ತಿರುಪತಿ ತಿರುಮಲ ಬೆಟ್ಟಗಳ ವಿಶೇಷ

ಏಡುಕೊಂಡಲವಾಡಾ, ಸಪ್ತಗಿರಿ ವಸಾ ಎಂದೆಲ್ಲಾ ಕರೆಸಿಕೊಳ್ಳುವ ತಿರುಪತಿ ತಿಮ್ಮಪ್ಪ ನೆಲೆಸಿರುವ ಸಪ್ತಗಿರಿ ಬೆಟ್ಟಗಳ ಬಗ್ಗೆ ನಿಮಗೆಷ್ಟು ಗೊತ್ತು..!

ಹೆಸರೇ ಹೇಳುವಂತೆ ಸಪ್ತಗಿರಿ. ಅಂದ್ರೆ, ಏಳು ಬೆಟ್ಟಗಳು. ತೆಲುಗಿನಲ್ಲಿ ಏಡುಕೊಂಡಲ. ಅಂದರೆ, ಏಳು ಬೆಟ್ಟಗಳು. ಏಳು ಬೆಟ್ಟಗಳ ಒಡೆಯನೇ ನಮ್ಮ ತಿರುಪತಿ ತಿಮ್ಮಪ್ಪ. ಈ ಏಳೂ ಬೆಟ್ಟಗಳಿಗೂ ಒಂದೊಂದು ಪುರಾಣ ಕಥೆಗಳಿವೆ. ಒಂದೊಂದು ಬೆಟ್ಟದ ಬಗ್ಗೆ ಹೇಳುತ್ತಾ ಹೋದರೆ, ಮೈ ರೋಮಾಂಚನಗೊಳ್ಳುತ್ತೆ.

ಅರೆರೇ, ನಾವು ಸುಮ್ಮನೇ ತಿರುಪತಿಗೆ ಹೋಗಿ ಬರ್ತೇವೆ, ಆದ್ರೆ, ಈ ಬಗ್ಗೆ ಗಮನಿಸಿಯೇ ಇಲ್ಲವಲ್ಲ ಎಂದೆನಿಸುತ್ತದೆ. ಪೂರ್ವ ಘಟ್ಟಗಳ ಸಾಲಿನಲ್ಲಿ ಬರುವ ತಿರುಪತಿ ತಿಮ್ಮಪ್ಪನ ಆವಾಸ ಸ್ಥಾನದ ಬಗ್ಗೆ ತಿಳಿದಷ್ಟೂ ಉತ್ಸಾಹ ಕಡಿಮೆ ಆಗೋದಿಲ್ಲ.

 

ಸಪ್ತಗಿರಿಗಳಲ್ಲಿ ಮೊದಲನೆಯ ಬೆಟ್ಟವೇ, ವೃಷಭಾದ್ರಿ ಬೆಟ್ಟ
ವೃಷಭ ಅಂದ್ರೆ, ನಂದಿ. ಶಿವನ ವಾಹನ. ಪರಮಾತ್ಮನಿಗೆ ತನ್ನ ಹೆಗಲ ಮೇಲೆ ಸ್ಥಾನಕೊಟ್ಟ ಕಾರಣ, ಬೆಟ್ಟಕ್ಕೆ ವೃಷಭಾದ್ರಿ ಎಂದು ಹೆಸರು. ಬರೀ ಹೆಸರಲ್ಲ. ಈ ಬೆಟ್ಟ ನೋಡೋಕ್ಕೂ ಸಹಾ, ನಂದಿಯ ರೂಪದಲ್ಲೇ ಇದೆ. ಆಕಾಶ ಮಾರ್ಗದಲ್ಲಿ ನೋಡಿದರಂತೂ, ಸಾಕ್ಷಾತ್, ನಂದಿ ವಾಹನನೇ ಮಲಗಿದಂತೆ ಕಾಣುತ್ತದೆ.

