ದಿನಕ್ಕೆ 10 ಗಂಟೆ ಸ್ನಾನ.. 3 ಸೋಪು ಖಾಲಿ!

ದಿನಕ್ಕೆ 10 ಗಂಟೆ ಸ್ನಾನ…3 ಸೋಪು ಖಾಲಿ.. ಡೋರ್ ಮುಟ್ಟಲು ಒಂದು ಕವರ್.. ನಳ ತಿರುಗಿಸಲು ಮತ್ತೊಂದು ಕವರ್.. ಸೋಪ್ ಮುಟ್ಟಲು ಮಗದೊಂದು ಕವರ್.. ಟವೆಲ್ ತೆಗೆದುಕೊಳ್ಳೋಕೆ ಇನ್ನೊಂದು ಕವರ್..

ಅರೆರೆ, ಇದೇನಿದು ಯಾವುದೋ ಫಿಲ್ಮ್ ಸ್ಟೋರಿ ಇದ್ದಂಗಿದೆ ಅಂದ್ಕೋಬೇಡಿ.. ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಇದು ರೀಲ್ ಸ್ಟೋರಿ ಅಲ್ಲ. ರಿಯಲ್ ಸ್ಟೋರಿ.. ಎರಡು ವರ್ಷಗಳ ಹಿಂದೆ ತೆಲುಗಿನಲ್ಲಿ ಮಹಾನುಭಾವುಡು ಅನ್ನೋ ಸಿನಿಮಾ ಬಂದಿತ್ತು. ಅದ್ರಲ್ಲಿ ಹೀರೋ ಪಾತ್ರಧಾರಿ ಶರ್ವಾನಂದ್‌ಗೆ ಓಸಿಡಿ (ಗೀಳುಮನೋರೋಗ) ಸಮಸ್ಯೆ ಇರುತ್ತೆ.

ಒಂಚೂರು ಯಾರ ಕೈ ತಾಗೋ ಹಾಗಿಲ್ಲ. ಲವ್ವರ್‌ಗೆ ಕಿಸ್ ಕೊಡಲುವಾಗಲು ಟಿಶ್ಯೂ ಬಳಸೋಕೆ ಹೋಗುವಷ್ಟು ಶುಚಿತ್ವದ ಮನೋರೋಗ. ಕೊನೆಗೆ ಶರ್ವಾನಂದ್ ಓಸಿಡಿ ಸಮಸ್ಯೆಗೆ ಮುಕ್ತಿ ಹೇಳಿಸೋದು ಅವರ ಜೀವದ ಗೆಳತಿ ಮತ್ತವರ ಕುಟುಂಬ.

ಇಂಥಾದ್ದೇ ರಿಯಲ್ ಸ್ಟೋರಿ ಬೆಂಗಳೂರಲ್ಲಿ ನಡೆದಿದೆ. ಓಸಿಡಿ (Obsessive-compulsive disorder) ಬಾಧಿತ  ಬೆಂಗಳೂರಿನ ಟೆಕ್ಕಿಯೊಬ್ಬನ ರಿಯಲ್ ಸ್ಟೋರಿ ಇದು.

ಟೆಕ್ಕಿಗಳು ವಿಪರೀತ ಮಾನಸಿಕ ಒತ್ತಡಕ್ಕೆ ಒಳಗಾಗೋದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಶುಚಿತ್ವದ ಮನೋವ್ಯಾಧಿಯಿಂದ ಬಳಲುತ್ತಿರುವ ಟೆಕ್ಕಿಯನ್ನು ಇತ್ತೀಚಿಗೆ ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಗೆ ಅವರ ತಾಯಿ ಕರೆ ತಂದಿದ್ರು.

