ನಶಿಸಿ ಹೋಗುತ್ತಿರುವ ಪಶ್ಚಿಮ ಘಟ್ಟದ ಈ “ಮಹಾರಾಜ”ನ ಸಂತತಿ

ಚಿತ್ರ: ಚಂದನ್‌ ಮೃತ್ಯುಂಜಯ್

ಪಟ್ಟದರಸನ ಗತ್ತು ಮತ್ತು ಕತ್ತು ಎತ್ತಿ ಗತ್ತಿನಲ್ಲಿ ತಿರುಗಾಡುವ ತಾಕತ್ತು ಇರುವುದು ಈ ನಮ್ಮ ಪಶ್ಚಿಮ ಘಟ್ಟದ ಮಹಾರಾಜನಿಗೆ. ಎಂಥಾ ಶರೀರ, ಎಂತಾ ಗಾಂಭೀರ್ಯತೆ, ಎಂತಾ ಘನತೆ.

ಕಾಡಿನ ಈ ಮಹಾರಾಜನ ಮಹತ್ವ ಮತ್ತು ಅಗತ್ಯ ನಾಡಿನಲ್ಲಿ ಲಂಚ, ವಂಚನೆ ಎಂಬ ಕೊಳಕು ತ್ಯಾಜ್ಯದ ಮಂಚದಲ್ಲಿ ಮಲಗುವ ಹೇಡಿಗಳಿಗೆ ಹೇಗೆ ಅರ್ಥವಾದೀತು? ಕಳೆದ 20 ವರುಷಗಳಿಂದ ಪಶ್ಚಿಮ ಘಟ್ಟದಲ್ಲಿ ಕಾಡುಕೋಣ (ಇಂಡಿಯನ್ ಗೌರ್) ಗಳ ಸಂತತಿ ಕಡಿಮೆ ಆಗುತ್ತಾ ಬರುತ್ತಿವೆ.

ಇತ್ತೀಚೆಗೆ ಭಾರತೀಯ ಕಾಡುಕೋಣಗಳ ಬಗ್ಗೆ ಅಧ್ಯಯನ ಮಾಡಲು ಜರ್ಮನಿಯಿಂದ ಒಂದು ತಂಡ ಮೊದಲ ಹಂತದ ಸರ್ವೆಗೆ ಅಂತ ಪಶ್ಚಿಮ ಘಟ್ಟದ ಬೈಸೊನ್ ಕಾರಿಡಾರ್ ಗೆ ಬಂದಿದ್ದಾಗ ಕೇವಲ 7 ಕಾಡುಕೋಣಗಳು (ಪ್ರದೇಶ ಯಾವುದೆಂದು ಕೆಲವೊಂದು ಕಾರಣಗಳಿಗೆ ಹೇಳಲಾಗದು) ಮಾತ್ರ ಕಾಣಲು ಸಿಕ್ಕಿದ್ದವು.

ಈ ಬಗ್ಗೆ ಚರ್ಚೆಗಳೂ ಆದವು. ಕಾಡು ಕೋಣಗಳು ಒಂದು ಅರಣ್ಯ ವಲಯದಿಂದ ಇನ್ನೊಂದು ಅರಣ್ಯ ವಲಯಕ್ಕೆ ಸಂಚರಿಸುತ್ತಾ ಇರುತ್ತವೆ, ಆದುದರಿಂದ ನಾವು ಹೋದ ಅಡವಿ ಪ್ರದೇಶದಲ್ಲಿ ಕಾಡುಕೋಣ ಇದ್ದರೂ ಕಾಣಲು ಸಿಕ್ಕಿರಲಿಕ್ಕಿಲ್ಲ ಎಂಬ ಮಾತು ಬಂತು.

ಸರಿ, ಇದು ಒಪ್ಪಬೇಕಾದ ವಿಚಾರವೇ, ಕಾಡುಕೋಣ ಗಳು ಪ್ರತೀ ಅಡವಿ ಗಡಿಯಿಂದ ಇನ್ನೊಂದು ಅಡವಿ ಪ್ರದೇಶಕ್ಕೆ ಸಂಚರಿಸುತ್ತಾ ಇರುತ್ತವೆ. ಆದರೆ ನಾವು ಅಂದು ಅಧ್ಯಯನಕ್ಕೆ ಅಂತ ಹೋಗಿರುವ ಅರಣ್ಯ ಪ್ರದೇಶದಲ್ಲಿ ಕಳೆದ 20 ವರುಷಗಳಿಂದ ಸುಮಾರು 30 ರಿಂದ 35 ಕಾಡುಕೋಣಗಳು ಇದ್ದವು, ಈಗ 7 ರಿಂದ 8 ಕಾಡು ಕೋಣಗಳು ಜೀವ ಭಯದಿಂದ ಇದ್ದಾವೆ.