ಎರಡನೇ ಬೆಟ್ಟ ಅಂಜನಾದ್ರಿ.
ಪರಮಾತ್ಮನ ಪರಮ ಭಕ್ತ ಹನುಮನ ಬೆಟ್ಟವಿದು. ತನ್ನ ಒಡೆಯ ಎಲ್ಲಿರುತ್ತಾನೋ, ಅಲ್ಲಿರುತ್ತಾನೆ ಹನುಮ. ಹೀಗಾಗಿ, ಸಪ್ತಗಿರಿಯಲ್ಲಿ ಅಂಜನಾದ್ರಿ ಬೆಟ್ಟಕ್ಕೂ ಪರಮಪೂಜ್ಯ ಸ್ಥಾನಮಾನವಿದೆ
ಮೂರನೆಯದಾಗಿ, ನೀಲಾದ್ರಿ ಬೆಟ್ಟ.
ನೀಲಾದ್ರಿ ಬೆಟ್ಟದ ಕತೆಯಂತೂ ಬಹಳ ರೋಚಕ. ನೀಲಾದೇವಿಯ ರೂಪವಾಗಿ, ಈ ಬೆಟ್ಟ ಮೈದಳೆದು ನಿಂತಿದೆ. ನೀಲಾದೇವಿ, ತಿರುಪತಿ ತಿಮ್ಮಪ್ಪನ ಪರಮ ಭಕ್ತೆ. ನಾನು ಸದಾ, ನಿನ್ನ ಸೇವೆಯಲ್ಲೇ, ನಿನ್ನ ಪದತಲದಲ್ಲೇ ಇರಬೇಕೆಂಬ ತಪಸ್ಸು ಮಾಡಿದಾಕೆ ನೀಲಾದೇವಿ. ಅವಳ ಭಕ್ತಿಗೆ ಮೆಚ್ಚಿ, ದರ್ಶನ ನೀಡಿದ ತಿಮ್ಮಪ್ಪ, ನೀಲಾದ್ರಿ ಬೆಟ್ಟದ ರೂಪದಲ್ಲಿರಲು ಅವಕಾಶ ಮಾಡಿಕೊಟ್ಟ ಎಂಬುದು ಪುರಾಣ ಐತಿಹ್ಯ. ವಿಶೇಷ ಅಂದ್ರೆ, ತಿರುಪತಿಯಲ್ಲಿ, ಲಕ್ಷಾಂತರ ಭಕ್ತರು ಕೊಡುವ ಕೂದಲ ಮುಡಿ, ನೀಲಾದೇವಿ ಮೂಲಕವೇ ಪರಮಾತ್ಮನಿಗೆ ಅರ್ಪಣೆಯಾಗುತ್ತದೆ ಎಂಬುದೂ ನಂಬಿಕೆ.
ನಾಲ್ಕನೇ ಬೆಟ್ಟ ಗರುಡಾದ್ರಿ ಅಥವಾ ಗರುಡಾಚಲಂ:

ಹೆಸರೇ ಹೇಳುವಂತೆ ಇದು ವಿಷ್ಣುವಿನ ವಾಹನ ಗರುಡನ ಬೆಟ್ಟ. ನೋಡಲೂ ಗರುಡನ ರೂಪದಲ್ಲೇ ಇದೆ. ಗರುಡಾದ್ರಿಗೆ, ಇಡೀ ಸಪ್ತಗಿರಿಯಲ್ಲಿ ವಿಶೇಷ ಸ್ಥಾನ. ಪರಮಾತ್ಮನ ಇಡೀ ಆವಾಸಸ್ಥಾನವನ್ನು, ತನ್ನ ಹೆಗಲ ಮೇಲೆ ಕೂರಿಸಿಕೊಂಡಿದ್ದಾನೆ ಗರುಡ. ತಿರುಮಲ ಬೆಟ್ಟದಿಂದ ಕೆಳಗೆ ಇಳಿಯುವಾಗ, ಗರುಡಾದ್ರಿ ಬೆಟ್ಟದ ದರ್ಶನ ಸಿಗುತ್ತದೆ. ಸಾಕ್ಷಾತ್ ಗರುಡನೇ ನಿಂತಿರುವ ಪರಮ ಪುಣ್ಯ ದೃಶ್ಯ ಕಾಣುತ್ತದೆ.

ಐದನೇ ಬೆಟ್ಟ ಶೇಷಾದ್ರಿ ಅಥವಾ ಶೇಷಾಚಲಂ :
ಶೇಷಾದ್ರಿ, ಅಂದ್ರೆ ಆದಿಶೇಷ. ವಿಷ್ಣುವಿನ ಹಾಸಿಗೆ. ತನ್ನ ದೇಹವನ್ನೇ ಪರಮಾತ್ಮನ ಹಾಸಿಗೆಯಾಗಿಸಿ, ತಿಮ್ಮಪ್ಪ ಪವಡಿಸುವಂತೆ ಮಾಡಿದ್ದಾನೆ ಆದಿಶೇಷ. ಈ ಬೆಟ್ಟವನ್ನು ಶೇಷಾದ್ರಿ ಎಂದು ಕರೆಯಲಾಗುತ್ತದೆ. ತೆಲುಗಿನಲ್ಲಿ ಇದು ಶೇಷಾಚಲಂ ಎಂದು ಹೆಸರುವಾಸಿ.
ಆರನೇ ಬೆಟ್ಟ ನಾರಾಯಣಾದ್ರಿ :
ಸಪ್ತಗಿರಿ ಬೆಟ್ಟಗಳಲ್ಲಿ ನಾರಾಯಣಾದ್ರಿ ಸಾಕ್ಷಾತ್ ಪರಮಾತ್ಮನ ಸ್ವರೂಪವೇ ಈ ಬೆಟ್ಟ ಎಂಬ ನಂಬಿಕೆ. ಇಲ್ಲೇ ತಿರುಪತಿ ತಿಮ್ಮಪ್ಪನ ಪಾದವಿದೆ ಎಂಬುದೂ ಪುರಾಣ ಐತಿಹ್ಯ.
ಏಳನೇ ಬೆಟ್ಟ ವೆಂಕಟಾದ್ರಿ :
ಸಪ್ತಗಿರಿ ಬೆಟ್ಟಗಳಲ್ಲಿ ವೆಂಕಟಾದ್ರಿ ಬೆಟ್ಟ. ಸಾಕ್ಷಾತ್ ವಿಷ್ಣು ಪರಮಾತ್ಮನ ಪ್ರತಿರೂಪವಾಗಿ, ಈ ವೆಂಕಟಾದ್ರಿ ಬೆಟ್ಟವಿದೆ.

 

LEAVE A REPLY

Please enter your comment!
Please enter your name here