ಕೆದರಿದ ಕೂದಲು, ಬಿಳುಚಿದ ಚರ್ಮದೊಂದಿಗೆ ಹೆಂಗೆಂಗೋ ಕಂಡು ಬಂದ್ರು. ಅವರ ಓಸಿಡಿ ಸಮಸ್ಯೆ ಹೇಳಿಕೊಂಡರು ಎನ್ನುತ್ತಾ ಓಸಿಡಿ ಬಾಧಿತನ ಕಥೆ ಬಿಚ್ಚಿಡುತ್ತಾರೆ ಮನೋರೋಗ ತಜ್ಞರಾದ ಡಾ. ಸತೀಶ್ ರಾಮಯ್ಯ. ಓಸಿಡಿ ಬಾಧಿತ ಈ ಟೆಕ್ಕಿಯ ದಿನ ಶುರುವಾಗೋದು ಜಳಕದಿಂದ. ಅಂತ್ಯವಾಗೋದು ಜಳಕದಿಂದ ಅಂತೆ.

ನಸುಕಿನ ಜಾವ 3 ಗಂಟೆಗೆ ಎದ್ದು ಸ್ನಾನ ಮಾಡಲು ಬಾತ್‌ರೂಂಗೆ ಹೋದ್ರೆ ಆಚೆ ಬರೋದು ಕನಿಷ್ಠ ಮೂರು ಗಂಟೆ ನಂತರವೇ. ಅಷ್ಟೊತ್ತಿಗೆ ಒಂದು-ಒಂದೂವರೆ ಸೋಪು ಕರಗಿ ಹೋಗ್ತಿತ್ತು. ಸಂಜೆ ಡ್ಯೂಟಿ ಮುಗಿಸಿ ಬಂದವರೇ ನೇರ ಹೋಗ್ತಾ ಇದ್ದಿದ್ದು ಮತ್ತೆ ಬಾತ್‌ರೂಂಗೆ. ಅಲ್ಲಿ ಕನಿಷ್ಠ ನಾಲ್ಕು ಗಂಟೆ ಸ್ನಾನಕ್ಕೆ ಮೀಸಲು.

ಇನ್ಫೆಕ್ಷನ್ ಆಗುತ್ತೆ ಅನ್ನೋ ಭಯದಿಂದ ಪ್ಲಾಸ್ಟಿಕ್ ಕವರ್‌ಗಳನ್ನು ಕೈಗವಸು ತರಾ ಬಳಸುತ್ತಾ ಇದ್ರು. ಡೋರ್ ಮುಟ್ಟಲು ಒಂದು ಕವರ್.. ನಳ ತಿರುಗಿಸಲು ಮತ್ತೊಂದು ಕವರ್.. ಸೋಪ್ ಮುಟ್ಟಲು ಮಗದೊಂದು ಕವರ್.. ಟವೆಲ್ ತೆಗೆದುಕೊಳ್ಳೋಕೆ ಇನ್ನೊಂದು ಕವರ್.. ಹೀಗೆ.. ಮತ್ತೆ ರಾತ್ರಿ ನಿದ್ದೆಗೆ.

ಆಫೀಸ್‌ನಲ್ಲಿ ಎಷ್ಟೇ ಕೆಲಸ ಟೆನ್ಶನ್ ಇದ್ರೂ, ಇವರಿಗೆ ಅದು ಮುಖ್ಯ ಆಗ್ತಿರಲಿಲ್ಲ. ಇವರಿಗೆ ಮುಖ್ಯ ಆಗ್ತಾ ಇದ್ದಿದ್ದು ಯಾವಾಗ ಹೋಗಿ ಸ್ನಾನ ಮಾಡೋಣ.. ಯಾವಾಗ ಶುಚಿಯಾಗೋಣ ಅನ್ನೋ ಟೆನ್ಶನ್‌ನಲ್ಲೇ ಕೆಲಸ ಮುಗಿಸಿ ಮನೆಗೆ ದೌಡಾಯಿಸ್ತಾ ಇದ್ದರು.

