ನನ್ನ ಎದುರೇ ಭಾಷಣ ಮಾಡಿದ್ದ ಮೋದಿ..! – ಸಿದ್ದರಾಮಯ್ಯ ಪ್ರಶ್ನೆಗಳು..!

ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ಎರಡು ದಿನಗಳ ಕರ್ನಾಟಕ ಪ್ರವಾಸವನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಹುದ್ದೆ ಯಾವುದೋ ಒಂದು ಪಕ್ಷಕ್ಕೆ ಸೇರಿದ್ದಲ್ಲ, ದೇಶದ ೧೩೦ ಕೋಟಿ ಜನರಿಗೆ ಸೇರಿದ್ದು. ಆದರೆ ನಮಗಿರುವ ಆ ತಿಳುವಳಿಕೆ ಪ್ರಧಾನಿಯವರಿಗೂ ಇರಬೇಕಲ್ಲ ಎಂದು ಕಿಡಿಕಾರಿದ್ದಾರೆ.

ದೇಶದಲ್ಲಿ ಸಾಕಷ್ಟು ಗಂಭೀರ ಸಮಸ್ಯೆಗಳಿಗೆ. ಜಿಡಿಪಿ ಕುಸಿದಿದೆ. ಇವೆಲ್ಲದರ ಬಗ್ಗೆ ಯೋಚನೆ ಮಾಡುವ ಬದಲಿಗೆ ಪ್ರಧಾನಿ ಮೋದಿ ಪಾಕಿಸ್ತಾನ, ಕಾಶ್ಮೀರ, ರಾಮಮಂದಿರದ ಬಗ್ಗೆಯಷ್ಟೇ ಮಾತಾಡುತ್ತಾರೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಡಾ.ಶಿವಕುಮಾರ ಸ್ವಾಮೀಜಿಯವರು ಬದುಕಿದ್ದಾಗ ಅವರಿಗೆ ಭಾರತ ರತ್ನ ನೀಡಿ ಎಂದು ಮುಖ್ಯಮಂತ್ರಿಯಾಗಿದ್ದ ನಾನು ಪತ್ರದ ಮೇಲೆ ಪತ್ರ ಬರೆದಿದ್ದೆ. ಅದಕ್ಕೆ ಪ್ರಧಾನಿ ಪ್ರತಿಕ್ರಿಯಿಸಲಿಲ್ಲ. ಈಗ ಅವರು ಲಿಂಗೈಕ್ಯರಾದ ನಂತರ ಗೌರವ ಸಲ್ಲಿಸಲು ಬಂದಿದ್ದಾರೆ. ಈಗಲಾದರೂ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡುತ್ತೇವೆಂದು ಹೇಳಬಹುದಿತ್ತು.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರಹಳ್ಳ ಕಾವಲ್ ನಲ್ಲಿ ಎಚ್‌ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಶಂಕು ಸ್ಥಾಪನೆ ಮಾಡಿ, 2018ರಲ್ಲಿ ಮೊದಲ ಸ್ವದೇಶಿ ಹೆಲಿಕಾಪ್ಟರ್ ಹಾರಲಿದೆ ಎಂದು ಮೋದಿ ಹೇಳಿದ್ದರು. ಮೂರು ವರ್ಷ ಕಳೆದರೂ ಹೆಲಿಕಾಪ್ಟರ್ ಇನ್ನೂ ತಯಾರಾಗಿಲ್ಲ.

ತುಮಕೂರಿನ ವಸಂತ ನರಸಾಪುರದಲ್ಲಿ ದೇಶದ ಮೊದಲ ಫುಡ್ ಪಾರ್ಕ್ ಅನ್ನು ನನ್ನ ಸಮ್ಮುಖದಲ್ಲಿಯೇ ಪ್ರಧಾನಿ ಮೋದಿ ಅವರು ಉದ್ಘಾಟಿಸಿ ಆರು ವರ್ಷಗಳಾಗಿವೆ. ಇದರಿಂದ ಹತ್ತು ಸಾವಿರ ನೇರ ಮತ್ತು 25 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನನ್ನ ಎದುರೇ ಭಾಷಣ ಮಾಡಿದ್ದರು. ಎಲ್ಲಿದೆ ಉದ್ಯೋಗ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಹಿಂದೆ ತುಮಕೂರಿಗೆ ಭೇಟಿ ನೀಡಿ ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡಿ ಎಂಟು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಮೋದಿಯವರು ಹೇಳಿದ್ದರು. ಅದು ಈಗ ಯಾವ ಹಂತದಲ್ಲಿದೆ? ಆ ಯೋಜನೆಗೆ ಕೇಂದ್ರ ಸರ್ಕಾರದಿಂದ ಎಷ್ಟು ದುಡ್ಡು ಕೊಟ್ಟಿದ್ದಾರೆಂದು ನಿನ್ನೆ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದರೇ? ಎಂದು ಮಾಜಿ ಸಿಎಂ ಹೇಳಿದ್ದಾರೆ.

ಮಾತನಾಡಲು ಇಷ್ಟೆಲ್ಲ ಪ್ರಮುಖ ವಿಚಾರಗಳಿದ್ದು ಕೂಡ ಪ್ರಧಾನಿ ಮೋದಿಯವರ ನಿನ್ನೆಯ ಭಾಷಣಗಳು ಕಾಂಗ್ರೆಸ್ ಮೇಲೆ ಟೀಕೆ ಹಾಗೂ ಇನ್ನಷ್ಟು ಹೊಸ ಸುಳ್ಳು ಹೇಳುವುದಕ್ಕಷ್ಟೇ ಸೀಮಿತವಾಯಿತು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

LEAVE A REPLY

Please enter your comment!
Please enter your name here