ತಟ್ಟೆಗೆ ಹಾಕಿಕೊಂಡ ಆಹಾರವನ್ನು ಚೆಲ್ಲುತ್ತೀರಾ? ಹಾಗಾದರೆ ದಂಡ ಕಟ್ಟಿ

ಕೆಲವೊಬ್ಬರಿಗೆ ಊಟ ಮಾಡುವಾಗ ಅಗತ್ಯಕ್ಕಿಂತ ಹೆಚ್ಚು ಬಡಿಸಿಕೊಂಡು ತಟ್ಟೆಯಲ್ಲಿ ಊಟ ಬಿಡುವ ಪದ್ಧತಿ ಕೆಟ್ಟ ಚಟವಾಗಿ ಬಿಟ್ಟಿರುತ್ತದೆ. ಪದಾರ್ಥ ತನಗೇ ಬೇಕೋ ಬೇಡವೋ ಗೊತ್ತಿಲ್ಲ ಆದರೆ ತಟ್ಟೆಗಂತೂ ಆ ಪದಾರ್ಥ ಬೀಳಲೇಬೇಕು.

ನಂತರ ಅದನ್ನು ತಿನ್ನಲಾಗದೆ ಕಸದ ಬುಟ್ಟಿಗೆ ಚೆಲ್ಲುವುದು ಕೆಲವರಿಗೆ ನಿತ್ಯದ ಕಾಯಕದಂತೆ ಆಗಿಬಿಟ್ಟಿದೆ. ಆದರೆ ಅವರ ಈ ಪದ್ಧತಿಗೆ ಕಡಿವಾಣ ಹಾಕಲು ಕೂರ್ಗ್ ನಲ್ಲಿ ರೆಸಾರ್ಟ್ ಒಂದು ಪಣತೊಟ್ಟಿದೆ.

ಹೌದು ಕೂರ್ಗ್ ನಲ್ಲಿನ ಇಬ್ನಿ ಸ್ಪಾ ಎಂಡ್ ರೆಸಾರ್ಟ್ ಎಂಬ ರೆಸಾರ್ಟ್ ತನ್ನಲ್ಲಿ ಬರುವ ಗ್ರಾಹಕರು ತಟ್ಟೆಯಲ್ಲಿ ಬಿಡುವ ಆಹಾರಕ್ಕೆ ದಂಡ ವಿಧಿಸಲು ಸಜ್ಜಾಗಿದೆ. ಅದು ಹೇಗೆ ದಂಡ ವಿಧಿಸುತ್ತಾರೆ ಎಂದು ಯೋಚಿಸುತ್ತಿದ್ದೀರಾ? ಹೌದು ಗ್ರಾಹಕರಿಗೆ ಊಟ ಆದ ನಂತರ ಅವರ ತಟ್ಟೆಯಲ್ಲಿ ಉಳಿದ ಆಹಾರವನ್ನು ತೂಕ ಮಾಡುತ್ತಾರೆ.

ವ್ಯರ್ಥವಾಗುವ ಆಹಾರದ ತೂಕದಲ್ಲಿ 10 ಗ್ರಾಂ ಆಹಾರಕ್ಕೆ 100 ರೂಪಾಯಿಗಳಂತೆ ದಂಡಿ ವಿಧಿಸುತ್ತಾರೆ. ಹೀಗೆ ಸಂಗ್ರಹವಾದ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಬಳಸದೆ ಮಡಿಕೇರಿಯಲ್ಲಿರುವ ದೀನದಲಿತರ, ಬಾಲಕಿಯರ ಅನಾಥಾಶ್ರಮಕ್ಕೆ ನೀಡುತ್ತಾರೆ.ಇಂತಹ ಮಹತ್ಕಾರ್ಯವೊಂದು ಪ್ರಾರಂಭವಾದದ್ದಕ್ಕೆ ಬಹಳಷ್ಟು ಮಂದಿ ಈಗಾಗಲೇ ಮೆಚ್ಚುಗೆ ಸೂಚಿಸಿದ್ದಾರೆ.

ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ಮತ್ತು ಆ ಬೆಳೆಗೆ ತನ್ನ ಪರಿಶ್ರಮದಿಂದ ರುಚಿ ನೀಡುವ ಬಾಣಸಿಗರಿಗೂ ರೆಸಾರ್ಟ್ ನ ಈ ಕಾರ್ಯ ನಿಜವಾಗಿಯೂ ಆಪ್ಯಾಯಮಾನವಾಗುವಂತದ್ದು. ಇಂತಹ ಕಾರ್ಯ ಮನೆ ಮನೆಯಲ್ಲಿ ಪ್ರಾರಂಭವಾದರೆ ಮುಂದೆಂದೂ ಆಹಾರಕ್ಕಾಗಿ ಪರದಾಡುವ ಪ್ರಮೇಯವೇ ಬರುವುದಿಲ್ಲ.

LEAVE A REPLY

Please enter your comment!
Please enter your name here