ಅಮೆರಿಕದ ಅಧ್ಯಕ್ಷರ ಮನೆಯಲ್ಲಿ ಪ್ರಧಾನಿ ಮೋದಿಗೆ ಫಾಲೋವರ್ಸ್‌ ಇಲ್ಲ..! – ಮೋದಿಗೆ ಬೆನ್ನು ತಿರುಗಿಸಿದ ಆತ್ಮೀಯ ಗೆಳೆಯ ಟ್ರಂಪ್‌..!

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಎರಡು ಕೋಟಿಗಿಂತಲೂ ಅಧಿಕ ಫಾಲೋವರ್ಸ್‌ ಇರುವಂತಹ ಅಮೆರಿಕಾದ  ಶ್ವೇತಭವನ ದಿಢೀರನೇ ಅನ್‌ ಫಾಲೋ ಮಾಡಿದೆ. ಈ ಮೂಲಕ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಬಿಗಡಾಯಿಸಿದರ ಸುಳಿವು ನೀಡಿದೆ.

ಅಮೆರಿಕಾದ ಶ್ವೇತಭವನ ಅಮೆರಿಕಾ ಅಧ್ಯಕ್ಷರ ಅಧಿಕೃತ ನಿವಾಸವಾಗಿದ್ದು ಪ್ರಧಾನಿ ಮೋದಿಯವರನ್ನು ಟ್ವಿಟ್ಟರ್‌ ಖಾತೆಯಲ್ಲಿ ಅನ್ ಫಾಲೋ ಮಾಡಿದ್ದು ಟ್ರಂಪ್‌ ಮತ್ತು ಮೋದಿ ಕೆಮೆಸ್ಟ್ರಿಯಲ್ಲಿ ಏರುಪೇರು ಆಗಿರುವ ಮುನ್ಸೂಚನೆಯನ್ನು ನೀಡಿದೆ.

ಮೂರು ವಾರಗಳ ಹಿಂದೆಯಷ್ಟೇ ಅಂದರೆ ಏಪ್ರಿಲ್ 10ನೇ ತಾರೀಖಿನಂದು ಅಮೆರಿಕದ ಶಕ್ತಿ ಕೇಂದ್ರ ಆಗಿರುವ ವೈಟ್‌ಹೌಸ್‌ನ ಅಧಿಕೃತ ಟ್ವಿಟರ್‌ ಖಾತೆಯೇ ಪ್ರಧಾನಿ ಮೋದಿಯನ್ನು ‌ಫಾಲೋ ಮಾಡಲು ಆರಂಭಿಸಿತ್ತು. ಹಾಗೆಯೇ ಅಮೇರಿಕಾದ ಶ್ವೇತಭವನ ಫಾಲೋ ಮಾಡಿದ ಏಕೈಕ ವಿಶ್ವ ನಾಯಕ ಮೋದಿಯೇ ಆಗಿದ್ದರು.

ಇದಾದ ಬಳಿಕ ನಂತರ ಭಾರತಕ್ಕೆ ಸಂಬಂಧಿಸಿದಂತಹ 19 ಟ್ವಿಟರ್‌ ಹ್ಯಾಂಡಲ್‌ಗಳನ್ನು ಅದು ಫಾಲೋ ಮಾಡಲಾರಂಭಿಸಿತ್ತು. ಅದರಲ್ಲಿ ಭಾರತದ ರಾಷ್ಟ್ರಪತಿಯವರ ಟ್ವಿಟ್ಟರ್‌ ಖಾತೆಯೂ ಸೇರಿತ್ತು.

ಆದರೆ ಈಗ ವೈಟ್‌ಹೌಸ್‌ನ ಟ್ವಿಟ್ಟರ್‌ ಖಾತೆ ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಟ್ವಿಟ್ಟರ್‌ ಖಾತೆ ಒಳಗೊಂಡು 13 ಟ್ವಿಟ್ಟರ್‌ ಖಾತೆಗಳನ್ನಷ್ಟೇ ಫಾಲೋ ಮಾಡುತ್ತಿದೆ.

ವೈಟ್‌ಹೌಸ್‌ ಫಾಲೋ ಮಾಡುತ್ತಿರುವ ಟ್ವಿಟ್ಟರ್‌ ಖಾತೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಹೆಸರಲ್ಲಿರುವ ಪ್ರೆಸಿಡೆಂಟ್‌ ಟ್ರಂಪ್‌ ಖಾತೆ, ಡೋನಾಲ್ಡ್‌ ಟ್ರಂಪ್‌ ವೈಯಕ್ತಿಕ ಖಾತೆ, ಉಪಾಧ್ಯಕ್ಷ ಮೈಕ್‌ ಪೆನ್ಸ್‌, ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಖಾತೆ, ಮೈಕ್‌ ಪೆನ್ಸ್‌ ಪತ್ನಿ ಕೆರನ್‌ ಪೆನ್ಸ್‌ ಖಾತೆಯೂ ಸೇರಿದೆ.

ಕೊರೋನಾ ರೋಗ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೊರಿಕ್ವಿನ್‌ ಮಾತ್ರೆ ಕೊಡದೇ ಹೋದರೆ ಭಾರತದ ವಿರುದ್ಧ ಪ್ರತಿಕೂಲ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಅಧ್ಯಕ್ಷ ಟ್ರಂಪ್‌ ನೀಡಿದ್ದರು. ಆದರೆ ಭಾರತದ ಮಾಧ್ಯಮಗಳು ಟ್ರಂಪ್‌ ಹೇಳಿಕೆಯ ಈ ಅಂಶವನ್ನು ಮರೆಮಾಚಿ ಮಾತ್ರೆಗಾಗಿ ಅಮೆರಿಕ ಭಾರತಕ್ಕೆ ದುಂಬಾಲು ಬಿದ್ದಿದ್ದರು ಎಂದು ವರದಿ ಪ್ರಸಾರ ಮಾಡಿದ್ದವು. ಈ ಎಚ್ಚರಿಕೆ ಬೆನ್ನಲೇ ಅಮೆರಿಕಕ್ಕೆ ಭಾರತ ಮಾತ್ರೆಯನ್ನು ಪೂರೈಸಿತ್ತು.

ನಾಗರಿಕತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಭಾರತದಲ್ಲಿ ಲಕ್ಷಾಂತರ ಮಂದಿ ಅದರಲ್ಲೂ ಮುಸ್ಲಿಮರು ನಿರಾಶ್ರಿತರಾಗುತ್ತಾರೆ ಎನ್ನುವುದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಮೇಲಿನ ಅಮೆರಿಕದ ಆಯೋಗ ಟೀಕೆ ಮಾಡಿತ್ತು. ಇದೂ ಭಾರತದ ಕೆಂಗಣ್ಣಿಗೆ ಗುರಿ ಆಗಿದೆ.

LEAVE A REPLY

Please enter your comment!
Please enter your name here