬ್ಬರಷ್ಟೇ ಓಡಾಡಬೇಕು.

೨) ರೆಡ್‌ಝೋನ್‌ನ ನಗರಪ್ರದೇಶಗಳಲ್ಲಿ ಯಾವುದಕ್ಕೆಲ್ಲ ಅವಕಾಶ:

ವಿಶೇಷ ಆರ್ಥಿಕ ವಲಯ, ಇಂಡಸ್ಟ್ರೀಯಲ್‌ ಎಸ್ಟೇಟ್‌, ಇಂಡಸ್ಟ್ರೀಯಲ್‌ ಟೌನ್‌, ಇಂಡಸ್ಟ್ರೀಯಲ್‌ ಟೌನ್‌ಶಿಪ್‌ಗಳಲ್ಲಿ ಬರುವ ಕೈಗಾರಿಕೆಗಳು, ಉತ್ಪಾದಕ ಘಟಕಗಳು, ಕಚ್ಚಾ ವಸ್ತು ಉತ್ಪಾದಕ ಘಟಕಗಳು, ಐಟಿ ಮತ್ತು ಹಾರ್ಡ್‌ವೇರ್‌ ಹೀಗೆ ಎಲ್ಲ ಕೈಗಾರಿಕೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ ಕೊರೋನಾ ಕೇಸ್‌ ಇರುವ ಕಂಟೈನ್‌ಮೆಂಟ್‌ಝೋನ್‌ನಲ್ಲಿ ಮಾತ್ರ ಆರಂಭಿಸುವಂತಿಲ್ಲ.

೩) ನಗರ ಮತ್ತು ಗ್ರಾಮೀಣ ಭಾಗದಲ್ಲೂ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು (ಕಟ್ಟಡ, ರಸ್ತೆ, ನೀರಾವರಿ ಒಳಗೊಂಡು) – ಈ ಹಿನ್ನೆಲೆಯಲ್ಲಿ ಸಿಮೆಂಟ್‌ ಅಂಗಡಿ, ಕ್ರಷರ್‌, ಜಲ್ಲಿ, ಹಾರ್ಡ್‌ವೇರ್‌ ಅಂಗಡಿಗಳು, ಮರಳುಗಾರಿಕೆ, ಕಬ್ಬಿಣದಂಗಡಿ, ಎಲೆಕ್ಟ್ರಿಕಲ್‌ ಶಾಪ್‌, ಟೈಲ್ಸ್‌ ಮತ್ತು ಸ್ಯಾನಿಟರಿ ಅಂಗಡಿಗಳನ್ನು ತೆರೆಯಬಹುದು.

೪) ಗ್ರಾಮೀಣ ಭಾಗದಲ್ಲಿರುವ ಎಲ್ಲಾ ರೀತಿಯ ಕೈಗಾರಿಕೆಗಳು

೬) ಅಗತ್ಯ ಮತ್ತು ಅವಶ್ಯಕವಲ್ಲದ ಅಂಗಡಿಗಳನ್ನು ತೆರೆಯಬಹುದಾಗಿದೆ.

೭) ಗ್ರಾಮೀಣ ಭಾಗದಲ್ಲಿ ಮಾಲ್‌ಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಬಹುದಾಗಿದೆ.

೮) ಇ-ಕಾರ್ಮಸ್‌ಗಳಿಗೆ (ಅಮೆಜಾನ್‌, ಫ್ಲಿಪ್‌ಕಾರ್ಟ್‌ ಇತ್ಯಾದಿ) ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಆರೆಂಜ್‌ಝೋನ್‌ ಮತ್ತು ಗ್ರೀನ್‌ಝೋನ್‌ ಅವಶ್ಯಕವಲ್ಲದ ಇ-ಕಾರ್ಮಸ್‌ ಸೇವೆಗಳಿಗೆ ಅನುಮತಿ ನೀಡಲಾಗಿದೆ.

