ತಲೆ ಬುಡ ತಿಳಿಯದೆ ಸಂಪೂರ್ಣ ದಾರಿ ತಪ್ಪಿಸುವ ಆರ್ಥಿಕ ಪ್ಯಾಕೇಜ್ – ಆಮ್ ಆದ್ಮಿ ಪಕ್ಷ

ಕೊರೊನಾದಿಂದ ಉಂಟಾದ ಸಂಕಷ್ಟಕ್ಕೆ ಮದ್ದು ನೀಡುವುದಾಗಿ ಹೇಳಿದ ಮಾನ್ಯ ಪ್ರಧಾನಿಗಳು ಖಾಲಿ ಹಾಳೆಯಂತಹ ಸುಮಾರು 20 ಲಕ್ಷ ಕೋಟಿಯ ದೊಡ್ಡ ಮೊತ್ತದ ಪ್ಯಾಕೇಜ್ ಘೋಷಿಸಿದರು. ಈ ಖಾಲಿ ಹಾಳೆಯನ್ನು ತುಂಬಿಸುವಂತೆ ಯಾವ ಯಾವ ವಲಯಕ್ಕೆ ಎಷ್ಟು ಹಣ ಮೀಸಲು ಎನ್ನುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವರದಿ ಒಪ್ಪಿಸಿದರೇ ಹೊರತು ನಯಾ ಪೈಸೆಯಷ್ಟು ಹಣವನ್ನು ಜನರಿಗೆ ನೀಡದೆ ದಾರಿ ತಪ್ಪಿಸುವ ಪ್ಯಾಕೇಜ್ ಎಂದು ಇದನ್ನು ಕರೆಯಬಹುದು.

ಲಾಕ್‌ಡೌನ್ ಮಾಡಿದ ಪರಿಣಾಮ ದೇಶದಲ್ಲಿ ಸಾಕಷ್ಟು ಸರಕುಗಳು ಖರ್ಚಾಗದೇ ಉಳಿದಿದೆ. ಈಗಾಗಲೇ ಪೂರೈಕೆ ಸಾಕಷ್ಟು ಇದ್ದರೂ ಸಹ ಗ್ರಾಹಕರಿಂದ ಬೇಡಿಕೆ ಇಲ್ಲದಾಗಿದೆ. ಈ ಸಂದರ್ಭದಲ್ಲಿ ಬೇಡಿಕೆಯನ್ನು ಹೆಚ್ಚಳ ಮಾಡುವಂತಹ ಯೋಜನೆಗಳನ್ನು ಘೋಷಿಸಿ ಎಂದರೆ ಕೇವಲ ಸಾಲ ಮಾಡಿ ಅದಕ್ಕೆ ಕೇಂದ್ರ ದುಡ್ಡು ನೀಡುವುದು ಎನ್ನುವುದು ಯಾವ ರೀತಿಯ ಲೆಕ್ಕಾಚಾರ ಎನ್ನುವುದು ತಿಳಿಯುತ್ತಿಲ್ಲ.

ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ಸಾಲ ನೀಡುವುದಕ್ಕೆ ಮೀಸಲು ಹಾಗೂ ನಿಮಗೆ ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ಎಂದು ಹೇಳಿದ್ದೀರಿ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಿಂದ ಒಂದೂ ನಯಾ ಪೈಸೆಯೂ ಸಹ ಸರ್ಕಾರದ ಬೊಕ್ಕಸದಿಂದ ಖರ್ಚಾಗುವುದಿಲ್ಲ, ಇಲ್ಲಿ ಮತ್ತೆ ಉದ್ದಿಮೆದಾರ ಸಾಲದ ಸುಳಿಗೆ ಸಿಲುಕುವಂತಾಗುತ್ತದೆ.

ಉದಾಹರಣೆಗೆ ಒಬ್ಬ ಉದ್ದಿಮೆದಾರ ಒಂದು ಕೋಟಿ ಸಾಲ ಮಾಡಿದರೆ ಆ 1 ಕೋಟಿಯಲ್ಲಿನ ಪ್ರತಿಶತ 20 ರಷ್ಟು ಅಂದರೆ 20 ಲಕ್ಷಕ್ಕೆ ಮಾತ್ರ ಕೇಂದ್ರ ಸರ್ಕಾರ ಗ್ಯಾರಂಟಿ ನೀಡಲಾಗುವುದೆಂದು ಘೋಷಿಸಿದ್ದಾರೆ. ಉಳಿದ 80 ಲಕ್ಷಕ್ಕೆ ಮಾಲೀಕನೇ ಗ್ಯಾರಂಟಿ ನೀಡಿ ಸಾಲವನ್ನು ಪಡೆದುಕೊಳ್ಳಬೇಕಾಗಿದೆ.

