ಜುಲೈ 1ರಿಂದ ಖಾಸಗಿ ಶಾಲೆಗಳು ಆರಂಭಿಸಲು ಶಿಕ್ಷಣ ಸಚಿವರ ಸಭೆಯಲ್ಲಿ ಪ್ರಸ್ತಾಪ – ಪೋಷಕರ ಸಲಹೆ ಸಂಗ್ರಹ

ಜುಲೈ 1ರಿಂದ ರಾಜ್ಯದಲ್ಲಿ  ಖಾಸಗಿ ಶಾಲೆಗಳನ್ನು ಆರಂಭಿಸುವುದಕ್ಕೆ ಕರ್ನಾಟಕ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಪೋಷಕರ ಅಭಿಪ್ರಾಯ ಸಂಗ್ರಹಿಸುವಂತೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

ಮೇ 30ರಂದು ಹೊಸ ಲಾಕ್‌ಡೌನ್‌ ಮಾರ್ಗಸೂಚಿ ಹೊರಡಿಸಿದ್ದ ಕೇಂದ್ರ ಗೃಹ ಸಚಿವಾಲಯ ಜೂನ್‌ ಬಳಿಕ ಶಾಲಾ-ಕಾಲೇಜುಗಳನ್ನು ತೆರೆಯುವುದಾಗಿಯೂ, ಈ ಬಗ್ಗೆ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿಯೂ ಹೇಳಿತ್ತು.

ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸೋಮವಾರ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಹಂತ-ಹಂತವಾಗಿ ಶಾಲೆಗಳನ್ನು ಆರಂಭಿಸುವುದಕ್ಕೆ ಉದ್ದೇಶಿಸಲಾಗಿದ್ದು, ಈ ಬಗ್ಗೆ ಪೋಷಕರು ಮತ್ತು ಶಾಲಾ ಆಡಳಿತ ಸಮಿತಿಯ ಅಭಿಪ್ರಾಯ ಸಂಗ್ರಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.

4 ರಿಂದ 7ನೇ ತರಗತಿವರೆಗೆ ಜುಲೈ 1ರಿಂದಲೂ,  1 ರಿಂದ 3ನೇ ತರಗತಿವರೆಗೆ ಜುಲೈ 15ರಿಂದಲೂ ಆರಂಭಿಸಲು ಉದ್ದೇಶಿಸಲಾಗಿದೆ.

ಜುಲೈ 15ರಿಂದಲೇ ಹೈಸ್ಕೂಲ್‌ಗಳನ್ನು ಆರಂಭಿಸುವ ಬಗ್ಗೆಯೂ ಉದ್ದೇಶಿಸಲಾಗಿದೆ.

ಆದರೆ ಪ್ರಿ ಕೆಜಿ, ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಜುಲೈ 20ರಿಂದ ಆರಂಭಿಸುವ ಬಗ್ಗೆ ಉದ್ದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಮುಖ್ಯೋಪಾಧ್ಯಾಯರು ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಸಭೆಯನ್ನು ಜೂನ್‌10ರಿಂದ ಜೂನ್‌ 12ರೊಳಗೆ ನಡೆಸಿ ಸಲಹೆ ನೀಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

LEAVE A REPLY

Please enter your comment!
Please enter your name here