ಟೆಕ್ಕಿಯ ಓಸಿಡಿ ಸಮಸ್ಯೆಯನ್ನು ಅರಗಿಸಿಕೊಳ್ಳಲಾಗದೇ ಇವರ ಪತ್ನಿ ಡೈವೋರ್ಸ್ ನೀಡಿ ಹೋದ್ರು. ಈಗ ತಾಯಿ ಆರೈಕೆಯಲ್ಲಿ ಆ ಟೆಕ್ಕಿ ಇದ್ದಾರೆ. ಮನೋವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

 ಓಸಿಡಿ (ಗೀಳುಮನೋರೋಗ)ಎಂಬುವುದು ಮನಸ್ಸಿಗೆ ಸಂಬಂಧಿಸಿದ ಕಾಯಿಲೆ. ವ್ಯಕ್ತಿಯೊಬ್ಬ ಒಂದೇ ವರ್ತನೆಯನ್ನು ಪದೇ ಪದೇ ಪ್ರದರ್ಶಿಸುವುದು ಇದರ ಗುಣ. ಆಲೋಚನೆಗಳು ಮಾನವನಿಗೆ ಸಹಜ. ಆದರೆ ಅದು ಅತಿಯಾದರೆ ತೊಂದರೆಗಳು ಕಟ್ಟಿಟ್ಟ ಬುತ್ತಿ.

ಈ ರೀತಿಯ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಪದೇ ಪದೇ ಪುನರಾವರ್ತನೆಯಾಗುತ್ತಿದ್ದರೆ, ಇದರಿಂದ ಮಾನಸಿಗೆ ತೊಂದರೆ ಉಂಟಾಗುತ್ತಿದ್ದರೆ ಇದನ್ನು ಕಡೆಗಾಣಿಸದೆ ಕೂಡಲೇ ಒಮ್ಮೆ ವ್ಯೆದ್ಯರನ್ನು ಭೇಟಿ ಮಾಡುವುದು ಒಳಿತು.

ಉದಾಃ ಮತ್ತೆ ಮತ್ತೆ ಕಾಲು ತೊಳೆಯುವುದು, ಪದೇ ಪದೇ ಗ್ಯಾಸ್ ಆಫ್ ಆಗಿದೆಯಾ ಎಂದು ಪರೀಕ್ಷಿಸುವುದು, ಡೋರ್ ಲಾಕ್ ಆಗಿದೆಯಾ ಎಂದು ನೋಡುವುದು,  ಇತ್ಯಾದಿ.

ಸಂಶೋಧನೆಯೊಂದರ ಪ್ರಕಾರ ಗೀಳು ಮನೋರೋಗ ಹೊಂದಿರುವ ಶೇ. 18 ರಷ್ಟು ರೋಗಿಗಳು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದು, ಶೇ 33 ರಷ್ಟು ವ್ಯಕ್ತಿಗಳಿಗೆ ಪದೇ ಪದೇ ಆತ್ಮಹತ್ಯೆಯ ಯೋಚನೆಗಳು ಬರುತ್ತದೆ.

ಇದು ವ್ಯಕ್ತಿಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಜೀವನವನ್ನು ಆವಲಂಬಿಸಿರುತ್ತದೆ. ಮೆದುಳಿನಲ್ಲಿ ಉಂಟಾಗುವ ಕೆಲ ಏರುಪೇರುಗಳ ಕಾರಣದಿಂದ ಈ ಖಾಯಿಲೆ ಬರುವ ಸಾಧ್ಯತೆ ಹೆಚ್ಚು.

ಯಾವುದೇ ಖಾಯಿಲೆಗೂ ಪರಿಹಾರವಿಲ್ಲ ಎಂದು ತಿಳಿಯಬಾರದು. ಎಲ್ಲಾ ಖಾಯಿಲೆಗೂ ಪರಿಹಾರವಿರುತ್ತದೆ. ಹೆಚ್ಚಿನ ಜನ ಮನೋರೋಗವನ್ನು ಒಂದು ಖಾಯಿಲೆಯಾಗಿ ಪರಿಗಣಿಸುವುದಿಲ್ಲ. ಇದನ್ನು ನಿರ್ಲಕ್ಷಿಸಿದಾಗ ಈ ಕಾಯಿಲೆಗಳು ಅತಿರೇಕಕ್ಕೆ ಹೋಗುವ ಸಾಧ್ಯತೆ ಇರುತ್ತದೆ.

