ನಾಳೆಯಿಂದ ಬಿಎಂಟಿಸಿಯಲ್ಲಿ ಟಿಕೆಟ್‌ ಪಡೆದು ಪ್ರಯಾಣಿಸಬಹುದು – ಬೆಂಗಳೂರಿಗರಿಗೆ ಬಿಗ್‌ ರಿಲೀಫ್‌

ಸಾಂಧರ್ಬಿಕ ಚಿತ್ರ

ಪಾಸ್‌ ಇದ್ದರಷ್ಟೇ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಬಹುದು ಎನ್ನುವ ಆದೇಶ ನೀಡಿದ್ದ ರಾಜ್ಯ ಸರ್ಕಾರ ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಟಿಕೆಟ್‌ ಪಡೆದೂ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.

ನಾಳೆಯಿಂದ ಟಿಕೆಟ್‌ ಪಡೆದು ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಕಿಲೋ ಮೀಟರ್‌ ಆಧರಿಸಿ ಬಿಎಂಟಿಸಿ ಟಿಕೆಟ್‌ ದರ ನಿಗದಿಪಡಿಸಿದೆ. ಆದರೆ ಬಸ್‌ಗಳಲ್ಲಿ ನಿಂತುಕೊಂಡು ಓಡಾಡುವಂತಿಲ್ಲ. ಪ್ರಯಾಣಿಕರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ.

2 ಕಿಲೋ ಮೀಟರ್‌ವರೆಗಿನ 5 ರೂಪಾಯಿ ಟಿಕೆಟ್‌, 3 ರಿಂದ 4 ಕಿಲೋ ಮೀಟರ್‌ವರೆಗಿನ ಪ್ರಯಾಣಕ್ಕೆ 10 ರೂಪಾಯಿ, 5 ರಿಂದ 6 ಕಿಲೋ ಮೀಟರ್‌ವರೆಗಿ ಪ್ರಯಾಣಕ್ಕೆ 15 ರೂಪಾಯಿ, 7 ರಿಂದ 14 ಕಿಲೋ ಮೀಟರ್‌ವರೆಗಿನ ಪ್ರಯಾಣಕ್ಕೆ 20 ರೂಪಾಯಿ, 15 ರಿಂದ 40 ಕಿಲೋ ಮೀಟರ್‌ವರೆಗಿನ ಪ್ರಯಾಣಕ್ಕೆ 25 ರೂಪಾಯಿ, 41 ಕಿಲೋ ಮೀಟರ್‌ಗಿಂತ ಹೆಚ್ಚಿನ ಪ್ರಯಾಣಕ್ಕೆ 30 ರೂಪಾಯಿ ಟಿಕೆಟ್‌ ದರ ವಿಧಿಸಲಾಗುತ್ತದೆ.

ಟಿಕೆಟ್‌ ಪಡೆದು ಪ್ರಯಾಣಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಬಿಎಂಟಿಸಿ ಒಂದು ಸಾವಿರ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತದೆ. ನಾಳೆಯಿಂದ ಬೆಂಗಳೂರಲ್ಲಿ 3,500 ಬಸ್‌ಗಳು ಓಡಾಡಲಿವೆ.

ಮೇ 19ರಿಂದ ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗಳ ಓಡಾಟ ಆರಂಭವಾದರೂ ತಿಂಗಳ, ವಾರದ ಮತ್ತು ದಿನದ ಪಾಸ್‌ ಇದ್ದರೆ ಮಾತ್ರ ಪ್ರಯಾಣಿಕರ ಓಡಾಟಕ್ಕೆ ಅವಕಾಶ ನೀಡಲಾಗಿತ್ತು.

ಆದರೆ 70 ರೂಪಾಯಿಗೆ ದಿನದ ಪಾಸ್‌ ಪಡೆದು ಯಾಕೆ ಓಡಾಡಬೇಕು..?  ಪಾಸ್‌ ಕಡ್ಡಾಯ ಮಾಡಿದ್ರೆ ನಮಗೆ ಸುಮ್ಮನೆ ದುಡ್ಡು ನಷ್ಟ ಆಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಟಿಕೆಟ್‌ ಆಧರಿಸಿ ಪ್ರಯಾಣಕ್ಕೆ ಅವಕಾಶ ಕೊಡದೇ ಇದ್ದ ಕಾರಣ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿತ್ತು. ಇದರಿಂದ ಬಿಎಂಟಿಸಿಗೂ ನಷ್ಟ. ಈ ಹಿನ್ನೆಲೆಯಲ್ಲಿ ಪಾಸ್‌ ಮಾತ್ರವಲ್ಲ ಟಿಕೆಟ್‌ ಇದ್ದವರೂ ಪ್ರಯಾಣಿಸಬಹುದು ಎಂಬ ಆದೇಶ ಹೊರಡಿಸಿದೆ ಬಿಎಂಟಿಸಿ.

 

LEAVE A REPLY

Please enter your comment!
Please enter your name here