ದೆಹಲಿ ಫಲಿತಾಂಶ.. ದೇಶಕ್ಕೆ ಕೊಡುತ್ತಿರುವ ಸಂದೇಶ ಏನು..?

ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಏರಿದೆ. ೭೦ ವಿಧಾನಸಭಾ ಕ್ಷೇತ್ರಗಳ ಪೈಕಿ ಆಮ್‌ ಆದ್ಮಿ ಪಾರ್ಟಿ ೬೨ ಗೆದ್ದು ಪ್ರಚಂಡ ಜಯಗಳಿಸಿದ್ರೆ, ಬಿಜೆಪಿ ಕೇವಲ ೦೮ ಸ್ಥಾನಗಳಲ್ಲಿ ಜಯಿಸಿ ಒಂದಂಕಿ ಪಕ್ಷವಾಗಿದೆ. ಇನ್ನೈದು ವರ್ಷ ಕಾಂಗ್ರೆಸ್‌ ಖಾತೆ ಶೂನ್ಯವಾಗಿಯೇ ಉಳಿಯಲಿದೆ.

ಅಷ್ಟಕ್ಕೂ ದೆಹಲಿ ಫಲಿತಾಂಶ ದೇಶಕ್ಕೆ ಕೊಡುತ್ತಿರುವ ಸಂದೇಶವಾದರೂ ಏನು ಅನ್ನುವುದನ್ನು ನೋಡೋಣ.

* ಜನಪರ ಆಡಳಿತ ಕೊಟ್ಟರೇ ಅವರದ್ದೇ ಸರ್ಕಾರ

ಮೊದ ಮೊದಲು ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡುತ್ತಾ, ಕೇಂದ್ರ ಸರ್ಕಾರದ ವಿರುದ್ಧ ಬೀದಿಯಲ್ಲಿ ಹೋರಾಟ ಮಾಡುತ್ತಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೊನೆಯ ಎರಡು ವರ್ಷದಲ್ಲಿ ಬದಲಾಗಿ ಹೋದರು. ಮಾತಿಗಿಂತ ಕೃತಿ ಕಡೆ ಹೆಚ್ಚು ಗಮನ ನೀಡಿದರು. ಕೊಟ್ಟ ಭರವಸೆಯಂತೆ ದೆಹಲಿಯ ಜನಸಾಮಾನ್ಯರ ಬದುಕುಗಳನ್ನು ಹಸನುಗೊಳಿಸಲು ಶ್ರಮಿಸಿದರು. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನು ಮೀರಿಸುವ ಹಾಗೆ ಹೈಟೆಕ್ ಮಾಡಿದರು. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿದರು. ಉಚಿತ ನೀರು, ಅತೀ ಕಡಿಮೆ ದರದಲ್ಲಿ ವಿದ್ಯುತ್ ಸೌಲಭ್ಯ ಕೊಟ್ಟರು. ಮಹಿಳೆಯರಿಗೆ ಉಚಿತವಾಗಿ ಮೆಟ್ರೋ, ದೆಹಲಿ ಸಾರಿಗೆ ಬಸ್‍ಗಳಲ್ಲಿ ಸಂಚರಿಸುವ ಅವಕಾಶ ಮಾಡಿಕೊಟ್ಟರು. ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದರು. ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿದರು. `ನಾನು.. ನಾನೇ’ ಎನ್ನುವವರನ್ನು ಅಧಿಕಾರದಿಂದ ದೂರ ಇಟ್ಟರು. `ಆಮ್‍ಆದ್ಮಿ’ಗಳು ಇದಕ್ಕಿಂತ ಒಂದು ಸರ್ಕಾರದಿಂದ ಹೆಚ್ಚೇನು ನಿರೀಕ್ಷೆ ಮಾಡುತ್ತಾರೆ ಅಲ್ವಾ..?

