ನನ್ನನ್ನು ಸಂಪರ್ಕಿಸದೇ ನೇರವಾಗಿ ಹೋಗಿದ್ದೇ ಘಟನೆಗೆ ಕಾರಣ – ಶಾಸಕ ಜಮೀರ್‌ ಅಹ್ಮದ್‌ ಖಾನ್‌

ಬೆಂಗಳೂರಿನ ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆಗೆ ಬಿಬಿಎಂಪಿ ಸಿಬ್ಬಂದಿ ರಾತ್ರಿ ಹೋಗಿದ್ದ ಕಾರಣ ಎಂದು ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.

ಪಾದರಾಯನಪುರದಲ್ಲಿ ನಡೆದ ಘಟನೆಗೆ ತಪ್ಪು‌ಮಾಹಿತಿ ಕೂಡಾ ಒಂದು‌ ಕಾರಣ. ಅಲ್ಲಿನ ಜನರನ್ನು ತಪಾಸಣೆಗೆ ಒಳಪಡಿಸಲು ಬಿಬಿಎಂಪಿ ಸಿಬ್ಬಂದಿ ರಾತ್ರಿ ಹೋಗಿದ್ದ ಕಾರಣ ಜನ ಗೊಂದಲಕ್ಕೀಡಾಗಿ ವ್ಯಗ್ರರಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಇನ್ನೂ ಸ್ವಲ್ಪ ಜಾಗರೂಕತೆಯಿಂದ ನಿರ್ವಹಿಸಬಹುದಿತ್ತು.

ಪಾದರಾಯನಪುರದಲ್ಲಿ ತಪಾಸಣೆಗೆ ರಾತ್ರಿ ಹೋಗುವುದು ಬೇಡ, ಹಗಲಿಗೆ ಹೋಗೋಣ ಎಂದು ಬಿಬಿಎಂಪಿ ಆಯುಕ್ತರಿಗೆ ತಿಳಿಸಿ ಭಾನುವಾರ ಇಡೀ ದಿನ ಕಾದಿದ್ದೆ. ಬಿಬಿಎಂಪಿ ಸಿಬ್ಬಂದಿ ನನ್ನನ್ನು ಸಂಪರ್ಕಿಸದೆ ನೇರವಾಗಿ ಅಲ್ಲಿಗೆ ಹೋಗಿದ್ದರಿಂದ ಸ್ವಲ್ಪ‌ ಎಡವಟ್ಟಾಯಿತು

ಎಂದು ಶಾಸಕ ಜಮೀರ್‌ ಅಹ್ಮದ್‌ ಹೇಳಿದ್ದಾರೆ.

ಈ ಹಿಂದೆ ಬೆಂಗಳೂರಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದಿದ್ದ ದಾಳಿಯ ಬಗ್ಗೆಯೂ ಶಾಸಕ ಜಮೀರ್‌ ಇದೇ ರೀತಿಯಾದ ಹೇಳಿಕೆ ನೀಡಿದ್ದರು. ಎನ್‌ಆರ್‌ಸಿ ಮಾಹಿತಿಯನ್ನು ಪಡೆಯಲು ಬಂದಿದ್ದಾರೆ ಎಂಬ ಅನುಮಾನದಲ್ಲಿ ಜನ ದಾಳಿ ಮಾಡಿದ್ದರು. ಆಶಾ ಕಾರ್ಯಕರ್ತೆಯರಿಗೆ ಎನ್‌ಆರ್‌ಸಿ ಮಾಹಿತಿ ಸಂಗ್ರಹಿಸಲು ಹೇಳಿದ್ದು ಯಾರು ಎಂದು ಜಮೀರ್‌ ಪ್ರಶ್ನಿಸಿದ್ದರು.

ಪಾದರಾಯನಪುರದ ನಿವಾಸಿಗಳಲ್ಲಿ ಹೆಚ್ಚಿನವರು ಕಾರ್ಮಿಕ ವರ್ಗದವರು, ಬಡವರು ಮತ್ತು ಅಶಿಕ್ಷಿತರು. ಅವರು ಕೊರೊನಾ ಪರೀಕ್ಷೆಗೆ ಆಸ್ಪತ್ರೆಗೆ ಬರುವುದಿಲ್ಲ, ಇಲ್ಲಿಯೇ ಮಾಡಿ‌ ಎಂದು ಹಟ ಮಾಡಿದ್ದಾರೆ. ಅವರಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟು ಕೊರೊನಾ ತಪಾಸಣೆಗೆ ಒಳಪಡಿಸಬೇಕಿತ್ತು.

ಪೊಲೀಸರು, ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆಯನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬ ನನ್ನ ನಿರ್ಧಾರ ಅಚಲ. ರಾತ್ರಿವೇಳೆ ಕ್ವಾರೆಂಟೈನ್‌ಗೆ ಜನರನ್ನು ಕರೆದುಕೊಂಡು ಹೋಗಲು ಬಂದಾಗ ಸಹಜವಾಗಿಯೇ ಜನ ಗಾಬರಿಗೊಂಡಿದ್ದಾರೆ, ಇದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ನಿನ್ನೆಯ ಘಟನೆಯಿಂದ ನನಗೂ ಬೇಸರವಾಗಿದೆ.

ಇಂದಿನ ನನ್ನ ಹೇಳಿಕೆಗೆ ಬೇರೆಯದೆ ಅರ್ಥ ಕಲ್ಪಿಸುವುದು ಬೇಡ. ಹಗಲಿನ ವೇಳೆಯಾಗಿದ್ದರೆ ಗೊಂದಲಗಳಿಗೆ ಎಡೆಮಾಡಿಕೊಡದೆ, ಜನರನ್ನು ಸುಲಭದಲ್ಲಿ ಮನವೊಲಿಸಿ ಕ್ವಾರೆಂಟೈನ್‌ಗೆ ಒಳಪಡಿಸಬಹುದಿತ್ತು ಎಂಬುದಷ್ಟೇ ನನ್ನ ಉದ್ದೇಶ. ಅಹಿತಕರ ಘಟನೆ ನಡೆದಾಗ ಯಾವ ಮುಂಜಾಗ್ರತೆ ಕೈಗೊಳ್ಳಬಹುದಿತ್ತು ಎಂಬ ಯೋಚನೆ ಬರುವುದು ಸಹಜ, ಅದನ್ನೇ ನಾನು ಹೇಳಿದ್ದು

ಎಂದೂ ಪಾದರಾಯನಪುರದಲ್ಲಾದ ಘಟನೆಯ ಬಗ್ಗೆ ಜಮೀರ್‌ ಅಹ್ಮದ್‌ ಖಾನ್‌ ಪ್ರತಿಕ್ರಿಯಿಸಿದ್ದಾರೆ.

 

LEAVE A REPLY

Please enter your comment!
Please enter your name here