ಭಾರತದಲ್ಲಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಇಂದು ಮೊದಲ ಸ್ಥಾನದಲ್ಲಿದೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನಡೆಸಿದ ಗ್ಲೋಬೊಕನ್ 2018 ಅಧ್ಯಯನವು 2018 ರಲ್ಲಿ ಮಾತ್ರ 1,62,468 ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿವೆ.

ಭೌಗೋಳಿಕತೆಗಳಾದ್ಯಂತ, ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ಪ್ರತಿವರ್ಷ ಎರಡು ದಶಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಕಂಡುಬರುತ್ತವೆ.

ಇಂದಿನ ಜಗತ್ತಿನಲ್ಲಿ ಜೀವನಶೈಲಿಯ ರೀತಿಯಲ್ಲಿ ಬದಲಾವಣೆಯನ್ನು ಗಮನಿಸಿದರೆ, ಕ್ಯಾನ್ಸರ್ ಪೀಡಿತ ಮಹಿಳೆಯರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. 30-50 ವರ್ಷದೊಳಗಿನ ವಯಸ್ಸಾದ ಮಹಿಳೆಯರಲ್ಲಿ ಈ ರೀತಿಯ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ.

ಸಾಧಾರಣವಾಗಿ 6 ರಿಂದ 8 ಪ್ರತಿಶತ ಕ್ಯಾನ್ಸರ್‌ ಅನುವಂಶಿಕವಾಗಿ ಬರುತ್ತದೆ ಮತ್ತು ಮುಂದಿನ ಪೀಳಿಗೆಗೂ ಹರಡುತ್ತದೆ. ಜಡವಾದಂತಹ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ, ಬೇಗನೇ ಋತುಮತಿಯಾಗುವುದು, ಮಕ್ಕಳನ್ನು ತಡವಾಗಿ ಹೊಂದಲು ನಿರ್ಧರಿಸುವುದು, ಮಗುವಿಗೆ ಸ್ತನ್ಯಪಾನ ಮಾಡಿಸದಿರುವುದು, ಹಲವಾರು ವರ್ಷಗಳಿಂದ ಗರ್ಭನಿರೋಧಕ ಮಾತ್ರೆಗಳ ಬಳಕೆ ಮುಂತಾದ ಪ್ರಕರಣಗಳು ಮಹಿಳೆಯರಲ್ಲಿ ಹೆಚ್ಚುತ್ತಿವೆ.

ಸ್ತನ ಕ್ಯಾನ್ಸರ್ ಸಹ ಆನುವಂಶಿಕವಾಗಿರಬಹುದು ಮತ್ತು ಉಲ್ಲೇಖಿಸಲಾದ ಅಂಶಗಳಷ್ಟೇ ಅಲ್ಲದೇ ಬೇರೆ ಕಾರಣಗಳೂ ಆಗಿರಬಹುದು. ಸ್ತನಗಳಲ್ಲಿ ನೋವು, ಸ್ತನ ತೊಟ್ಟುಗಳಿಂದ ಯಾವುದೇ ರೀತಿಯ ಸ್ರಾವ, ಸ್ತನಗಳ ಆಕಾರ ಮತ್ತು ಗಾತ್ರದಲ್ಲಿ ಗಮನಾರ್ಹ ಬದಲಾವಣೆ, ಸ್ತನದ ತೊಟ್ಟುಗಳು ಒಳಗೆ ಹೋಗಿರುವುದು, ಬಾವು, ಚರ್ಮದ ಬದಲಾವಣೆಗಳು ಇವುಗಳನ್ನು ಒಳಗೊಂಡಿರುವ ಯಾವುದೇ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು ಪ್ರತಿಯೊಬ್ಬ ಮಹಿಳೆಗೆ ಬಹಳ ಮುಖ್ಯವಾಗಿದೆ.

ಸ್ತನದಲ್ಲಿ ಅಥವಾ ಕಂಕುಳ ಪ್ರದೇಶದ ಹತ್ತಿರ ನೋವುರಹಿತ ಗಟ್ಟಿಯಾದ ಗಡ್ಡೆ ಕಂಡುಬಂದರೆ ಇದು ಮಹಿಳೆಯರಿಗೆ ತಿಳಿದಿರಬೇಕಾದ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ.ಯಾವುದೇ ರೋಗ, ಆರಂಭಿಕ ಹಂತದಲ್ಲಿ ರೋಗನಿರ್ಣಯ ಮಾಡಿದರೆ, ಯಶಸ್ವಿಯಾಗಿ ಚಿಕಿತ್ಸೆ ನೀಡುವುದು ಸುಲಭ. ಸ್ತನ ಕ್ಯಾನ್ಸರ್ ಬರುವ ಅಪಾಯವನ್ನು ಮಹಿಳೆಯರು ಕಡಿಮೆ ಮಾಡಲು ಹಲವು ಮಾರ್ಗಗಳಿವೆ.

1. ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಿ:

ಕೊಬ್ಬಿನ ಕೋಶಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುವ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ತೂಕ, ಹಾರ್ಮೋನ್‌ ಬದಲಾವಣೆಯ ಥೆರಪಿ ಮಾಡಿಸಿಕೊಳ್ಳುವುದು, ಮದ್ಯಪಾನ, ಧೂಮಪಾನ ಸ್ತನ ಕ್ಯಾನ್ಸರ್ ಸೇರಿದಂತೆ ಅನೇಕ        ಕ್ಯಾನ್ಸರ್ ಗಳಿಗೆ ಸಂಬಂಧಿಸಿದೆ ಎಂದು ಸಂಶೋಧನೆ ತೋರಿಸುತ್ತದೆ.

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಕ್ಯಾನ್ಸರ್ ಮತ್ತು ಬದುಕುಳಿದವರಲ್ಲಿ ಮರುಕಳಿಸುವಿಕೆಯ ಕಡಿಮೆ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ವಿವಿಧ ಸಂಶೋಧನೆಗಳು ಸೂಚಿಸಿವೆ.

ಆದ್ದರಿಂದ, ಒಬ್ಬರ ಜೀವನದುದ್ದಕ್ಕೂ ಹೆಚ್ಚಿನ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಮತೋಲಿತ ತೂಕವನ್ನು ಕಾಪಾಡುವುದು ಮತ್ತು ದೈಹಿಕವಾಗಿ ಸಕ್ರಿಯವಾಗಿರುವ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ.

  1. ಸ್ವಯಂ ಪರೀಕ್ಷೆ:

ನಿಯಮಿತ ಆರೋಗ್ಯ ತಪಾಸಣೆಯ ಹೊರತಾಗಿ, ಎಲ್ಲಾ ಮಹಿಳೆಯರಿಗೆ ಮನೆಯಲ್ಲಿ ರೋಗಲಕ್ಷಣಗಳನ್ನು ಪರೀಕ್ಷಿಸಲು ಬಲವಾಗಿ ಸೂಚಿಸಲಾಗುತ್ತದೆ. ಅವರು ತಿಂಗಳಿಗೊಮ್ಮೆ ತಮ್ಮ ಸ್ತನಗಳನ್ನು ಪರೀಕ್ಷಿಸುವುದು ಅಭ್ಯಾಸವಾಗಿಸಬೇಕಾಗಿದೆ. ಆರಂಭಿಕ ಚಿಹ್ನೆಗಳಿಗಾಗಿ ಸ್ತನಗಳನ್ನು ಪರೀಕ್ಷಿಸುವ ವಿಧಾನವನ್ನು ಕೆಳಗೆ ನೀಡಲಾಗಿದೆ:

  • ನಿಮ್ಮ ಸ್ತನಗಳು ಮತ್ತು ಮೊಲೆತೊಟ್ಟುಗಳ ಸಾಮಾನ್ಯ ಆಕಾರ, ಗಾತ್ರ, ಬಣ್ಣ ಮತ್ತು ವಿನ್ಯಾಸವನ್ನು ತಿಳಿಯಿರಿ.
  • ಸ್ತನಗಳನ್ನು ನಿಯಮಿತವಾಗಿ ಪರೀಕ್ಷಿಸಿ: ಕನ್ನಡಿಯಲ್ಲಿ ನೋಡಿ, ನಿಮ್ಮ ಮೊಲೆತೊಟ್ಟುಗಳ ಮತ್ತು ಸ್ತನಗಳ ಗಾತ್ರ ಮತ್ತು ಆಕಾರದಲ್ಲಿ ಅಸಾಮಾನ್ಯ ಬದಲಾವಣೆ ಮುಂತಾದ ರೋಗಲಕ್ಷಣಗಳನ್ನು ನೋಡಿ.
3. ಯಾವುದೇ ಗಡ್ಡೆಗಳಿವೆಯೇ ಎಂದು ಪರೀಕ್ಷಿಸಿ:

ಸ್ತನದ ಸುತ್ತಮುತ್ತ ಯಾವುದೇ ರೀತಿಯ ಗಡ್ಡೆಗಳಿವೆಯೇ ಎಂದು ಮೇಲಿನಿಂದ ಕೆಳಕ್ಕೆ, ನಿಮ್ಮ ಕಾಲರ್‌ಬೊನ್‌ನಿಂದ ನಿಮ್ಮ ಹೊಟ್ಟೆಯ ಮೇಲ್ಭಾಗಕ್ಕೆ ಮತ್ತು ನಿಮ್ಮ ಕೈಬೆರಳುಗಳನ್ನು ಸಮನಾಗಿ ಹಿಡಿದು ಪರೀಕ್ಷಿಸಿ. ಖಚಿತಪಡಿಸಿಕೊಳ್ಳಲು ಹಾಸಿಗೆಯ ಮೇಲೆ ಮಲಗಿರುವಾಗ ಮತ್ತು ಕುಳಿತುಕೊಳ್ಳುವಾಗ / ನಿಂತಿರುವಾಗ ಈ ಪ್ರಕ್ರಿಯೆಯನ್ನು ಅನುಸರಿಸಬೇಕು.

