ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ – ನಮ್ಮಲ್ಲೂ ಆಗುತ್ತಾ..? ಈ ಸುದ್ದಿ ಓದಿ..!

ಕೊರೋನಾ ವೈರಸ್ ಅಬ್ಬರ ಹಿನ್ನೆಲೆಯಲ್ಲಿ ಇಡೀ ದೇಶದಲ್ಲೇ ಏಪ್ರಿಲ್ 14ರವರೆಗೆ ಲಾಕ್​ಡೌನ್​ ಮಾಡಿರುವುದರಿಂದ ದೇಶದ ಅರ್ಥ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ಕೆಲವು ರಾಜ್ಯಗಳು ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ವೇತನ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಉಳಿಕೆ ಸಂಬಳದ ಮೊತ್ತವನ್ನು ಕೊರೋನಾ ತಡೆ ಕಾರ್ಯಾಚರಣೆಗೆ ಉಪಯೋಗಿಸಲು ನಿರ್ಧರಿಸಿವೆ.

ಈಗಾಗಲೇ ಮಹಾರಾಷ್ಟ್ರ ಮತ್ತು ತೆಲಂಗಾಣ ಸರ್ಕಾರಗಳು ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಂಬಳವನ್ನು ತಿಂಗಳ ಮಟ್ಟಿಗೆ ಕಡಿತಗೊಳಿಸಿವೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ರಾವ್‌, ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ರಾಜ್ಯದ ವಿವಿಧ ನಿಗಮಗಳ ಅಧ್ಯಕ್ಷರು ಮತ್ತು ನಗರ ಹಾಗೂ ಪಂಚಾಯತ್‌ ಪ್ರತಿನಿಧಿಗಳ ಸಂಬಳದಲ್ಲಿ ಶೇಕಡಾ 75ರಷ್ಟು ಕಡಿತ ಮಾಡಲಾಗಿದೆ.

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಹಾಗೂ ಕೇಂದ್ರೀಯ ಸೇವೆಗಳ ಅಧಿಕಾರಿಗಳ ಸಂಬಳದಲ್ಲಿ ಶೇಕಡಾ ೬೦ರಷ್ಟು ಕಡಿತ ಮಾಡಲಾಗಿದೆ. ಇತರೆ ನೌಕರರ ಸಂಬಳವನ್ನು ಶೇಕಡಾ 50ರಷ್ಟು ಕಡಿತಗೊಳಿಸಲಾಗಿದೆ.

ಡಿಗ್ರೂಪ್‌ ನೌಕರರು ಮತ್ತು ಹೊರಗುತ್ತಿಗೆ ಹಾಗೂ ಗುತ್ತಿಗೆ ನೌಕರರ ಸಂಬಳದಲ್ಲಿ ಶೇಕಡಾ 10ರಷ್ಟು ಕಡಿತಗೊಳಿಸಿ ತೆಲಂಗಾಣ ಸಿಎಂ ಕೆಸಿಆರ್‌ ಆದೇಶಿಸಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ, ಸಚಿವರ ಸಂಬಳವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇನ್ನು ಸ್ಥಳೀಯ ಜನಪ್ರತಿನಿಧಿಗಳ ಸಂಬಳದಲ್ಲಿ ಶೇಕಡಾ 40ರಷ್ಟನ್ನು ಮಾತ್ರ ಮಾರ್ಚ್‌ನಲ್ಲಿ ನೀಡಲಾಗುತ್ತದೆ.

ಎ ಮತ್ತು ಬಿ ದರ್ಜೆಯ ರಾಜ್ಯ ಸರ್ಕಾರಿ ನೌಕರರು ಶೇಕಡಾ ೫೦ರಷ್ಟು ಸಂಬಳವನ್ನು ಪಡೆಯಲಿದ್ದು, ಸಿ ದರ್ಜೆಯ ನೌಕರರ ಶೇಕಡಾ 25ರಷ್ಟು ಸಂಬಳ ಕಡಿತಗೊಳ್ಳಲಿದೆ. ಆದರೆ ಡಿ ಗ್ರೂಪ್‌ ನೌಕರರ ಸಂಬಳದಲ್ಲಿ ಯಾವುದೇ ಕಡಿತ ಇಲ್ಲ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಸಂಬಳಕ್ಕೆ ಈ ಆದೇಶ ಅನ್ವಯಿಸಲಿದೆ.

ಸದ್ಯ ತೆಲಂಗಾಣ ಮತ್ತು ಮಹಾರಾಷ್ಟ್ರವಷ್ಟೇ ಇಂತಹ ನಿರ್ಧಾರಗಳನ್ನು ಕೈಗೊಂಡಿವೆ. ಕೊರೋನಾ ಲಾಕ್‌ಡೌನ್‌ನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬಿದ್ದಿದ್ದು ಅವುಗಳನ್ನು ಸರಿದೂಗಿಸುವುದಕ್ಕೆ ತಮ್ಮದೇ ಆದ ಕ್ರಮಗಳನ್ನು ಅನುಸರಿಸುತ್ತಿವೆ. ಇದೇ ನಿರ್ಧಾರವನ್ನು ಕರ್ನಾಟಕ ಸರ್ಕಾರವೂ ಕೈಗೊಳ್ಳುತ್ತಾ ಎನ್ನುವ ಚರ್ಚೆ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ನಡೆಯುತ್ತಿದೆ.

LEAVE A REPLY

Please enter your comment!
Please enter your name here