ನಸುಕಿನ ಜಾವವೇ ಅಪ್ಪು ಅಂತ್ಯಕ್ರಿಯೆ- ಸರ್ಕಾರದ ಪ್ಲಾನ್ ಆಫ್ ಆಕ್ಷನ್ ಹೇಗಿತ್ತು?

ಪುನೀತ್ ಅಂತಿಮಯಾನ  ಮತ್ತು ಅಂತ್ಯಕ್ರಿಯೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ತುಂಬಾ  ಅಚ್ಚುಕಟ್ಟಾಗಿ ಪರಿಸ್ಥಿತಿ ನಿಭಾಯಿಸಿದೆ.

ನಿನ್ನೆಯವರೆಗೂ ಭಾನುವಾರ  ಬೆಳಗ್ಗೆ 11 ಗಂಟೆ  ನಂತರ ಅಪ್ಪು ಅಂತ್ಯಕ್ರಿಯೆ ನಡೆಯಲಿದೆ  ಎಂದೇ ಹೇಳಲಾಗಿತ್ತು. ಆದರೆ, ನಸುಕಿನ ಜಾವವೇ ಎಲ್ಲಾ ಮುಗಿಸಲು ರಾತ್ರಿಗೆ ರಾತ್ರಿಯೇ ತೀರ್ಮಾನಿಸಲಾಯಿತು.

ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಕಂಠೀರವ ಸ್ಟೇಡಿಯಂಗೆ ಭೇಟಿ  ನೀಡಿದ್ದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ  ಅಶೋಕ್, ಅಶ್ವಥ್ ನಾರಾಯಣ, ಮುನಿರತ್ನ, ಅಪ್ಪು ಸಹೋದರರಾದ ಶಿವಣ್ಣ, ರಾಘಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆ ಅಪ್ಪು ಅಂತ್ಯಕ್ರಿಯೆ ಕುರಿತು ಸುಧೀರ್ಘ  ಸಮಾಲೋಚನೆ ನಡೆಸಿದ್ದರು.

ಭಾನುವಾರ.. ರಜೆ ದಿನ.. ಅಂತ್ಯಕ್ರಿಯೆ ತಡ ಮಾಡಿದರೆ, ಅಭಿಮಾನಿಗಳು ಮಹಾ ಪ್ರವಾಹದಂತೆ ಅಪ್ಪು ಅಂತಿಮ  ದರ್ಶನಕ್ಕೆ ಬರುವ ಸಾಧ್ಯತೆ  ಇದೆ. ಅಪ್ಪು ಅಂತಿಮ ದರ್ಶನ ಎಲ್ಲರಿಗೂ ಸಿಗದೇ  ಇದ್ದಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು.. ಕಾನೂನು  ಸುವ್ಯವಸ್ಥೆಗೆ ಭಂಗ  ಉಂಟಾಗಬಹುದು.

ಹೀಗಾಗಿ ನಸುಕಿನ ಜಾವವೇ ಅಪ್ಪು ಅಂತಿಮ ಯಾನ  ನಡೆಸಿಬಿಡೋಣ. ಸೂರ್ಯೋದಯದ  ನಂತರ ನಿಮ್ಮ ಸಮುದಾಯದ ಸಂಪ್ರದಾಯದಂತೆ ಕಾರ್ಯಕ್ರಮ ಮುಗಿಸಿ.. ನಿಮ್ಮ ಅಭಿಪ್ರಾಯ  ಏನು ಎಂದು ಸಿಎಂ ಬೊಮ್ಮಾಯಿ, ಶಿವಣ್ಣ ಬಳಿ ಕೇಳಿದರು. ಕೂಡಲೇ ನಟ ಶಿವಣ್ಣ, ಪುನೀತ್ ಪತ್ನಿಗೆ ಕರೆ ಮಾಡಿ ವಿಷಯ  ಮುಟ್ಟಿಸಿದರು. ಅವರು  ಕೂಡ ಇದಕ್ಕೆ ಸಮ್ಮತಿ ಸೂಚಿಸಿದರು.

ಈ ಬೆನ್ನಲ್ಲೇ, ಅಪ್ಪು ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕಿರುವ ಎಲ್ಲಾ ಗಣ್ಯರು, ಕುಟುಂಬಸ್ಥರಿಗೆ ಮಾಹಿತಿ  ರವಾನೆ ಮಾಡಲಾಯ್ತು. ಎಲ್ಲಾ ರೀತಿಯ ಭದ್ರತಾ ಕ್ರಮ ಕೈಗೊಳ್ಳಲು, ಅಗತ್ಯ ಸಿಬ್ಬಂದಿಯನ್ನು ಆಯಾಕಟ್ಟಿನ ಸ್ಥಳಗಳಲ್ಲಿ  ನಿಯೋಜಿಸುವಂತೆ  ಸೂಚನೆ ಹೋಯಿತು. ಎಲ್ಲಿಯವರೆಗೂ ಅಭಿಮಾನಿಗಳನ್ನು  ಬಿಡಬೇಕು ಎಂಬುದನ್ನು ಸೂಚಿಸಲಾಯಿತು.

ಪೊಲೀಸ್ ಇಲಾಖೆಯೂ ರಾತ್ರೋರಾತ್ರಿ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿತು. ಗೊರಗುಂಟೆ ಪಾಳ್ಯದಿಂದ ಕಂಠೀರವ ಸ್ಟುಡಿಯೋವರೆಗೆ ಅಭಿಮಾನಿಗಳನ್ನು ಬಿಡಲೇ ಇಲ್ಲ.

ಕಂಠೀರವ ಸ್ಟೇಡಿಯಂನಲ್ಲಿ ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಲಾಯಿತು.

ಎಲ್ಲವು ಅಂದುಕೊಂಡಂತೆ ಅಚ್ಚುಕಟ್ಟಾಗಿ ನಡೆದು ಹೋಯಿತು. ಅಪ್ಪು ಪಂಚ ಭೂತಗಳಲ್ಲಿ ಲೀನರಾದರು. ಎಲ್ಲವೂ ಶಾಂತಿಯುತವಾಗಿ ಮುಗಿದಿದ್ದಕ್ಕೆ ಸಿಎಂ ಬೊಮ್ಮಾಯಿ ನಿಟ್ಟುಸಿರು ಬಿಟ್ಟರು.

LEAVE A REPLY

Please enter your comment!
Please enter your name here