ಪ್ರತೀ ತಿಂಗಳ ಮುಟ್ಟಿನ ರಕ್ತಸ್ರಾವ ಮುಗಿದ ನಂತರ ತಿಂಗಳಿಗೊಮ್ಮೆ ಈ ರೀತಿ ಪರೀಕ್ಷೆಯನ್ನು ಮಹಿಳೆಯರು ಮಾಡಬೇಕು. ನಿಮ್ಮ ಸ್ತನಗಳಲ್ಲಿ ಒಂದು ಯಾವುದಾದರೂ ಗಡ್ಡೆಗಳು ಕಂಡುಬಂದ ಹಾಗೆ ಅನಿಸಿದ್ದಲ್ಲಿ ಭಯಪಡಬೇಡಿ, ಸಮಾಲೋಚನೆಗಾಗಿ ವೈದ್ಯರನ್ನು ಸಂಪರ್ಕಿಸಿ ಅದು ಹಾನಿಕರವಲ್ಲದ ಗಡ್ಡೆಯಾಗಿರಬಹುದು.

ಸಮಾಲೋಚನೆಯ ನಂತರ, ವೈದ್ಯರು ಇದನ್ನು ತಡೆಗಟ್ಟುವ  ಔಷಧಿ, ಸ್ತನ ಪರೀಕ್ಷೆಯನ್ನು ಸೂಚಿಸಬಹುದು.

ಮ್ಯಾಮೋಗ್ರಾಮ್‌ :

ಸ್ತನ ಕ್ಯಾನ್ಸರನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಮ್ಯಾಮೋಗ್ರಾಮ್‌ ಒಂದು ಉತ್ತಮ ಪರೀಕ್ಷಾ ವಿಧಾನವಾಗಿದೆ. ಇದು ಸರಣಿ ಎಕ್ಸ್ ರೇ ಪರೀಕ್ಷೆ ಆಗಿದ್ದು ಕ್ಯಾನ್ಸರ್‌ ಅಂಶವನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಸಾಧ್ಯ.

ಕೆಲವೊಮ್ಮೆ ಕ್ಯಾನ್ಸರ್‌ ಕಾಣಿಸಿಕೊಳ್ಳುವ ೩ ವರ್ಷ ಮೊದಲೇ ಮ್ಯಾಮೋಗ್ರಾಮ್‌ ಪರೀಕ್ಷೆಯಿಂದ ಪತ್ತೆಹಚ್ಚಬಹುದಾಗಿದೆ. ಈ ವಿಧಾನವನ್ನು ಸಾಮಾನ್ಯವಾಗಿ ಎಲ್ಲಾ ವೈದ್ಯರೂ ಶಿಫಾರಸ್ಸು ಮಾಡುತ್ತಾರೆ.

ಸಾರ್ವಜನಿಕರಲ್ಲಿ ಮತ್ತು ಮಹಿಳೆಯರಲ್ಲಿ ತಪ್ಪು ಕಲ್ಪನೆ ಮತ್ತು ಮುಕ್ತವಾಗಿ ಇದರ ಬಗ್ಗೆ ಮಾತನಾಡದಿರುವುದು -ಸ್ತನ ಕ್ಯಾನ್ಸರ್ ಬಗ್ಗೆ ಅರಿವಿನ ಕೊರತೆಯು ರೋಗದ ಹೊರೆ ಕಡಿಮೆ ಮಾಡುವ ದೊಡ್ಡ ಸವಾಲಾಗಿದೆ.

ಭಾರತದಲ್ಲಿ ಇದರ ಬಗ್ಗೆ ಹಲವಾರು ಜಾಗೃತಿ ಅಭಿಯಾನಗಳು ನಡೆದಿವೆ, ಮುಂದಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಸಂಭವಿಸುವುದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ನಾವು ರಾಷ್ಟ್ರವ್ಯಾಪಿ ಪ್ರಜ್ಞೆಯನ್ನು ಹೆಚ್ಚಿಸಬೇಕು, ಮಾಧ್ಯಮ ಮತ್ತು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.

LEAVE A REPLY

Please enter your comment!
Please enter your name here