ನನ್ನ ಮತ್ತು ತಮ್ಮನ ಮೇಲಿನ ಜನರ ಪ್ರೀತಿಯನ್ನ ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ – ಡಿಕೆಶಿವಕುಮಾರ್‌

ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ನಾವು ಗೆದ್ದಿರುವ ಒಂದು ಕ್ಷೇತ್ರವನ್ನು ಬಿಜೆಪಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರು ಚಡ್ಡಿ, ಪ್ಯಾಂಟ್, ಪಂಚೆ ಯಾವುದಾದರೂ ವೇಷದಲ್ಲಿ ಪಥ ಸಂಚಲನ ಮಾಡಿಕೊಳ್ಳಲಿ. ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಮನಗರದಲ್ಲಿ ಆರ್‌ಎಸ್‌ಎಸ್‌ನವರು ಕೈಗೊಂಡಿದ್ದ ಪಥಸಂಚಲನದ ಬಗ್ಗೆ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು,

25 ಸ್ಥಾನ ಗೆದ್ದಿದ್ದರೂ ತೃಪ್ತಿಯಾಗದ ಬಿಜೆಪಿ ನಾಯಕರು, ನಾವು ಹಾಗೂ ದಳದವರು ಗೆದ್ದಿರುವ ಒಂದೊಂದು ಕ್ಷೇತ್ರಗಳಲ್ಲಿ ವಿನಾಕಾರಣ ಏನೇನೋ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ಏನಾದರೂ ಮಾಡಿಕೊಳ್ಳಲಿ. ಆರೆಸ್ಸೆಸ್ ಸಿದ್ಧಾಂತ ಏನೂ ಅಂತಾ ನನಗೂ ಗೊತ್ತಿದೆ. ಬಿಜೆಪಿಯವರು ತಾವು ಹೇಳಲಾಗದನ್ನು ಆರೆಸ್ಸೆಸ್ ಮೂಲಕ ಹೇಳಿಸುತ್ತಿದ್ದಾರೆ. ಕೇವಲ ಒಂದು ಜಾತಿ, ಧರ್ಮದ ಪರವಾಗಿ ಹಾಗೂ ಬೇರೆ ಧರ್ಮಗಳ ಮೇಲೆ ಯುದ್ಧ ಮಾಡುತ್ತೇವೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಈ ಪಥ ಸಂಚಲನಕ್ಕೆ ಎಷ್ಟು ಜನ ಬಂದಿದ್ದರು, ಯಾವ ಕಡೆಯಿಂದ ಎಷ್ಟು ಬಂದಿದ್ದವು. ಯಾರೆಲ್ಲಾ ಬಂದಿದ್ದರು ಎಂಬುದನ್ನು ನಮ್ಮ ಜಿಲ್ಲೆ ಪೊಲೀಸರು ವಿಡಿಯೋ ಮಾಡಿಸಿ ಇಟ್ಟಿದ್ದಾರೆ. ಇದರಿಂದ ನಮಗೆ ತೊಂದರೆ ಇಲ್ಲ.

ಮಾವಿನಕಾಯಿ ಕೆಂಪಾಗಿ ಹಣ್ಣಾದರೆ ಕಲ್ಲು ಹೊಡೆಯುತ್ತಾರೆ. ನೀವು ಬಲಿಷ್ಟವಾಗಿದ್ದರೆ ನಿಮ್ಮನ್ನು ನೋಡುತ್ತಾರೆ. ಅದೇರೀತಿ ಅವರು ಕೂಡ ನಮ್ಮ ಶಕ್ತಿ ನೋಡಿ. ನನ್ನ ತಮ್ಮ ಮಾಡಿರುವ ಕೆಲಸ, ಜನರ ಪ್ರೀತಿ ಸಂಪಾದಿಸಿರುವುದನ್ನು ನೋಡಿ ಅದನ್ನು ಅವರಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದನ್ನು ಕಾಂಗ್ರೆಸ್ ನಿಂದ ಕಿತ್ತುಕೊಳ್ಳಬೇಕು ಎಂಬ ಅಸೂಯೆ ಪಡುತ್ತಿದ್ದಾರೆ. ಅವರು ಏನು ಬೇಕಾದರೂ ಮಾಡಲಿ, ನಮ್ಮ ರಾಜಕಾರಣ ನಾವು ಮಾಡುತ್ತೇವೆ.

ಬಿಜೆಪಿಯವರು ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರ ಗೆದ್ದ ಮಾತ್ರಕ್ಕೆ ಕಾರ್ಯಕರ್ತರು ಕುಗ್ಗುವ ಅಥವಾ ಆತಂಕ ಪಡುವ ಅಗತ್ಯವಿಲ್ಲ. ನಾವು ಸ್ವಲ್ಪ ಯಾಮಾರಿದೆವು. ರಾಜಕೀಯ ಚದುರಂಗವನ್ನು ನಾವು ಹಾಗೂ ದಳದವರು ಸರಿಯಾಗಿ ಆಡಿದ್ದಾರೆ, ಬಿಜೆಪಿಗೆ 10 ಸೀಟು ಬರುತ್ತಿರಲಿಲ್ಲ. ನಮ್ಮ ತಪ್ಪುಗಳನ್ನು ನಾವು ಸರಿ ಮಾಡಿಕೊಳ್ಳುತ್ತೇವೆ. ಏನು ಮಾಡಬೇಕು, ರಾಜಕಾರಣ ಹೇಗೆ ಮಾಡಬೇಕು ಅಂತಾ ಗೊತ್ತಿದೆ.

