ನನ್ನ ವಿರುದ್ಧದ ಸುಳ್ಳು ಸುದ್ದಿಗೆ ಕಾಂಗ್ರೆಸ್‌ ಕಾರಣ – ಸಂಸದೆ ಶೋಭಾ ಕರಂದ್ಲಾಜೆ ಕೆಂಡಾಮಂಡಲ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರಲ್ಲಿ ನೇತ್ರಾವದಿ ನದಿಗೆ ಹಾರಿದ್ದ ನಿಶಾಂತ್‌ ಕಲ್ಲಡ್ಕ ಎಂಬ ಯುವಕನ ಜೀವ ಉಳಿಸುವ ಪ್ರಯತ್ನವನ್ನು ನಾಲ್ವರು ಮುಸ್ಲಿಂ ಯುವಕರು ಮಾಡಿದ್ದರು. ಈ ಮುಸ್ಲಿಂ ಯುವಕರ ಪ್ರಯತ್ನದ ಹೊರತಾಗಿಯೂ ನಿಶಾಂತ್‌ ಉಳಿಯಲಿಲ್ಲ.

ಆದರೆ ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೆಸರಲ್ಲಿ ಟ್ವಿಟ್ಟರ್‌ ಪೋಸ್ಟ್‌ವೊಂದರ ಸ್ಕ್ರೀನ್‌ಶಾಟ್‌ ಹರಿದಾಡಲು ಶುರು ಮಾಡ್ತು.  ಆ ಟ್ವಿಟ್ಟರ್‌ ಸ್ಕ್ರೀನ್‌ಶಾಟ್‌ನಲ್ಲಿ ನೇತ್ರಾವದಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಿಶಾಂತ್‌ ಸಾವಿಗೆ ಜೆಹಾದಿಗಳು ಕಾರಣ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ ಎಂದು ಬಣ್ಣಿಸಲಾಗಿತ್ತು.

ಜೆಹಾದಿಗಳಿಂದ ಹಿಂದೂ ಸಂಘಟನೆಯ ನಿಶಾಂತ್‌ ಕಲ್ಲಡ್ಕ ಎಂಬ ಯುವಕನ ಹತ್ಯೆ ಆಗಿದೆ ಎಂಬ ಮಾಹಿತಿ ಬಂದಿದೆ. ಕೂಡಲೇ ಆ ಜೆಹಾದಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಅಮಿತ್‌ ಶಾರಿಗೆ ತಿಳಿಸಿದ್ದೇನೆ

ಎಂದು ಶೋಭಾ ಕರಂದ್ಲಾಜೆ ಟ್ವೀಟಿಸಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿರುವ ಟ್ವಿಟ್ಟರ್‌ನ ಸ್ಕ್ರೀನ್‌ಶಾಟ್‌ನ್ನು ಹರಿಬಿಡಲಾಗಿತ್ತು.

ಆದರೆ ನನ್ನ ಹೆಸರಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ನನ್ನ ಹೆಸರಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ವರಿಷ್ಠರಲ್ಲಿ ಆಗ್ರಹ ಮಾಡಿರುತ್ತೇನೆ. ಮತಾಂಧ ಜೆಹಾದಿಗಳ ಈ ದುಷ್ಕೃತ್ಯಕ್ಕೆ ಕಾಂಗ್ರೆಸ್‌ ನಾಯಕರು ಸೇರಿಕೊಂಡಿರುವುದು ಅವರ ವಿಕೃತ ಮನಸ್ಥಿತಿಯನ್ನು ತೆರೆದಿಡುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

 

 

LEAVE A REPLY

Please enter your comment!
Please enter your name here