ದಕ್ಷಿಣ ಕನ್ನಡದಲ್ಲಿ 10 ತಿಂಗಳ ಕೊರೋನಾ ಪಾಸಿಟಿವ್‌ ಮಗು ಗುಣಮುಖ – ವಾರದಲ್ಲಿ ಒಂದೇ ಒಂದು ಹೊಸ ಕೇಸಿಲ್ಲ

ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಾಡು ಗ್ರಾಮದ 10 ತಿಂಗಳ ಮಗು ಗುಣಮುಖವಾಗಿದೆ. ಏಪ್ರಿಲ್‌‌ 11 ಅಂದರೆ ಇವತ್ತು ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮಗುವಿನ ತಾಯಿ ಮತ್ತು ಅಜ್ಜಿಯ ವೈದ್ಯಕೀಯ ವರದಿಯಲ್ಲಿ ಕೊರೋನಾ ನೆಗೆಟಿವ್‌ ಆಗಿದ್ದು ಅವರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಇಲ್ಲಿವರೆಗೆ 12 ಕೊರೋನಾ ಪಾಸಿಟಿವ್‌ ಪ್ರಕರಣ ಕಾಣಿಸಿಕೊಂಡಿತ್ತು. ಇವರಲ್ಲಿ 6 ಮಂದಿ ಕೊರೋನಾ ಪೀಡಿತರು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ.

ಸಮಾಧಾನಕಾರ ಸಂಗತಿಯೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 1 ವಾರದಲ್ಲಿ ಹೊಸದಾಗಿ ಕೊರೋನಾ ಪಾಸಿಟಿವ್‌ ಕೇಸ್‌ ಕಾಣಿಸಿಕೊಂಡಿಲ್ಲ. ಕೇಂದ್ರ ಸರ್ಕಾರ ಗುರುತಿಸಿದ್ದ ಐದು ಕೊರೋನಾ ಹಾಟ್‌ಸ್ಪಾಟ್‌ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡವೂ ಒಂದಾಗಿದೆ.

10 ತಿಂಗಳ ಮಗುವಿಗೆ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿದ್ದು ಕರ್ನಾಟಕದಲ್ಲಿ ಕೊರೋನಾ ಆತಂಕವನ್ನು ಇನ್ನಷ್ಟು ಹೆಚ್ಚಿಸಿತ್ತು. ಆದರೆ ವೈದ್ಯರ ಪರಿಶ್ರಮದಿಂದ ಮಗು ಈಗ ಗುಣಮುಖವಾಗಿ ಮನೆ ಸೇರಿದೆ.

ಕೊರೋನಾಗೆ ಒಳಗಾಗಿದ್ದ 10 ತಿಂಗಳ ಮಗುವಿಗೆ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿತ್ತು. ವಿಶೇಷ ಏನೆಂದರೆ ಮಗುವಿನಲ್ಲಿ ಕೊರೋನಾ ಕಾಣಿಸಿಕೊಂಡ ಬಳಿಕ ಇಡೀ ಗ್ರಾಮಕ್ಕೆ ಹರಡದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಈ ಊರಿನಿಂದ ಹೊರಗೆ ಹೋಗಲು ಮತ್ತು ಈ ಊರಿನ ಒಳಗೆ ಹೋಗಲು ಯಾರಿಗೂ ಅನುಮತಿ ಕೊಟ್ಟಿರಲಿಲ್ಲ. ಇಡೀ ಗ್ರಾಮವನ್ನೇ ಸಂಪೂರ್ಣ ಬಂದ್‌ ಮಾಡಿ ಗ್ರಾಮಸ್ಥರ ಮನೆ ಬಾಗಿಲಿಗೆ ಜಿಲ್ಲಾಡಳಿತ ದಿನಸಿ ಒಳಗೊಂಡಂತೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಿತ್ತು.

LEAVE A REPLY

Please enter your comment!
Please enter your name here