ನಟಿ ದೀಪಿಕಾ ಪಡುಕೋಣೆಗೆ ಸಲಾಂ ಹೇಳಿ…!

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಜೆಎನ್ ಯು ಆವರಣದಲ್ಲಿ ನಡೆಸಲಾದ ಗೂಂಡಾಗಿರಿ ವಿರುದ್ಧ ಇವತ್ತು ವಿವಿ ಆವರಣದಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘಟನೆ ಕೈಗೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ಸೂಚಿಸಿದರು.

ಸಂಜೆ 7.30 ರ ಸುಮಾರಿಗೆ ಪ್ರತಿಭಟನಾ ಸಭೆಯಲ್ಲಿ ಹಾಜರಾದ ದೀಪಿಕಾ ಪಡುಕೋಣೆ 15 ನಿಮಿಷ ಅಲ್ಲೇ ಇದ್ದರು. ಎಬಿವಿಪಿ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ಹಲ್ಲೆಗೆ ಒಳಗಾಗಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶಾ ಘೋಷ್ ಪಕ್ಕದಲ್ಲಿ ದೀಪಿಕಾ ನಿಂತಿದ್ದರು. ಘೋಷ್ ಪಕ್ಕದಲ್ಲಿ ಕನ್ನಯ್ಯಕುಮಾರ್ ಕೂಡ ಇದ್ದರು.

ಸಭೆಯಲ್ಲಿ ದೀಪಿಕಾ ಪಡುಕೋಣೆ ಭಾಷಣವೇನು ಮಾಡಿಲ್ಲ. ಆದರೆ ವಿದ್ಯಾರ್ಥಿ ಸಂಘದ ಸದಸ್ಯರೊಂದಿಗೆ ಮಾತನಾಡಿದ್ರು. ಈ ಮುಖಾಂತರ ವಿದ್ಯಾರ್ಥಿಗಳ ಹೋರಾಟಕ್ಕೆ ದೀಪಿಕಾ ಬೆಂಬಲ ಸೂಚಿಸಿದ್ದಾರೆ.

ನಿನ್ನೆಯಷ್ಟೇ ಖಾಸಗಿ ಸುದ್ದಿವಾಹಿನಿ ಎನ್ ಡಿಟಿವಿ ಜೊತೆ ಮಾತನಾಡಿದ್ದ ದೀಪಿಕಾ ಪಡುಕೋಣೆ ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟವನ್ನು ಪ್ರಶಂಸಿದ್ದರು. ಇಂತಹ ಹೋರಾಟಗಳಿಂದಷ್ಟೇ ಬದಲಾವಣೆ ಸಾಧ್ಯ ಎಂದಿದ್ದರು. ಯಾವುದೇ ಬೆದರಿಕೆಗಳಿಗೆ ಅಂಜದೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವ ಹೋರಾಟಗಾರರ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಹೊಸ ಸಂಚಲನ ಸೃಷ್ಟಿಸಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್ ರಂತಹ ಸೂಪರ್ ಸ್ಟಾರ್ ಗಳು ವಿದ್ಯಾರ್ಥಿಗಳ ಮೇಲೆ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ಸಾಕಷ್ಟು ಟೀಕೆಗೆ ಒಳಗಾಗಿದೆ.

LEAVE A REPLY

Please enter your comment!
Please enter your name here