ಇದಲ್ಲದೆ ಬ್ಯಾಂಕುಗಳು ಸಾಮಾನ್ಯವಾಗಿ ಗರಿಷ್ಠವೆಂದರೆ 80% ಮಾತ್ರ ಸಾಲವನ್ನು ನೀಡುತ್ತದೆ.ಈ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರದ ಯಾವ ಸಹಾಯ ಧನವೂ ಸಹ ಲಭ್ಯವಾಗುವುದಿಲ್ಲ.

ಕೇಂದ್ರ ಸರ್ಕಾರ ಗ್ಯಾರಂಟಿ ನೀಡಿರುವ 20 ಲಕ್ಷ ಕೈಗೆ ಸಿಗುವುದೇ ಇಲ್ಲ. ಒಂದೂ ನಯಾಪೈಸೆಯೂ ಯಾರ ಜೇಬಿಗೂ ಹೋಗುವುದಿಲ್ಲ. ಈ ಮೊತ್ತದ ಉಪಯೋಗ ಆಗಬೇಕು ಎಂದರೆ ಮಾಲೀಕನು ತನ್ನ ಉದ್ಯಮವನ್ನು ಮುಚ್ಚಬೇಕಷ್ಟೇ.

ಇದು ಸಂಪೂರ್ಣವಾಗಿ ದಿಕ್ಕು ತಪ್ಪಿಸುವಂತಹ ಕೇಂದ್ರ ಬಜೆಟ್ಟಿನ ಮುಂದುವರೆದ ವರದಿ ಮಾತ್ರ.

ಸಾಲ ಮಾಡುವ ಶಕ್ತಿ ಇದ್ದಿದ್ದರೆ ಜನರು ಏಕೆ ಪ್ಯಾಕೇಜ್ ಕೇಳುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಇರುವ ಸಾಲವನ್ನೆ ತೀರಿಸಲು ಸಾದ್ಯವಿಲ್ಲ. ಎನ್ನುವ ಪರಿಸ್ಥಿತಿ ಇರುವಾಗ ಸಾಲ ತೀರಿಸಲು ಏನಾದರೂ ಸಹಾಯ ಮಾಡಿ ಎಂದರೆ ಮತ್ತಷ್ಟು ಸಾಲ ಮಾಡಿ ಎಂದು ಹೇಳುವುದು ಯಾವ ರೀತಿಯ ಲೆಕ್ಕಾಚಾರ ಎನ್ನುವುದನ್ನು ಕೇಂದ್ರ ಸರ್ಕಾರ ಬಿಡಿಸಿ ಹೇಳಬೇಕು.

ಶೇ 25 ರಷ್ಟು ಟಿಡಿಎಸ್ ಕಡಿತಗೊಳ್ಳುವುದು ಎಂದು ತಿಳಿಸಲಾಗಿದೆ.‌ ಅಂದರೆ ನಾವು 1 ಲಕ್ಷ ಹಣದಲ್ಲಿ 10 ಸಾವಿರ ಕಡಿತಗೊಂಡರೆ ಅದರಲ್ಲಿನ ಎರಡುವರೆ ಸಾವಿರ ಹಣಕ್ಕೆ ಮಾತ್ರ ವಿನಾಯಿತಿ. ಈ ವಿನಾಯಿತಿಗೊಂಡ ಹಣವನ್ನು ಆದಾಯ ತೆರಿಗೆ ಕಟ್ಟುವ ವೇಳೆ ಮತ್ತೆ ಜಮಾ ಮಾಡಬೇಕು. ಹಾಗಾದರೆ ಇದರಿಂದ ಏನು ಲಾಭ ಎಂದರೆ ಬರೀ ಶೂನ್ಯ.

ಈ ಮೇಲಿನ ಎಲ್ಲಾ ಸೌಲಭ್ಯ ಕೇವಲ 6 ತಿಂಗಳು ಮಾತ್ರ. ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇವಲ 6 ತಿಂಗಳ. ಕಾಲಾವಕಾಶ ಸಾಕೇ??

