ನಾಳೆಯಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ನಲ್ಲಿ ಓಡಾಡ್ತೀರಾ..? – ಈ ಸುದ್ದಿಯನ್ನು ತಪ್ಪದೇ ಓದಿ..!

ನಾಳೆಯಿಂದ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಓಡಾಟ ಆರಂಭವಾಗುತ್ತಿದೆ. ನಾಳೆಯಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಬಸ್‌ನಲ್ಲಿ ಓಡಾಡಬಹುದು. ಜಿಲ್ಲೆಗಳ ನಡುವೆ, ಜಿಲ್ಲೆಗಳ ಒಳಗೆ ಕೆಎಸ್‌ಆರ್‌ಟಿಸಿ ಬಸ್‌ ಓಡಾಡಲಿದೆ.

ಸಂಜೆ 7 ಗಂಟೆಯ ಬಳಿಕ ಬಸ್‌ ಸಂಚಾರಕ್ಕೆ ಅವಕಾಶ ಇರದ ಹಿನ್ನೆಲೆಯಲ್ಲಿ 7 ಗಂಟೆಯೊಳಗೆ ತಲುಪುವಂತೆ ನಾಳೆ ಬಸ್‌ಗಳನ್ನು ಓಡಿಸಲಾಗುತ್ತದೆ. ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಅಂದರೆ 12 ಗಂಟೆಗಳ ಅವಧಿಯಲ್ಲಿ ಕ್ರಮಿಸಬಹುದಾದ ಪ್ರಮುಖ ಸ್ಥಳಗಳಿಗೆ ಮಾತ್ರ ನಾಳೆಯಿಂದ ಬಸ್‌ಗಳು ಓಡಾಡಲಿವೆ.

ನಾಳೆ ಕೆಎಸ್‌ಆರ್‌ಟಿಸಿಯ ಶೇಕಡಾ 25ರಷ್ಟು ಅಂದರೆ 1,500ರಷ್ಟು ಬಸ್‌ಗಳು ರಸ್ತೆಗಿಳಿಯಲಿವೆ.

ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಮಾಹಿತಿಗಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಪ್ರಕಟಿಸಿವೆ. ಕೆಎಸ್‌ಆರ್‌ಟಿಸಿ ಹೊರಡಿಸಿರುವ ಸಮಯ ಲೆಕ್ಕಾಚಾರ ಹೀಗಿದೆ: (ಇದು ಮಾದರಿ ಸಮಯ ಲೆಕ್ಕಾಚಾರವಷ್ಟೇ. ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೂ ಬಸ್‌ಗಳು ಓಡಾಡುತ್ತವೆ.)

  1. ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿ – 3 ಗಂಟೆ – ಬೆಂಗಳೂರಿನಿಂದ ಮೈಸೂರಿಗೆ ಕಡೆಯ ಬಸ್‌ ಹೊರಡುವುದು ಸಂಜೆ 4 ಗಂಟೆಗೆ
  2. ಬೆಂಗಳೂರು-ಶಿವಮೊಗ್ಗ ನಡುವಿನ ಪ್ರಯಾಣದ ಅವಧಿ – 7 ಗಂಟೆ – ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಡೆಯ ಬಸ್‌ ಹೊರಡುವುದು ಮಧ್ಯಾಹ್ನ 12 ಗಂಟೆಗೆ
  3. ಬೆಂಗಳೂರು – ದಾವಣಗೆರೆ ನಡುವಿನ ಬಸ್‌ನ ಪ್ರಯಾಣದ ಅವಧಿ – 6 ಗಂಟೆ – ಬೆಂಗಳೂರಿನಿಂದ ದಾವಣಗೆರೆಗೆ ಕಡೆಯ ಬಸ್‌ ಹೊರಡುವುದು – ಮಧ್ಯಾಹ್ನ 1 ಗಂಟೆಗೆ
  4. ಬೆಂಗಳೂರು- ಹಾಸನ ನಡುವಿನ ಬಸ್‌ ಪ್ರಯಾಣದ ಅವಧಿ – 3 ಗಂಟೆ 30 ನಿಮಿಷ – ಬೆಂಗಳೂರಿನಿಂದ ಹಾಸನಕ್ಕೆ ಕಡೆಯ ಬಸ್‌ ಹೊರಡುವುದು ಸಂಜೆ 4.30ಕ್ಕೆ
  5. ಬೆಂಗಳೂರು-ಮಂಗಳೂರು ನಡುವಿನ ಬಸ್‌ ಪ್ರಯಾಣದ ಅವಧಿ – 7 ಗಂಟೆ 30 ನಿಮಿಷ – ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕಡೆಯ ಬಸ್‌ ಹೊರಡುವುದು ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ.

