ತೆಲಂಗಾಣ ಮೂಲದ ಬೆಂಗಳೂರು ಟೆಕ್ಕಿ ಕೊರೋನಾದಿಂದ ಚೇತರಿಸಿಕೊಂಡಿದ್ದು ಹೇಗೆ..?

ಕೊರೋನಾ ವೈರಸ್ ನಿವಾರಣೆಗೆ ಈವರೆಗೂ ಔಷಧಿ ಕಂಡುಹಿಡಿಯಲು ಆಗಿಲ್ಲ. ಈ ಹಿನ್ನೆಲೆಯಲ್ಲಿ ಕೊರೋನಾ ಬಾಧಿತರಿಗೆ ನೀಡುವ ಚಿಕಿತ್ಸೆ ಬಗ್ಗೆ ದೊಡ್ಡಮಟ್ಟದ ಚರ್ಚೆಯೇ ನಡೆಯುತ್ತಿದೆ. ತೆಲಂಗಾಣ ಮೂಲದ ಬೆಂಗಳೂರು ಟೆಕ್ಕಿಗೆ ಮೊದಲು ಕೊರೋನಾ ವೈರಸ್ ಬಾಧಿಸಿತ್ತು. ಮಾರ್ಚ್ 3ರಂದು ಹೈದರಾಬಾದ್‍ನ ಗಾಂಧಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಾಗಿದ್ದ ಕೊರೋನಾ ಸೋಂಕಿತ ಟೆಕ್ಕಿಯೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಟೆಕ್ಕಿ ಚೇತರಿಕೆಗೆ ವೈದ್ಯರು ನೀಡಿದ ಔಷಧಿಗಳೇನು ಎಂಬ ಮಾಹಿತಿಯನ್ನು ಗಾಂಧಿ ಆಸ್ಪತ್ರೆ ಅಧೀಕ್ಷಕರು ನೀಡಿದ್ದಾರೆ.

ಅಮೆರಿಕಾದಲ್ಲಿ ಕೊರೋನಾ ಸೋಂಕಿತರಿಗೆ ಮಲೇರಿಯಾ ನಿವಾರಣೆಗೆ ಬಳಸುವ ಕ್ಲೋರೋಕ್ವೀನ್ ಸೇರಿದಂತೆ ಹಲವು ಔಷಧಿಗಳನ್ನು ಬಳಸಲಾಗುತ್ತಿದೆ. ಆದರೆ, ಇದಕ್ಕೂ ಮುನ್ನವೇ, ಭಾರತದಲ್ಲಿ ಇದರ ಪ್ರಯೋಗವಾಗಿದೆ. ತೆಲಂಗಾಣ ಮೂಲದ ಬೆಂಗಳೂರು ಟೆಕ್ಕಿಯ ಚೇತರಿಕೆಗಾಗಿ ಕ್ಲೋರೋಕ್ವೀನ್ ಔಷಧಿಯನ್ನು ಬಳಸಿದ್ದಾಗಿ ಗಾಂಧಿ ಆಸ್ಪತ್ರೆಯ ಅಧೀಕ್ಷಕ ಶ್ರವಣ್ ಕುಮಾರ್ ತಿಳಿಸಿದ್ದಾರೆ.

ಮೊದಲು ಏಡ್ಸ್, ಎಬೋಲಾ, ಅರ್ಥರೈಟೀಸ್‍ಗೆ ನೀಡುವ ಔಷಧಿಗಳನ್ನು ಕೊರೋನಾ ಬಾಧಿತನಿಗೆ ಚೇತರಿಕೆಗೆ ಬಳಲಾಯಿತು. ಕೊನೆಗೆ ಮಲೇರಿಯಾ ರೋಗ ನಿವಾರಣೆಗೆ ಬಳಸುವ ಔಷಧಿ ಬಳಸಲಾಯಿತು. ಜನೆರಲ್ ಫಿಸಿಷಿಯನ್, ಪಲ್ಮನಾಲಜಿಸ್ಟ್, ಜನೆರಲ್ ಮೆಡಿಸನ್, ಸೈಕಾಲಜಿಸ್ಟ್‍ಗಳಿಂದ ಕೂಡ ವೈದ್ಯರ ತಂಡ ಒಟ್ಟಾಗಿ ಸಮಾಲೋಚಿಸಿ ಚಿಕಿತ್ಸೆ ಮುಂದುವರೆಸಲಾಯಿತು. ಕೊರೋನಾ ಸೋಂಕಿತನ ದೇಹ ಸ್ಥಿತಿ ಗಮನಿಸಿ ಚಿಕಿತ್ಸೆ ನೀಡಲಾಯಿತು ಎಂದು ಅಧೀಕ್ಷಕ ಶ್ರವಣ್ ಕುಮಾರ್ ತಿಳಿಸಿದ್ದಾರೆ