೯) ಖಾಸಗಿ ಕಚೇರಿಗಳಿಗೆ ಗರಿಷ್ಠ ಶೇಕಡಾ ೩೩ರಷ್ಟು ನೌಕರರೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು.

೧೦) ಉಳಿದಂತೆ ಎಲ್ಲಾ ರೀತಿಯ ಸೇವೆಗಳು – ಕೃಷಿ, ಸರ್ಕಾರಿ ಕಚೇರಿಗಳು (ಶೇಕಡಾ ೩೩ರಷ್ಟು ನೌಕರರು ಮಾತ್ರ), ಬ್ಯಾಂಕ್‌, ಅಂಚೆ ಕಚೇರಿ, ಜಲ ಮಂಡಳಿ, ಎಸ್ಕಾಂಗಳು, ಕೋರಿಯರ್‌ ಸೇವೆ, ಕೇಬಲ್‌, ಇಂಟರ್‌ನೆಟ್‌, ಎಪಿಎಂಸಿ, ಮಾಂಸ ಮಾರಾಟ, ಮೀನುಗಾರಿಕೆ, ಹೈನುಗಾರಿಕೆ, ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರುವ ಅಂಗಡಿಗಳು

೧೧) ಅಗತ್ಯ ಸೇವೆ ವಾಹನಗಳ ಓಡಾಟ (ಈ ಹಿಂದಿನ ನಿಯಮವೇ ಮುಂದುವರಿಯುತ್ತೆ – ನಿರ್ಬಂಧ ಇಲ್ಲ)

೧೨) ಮದ್ಯ ಮಾರಾಟವೂ ಇರಲಿದೆ.

೧೩) ರೆಡ್‌ಝೋನ್‌ನಲ್ಲಿ ಸಲೂನ್‌, ಜ್ಯುವೆಲ್ಲರಿ ಅಂಗಡಿ, ಸ್ಪಾ, ಬ್ಯೂಟಿ ಪಾರ್ಲರ್‌ ಬಂದ್

೧೪) ರೆಡ್‌ಝೋನ್‌ನಲ್ಲಿ ಓಲ್‌, ಊಬರ್‌ ಸೇವೆ ಇರಲ್ಲ

೧೫) ರೆಡ್‌ಝೋನ್‌ನಲ್ಲಿ ಆಟೋ ರಿಕ್ಷಾ ಓಡಾಡಲ್ಲ‌

೧೬) ಆಟೋ ಮೆಕ್ಯಾನಿಕ್‌, ಪ್ಲಂಬರ್‌, ರಿಪೇರಿ ಅಂಗಡಿಗಳು ಹೀಗೆ ಸ್ವಯಂ ಉದ್ಯೋಗದ ಸೇವೆಗಳಿಗೆ ಅನುಮತಿ ನೀಡಲಾಗಿದೆ.

ಆರೆಂಜ್‌ಝೋನ್‌ ಮತ್ತು ಗ್ರೀನ್‌ಝೋಲ್‌ ಜಿಲ್ಲೆಗಳಲ್ಲಿ ಏನಿರುತ್ತೆ..?

ರೆಡ್‌ಝೋನ್‌ ಜಿಲ್ಲೆಗಳಲ್ಲಿ ಯಾವುದಕ್ಕೆಲ್ಲ ಅನುಮತಿ ನೀಡಲಾಗಿದ್ಯೋ ಅದೆಲ್ಲವೂ ಆರೆಂಜ್‌ಝೋನ್‌ ಮತ್ತು ಗ್ರೀನ್‌ಝೋನ್‌ ಜಿಲ್ಲೆಯಲ್ಲಿ ಇರುತ್ತೆ. ಆರೆಂಜ್‌ಝೋನ್‌ ಜಿಲ್ಲೆಯಲ್ಲಿ ಹೆಚ್ಚುವರಿ ನೀಡಲಾಗಿರುವ ವಿನಾಯ್ತಿ ಗ್ರೀನ್‌ಝೋನ್‌ ಜಿಲ್ಲೆಯಲ್ಲೂ ಇರುತ್ತದೆ.