ಅಂದಹಾಗೆ ಜಿಲ್ಲೆಗಳ ಒಳಗೆ, ಬೇರೆ ಜಿಲ್ಲೆಗಳು, ನಗರಗಳಿಗೂ ಕೆಎಸ್‌ಆರ್‌ಟಿಸಿ ಬಸ್‌ ಓಡಾಡುತ್ತವೆ. ಆದರೆ ಬೇರೆ ಬೇರೆ ಜಿಲ್ಲೆಗಳ ನಡುವೆ ಬಸ್‌ಗಳ ಓಡಾಟಕ್ಕೆ ಇದೇ ಸಮಯ ಸೂತ್ರವನ್ನು ಕೆಎಸ್‌ಆರ್‌ಟಿಸಿ ಬಸ್‌ ಅನುಸರಿಸಲಿದೆ. ರಾಜ್ಯದ ಪ್ರಮುಖ ಸ್ಥಳಗಳಿಗೆ ಮಾತ್ರ ಬಸ್‌ ಸಂಚಾರ ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

ಬಸ್‌ ನಿಲ್ದಾಣ‌ಗಳಲ್ಲಿ ಮಾತ್ರ ಹತ್ತಲು ಅವಕಾಶ:

ಕೆಎಸ್‌ಆರ್‌ಟಿಸಿ ಬಸ್‌ಗಳು ಎಲ್ಲಿಂದ ತಮ್ಮ ಓಡಾಟ ಆರಂಭಿಸುತ್ತವೋ ಆ ನಿಲ್ದಾಣಗಳಲ್ಲೇ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಆಯಾಯ ಬಸ್‌ ನಿಲ್ದಾಣಗಳಲ್ಲಿ ಉದಾಹರಣೆಗೆ ಬೆಂಗಳೂರಲ್ಲಿ ಮೆಜೆಸ್ಟಿಕ್, ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಲ್ಲಿ ಮಾತ್ರ ಬಸ್‌ ಹತ್ತಲು ಅವಕಾಶ ಇದೆ. ಮಾರ್ಗಮಧ್ಯದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶವಿಲ್ಲ. ಒಂದು ವೇಳೆ ಮಾರ್ಗಮಧ್ಯದಲ್ಲಿ ಹತ್ತಿಸಿಕೊಂಡರೂ ನಿಗದಿತ ಬಸ್‌ ನಿಲ್ದಾಣದಲ್ಲೇ ಹತ್ತಿಸಿಕೊಳ್ಳಬೇಕು. ಆಗಲೂ ಪ್ರಯಾಣಿಕರು ಥರ್ಮಲ್‌ ಸ್ಕ್ಯಾನಿಂಗ್‌ ಸೇರಿದಂತೆ ಸೂಚಿಸಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ಆದರೆ ಮಾರ್ಗಮಧ್ಯದಲ್ಲಿ ಪ್ರಯಾಣಿಕರನ್ನು ಇಳಿಸಲು ಅವಕಾಶ ಇದೆ. ಉದಾಹರಣೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಬಸ್‌ನಲ್ಲಿ ಸಕಲೇಶಪುರದಲ್ಲಿ ಪ್ರಯಾಣಿಕರು ಇಳಿಯಲು ಅವಕಾಶ ಇದೆ.

