ಜೂನ್‌ 1ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್‌ ಹೀಗಿರಬಹುದು – ನಾಳೆಯೇ ಆದೇಶ..?

ಲಾಕ್‌ಡೌನ್‌ ಮುಗಿಯುವುದಕ್ಕೆ ಕೇವಲ ಎರಡು ದಿನಗಳಷ್ಟೇ ಬಾಕಿ ಇದ್ದು, ಜೂನ್‌ 1ರಿಂದ ದೇಶಾದ್ಯಂತ ಲಾಕ್‌ಡೌನ್‌ ಮತ್ತೆ 14 ಕಾಲ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಐದನೇ ಹಂತದ ಲಾಕ್‌ಡೌನ್‌ ಸಂಬಂಧ ನಾಳೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಹೊರಡಿಸಬಹುದು.

ನಿನ್ನೆಯಷ್ಟೇ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆಗೆ ದೂರವಾಣಿ ಮೂಲಕ ಸಂವಾದ ನಡೆಸಿ ಲಾಕ್‌ಡೌನ್‌ ಬಗ್ಗೆ ರಾಜ್ಯಗಳ ಅಭಿಪ್ರಾಯ ಕೇಳಿದ್ದ ಗೃಹ ಸಚಿವ ಅಮಿತ್‌ ಶಾ ಇವತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಆಗಿ ಸಿಎಂಗಳು ನೀಡಿದ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಜೂನ್‌ 14ರವರೆಗೆ ಲಾಕ್‌ಡೌನ್‌ ವಿಸ್ತರಣೆ ಬಹುತೇಕ ಖಚಿತ ಆಗಿದೆ. ಆದರೆ ಜೂನ್‌ 1ರಿಂದ ದೇಶ ಇನ್ನಷ್ಟು ಸಹಜ ಸ್ಥಿತಿಗೆ ಬರಲಿದ್ದು ಮತ್ತಷ್ಟು ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.

ದೇವಸ್ಥಾನ, ಮಸೀದಿ, ಚರ್ಚ್‌ ತೆರೆಯಬಹುದು:

ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ತೆರೆಯುವು ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯಗಳ ಪಾಲಿಗೆ ನೀಡಬಹುದು. ಕರ್ನಾಟಕದಲ್ಲಿ ಜೂನ್‌ 1ರಿಂದ ದೇವಸ್ಥಾನಗಳನ್ನು ತೆರೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಮಸೀದಿ, ಚರ್ಚ್‌, ಬಸದಿ, ಗುರುದ್ವಾರಗಳನ್ನೂ ತೆರೆಯಲು ಒಪ್ಪಿಗೆ ನೀಡಬಹುದು. ಆದರೆ ಜಾತ್ರೆ, ಮೆರವಣಿಗೆಗಳಿಗೆ ಅವಕಾಶ ಸಿಗಲ್ಲ. ಪಶ್ಚಿಮ ಬಂಗಾಳದಲ್ಲಿ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, 10 ಮಂದಿಯಷ್ಟೇ ಸೇರಬಹುದು ಎಂಬ ಷರತ್ತು ವಿಧಿಸಲಾಗಿದೆ.

ಶಾಪಿಂಗ್‌ ಮಾಲ್‌ಗಳು:

ಶಾಪಿಂಗ್‌ ಮಾಲ್‌ ಮತ್ತು ಶಾಪಿಂಗ್‌ ಕಾಂಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿಸುವ ಸಾಧ್ಯತೆ ಇದೆ. ಶಾಪಿಂಗ್‌ ಮಾಲ್‌ಗಳಲ್ಲಿರುವ ಸೂಪರ್‌ ಮಾರ್ಕೆಟ್‌, ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮಳಿಗೆಗಳು, ಉಡುಪು-ಚಪ್ಪಲಿಗಳ ಮಳಿಗೆಗಳನ್ನು ಮತ್ತೆ ಆರಂಭಿಸುವುದಕ್ಕೆ ಅವಕಾಶ ಸಿಗಬಹುದು. ಮಾಲ್‌ಗಳಲ್ಲಿರುವ ಸ್ಪಾ, ಸಲೂನ್‌, ಬ್ಯೂಟಿ ಪಾರ್ಲರ್‌ಗಳಿಗೆ ಮುಂಗಡ ಬುಕ್ಕಿಂಗ್‌ನ ಷರತ್ತಿನೊಂದಿಗೆ ಒಪ್ಪಿಗೆ ಸಿಗಬಹುದು.

