ವೈಕುಂಠ ಏಕಾದಶಿ.. ವಿಶೇಷತೆ ಏನು..? ನಿಮಗೆಷ್ಟು ಗೊತ್ತು..?

ವೈಕುಂಠ ಏಕಾದಶಿ. ದೇಶದ ಎಲ್ಲಾ ವೈಷ್ಣವ ದೇವಾಲಯಗಳಲ್ಲಿ ಭಕ್ತರೋ ಭಕ್ತರು.  ಅಷ್ಟಕ್ಕೂ ವೈಕುಂಠ ಏಕಾದಶಿ ಎಂದರೇನು..? ಉತ್ತರ ದ್ವಾರದಲ್ಲಿ ಹೋಗಿ ದೇವರ ದರುಶನ ಮಾಡಬೇಕೆಂಬ ಪರಿಪಾಠ ಇರುವುದು ಏಕೆ ಎನ್ನುವುದನ್ನು ತಿಳಿಸುವ ಪ್ರಯತ್ನವನ್ನು ನಿಮ್ಮ ಪ್ರತಿಕ್ಷಣ ಮಾಡಲಿದೆ.

ಧನುರ್ಮಾಸದ ಏಕಾದಶಿ ವೈಕುಂಠ ಏಕಾದಶಿ ಹೇಗೆ.?

ವರ್ಷದಲ್ಲಿ 24 ಏಕಾದಶಿ ಬರುತ್ತವೆ. ಅಧಿಕ ಮಾಸದಲ್ಲಿ ಬರುವ ಏಕಾದಶಿಗಳನ್ನು ಸೇರಿಸಿದರೇ ಆಗೋದು 26. ಅದರಲ್ಲಿ ಧನುರ್ಮಾಸದಲ್ಲಿ ಬರುವ ಏಕಾದಶಿ ತುಂಬಾ ಪ್ರತ್ಯೇಕವಾದುದು. ಮಹಾವಿಷ್ಣು ದುಷ್ಟಶಿಕ್ಷಣಕ್ಕಾಗಿ ಹೊಸ ಹೊಸ ಅವತಾರ ಎತ್ತಿ ಭೂಮಿ ಬರುತ್ತಾರೆ ಎನ್ನುವುದು ಭಕ್ತರ ನಂಬಿಕೆ. ಆದರೆ, ಮಹಾವಿಷ್ಣುವು ವೈಕುಂಠದಿಂದ ನೇರವಾಗಿ ಬಂದು ದುಷ್ಟ ಸಂಹಾರ ಮಾಡಿದ ಸಂದರ್ಭಗಳು ಪುರಾಣದ ಪ್ರಕಾರ ಎರಡೇ ಎರಡು.

ಗಜೇಂದ್ರನ ಮೊರೆ ಆಲಿಸಿ, ಮೊಸಳೆ ಮೇಲೆ ಚಕ್ರಾಯುಧ ಪ್ರಯೋಗಿಸಿದ್ದು ಒಂದು ಸಂದರ್ಭ. ಮತ್ತೊಂದು ಸಂದರ್ಭ ಕೃತ ಯುಗದಲ್ಲಿ ಮುರಾಸುರನ ಸಂಹಾರ. ಮಹಾವಿಷ್ಣು ವೈಕುಂಠದಿಂದ ನೇರವಾಗಿ ಬಂದು ಮುರಾಸುರನ ಸಂಹಾರ ಮಾಡಿದ್ದು ಧನುರ್ಮಾಸದಲ್ಲಿ ಬರುವ ಏಕಾದಶಿಯಂದು. ಹೀಗಾಗಿ ಧನುರ್ಮಾಸದ ಏಕಾದಶಿ ವೈಕುಂಠ ಏಕಾದಶಿ ಆಗಿ ಬದಲಾಗಿದೆ ಎನ್ನುತ್ತದೆ ಪುರಾಣ.

3 ಕೋಟಿ ದೇವತೆಗಳೋ..? 33 ಕೋಟಿ ದೇವತೆಗಳೋ..?
ವೈಕುಂಠ ಏಕಾದಶಿಗೆ ಮುಕ್ಕೋಟಿ ಏಕಾದಶಿ ಅಂತಲೂ ಕರೆಯುತ್ತಾರೆ ಏಕೆ..?

