ಜೆಎನ್‍ಯು ಗುಂಪು ದಾಳಿಗೆ ಅಸಲಿ ಕಾರಣ ಏನು..?

ಮೊದಲೆಲ್ಲಾ ವೈಚಾರಿಕವಾಗಿ ದಾಳಿಗೆ ತುತ್ತಾಗುತ್ತಿದ್ದ ನವದೆಹಲಿಯ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಈಗ ದೈಹಿಕ ದಾಳಿಗೂ ತುತ್ತಾಗಿ ನಲುಗುತ್ತಿದ್ದಾರೆ. ನಿನ್ನೆ ಸಂಜೆ ಮುಸುಕುಧಾರಿ ದುಷ್ಕರ್ಮಿಗಳು ನಡೆಸಿದ ಮಾರಕ ಆಯುಧಗಳಿಂದ ನಡೆಸಿದ ದಾಳಿಯಿಂದ 24 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 19 ವಿದ್ಯಾರ್ಥಿಗಳು, ಐವರು ಸಹ ಪ್ರಾಧ್ಯಾಪಕರು ಇದ್ದು, ಇವರಲ್ಲಿ ಐವರ ಸ್ಥಿತಿ ಚಿಂತಾಜಕನವಾಗಿದೆ. ಹಲ್ಲೆ ಸಂಬಂಧ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ.

ಶುಲ್ಕ ಹೆಚ್ಚಳ ಹೋರಾಟಕ್ಕೆ ಲಿಂಕ್ ಇದ್ಯಾ..?
ಜೆಎನ್‍ಯು ಕ್ಯಾಂಪಸ್‍ನಲ್ಲಿ ನಡೆದ ಮಾರಕ ದಾಳಿ ಪ್ರಕರಣವನ್ನು ಶುಲ್ಕ ಹೆಚ್ಚಳ ಹೋರಾಟಕ್ಕೆ ವಿವಿ ಆಡಳಿತ ಮಂಡಳಿ ತಳಕು ಹಾಕಿದೆ. ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯನ್ನು ತಡೆದಿದ್ದರು. ಪ್ರವೇಶ ಪ್ರಕ್ರಿಯೆಯ ಪರವಾಗಿ ಇದ್ದವರು ನಡೆಸಿದ ದಾಳಿ ಇದು.ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದೆ ಎಂದು ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವಿವಿ ಆಡಳಿತ ಮಂಡಳಿ ಷರಾ ಬರೆದಿದೆ. ಪೊಲೀಸರು ಬರುವ ಮುನ್ನವೇ, ತನಿಖೆ ನಡೆಸದೇ ವಿವಿ ಆಡಳಿತ ಮಂಡಳಿ ಹೊರಡಿಸಿದ ಸ್ಪಷ್ಟೀಕರಣ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೆ ಲಿಂಕ್ ಇದ್ಯಾ..?
ಇಲ್ಲಿ ಗಮನಿಸಬೇಕಾದ ಅಂಶ ಎಂದರೇ, ಜೆಎನ್‍ಯುನಲ್ಲಿ ಮುಸುಕುಧಾರಿಗಳಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದವರು. ಹೀಗಾಗಿ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

ನಮ್ಮ ದೇಶವನ್ನು ಫ್ಯಾಸ್ಸಿಸ್ಟ್ ಶಕ್ತಿಗಳು ನಿಯಂತ್ರಿಸುತ್ತಿವೆ. ವಿದ್ಯಾರ್ಥಿಗಳ ದಿಟ್ಟ ಹೋರಾಟದಿಂದ ಬೆದರಿದ ಫ್ಯಾಸ್ಸಿಸ್ಟ್ ಶಕ್ತಿಗಳು ಈ ರೀತಿಯ ಅಡ್ಡದಾರಿಗಳಿಂದ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿವೆ. ಜೆಎನ್‍ಯು ಘಟನೆಯೇ ಅವರಲ್ಲಿ ಭಯ ಮೂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಯಾರೊಬ್ಬನ್ನೂ ಬಂಧಿಸಿಲ್ಲ ಏಕೆ..?
ಹಲ್ಲೆ ವಿಚಾರವಾಗಿ ಪೊಲೀಸ್ ಠಾಣೆಗೆ ಹತ್ತಾರು ದೂರುಗಳು ಬಂದಿವೆ. ಇದುವರೆಗೂ ಎಫ್‍ಐಆರ್ ದಾಖಲಾಗಿಲ್ಲ. ಯಾರೊಬ್ಬನ್ನೂ ಬಂಧಿಸಿಲ್ಲ. ಪೊಲೀಸರು ಮಧ್ಯಾಹ್ನದಿಂದ ಜೆಎನ್‍ಯು ಆವರಣದಲ್ಲಿದ್ದರೂ ಏನು ಮಾಡಿಲ್ಲ, ಹಲ್ಲೆಕೋರರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ಜೆಎನ್‍ಯು ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷ ಸಾಕೇತ್ ಮೂನ್ ಆರೋಪಿಸಿದ್ದಾರೆ. ಯಾರನ್ನೂ ಬಂಧಿಸದೇ ಇರುವುದು ಪೊಲೀಸ್ ವೈಫಲ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಈ ದಾಳಿ ನಡೆಸಿದ್ದಾರೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಟ್ವೀಟ್ ಮಾಡಿವೆ.