* ವಿವಾದಾತ್ಮಕ ವಿಚಾರಗಳಲ್ಲಿ ತಟಸ್ಥ ಧೋರಣೆ

ಮೊದಲೇ ಹೇಳಿದಂತೆ ಮಾತಿಗಿಂತ ಕೃತಿ ಮೇಲೆ ಎಂಬ ಮಾತಿಗೆ ಅನುಗುಣವಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ವಿವಾದಾತ್ಮಕ ವಿಚಾರಗಳಲ್ಲಿ ತಟಸ್ಥ ಧೋರಣೆ ತಳೆದರು. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿಚಾರದಲ್ಲಿ ಯಾವುದೆ ಹೇಳಿಕೆ ನೀಡಲು ಹೋಗಲಿಲ್ಲ. ಜೆಎನ್‍ಯು, ಜಾಮಿಯಾ ವಿವಿ, ಶಾಹೀನ್‍ಬಾಗ್ ಪ್ರತಿಭಟನೆ, ಹಿಂಸಾಚಾರ, ಶೂಟೌಟ್ ಪ್ರಕರಣಗಳಿಗೆ ಕಾರಣ ಅಂತಾ ಆಮ್ ಆದ್ಮಿ ಪಕ್ಷವನ್ನು ಬಿಜೆಪಿ ದೂರಿದರೂ, ಅರವಿಂದ ಕೇಜ್ರಿವಾಲ್ ಸಂಯಮದಿಂದಲೇ ವರ್ತಿಸಿದರು. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಅರಿಯಲು ಜನರಿಗೆ ಬಿಟ್ಟು, ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಹೋದರು. ದೆಹಲಿ ಜನರಿಗೆ ಏನು ಬೇಕೋ ಅದನ್ನು ಕೊಡುತ್ತಾ ಹೋದರು. `ಆಮ್‍ಆದ್ಮಿ’ಗಳು ಇದಕ್ಕಿಂತ ಒಂದು ಸರ್ಕಾರದಿಂದ ಹೆಚ್ಚೇನು ನಿರೀಕ್ಷೆ ಮಾಡುತ್ತಾರೆ ಅಲ್ವಾ..?

* ಅಭಿವೃದ್ಧಿ ಮಂತ್ರಕ್ಕೆ ಆಮ್‍ಆದ್ಮಿಗಳು ಫಿದಾ..!

ಯಾರೇ ಆದರೂ ಉತ್ತಮ ಆಡಳಿತ, ಅಭಿವೃದ್ಧಿ ಕೆಲಸಗಳನ್ನು ಬಯಸುತ್ತಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿದ್ದು, ಪಠಿಸಿದ್ದು ಅದನ್ನೇ. ಮತ್ತೆ ಅಧಿಕಾರಕ್ಕೆ ಬಂದರೆ 10 ಗ್ಯಾರಂಟಿ ಕೆಲಸಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. 24 ಗಂಟೆ ಕುಡಿಯುವ ನೀರು ಪೂರೈಕೆ, ಉಚಿತ ವಿದ್ಯುತ್, ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ, ಯಮುನಾ ನದಿ ಸ್ವಚ್ಛತೆಯಂತಹ ಭರವಸೆಗಳನ್ನು ನೀಡಿದರು. ಈಗಾಗಲೇ ಕೇಜ್ರಿವಾಲ್ ಅಭಿವೃದ್ಧಿ ಕೆಲಸಗಳಿಗೆ ಫಿದಾ ಆಗಿದ್ದ ಆಮ್ ಆದ್ಮಿಗಳು ಮತ್ತೆ ಕೇಜ್ರಿವಾಲ್ ಅವರಿಗೆ ಮತ ಹಾಕದೇ ಸುಮ್ಮನಿರುತ್ತಾರೆ.. ಹೇಳಿ?