ಮೆಟ್ರೋ ರೈಲು:

ಮೆಟ್ರೋ ರೈಲುಗಳ ಸಂಚಾರಕ್ಕೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌:

ರಾಜ್ಯದಲ್ಲಿ ಸಂಜೆ 7ವರೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಓಡಾಡುತ್ತಿವೆ. ಸದ್ಯಕ್ಕೆ ಸಂಜೆ 7 ಗಂಟೆಗೆ ಹೊರಡುವ ದಿನದ ಕೊನೆಯ ಕೆಎಸ್‌ಆರ್‌ಟಿಸಿ ಬಸ್‌ಗಳು ರಾತ್ರಿ ಸಂಚರಿಸಿ ಬೆಳಗ್ಗಿನ ಜಾವ ನಿರ್ದಿಷ್ಟ ಸ್ಥಳಗಳನ್ನು ತಲುಪುತ್ತಿವೆ. ಜೂನ್‌ 1ರಿಂದ ಸಂಜೆ 7 ಗಂಟೆಯ ಬಳಿಕವೂ ರಾತ್ರಿ 10 ಗಂಟೆವರೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡುವ ನಿರೀಕ್ಷೆ ಇದೆ.

12 ಗಂಟೆಗಳ ರಾತ್ರಿ ಕರ್ಫ್ಯೂ:

ಈಗಿರುವ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗಿನ 12 ಗಂಟೆಗಳ ರಾತ್ರಿ ಕರ್ಫ್ಯೂವನ್ನು ತೆಗೆದುಹಾಕಬಹುದು ಅಥವಾ ರಾತ್ರಿ ಕರ್ಫ್ಯೂವನ್ನು ಸಂಜೆ 7ರ ಬದಲು ರಾತ್ರಿ 10 ಗಂಟೆಯಿಂದ ಜಾರಿಗೊಳಿಸಬಹುದು. ಒಂದು ವೇಳೆ ರಾತ್ರಿ ಕರ್ಫ್ಯೂನಲ್ಲಿ ಸಡಿಲಿಕೆ ಆದರೆ ಆಗ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಕರ್ಫ್ಯೂ ಸಡಿಲಿಕೆಯ ಅವಧಿವರೆಗೂ ನಡೆಸಲು ಅವಕಾಶ ನೀಡಬಹುದು.

ಹೋಟೆಲ್‌-ರೆಸ್ಟೋರೆಂಟ್‌:

ಹೋಟೆಲ್‌, ರೆಸ್ಟೋರೆಂಟ್‌ಗಳನ್ನು ತೆರೆಯಲು ಜೂನ್‌ 1ರಿಂದ ಅವಕಾಶ ನೀಡುವ ನಿರೀಕ್ಷೆ ನಿಚ್ಚಳವಾಗಿದೆ. ಇದುವರೆಗೆ ಪಾರ್ಸೆಲ್‌ಗಷ್ಟೇ ಇದ್ದ ಅವಕಾಶ ಇನ್ಮುಂದೆ ಕೂತು ತಿನ್ನುವುದಕ್ಕೂ ನೀಡಬಹುದು.

ಬೀದಿಬದಿ ಕ್ಯಾಂಟೀನ್‌:

ತಳ್ಳುಗಾಡಿ ಮತ್ತು ಫುಟ್ಪಾತ್‌ನಲ್ಲಿ ಕ್ಯಾಂಟಿನ್‌ಗಳನ್ನು ತೆರೆಯುವುದಕ್ಕು ಅನುಮತಿ ಸಿಗುವ ಸಾಧ್ಯತೆ ಇದೆ.

ಥಿಯೇಟರ್‌ಗಳು:

ಶಾಪಿಂಗ್‌ ಮಾಲ್‌ಗಳಲ್ಲಿರುವ ಥಿಯೇಟರ್‌ ಮತ್ತು ಚಲನಚಿತ್ರ ಮಂದಿರಗಳು ಜೂನ್‌ 15ರವರೆಗೂ ಬಂದ್‌ ಆಗಬಹುದು.