ಕಳೆದ ರಾತ್ರಿ ಜೆಎನ್‍ಯು ಕ್ಯಾಂಪಸ್‍ನಲ್ಲಿ ಪೊಲೀಸರಿಂದ ಫ್ಲ್ಯಾಗ್ ಮಾರ್ಚ್. ಗೋ ಬ್ಯಾಕ್ ದೆಹಲಿ ಪೊಲೀಸ್ ಎಂದು ಆಕ್ರೋಶಿತ ವಿದ್ಯಾರ್ಥಿಗಳಿಂದ ಘೋಷಣೆ ಕೂಗಿದ್ದಾರೆ. ಈ ಬೆನ್ನಲ್ಲೇ ದೆಹಲಿ ಪೊಲೀಸರು, ಜಾಮಿಯಾ ವಿವಿ ಮತ್ತು ಜೆಎನ್‍ಯುನ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ನಿಯೋಗದ ಜೊತೆ ಸಭೆ ನಡೆಸಿದ್ದಾರೆ.

ಹಲ್ಲೆ ಖಂಡಿಸಿದ ಕೇಂದ್ರ ಸಚಿವರು
ಜೆಎನ್‍ಯುವ ಅಲುಮ್ನಿ ಸದಸ್ಯರಾದ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲ್ಲೆಗಳನ್ನು ಖಂಡಿಸಿದ್ದಾರೆ. ಹಲ್ಲೆಯ ದೃಶ್ಯಗಳು ಬೆಚ್ಚಿಬೀಳುವಂತಿವೆ. ವಿವಿ ವಿದ್ಯಾರ್ಥಿಗಳ ಸುರಕ್ಷತೆಯೇ ಸರ್ಕಾರದ ಆದ್ಯತೆ ಎಂದು ತಿಳಿಸಿದ್ದಾರೆ. ಜೆಎನ್‍ಯು ರಿಜಿಸ್ಟ್ರಾರ್ ಜೊತೆ ಇಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಸಭೆ ನಡೆಸಲಿದ್ದಾರೆ.

ದೇಶಾದ್ಯಂತ ಬೀದಿಗಿಳಿದ ವಿದ್ಯಾರ್ಥಿ ಸಂಘಟನೆಗಳು
ಜೆಎನ್‍ಯುನಲ್ಲಿ ನಡೆದ ಗುಂಪು ಹಲ್ಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ರಾತ್ರಿಯಿಂದಲೇ ಆರಂಭವಾಗಿವೆ. ನವದೆಹಲಿ, ಬೆಂಗಳೂರು, ಮುಂಬೈ, ಕೊಲ್ಕೊತಾ, ಪುಣೆ, ಆಲಿಘಡ, ಹೈದರಾಬಾದ್ ಸೇರಿದಂತೆ ಎಲ್ಲಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸುತ್ತಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗ್ತಿದೆ. ಎಬಿವಿಪಿಯನ್ನು ಟಾರ್ಗೆಟ್ ಮಾಡಿಕೊಂಡು ಘೋಷಣೆ ಕೂಗುತ್ತಿದ್ದಾರೆ.

ಉಪಕುಲಪತಿ ಎಂ ಜಗದೀಶ್ ಕುಮಾರ್ ವಿರುದ್ಧ ಜೆಎನ್‍ಯುಎಸ್‍ಯು ಆಕ್ರೋಶ. ಹೇಡಿ ಉಪಕುಲಪತಿಗಳು ಹಿಂಬಾಗಿಲ ಮೂಲಕ ಜೆಎನ್‍ಯುನಲ್ಲಿ ಅಕ್ರಮವಾಗಿ ಕೆಲ ನಿಯಮಗಳನ್ನು ಜಾರಿ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಹಲ್ಲೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಜಾರಿಕೊಂಡಿದ್ದಾರೆ. ಜೆಎನ್‍ಯುಗೆ ಇರುವ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪ.

LEAVE A REPLY

Please enter your comment!
Please enter your name here