ಸಂಸತ್ ಚುನಾವಣೆ ಆದಮೇಲೆ ಬಂದ ಹಲವು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಜನ ಬೆಂಬಲ ಪಡೆಯುವಲ್ಲಿ ವಿಫಲವಾಗಿದೆ. ಮಹಾರಾಷ್ಟ್ರದಲ್ಲಿ ಸಂಖ್ಯೆ ಇತ್ತಾದರೂ ಅವರ ನೀತಿ ವಿರೋಧಿಸಿ ಶಿವಸೇನೆ ಅವರು ಅವರನ್ನು ಬಿಟ್ಟು ಬಂದರು. ಹರಿಯಾಣದಲ್ಲೂ ಬೇರೆಯವರನ್ನು ಸೇರಿಸಿಕೊಂಡರು. ಉತ್ತರ ಭಾರತದ ರಾಜ್ಯಗಳಲ್ಲಿ ಒಂದೊಂದೇ ಕಡೆ ಅಧಿಕಾರ ಕಳೆದುಕೊಳ್ಳುತ್ತಿದೆ. ರಾಷ್ಟ್ರದಲ್ಲಿ 300ಕ್ಕೂ ಹೆಚ್ಚು ಕ್ಷೇತ್ರ ಗೆದ್ದ ನಂತರ ಬಂದಿರುವ ಫಲಿತಾಂಶ.

ಸಿಎಎ ಹಾಗೂ ಎನ್ಆರ್ ಸಿ ವಿಚಾರವಾಗಿ ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಮಾಡಿಸುತ್ತಿದೆಯೇ? ಇಲ್ಲ. ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಜನ ಸಿಟ್ಟಿಗೆದ್ದು ಮಾಡುತ್ತಿದ್ದಾರೆ.

ಅವರು ಚುನಾವಣೆ ಹೇಗೆ ಮಾಡಿದರು ಅಂತಾ ನನಗೆ ಗೊತ್ತಿಲ್ವಾ? ಅವರು ಸತ್ಯ ಹರಿಶ್ಚಂದ್ರರು ಕೇವಲ 27 ಲಕ್ಷದಲ್ಲೇ ಚುನಾವಣೆ ಮಾಡಿ ಮುಗಿಸಿದರಾ? ಮಾಧ್ಯಮಗಳಲ್ಲೇ ಅವರು ಎಷ್ಟು ದುಡ್ಡು ಖರ್ಚು ಮಾಡಿದರು ಅಂತಾ ವರದಿ ಬಂದಿತ್ತು. ಚುನಾವಣಾ ಆಯೋಗ ಏನು ಮಾಡುತ್ತಿತ್ತು, ಐಟಿ ಇಲಾಖೆ ಕಣ್ಣು ಮುಚ್ಚಿಕೊಂಡು ಕೂತಿತ್ತಾ? ಕೇವಲ ಹಾಸನ, ಶಿವಮೊಗ್ಗ, ಮಂಡ್ಯದಲ್ಲಿ ಮಾತ್ರ ರೈಡ್ ಮಾಡಿದ್ದೇಕೆ?

ಜನ ರೊಚ್ಚಿಗೆದ್ದು ಪ್ರತಿಭಟನೆ ಮಾಡುತ್ತಿದ್ದಾಗ ಅವರನ್ನು ತಡೆಯಲು ಕುಮಾರಸ್ವಾಮಿ, ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರು ನಾವೆಲ್ಲ ಸೇರಿದ್ದಾಗ ನಮ್ಮ ಮೇಲೆ ಸುಮ್ಮನೆ ಕೇಸ್ ಹಾಕಿಸಿದ್ರು. ಈ ಸುಳ್ಳು ಕೇಸು, ಜೈಲಿಗೆಲ್ಲ ಹೆದರಿ ನಾವು ರಾಜಕೀಯ ಮಾಡುವುದಿಲ್ಲ. ನಮ್ಮ ಪಕ್ಷಕ್ಕೆ ಅದರದೇ ಆದ ಇತಿಹಾಸ, ತ್ಯಾಗ, ಬಲಿದಾನ ಇದೆ. ನಮ್ಮ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಕೊಟ್ಟು ಈ ದೇಶಕ್ಕೆ ಪ್ರಜಾಪ್ರಭುತ್ವ ತಂದುಕೊಟ್ಟಿದ್ದಾರೆ. ಆ ಪ್ರಜಾಪ್ರಭುತ್ವದಲ್ಲಿ ಅವರಿಗೆ ಅಧಿಕಾರ ಸಿಕ್ಕಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

LEAVE A REPLY

Please enter your comment!
Please enter your name here