ಸಿನಿಮಾ ಶೂಟಿಂಗ್‌:

ಸಿನಿಮಾಗಳು ಮತ್ತು ಧಾರಾವಾಹಿಗಳ ಹೊರಾಂಗಣ ಚಿತ್ರೀಕರಣಕ್ಕೂ ಸೋಮವಾರದಿಂದ ಅನುಮತಿ ನೀಡುವ ನಿರೀಕ್ಷೆ ಇದೆ. ಈಗಾಗಲೇ ಕರ್ನಾಟಕದಲ್ಲಿ ಧಾರವಾಹಿಗಳ ಒಳಾಂಗಣ ಚಿತ್ರೀಕರಣ ಮತ್ತು ಸಿನಿಮಾಗಳ ಪ್ರಿ ಮತ್ತು ಪೋಸ್ಟ್‌ ಪ್ರೊಡಕ್ಷನ್‌ಗೆ ಅನುಮತಿ ನೀಡಲಾಗಿದೆ. ಸೋಮವಾರದಿಂದ ಸಿನಿಮಾ ಮಂದಿಗೆ ಬಿಗ್‌ ರಿಲೀಫ್‌ ಸಿಗಬಹುದು.

ರೈಲುಗಳು:

ಜೂನ್‌ 1ರಿಂದ ವಲಸೆ ಕಾರ್ಮಿಕರಾಗಿರುವ ಇರುವ ಶ್ರಮಿಕ ರೈಲುಗಳನ್ನು ಹೊರತುಪಡಿಸಿ ದೇಶದ ವಿವಿಧ ನಗರಗಳ ನಡುವೆ 200 ವಿಶೇಷ ರೈಲುಗಳನ್ನು ಓಡಿಸುವುದಾಗಿ ರೈಲ್ವೆ ಸಚಿವಾಲಯ ಈಗಾಗಲೇ ಘೋಷಿಸಿದೆ. ಈ ಮೂಲಕ ರೈಲ್ವೆ ಸಂಚಾರಕ್ಕೂ ನಿಧಾನಕ್ಕೆ ಸಹಜ ಸ್ಥಿತಿಗೆ ಮರಳಲಿದೆ.

ಮದುವೆಯ ಮೇಲಿನ ನಿರ್ಬಂಧ:

ಸದ್ಯಕ್ಕೆ ಮದುವೆಗಳಲ್ಲಿ 50ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ ಎಂಬ ನಿರ್ಬಂಧವನ್ನು ಜೂನ್‌ 1ರಿಂದ ಮುಂದುವರಿಸಬಹುದು.

ವಿಮಾನಸೇವೆ:

ಮೇ ೧೭ರಿಂದ ಜಾರಿ ಆಗಿದ್ದ ನಯಾ ಲಾಕ್‌ಡೌನ್‌ನಲ್ಲಿ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿತ್ತಾದರೂ ಬಳಿಕ ಕೇಂದ್ರ ಸರ್ಕಾರ ವಿಮಾನಯಾನ ಸೇವೆ ಆರಂಭಕ್ಕೆ ಅನುಮತಿಸಿತ್ತು. ಈಗಾಗಲೇ ದೇಶದ ವಿವಿಧ ನಗರಗಳಿಗೆ ದೇಶೀಯ ವಿಮಾನಗಳ ಹಾರಾಟ ನಡೆಯುತ್ತಿದ್ದು, ವಿಮಾನಗಳ ಹಾರಾಟ ಹೆಚ್ಚಾಗುವ ನಿರೀಕ್ಷೆ ಇದೆ.

ಶಾಲಾ-ಕಾಲೇಜುಗಳು ಬಂದ್‌:

ಶಾಲಾ-ಕಾಲೇಜುಗಳು, ಕೋಚಿಂಗ್‌ ಸೆಂಟರ್‌ಗಳು ಮತ್ತು ಟ್ರೈನಿಂಗ್‌ ಸೆಂಟರ್‌ಗಳು ಜೂನ್‌ 15ರವರೆಗೂ ಬಂದ್‌ ಆಗುವುದು ನಿಶ್ಚಿತ.

ಜಿಮ್‌-ಫಿಟ್ನೆಸ್‌ ಸೆಂಟರ್‌:

ಜಿಮ್‌ ಮತ್ತು ಫಿಟ್ನೆಸ್‌ ಸೆಂಟರ್‌ಗಳನ್ನು ತೆರೆಯಲು ಜೂನ್‌ 1ರಿಂದ ಅನುಮತಿ ನೀಡುವ ನಿರೀಕ್ಷೆ ಇದೆ.

 

LEAVE A REPLY

Please enter your comment!
Please enter your name here