ಆಸ್ಪತ್ರೆಗೆ ದಾಖಲಾಗುವ ವೇಳೆಗಾಗಲೇ ನ್ಯುಮೋನಿಯಾ, ಜ್ವರ, ಕೆಮ್ಮು, ಬಾಡಿಪೇನ್‍ನಿಂದ ಟೆಕ್ಕಿ ಬಳಲುತ್ತಿದ್ದರು. ಮೊದಲು ಇವುಗಳ ನಿವಾರಣೆಗೆ ಚಿಕಿತ್ಸೆ ನೀಡಲಾಯಿತು. ಉಸಿರಾಟದ ತೊಂದರೆ ಕಂಡು ಬಂದಾಗ ಆಕ್ಸಿಜನ್ ನೀಡುತ್ತಾ ಕ್ಷಣ ಕ್ಷಣಕ್ಕೂ ಟೆಕ್ಕಿ ಆರೋಗ್ಯದ ಮೇಲೆ ನಿಗಾ ಇರಿಸಲಾಗಿತ್ತು. ರಕ್ತದೊತ್ತಡ ನಿಯಂತ್ರಿಸುತ್ತಾ ಫ್ಲೂಯೆಡ್ಸ್ ನೀಡಲಾಯಿತು. ಕ್ಲೋರೋ ಕ್ವೀನ್ ಜೊತೆಗೆ ಹೆಚ್‍ಐವಿ, ಎಬೋಲಾ ರೋಗಿಗಳಿಗೆ ನೀಡುವ ಲುವಿನವೀರ್, ರೆಮಿಡಿಸಿವೀರ್ ಔಷಧಿಗಳನ್ನು ನಿರಂತರವಾಗಿ ನೀಡಲಾಯಿತು.

ಕೋರೋನಾ ಬಾಧಿತ ಟೆಕ್ಕಿ ಖಿನ್ನತೆಗೆ ಒಳಗಾಗಬಾರದೆಂದು ಸೈಕಾಲಜಿಸ್ಟ್ ಮೂಲಕ ಕೌನ್ಸೆಲಿಂಗ್ ನೀಡಲಾಯಿತು. ಹೀಗಾಗಿ ನ್ಯುಮೋನಿಯಾ ಜೊತೆಗೆ ಜ್ವರ ಕೂಡ ಇಳಿಮುಖವಾಯಿತು. 8ನೇ ದಿನ ಕೊರೋನಾ ವೈರಾಣು ಪರೀಕ್ಷೆ ನಡೆಸಿದಾಗ ನೆಗೆಟೀವ್ ರಿಪೋರ್ಟ್ ಬಂತು. ಎರಡು ದಿನ ಬಿಟ್ಟು ಮತ್ತೆ ಪರೀಕ್ಷೆ ನಡೆಸಿದಾಗಲೂ ಕೊರೋನಾ ಇಲ್ಲ ಎಂಬ ವರದಿ ಬಂತು.

ಟೆಕ್ಕಿ ಸಂಪೂರ್ಣವಾಗಿ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಲಾಗಿದೆ. ಟೆಕ್ಕಿಯನ್ನು ಗೃಹ ನಿರ್ಬಂಧದಲ್ಲಿ ಇರಿಸಲಾಗಿದೆ. ಆತನ ಮನೆಯವರಿಗೆ ಸೋಂಕಿನ ಲಕ್ಷಣ ಕಂಡುಬಂದಿಲ್ಲ ಎಂದು ಗಾಂಧಿ ಆಸ್ಪತ್ರೆ ಅಧೀಕ್ಷಕ ಶ್ರವಣ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here