ಅದಲ್ಲದೇ ಅವುಗಳು ಅಲ್ಲಿಂದ ತಪ್ಪಿಸಿ ಇನ್ನೊಂದು ಅಡವಿ ಪ್ರದೇಶಕ್ಕೆ ಹೋಗುವ ಚಾನ್ಸೇ ಇಲ್ಲಾ. ಯಾಕೆಂದರೆ ಈ 30 ಕಾಡುಕೋಣಗಳು ಇದ್ದ ಅಡವಿ ಪ್ರದೇಶದ ಸುತ್ತಲೂ ಕೆಲವು ಕಡೆ ಖಾಸಗಿ ಕೆಲವು ಕಡೆ ಅರಣ್ಯ ಒತ್ತುವರಿ ಮಾಡಿಕೊಂಡು ಬೆಟ್ಟದ ಕಣಿವೆ ಪ್ರದೇಶದ ಎಲ್ಲಾ ಕಡೆ ಎಸ್ಟೇಟ್ ಮಾಲೀಕರು ಬೇಲಿ ಹಾಕಿರುವುದರಿಂದ ಸುತ್ತ ಇರುವ 28 ಮೈಲು ಸುತ್ತಳತೆಯಿಂದ ಬೈಸನ್ ಗಳು ಹೊರ ಹೋಗಲು ಅಥವಾ ಇನ್ನೊಂದು ಅರಣ್ಯ ವಲಯಕ್ಕೆ ಹೋಗಲು ಅವಕಾಶಗಳೇ ಇರುವುದಿಲ್ಲ.

ಹಾಗಾದರೆ ಕಾಣೆಯಾದ 23 ಕಾಟಿಗಳು ಎಲ್ಲಿ ಹೋದವು ? ಈ ಅಡವಿ ಸುತ್ತ ಮುತ್ತ ಇರುವ ರೆಸಾರ್ಟ್ ಗಳಲ್ಲಿ ಆಹಾರದ ಮೆನುಗಳಲ್ಲಿ ಎಲ್ಲವೂ ಇರುತ್ತದೆ, ಜೊತೆಗೆ ʼಕೆ ತಂದೂರಿʼ ಅಂತ ಒಂದು “ಮೆನುವಿನಲ್ಲಿ ಇರದ” ಹೈಡ್ ಆಗಿರುವ ಖಾದ್ಯ ಇರುತ್ತದೆ ಅದುವೇ ಕಾಡುಕೋಣ ತಂದೂರಿ.

ಹಾಗಂತಾ ನೇರವಾಗಿ ಇಂತಹ ರೆಸಾರ್ಟ್ ಗಳಲ್ಲಿ ಹೋಗಿ ಕೆ…ಟೀ ಅಂತ ಕೇಳಿದರೆ ಸಿಗುವುದಿಲ್ಲ. ಅದಕ್ಕೆಂದೇ ನಗರದ ಕೆಲವು ಬಾಟಲಿ ಗಿರಾಕಿಗಳಿದ್ದಾರೇ…ಎಲ್ಲವೂ ಒಂದು ಒಪ್ಪಂದ …! ಧರ್ಮಕ್ಕೆ ಸಿಕ್ಕಿದ್ದು ಯಾರು ಅವರ ಅಪ್ಪಂದಾ…?

ಪಶ್ಚಿಮ ಘಟ್ಟದ ಮಹಾರಾಜನ ದುರ್ಗತಿ ಇಷ್ಟೇ….ಆದರೆ ಮೆಚ್ಚಲೇ ಬೇಕಾದ ವಿಚಾರ ಎಂದರೆ ಪ್ರತೀ ಅರಣ್ಯ ಇಲಾಖೆಯಲ್ಲಿ ಕೂಡಾ ಕಾಡುಕೋಣದ ಛಾಯಾಚಿತ್ರ ಹಾಕಿ ವನ್ಯ ಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅಂತ ಬೋರ್ಡುಗಳು ಕಡ್ಡಾಯವಾಗಿ ಇದ್ದೇ ಇವೆ.

ದಿನೇಶ್‌ ಹೊಳ್ಳ (ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದರು,ಪರಿಸರವಾದಿ, ಸಹ್ಯಾದ್ರಿ ಸಂಚಯದ ವಕ್ತಾರರು)

LEAVE A REPLY

Please enter your comment!
Please enter your name here