ಪ್ರಯಾಣಿಕರಿಂದ ಮೊಬೈಲ್‌ ನಂಬರ್‌, ವಿಳಾಸ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

ಬಸ್‌ ಪ್ರಯಾಣ ದರ ಹೆಚ್ಚಳವಿಲ್ಲ:

ನಾಳೆಯಿಂದ ಒಂದೊಂದು ಬಸ್‌ನಲ್ಲಿ ಕೇವಲ 30 ಪ್ರಯಾಣಿಕರಷ್ಟೇ ಸಂಚರಿಸಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ನಿಗಮಗಳಿಗೆ ಹೊರೆ ಆಗಲಿದೆಯಾದರೂ ಟಿಕೆಟ್‌ ದರ ಏರಿಕೆ ಮಾಡಲ್ಲ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಆಗುವ ಹೊರೆಯನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಆನ್‌ಲೈನ್‌ ರಿಸರ್ವೇಶನ್‌ಗೂ ಅವಕಾಶ:

ನಾಳೆಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಓಡಾಡುವರು ಆನ್‌ಲೈನ್‌ ಮೂಲಕ ಮುಂಗಡ ಬುಕ್ಕಿಂಗ್‌ ಮಾಡಬಹುದಾಗಿದೆ. ೩೦ಕ್ಕಿಂತ ಕಡಿಮೆ ಪ್ರಯಾಣಿಕರಿರುವ ರೂಟ್‌ನಲ್ಲಿ ಬಸ್‌ಗಳು ಓಡಲ್ಲ.

ಏಳು ದಿನಕ್ಕಾಗಿ ಬಿಎಂಟಿಸಿ ಬಸ್‌ ಪಾಸ್‌:

ಬೆಂಗಳೂರಲ್ಲೂ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬಿಎಂಟಿಸಿ ಬಸ್‌ಗಳು ಓಡಾಡಲಿವೆ. ಆದರೆ ಮಾಸಿಕ ಪಾಸು/ದೈನಂದಿನ ಪಾಸು/ ವಾರದ ಪಾಸು ಇದ್ದವರಿಗೆ ಮಾತ್ರ ನಾಳೆ ಬಿಎಂಟಿಸಿ ಬಸ್‌ನಲ್ಲಿ ಓಡಾಡಲು ಅವಕಾಶ ನೀಡಲಾಗಿದೆ.

300 ರೂಪಾಯಿ ಕೊಟ್ಟು ವಾರದ ಪಾಸ್‌ಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ದಿನದ ಪಾಸ್‌ನ್ನು ಬಸ್‌ ಕಂಡಕ್ಟರ್‌ ಬಳಿಯೇ ಪಡೆದುಕೊಳ್ಳಬೇಕು.

ಟಿಕೆಟ್‌ ಪ್ರಯಾಣಕ್ಕೆ ಅವಕಾಶವಿಲ್ಲ:

ಆದರೆ ಪಾಸ್‌ ಬದಲು ಟಿಕೆಟ್‌ ತೆಗೆದುಕೊಂಡು ಓಡಾಡುವವರಿಗೆ ಬಿಎಂಟಿಸಿ ಬಸ್‌ಗಳಲ್ಲಿ ಅವಕಾಶವಿಲ್ಲ. ಜೊತೆಗೆ ಮಾಸಿಕ ಪಾಸು/ದೈನಂದಿನ ಪಾಸು/ ವಾರದ ಪಾಸು ಬಿಟ್ಟು ಉಳಿದ ಪಾಸ್‌ನ್ನು ಹೊಂದಿದ್ದರೂ ಅವರಿಗೆ ನಾಳೆಯಿಂದ ಬಿಎಂಟಿಸಿ ಬಸ್‌ನಲ್ಲಿ ಓಡಾಟಕ್ಕೆ ಅವಕಾಶವಿಲ್ಲ.

LEAVE A REPLY

Please enter your comment!
Please enter your name here