ನಾವು ಪೂಜಿಸುವ ದೇವತೆಗಳ ಸಂಖ್ಯೆ 3 ಕೋಟಿ ಅಂತಾರೆ ಕೆಲವರು. ಇನ್ನೂ ಕೆಲವರು ದೇವತೆಗಳ ಸಂಖ್ಯೆ 33 ಕೋಟಿ ಅಂತಾ ಹೇಳುತ್ತಾರೆ. ಈ ಬಗ್ಗೆ ಜಗತ್ತಿನಲ್ಲಿ ಎರಡು ಅಭಿಪ್ರಾಯಗಳಿವೆ. ಕೋಟಿ ಎನ್ನುವುದು ನಿಜಕ್ಕೂ ಸಂಖ್ಯಾಶಾಸ್ತ್ರದ ಸಂಕೇತ ಅಲ್ಲ. ಏಕಾದಶ ರುದ್ರರು(11), ದ್ವಾದಶ ಅಚ್ಯುತರು(12), ಅಷ್ಟ ವಸುಗಳು(8), ಇಬ್ಬರು ಅಶ್ವಿನಿ ದೇವತೆಗಳು.. ಹೀಗೆ ದೈವಗಳ ಮೊತ್ತ 33 ಆಗುತ್ತದೆ ಎಂದು ವೇದಗಳು ಹೇಳುತ್ತವೆ. ಸೃಷ್ಟಿಯಲ್ಲಿ ಎಲ್ಲದಕ್ಕೂ ಇವರೇ ಜವಾಬ್ದಾರರಾದ ಇವರನ್ನು ಮುಕ್ಕೋಟಿ ದೇವರುಗಳು ಅಂತಾ ಪುರಾಣಗಳು ವರ್ಣಿಸುತ್ತವೆ. ಇವರೆಲ್ಲಾ ಮಹಾವಿಷ್ಣುವನ್ನು ಪೂಜಿಸಲು, ಹರಸಲು ಭೂಲೋಕಕ್ಕೆ ಬರುವ ಗಳಿಗೆ-ತಿಥಿಯೇ ಧನುರ್ಮಾಸದಲ್ಲಿ ಬರುವ ಈ ವೈಕುಂಠ ಏಕಾದಶಿ. ಅದು ಮಾರ್ಗಶಿರಾ-ಪುಷ್ಯ ಯಾವುದು ಬೇಕಾದರೂ ಆಗಬಹುದು. ಮುಕ್ಕೋಟಿ ದೇವರುವ ಆಗಮಿಸುವ ತಿಥಿ ಆದುದರಿಂದ ಈ ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಅಂತಲೂ ಕರೆಯುತ್ತಾರೆ.

ಭೂಲೋಕದ ವೈಕುಂಠ ಶ್ರೀರಂಗಂ..

ತಮಿಳುನಾಡಿನ ಶ್ರೀರಂಗಂನಲ್ಲಿರುವ ರಂಗನಾಥಸ್ವಾಮಿ ದೇಗುವ ದೇಶದ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದು. ಇದನ್ನು ವೈಕುಂಠದ ಸಪ್ತ ಪ್ರಾಕಾರಗಳ ನಡುವೆ ಇದೆ ಎನ್ನುವುದು ಪ್ರತೀತಿ. ಶ್ರೀರಂಗಂ ಕೂಡ ಕಾವೇರಿ ನದಿಯ ಮಧ್ಯೆ, ಒಂದು ದ್ವೀಪದ ಮೇಲೆ ಏಳು ಪ್ರಾಕಾರಗಳ ನಡುವೆ ಇದೆ. ಹೀಗಾಗಿ ಶ್ರೀರಂಗಂ ಕ್ಷೇತ್ರವನ್ನು ಭೂಲೋಕದ ವೈಕುಂಠ ಎಂದೇ ಪ್ರಸಿದ್ಧಿ ಪಡೆದಿದೆ.

ಸ್ಥಳ ಪುರಾಣದ ಪ್ರಕಾರ ಮುಕ್ಕೋಟಿ ದೇವತೆಗಳು ಶ್ರೀರಂಗಂನ ಶ್ರೀರಂಗನಾಥಸ್ವಾಮಿ ದೇವಾಲಯದ ಉತ್ತರ ದ್ವಾರದ ಮೂಲಕ ಶ್ರೀರಂಗನ ದರುಶನಕ್ಕೆ ತೆರಳುತ್ತಾರೆ. ವೈಕುಂಠ ಏಕಾದಶಿ ಪ್ರಯುಕ್ತ ಶ್ರೀರಂಗ ದ್ವಾರಸ್ಥ ಭಗವದಾಲೋಕನ ಮಹೋತ್ಸವಗಳನ್ನು ನೆರವೇರಿಸುತ್ತಾರೆ. ಹೀಗಾಗಿ ವೈಕುಂಠ ಏಕಾದಶಿಯಂದು ಶ್ರೀರಂಗಂ ಭೂಲೋಕದ ಸ್ವರ್ಗದಂತೆ ಕಂಡುಬರುತ್ತದೆ ಎನ್ನುವುದು ಭಕ್ತರ ನಂಬಿಕೆ.