ಇದು ಸಂಪೂರ್ಣವಾಗಿ ದಿಕ್ಕು ತಪ್ಪಿಸುವಂತಹ ಕೇಂದ್ರ ಬಜೆಟ್ಟಿನ ಮುಂದುವರೆದ ವರದಿ ಮಾತ್ರ. ಆದಾಯ ತೆರಿಗೆ ವಿನಾಯತಿ, GST ಕಡಿತ, EMI ಮನ್ನಾ/ಬಡ್ಡಿ ಮನ್ನಾ ಇಲ್ಲ.

ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಕಷ್ಟಕ್ಕೆ ಮೀಡಿಯದ ಪ್ಯಾಕೇಜ್ ಎನ್ನಬಹುದು.

ಸಣ್ಣ/ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಸಹಾಯ ಧನ, ಅಸಂಘಟಿತ ಕಾರ್ಮಿಕ ವಲಯಕ್ಕೆ ಉತ್ತೇಜನ ನೀಡುವಲ್ಲಿ ಈ ಪ್ಯಾಕೇಜ್ ನಿರ್ಲಕ್ಷಿಸಿದೆ.

ಈ ₹20 ಲಕ್ಷ ಕೋಟಿ ಎನ್ನುವ ಜುಮ್ಲಾ ಪ್ಯಾಕೇಜ್‌ನಿಂದ ಶೇ 99 ರಷ್ಟು ಭಾರತೀಯರಿಗೆ ನಯಾಪೈಸೆಯಷ್ಟು ಲಾಭ ಇಲ್ಲ ಎನ್ನುವುದು ಸ್ಪಷ್ಟ.

ಬಿಗ್ ಬಾಸ್ಕೆಟ್, ಓಯೋ ಹೀಗೆ ಅನೇಕ ಕಂಪನಿಗಳು ಚೀನಾದಲ್ಲೂ ಬಂಡವಾಳ ಹೂಡಿವೆ ಈ ಕಂಪೆನಿಗಳು ಬಂಡವಾಳ ಹಿಂಪಡೆದರೆ ಅವುಗಳ ಉತ್ತೇಜನಕ್ಕೆ ಯಾವ ಯೋಜನೆ ಇದೆ ಎನ್ನುವುದು ಸ್ಪಷ್ಟತೆ ಇಲ್ಲ.

ಒಂದು ಪ್ಯಾಕೇಜ್ ಘೋಷಣೆ ಮಾಡಲು ಒಂದು ಕಾಲ ತೆಗೆದುಕೊಳ್ಳುತ್ತಿರುವುದು ನೋಡಿದರೆ ಯಾವ ಪೂರ್ವ ತಯಾರಿಯೂ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಇದು ಕೇವಲ ಪತ್ರಿಕೆಗಳ ಮುಖ ಪುಟವನ್ನು ಅಲಂಕರಿಸುವ ತಂತ್ರಗಾರಿಕೆ ಹಾಗೂ ಕೆಟ್ಟ ಹುನ್ನಾರದ ಕೆಲಸವೇ ಹೊರತು ಜನರಿಗೆ ಸಹಾಯ ಮಾಡುವ ಎಳ್ಳಷ್ಟು ಹೃದಯವಂತಿಕೆ ಇಲ್ಲ.

ಕೈಬಿಚ್ಚಿ ಸಹಾಯ ಹಸ್ತ ಕೊಡದೆ ಮತ್ತಷ್ಟು ಸಾಲದ ಸುಳಿಗೆ ಜನರನ್ನು ದೂಡುವ ಅವೈಜ್ಞಾನಿಕ ಪ್ಯಾಕೇಜ್. ಇನ್ನಾದರೂ ಮುಂದಿನ ಪ್ಯಾಕೇಜ್ ಗಳಲ್ಲಿ ಆದರೂ ಬೇಡಿಕೆ ಹೆಚ್ಚಳ ಮಾಡುವಂತಹ ಯೋಜನೆಗಳು ಘೋಷಿಸಲಿ, ಕೈ ಬಿಚ್ಚಿ ದುಡ್ಡು ಹಂಚಿಕೆ ಮಾಡಲಿ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

LEAVE A REPLY

Please enter your comment!
Please enter your name here