ಯಾವುದೇ ರೀತಿಯ ಮನೋರೋಗದಿಂದ ಬಳಲುತ್ತಿದ್ದರೂ ಒಮ್ಮೆ ವ್ಯೆದ್ಯರನ್ನು ಭೇಟಿ ಮಾಡುವುದು ಒಳಿತು. ಗೀಳು ರೋಗಕ್ಕೆ ದೀರ್ಘಕಾಲ ಕೊಡಬಹುದಾದ ಮೆಡಿಸಿನ್ ಗಳು ಇಂದು ಲಭ್ಯವಿದೆ.

ಆದರೆ, ಮೆಡಿಸಿನ್ ತೆಗೆದುಕೊಳ್ಳುವ ಮೊದಲು ಮತ್ತು ಬಿಡುವ ವೇಳೆ ವ್ಯೆದ್ಯರ ಮಾರ್ಗದರ್ಶನ ಅತಿ ಮುಖ್ಯ. ಯಾವುದೇ ಮನೋರೋಗಕ್ಕೆ ಮೆಡಿಸಿನ್ ಕಾರ್ಯನಿರ್ವಹಿಸಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ವ್ಯಕ್ತಿಯು ಆಶಾಭಾವನೆ ಹೊಂದಿರಬೇಕು.

ಮನಸ್ಸಿನ ದ್ವಂದ್ವಗಳಿಗೆ ಪರಿಹಾರ ಸೂಚಿಸಬಲ್ಲ ಸಾಂತ್ವನ, ಸಮಾಧಾನ ಹೇಳಬಲ್ಲ ಮನೋಚಿಕಿತ್ಸೆಯೂ ಅತಿ ಮುಖ್ಯ. ಮನಸ್ಸನ್ನು ಉಲ್ಲಾಸಗೊಳಿಸುವ ಯೋಗ. ಧ್ಯಾನ, ವಾಯುವಿಹಾರ, ಸಂಗೀತ, ಪ್ರಕೃತಿ ವೀಕ್ಷಣೆ, ದೀರ್ಘ ಉಸಿರಾಟ ಇವು ಮನುಷ್ಯನ ಭಯ, ಆತಂಕ ನಿವಾರಿಸಬಲ್ಲ ಸಾಧನಗಳು.

ಗೀಳು ಕಾಯಿಲೆಯ ಅತಿ ದೊಡ್ಡ ದುರಂತ ಎಂದರೆ ಇದನ್ನು ಜನ ಕಾಯಿಲೆ ಎಂದು ಗುರುತಿಸದೇ ತಾವೇ ಅದನ್ನು ನಿಯಂತ್ರಿಸಲು ಪ್ರಯತ್ನ ಪಡುವುದು. ಈ ಕಾಯಿಲೆ ಬರಲು ಬಡವ, ಶ್ರೀಮಂತ, ವಿದ್ಯಾವಂತ, ಅವಿದ್ಯಾವಂತ ಎಂಬ ಭೇದವಿರುವುದಿಲ್ಲ. ಇದು ಯಾರಿಗೂ ಬರಬಹುದಾದಂತಹ ಮಾನಸಿಕ ರೋಗ.

ಗೀಳು ರೋಗದ ವ್ಯಕ್ತಿಯೊಂದಿಗೆ ನಾವು ಬೆರೆತಾಗ ಅವರನ್ನು ನಿರ್ಲಕ್ಷಿಸದೆ ಅವರಿಗೆ ಸಾಂತ್ವನ, ಧ್ಯೆರ್ಯ ಹೇಳುವುದು ಅತ್ಯಗತ್ಯ.

LEAVE A REPLY

Please enter your comment!
Please enter your name here