ಉತ್ತರ ದ್ವಾರದ ಪ್ರವೇಶ ಏಕೆ..?

ಉತ್ತರ ದ್ವಾರದ ಮೂಲಕ ಮುಕ್ಕೋಟಿ ದೇವರುಗಳು ಶ್ರೀರಂಗನಾಥಸ್ವಾಮಿಗೆ ಅರ್ಚನೆ ಮಾಡಿಸಲು ಹೋಗುವ ಶುಭ ಗಳಿಗೆಯಲ್ಲಿ ತಾವು ಉತ್ತರ ದ್ವಾರದ ಮೂಲಕ ಹೋಗಿ ವಿಷ್ಣುಸ್ವರೂಪಿಯ ದರುಶನ ಪಡೆದರೇ, ಮುಕ್ಕೋಟಿ ದೇವತೆಗಳ ಅನುಗ್ರಹ ಲಭಿಸಿ ತಮಗೂ ಸ್ವರ್ಗವಾಸಿಯಾಗುವ ಪ್ರಾಪ್ತಿ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ, ವಿಶ್ವಾಸ. ಈ ಕಾರಣಕ್ಕಾಗಿಯೇ ಉತ್ತರ ದ್ವಾರಕ್ಕೆ ಸ್ವರ್ಗದ ದ್ವಾರ ಅಂತಲೂ ಕರೆಯಲಾಗುತ್ತದೆ.

ಶ್ರೀರಂಗಂನಲ್ಲಿ ನಡೆಯುವ ಆಚಾರ ಕಾಲ ಕಳೆದಂತೆ ಇತರೆ ವೈಷ್ಣವ ದೇವಾಲಯಗಳು ಅನ್ವಯಿಸಲು ಶುರುವಾಯಿತು. ಎಲ್ಲಾ ವೈಷ್ಣವ ದೇವಾಲಯಗಳಲ್ಲಿಯೂ ವೈಕುಂಠ ಏಕಾದಶಿಯಂದು ಮಾತ್ರ ಉತ್ತರ ದ್ವಾರ ದರುಶನ ಅಥವಾ ಸ್ವರ್ಗ ದ್ವಾರ ದರುಶನಕ್ಕೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಇದನ್ನು ಸ್ವರ್ಗದ್ವಾರ ಏಕಾದಶಿ ಅಂತಲೂ ಅಭಿವರ್ಣಿಸಲಾಗುತ್ತದೆ.

ತಿರುಮಲತಿರುಪತಿಯಲ್ಲಿ ಉತ್ತರ ದ್ವಾರದ ಮೂಲಕ ತಿಮ್ಮಪ್ಪನ ದರುಶನ ಪಡೆಯಲು ಭಕ್ತರು ಬಯಸುತ್ತಾರೆ. ಶ್ರೀರಂಗಂನಲ್ಲಿ ದಕ್ಷಿಣಾಭಿಮುಖವಾಗಿ ಇರುವ ಸ್ವಾಮಿಯನ್ನು ದರ್ಶಿಸಿಕೊಳ್ಳಲು ಉತ್ತರ ದಿಕ್ಕಿನಲ್ಲಿ ನಿಲ್ಲುತ್ತಾರೆ. ಉತ್ತರಾಯಣ ಪುಣ್ಯಕಾಲ ಆರಂಭಕ್ಕೆ ಇದು ಸಂಕೇತ ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿಯೇ ವೈಕುಂಠ ಏಕಾದಶಿಯ ದಿನ ಉತ್ತರ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿ ದೇವರ ದರುಶನ ಮಾಡಲು ಭಕ್ತರು ನಸುಕಿನ ಜಾವದಿಂದಲೇ ದೇಗುಲಗಳ ಕಡೆ ಮುಖ ಮಾಡುತ್ತಾರೆ.

LEAVE A REPLY

Please enter your comment!
Please enter your name here