ಇದರ ಜೊತೆಗೆ ಆರೆಂಜ್‌ಝೋನ್‌ ಜಿಲ್ಲೆಗಳಲ್ಲಿ ಆಟೋ ರಿಕ್ಷಾಗಳ ಓಡಾಟ, ಸ್ಪಾ, ಸಲೂನ್‌ ತೆರೆಯಲು ಅನುಮತಿ ನೀಡಲಾಗಿದೆ. ಅನುಮತಿ ನೀಡಲಾದ ಚಟುವಟಿಕೆಗಳಿಗಾಗಿ ಜನ ಆರೆಂಜ್‌ಝೋನ್‌ ಜಿಲ್ಲೆಗಳಲ್ಲಿ ಜಿಲ್ಲೆಗಳ ನಡುವೆ ಓಡಾಡಬಹುದು. ಈ ಜಿಲ್ಲೆಗಳಲ್ಲಿ ಕಾರು ಮತ್ತು ಕ್ಯಾಬ್‌ ಸೇವೆಗೂ ಅನುಮತಿ ನೀಡಲಾಗಿದೆ.

ಇನ್ನು ಗ್ರೀನ್‌ಝೋನ್‌ ಜಿಲ್ಲೆಗಳಲ್ಲಿ ಶೇಕಡಾ ೫೦ರಷ್ಟು ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಶೇಕಡಾ ೫೦ರಷ್ಟು ಪ್ರಯಾಣಿಕರು ಮಾತ್ರ ಇರಬೇಕು.

ಗ್ರೀನ್‌ಝೋನ್‌ ಜಿಲ್ಲೆಗಳಲ್ಲಿ ಸೋಮವಾರದಿಂದ ಬೆಳಗ್ಗೆ ಜಿಲ್ಲೆಗಳ ಒಳಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಲಿದೆ. ಖಾಸಗಿ ಬಸ್‌ ಸಂಚಾರವೂ ಆರಂಭವಾಗುವ ನಿರೀಕ್ಷೆ ಇದೆ.

ಆದರೆ ಗ್ರೀನ್‌ಝೋನ್‌ ಜಿಲ್ಲೆ ಆಗಿರುವ ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ಅಂದರೆ ಬಸ್‌ಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ.

ಆರೆಂಜ್‌ಝೋನ್‌ ಜಿಲ್ಲೆಗಳು:

೧) ಬಾಗಲಕೋಟೆ ೨) ಬಳ್ಳಾರಿ ೩) ಕಲ್ಬುರ್ಗಿ ೪) ಬೀದರ್‌ ೫) ಬೆಳಗಾವಿ ೬) ಚಿಕ್ಕಬಳ್ಳಾಪುರ ೭) ದಾವಣಗೆರೆ ೮) ಧಾರವಾಡ ೯) ಗದಗ ೧೦) ಮಂಡ್ಯ ೧೧) ದಕ್ಷಿಣ ಕನ್ನಡ ೧೨) ತುಮಕೂರು ೧೩) ಉತ್ತರ ಕನ್ನಡ ೧೪) ವಿಜಯಪುರ

ಗ್ರೀನ್‌ಝೋನ್‌ ಜಿಲ್ಲೆಗಳು: 

೧) ಕೋಲಾರ ೨) ರಾಮನಗರ ೩) ಚಾಮರಾಜನಗರ ೪) ಕೊಡಗು ೫) ಹಾಸನ ೬) ಚಿತ್ರದುರ್ಗ ೭) ಚಿಕ್ಕಮಗಳೂರು ೮) ಶಿಮಮೊಗ್ಗ ೯) ಹಾವೇರಿ ೧೦ ) ಉಡುಪಿ ೧೧) ಕೊಪ್ಪಳ ೧೨) ರಾಯಚೂರು ೧೩)ಯಾದಗಿರಿ

LEAVE A REPLY

Please enter your comment!
Please enter your name here