* `ಅಭಿವೃದ್ಧಿ’ ಮುಂದೆ ನಡೆದ `ರಾಷ್ಟ್ರೀಯವಾದ’ದ ಆಟ

ಅರವಿಂದ ಕೇಜ್ರಿವಾಲ್ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದರೇ, ವಿಪಕ್ಷ ಬಿಜೆಪಿ ಅನುಸರಿಸಿದ್ದು ರಾಷ್ಟ್ರೀಯತೆಯ ಮಂತ್ರ. ರಾಷ್ಟ್ರೀಯತೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ, ದ್ವೇಷದ ಮಾತುಗಳನ್ನು ಚುನಾವಣಾ ವಿಷಯವನ್ನಾಗಿಸಿತು. ಈಗಾಗಲೇ ಜನರ ಪಾಲಿಗೆ ಹೀರೋ ಆಗಿರುವ ಕೇಜ್ರಿವಾಲ್‍ರನ್ನು `ಉಗ್ರವಾದಿ’ಯನ್ನಾಗಿಸಿತು. ಗೋಲಿಮಾರೋ ಎಂದು ದ್ವೇಷದ ಹೇಳಿಕೆ ಕೊಡುವ ಮೂಲಕ ಪ್ರಚೋದಿಸುವ ಕೆಲಸ ಮಾಡಿತು. ಹೀಗಾಗಿಯೇ 70 ಕೇಂದ್ರ ಸಚಿವರು, 270 ಸಂಸದರು ದೆಹಲಿಯ ಗಲ್ಲಿ ಗಲ್ಲಿ ಸುತ್ತಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಸ್ವತಃ ಬಿಜೆಪಿ ಚಾಣಕ್ಯ ಅಮಿತ್ ಷಾ ಮನೆ ಮನೆ ತಿರುಗಿದರೂ ಕೇಜ್ರಿವಾಲ್ ನೇತೃತ್ವದ ಪಕ್ಷದ ಹ್ಯಾಟ್ರಿಕ್ ಗೆಲುವನ್ನು ತಡೆಯಲು ಆಗಲಿಲ್ಲ.

* ಬಲಿಷ್ಠ ಸ್ಥಳೀಯ ನಾಯಕತ್ವಕ್ಕೆ ಜೈ

ಆಮ್ ಆದ್ಮಿ ಪಕ್ಷಕ್ಕೆ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಬಲಿಷ್ಠ ಸ್ಥಳೀಯ ನಾಯಕತ್ವ ಇತ್ತು. ಆದರೆ, ಬಿಜೆಪಿಗೆ ಬಲಿಷ್ಠ ಸ್ಥಳೀಯ ನಾಯಕತ್ವ ಇರಲಿಲ್ಲ. ಹರ್ಷವರ್ಧನ್ ರೂಪದಲ್ಲಿ ಇದ್ದರೂ, ಬಿಜೆಪಿ ಅದನ್ನು ಬಳಸಿಕೊಳ್ಳಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಷಾ ಹೆಸರು ಹೇಳಿಕೊಂಡೇ ಬಿಜೆಪಿ ಚುನಾವಣೆ ಎದುರಿಸುವ ಸಾಹಸ ಮಾಡಿತು. ಇದರ ಪರಿಣಾಮ, ಈಗ ನಿಮ್ಮ ಮುಂದೆಯೇ ಇದೆ. ಎಲ್ಲೆಲ್ಲಿ ಸ್ಥಳೀಯ ನಾಯಕತ್ವ ಪ್ರಬಲವಾಗಿದೆಯೋ ಅಲ್ಲೆಲ್ಲ `ಮೋದಿ’ ಮಂತ್ರ ವರ್ಕೌಟ್ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಸ್ಥಳೀಯ ನಾಯಕತ್ವ ಮಾತ್ರವಲ್ಲ, ಬಲಿಷ್ಠ ರಾಷ್ಟ್ರೀಯ ನಾಯಕತ್ವ ಇಲ್ಲದೇ ಸೊರಗಿತ್ತು.

LEAVE A REPLY

Please enter your comment!
Please enter your name here