ನಾಳೆಯಿಂದ ಶಿರಡಿ ಸಾಯಿಬಾಬಾ ದೇಗುಲ ಬಂದ್.. ಭಕ್ತರಲ್ಲಿ ಆತಂಕ

ಇವತ್ತೋ ನಾಳೆಯೋ ಅಥವಾ ಈ ವಾರದಲ್ಲಿ ನೀವು ಶಿರಡಿಗೆ ಹೋಗಿ ಸಾಯಿ ಬಾಬಾ ದರ್ಶನ ಮಾಡಬೇಕು ಎಂದುಕೊಂಡಿದ್ದೀರಾ..? ಹಾಗಿದ್ದರೇ ಪ್ರವಾಸವನ್ನು ಮುಂದೂಡಬೇಕಾಗುತ್ತದೆ. ಯಾಕೆಂದರೆ, ನಾಳೆಯಿಂದ ಅನಿರ್ದಿಷ್ಟಾವಧಿಯವರೆಗೆ ಸಾಯಿಬಾಬಾ ದೇವಾಲಯದ ಬಾಗಿಲನ್ನು ಮುಚ್ಚುತ್ತಿರುವುದಾಗಿ ಸಾಯಿಬಾಬಾ ದೇಗುಲ ಟ್ರಸ್ಟ್ ಘೋಷಿಸಿದೆ. ಈ ಬಗ್ಗೆ ದೇವಾಲಯ ಟ್ರಸ್ಟ್ ಪ್ರಕಟಣೆ ಹೊರಡಿಸಿದೆ. ಇದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಸಾಯಿಬಾಬಾ ದೇವಾಲಯದ ಬಾಗಿಲು ಮುಚ್ಚುತ್ತಿರುವುದೇಕೆ..?
ಸಾಯಿಬಾಬಾ ಜನ್ಮಸ್ಥಳ ಎನ್ನಲಾಗಿರುವ ಪರ್ಬಿಣಿ ಜಿಲ್ಲೆಯ ಪಾತ್ರಿ ಗ್ರಾಮವನ್ನು ಶಿರಡಿಗೆ ಸಮಾನಾಂತರವಾಗಿ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಬರೋಬ್ಬರಿ 100 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.

ಅಸಲಿಗೆ ಸಾಯಿಬಾಬಾ ಜನ್ಮಸ್ಥಳ ಪಾತ್ರಿ ಎನ್ನುವುದಕ್ಕೆ ಯಾವುದೆ ಪುರಾವೆಗಳು ಇಲ್ಲ. ಸರ್ಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ. ಉದ್ದೇಶಿತ ಯೋಜನೆಯಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಪಟ್ಟು ಹಿಡಿದಿರುವ ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ ಮತ್ತು ಶಿರಡಿ ಜನತೆ, ಭಾನುವಾರದಿಂದ ದೇಗುಲದ ಬಾಗಿಲನ್ನು ಅನಿರ್ದಿಷ್ಟಾವಧಿಗೆ ಮುಚ್ಚಿ ಬಂದ್, ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇಂದು ಮತ್ತೊಮ್ಮೆ ಸಭೆ ಸೇರಲಿರುವ ಶಿರಡಿ ಗ್ರಾಮಸ್ಥರು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಶಿರಡಿಗೆ ಸಮಾನಾಂತರವಾಗಿ ಪಾತ್ರಿ ಗ್ರಾಮವನ್ನು ಅಭಿವೃದ್ಧಿಪಡಿಸಿದರೆ, ಶಿರಡಿಗೆ ಈಗಿರುವ ಮಹತ್ವ, ಪ್ರಾಮುಖ್ಯತೆ ಕಡಿಮೆ ಆಗಬಹುದು ಎನ್ನುವುದು ಟ್ರಸ್ಟ್ ಮತ್ತು ಸಾಯಿ ಭಕ್ತರನ್ನೇ ನಂಬಿ ವ್ಯಾಪಾರ ವಹಿವಾಟು ನಡೆಸುತ್ತಿರುವವರ ಆತಂಕವಾಗಿದೆ.

ಶಿರಡಿ ಬಂದ್ ಮತ್ತು ದೇಗುಲವನ್ನು ಅನಿರ್ದಿಷ್ಟಾವಧಿಗೆ ಮುಚ್ಚುವುದಾಗಿ ಘೋಷಣೆ ಹೊರಬಿದ್ದಿರುವ ಕಾರಣ, ಶಿರಡಿಗೆ ಹೋಗಬೇಕೋ ಬೇಡವೋ ಎಂಬ ಸಂದಿಗ್ಧತೆಯಲ್ಲಿ ಲಕ್ಷಾಂತರ ಭಕ್ತರು ಸಿಲುಕಿದ್ದಾರೆ. ಶಿರಡಿ ಸಾಯಿಬಾಬಾಗೆ ಜಗತ್ತಿನಾದ್ಯಂತ ಕೋಟಿ ಕೋಟಿ ಭಕ್ತರು ಇದ್ದಾರೆ. ದೇಶದ ಶ್ರೀಮಂತ ದೇಗುಲಗಳ ಪೈಕಿ ಶಿರಡಿ ಸಾಯಿಬಾಬಾ ದೇಗುಲ ಕೂಡ ಒಂದು.

ಸಾಯಿಬಾಬಾ ಜನ್ಮಸ್ಥಳನಾ ಪಾತ್ರಿ..?
ಮರಾಠವಾಡ ಪ್ರಾಂತ್ಯದಲ್ಲಿ ಶಿರಡಿಯಿಂದ 275 ಕಿಲೋಮೀಟರ್ ದೂರದ ಪರ್ಬಿಣಿ ಜಿಲ್ಲೆಯ ಪಾತ್ರಿ ಎಂಬ ಗ್ರಾಮ ಸಾಯಿಬಾಬಾ ಅವರ ಜನ್ಮಸ್ಥಳ ಎಂಬ ಮಾತು ಬಹಳ ವರ್ಷಗಳಿಂದ ಕೇಳಿಬರುತ್ತಿದೆ. 1854ರಲ್ಲಿ 16ರ ಹರೆಯದಲ್ಲಿ ಸಾಯಿಬಾಬಾ ಶಿರಡಿಗೆ ಬಂದರು ಎಂದು, ಒಂದು ಬೇವಿನ ಮರದ ಕೆಳಗೆ ಕಾಣಿಸಿಕೊಂಡಿದ್ದರು ಎಂಬುದು ಭಕ್ತರ ನಂಬಿಕೆ.

LEAVE A REPLY

Please enter your comment!
Please enter your name here